ಗುರುವಾರ , ಮಾರ್ಚ್ 4, 2021
29 °C

ಅರಳಿದ ಕಮಲ: ಬಸವಳಿದ ‘ಕೈ’

ಗಣೇಶ ಚಂದನಶಿವ \ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಳಿದ ಕಮಲ: ಬಸವಳಿದ ‘ಕೈ’

ವಿಜಾಪುರ: ಜಿಲ್ಲೆಯಲ್ಲಿ ಬಾಡಿ ಮುದುಡಿ ಹೋಗಿದ್ದ ಕಮಲ ‘ಬರ’ದಲ್ಲಿಯೂ ಮತ್ತೆ ಅರಳಿದೆ. ಕಾಂಗ್ರೆಸ್‌ ಪಾಳೆಯದ ಒಗ್ಗಟ್ಟಿನ ಮಂತ್ರಕ್ಕೆ ಫಲ ದೊರೆತಿಲ್ಲ. ಐದನೇ ಬಾರಿ ಲೋಕಸಭೆ ಪ್ರವೇಶಿಸಿರುವ ರಮೇಶ ಜಿಗಜಿಣಗಿ ಕೇಂದ್ರ ಮಂತ್ರಿ ಪದವಿಯ ಕನಸು ಕಾಣುತ್ತಿದ್ದಾರೆ. ನಿಜ ಕ್ರಿಕೆಟ್‌ನಲ್ಲಿ ವಿಕೆಟ್‌ ಪಡೆಯುತ್ತಿದ್ದ ಕಾಂಗ್ರೆಸ್‌ನ ಪ್ರಕಾಶ ರಾಠೋಡ ಸ್ಪರ್ಧಿಸಿದ ಎಲ್ಲ ಚುನಾವಣೆಗಳಲ್ಲಿಯೂ ಸ್ವತಃ ಬೌಲ್ಡ್‌ ಆಗಿದ್ದಾರೆ.ವಿಜಾಪುರ ಲೋಕಸಭಾ ಚುನಾವಣೆ ತುರುಸಿನಿಂದ ನಡೆದಿತ್ತು. ಪರಸ್ಪರ ಮುಖ ನೋಡಲೂ ಬಯಸದ ಆ ಪಕ್ಷದ ಮುಖಂಡರು ಒಟ್ಟಾಗಿ ಪ್ರಚಾರ ನಡೆಸಿದ್ದರು. ಕಾಂಗ್ರೆಸ್‌ನ ಸಚಿವರು–ಶಾಸಕರ ಒಗ್ಗಟ್ಟು, ಬಿಜೆಪಿಯಲ್ಲಿಯ ಭಿನ್ನಮತ–ಒಡಕಿನಿಂದಾಗಿ ಸ್ವತಃ ಬಿಜೆಪಿಯವರಿಗೇ ಗೆಲುವಿನ ವಿಶ್ವಾಸ ಇರಲಿಲ್ಲ. ಇನ್ನು ಕಾಂಗ್ರೆಸ್ಸಿಗರು ‘ಗೆದ್ದೇ ಬಿಟ್ಟಿದ್ದೇವೆ’ ಎಂಬ ಆತ್ಮವಿಶ್ವಾಸದಿಂದ ಬೀಗುತ್ತಿತ್ತು.‘ವಿಜಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ 15,000 ಅಥವಾ 25,000 ಅಥವಾ 35,000 ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಗುಪ್ತಚರ ಇಲಾಖೆ ವರದಿ ನೀಡಿದೆ’ ಎಂದು ಕಾಂಗ್ರೆಸ್ಸಿಗರು ಗೆಲುವಿನ ತಮ್ಮ ವಾದಕ್ಕೆ ಸಮರ್ಥನೆಯನ್ನೂ ನೀಡುತ್ತಿದ್ದರು.ಮತ ಎಣಿಕೆಯ ಶುರುವಾಗುತ್ತಿದ್ದಂತೆ ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ ರಾಠೋಡ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದರು.  ಪ್ರಥಮ ಸುತ್ತಿನಿಂದಲೂ ಕೊನೆಯ ಸುತ್ತಿನ ವರೆಗೂ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಮುನ್ನಡೆ ಸಾಧಿಸಿದರು. ಮುನ್ನಡೆಯ ಅಂತರ 50,000 ಮೀರಿದಾಗ ಕಾಂಗ್ರೆಸ್‌ ಮುಖಂಡರು ಮತ ಎಣಿಕೆ ಕೇಂದ್ರದಿಂದ ನಿರ್ಗಮಿಸಿದರು. ಗೆಲುವು ಖಚಿತವಾದ ನಂತರ ರಮೇಶ ಜಿಗಜಿಣಗಿ ಆಗಮಿಸಿದರು.‘ಗುಪ್ತಗಾಮಿನಿ’ಯಂತಿದ್ದ ಮೋದಿ ಅಲೆ, ಮೇಲ್ವರ್ಗದವರ ಬೆಂಬಲ ಗೆಲುವು ತಂದುಕೊಟ್ಟಿತು. ‘ಅದೃಷ್ಟ ಲಕ್ಷ್ಮಿ’ ಜಿಗಜಿಣಗಿ ಅವರನ್ನು ಬಿಟ್ಟು ಹೋಗಲೇ ಇಲ್ಲ!ಮತ ಎಣಿಕೆ ವಿಳಂಬ: ಮಧ್ಯಾಹ್ನ 12ರ ವೇಳೆಗೆ ಮತ ಎಣಿಕೆ ಪೂರ್ಣಗೊಳ್ಳಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, ಫಲಿತಾಂಶ ಪ್ರಕಟವಾಗಿದ್ದು ಮಧ್ಯಾಹ್ನ 3ಕ್ಕೆ. ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತ ಎಣಿಕೆ ತಡವಾಯಿತು. ಹೀಗಾಗಿ ಫಲಿ­ತಾಂಶ ಪ್ರಕಟಣೆ ವಿಳಂಬವಾಯಿತು.ಬಬಲೇಶ್ವರ, ವಿಜಾಪುರದಲ್ಲಷ್ಟೇ ಕಾಂಗ್ರೆಸ್‌ ಮುಂದೆ: ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರ ಸ್ವಕ್ಷೇತ್ರ ಬಬಲೇಶ್ವರ (2,129), ಡಾ.ಎಂ.ಎಸ್‌. ಬಾಗವಾನ ಪ್ರತಿನಿಧಿಸುವ ವಿಜಾಪುರ ನಗರ ಕ್ಷೇತ್ರ (4,612)ಗಳಲ್ಲಿ ಮಾತ್ರ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ.

ಮುದ್ದೇಬಿಹಾಳ ಕ್ಷೇತ್ರದಲ್ಲಿ 1,524, ದೇವರ ಹಿಪ್ಪರಗಿ–4,176, ಬಸವನ ಬಾಗೇವಾಡಿ–5,784, ನಾಗಠಾಣ–16,898, ಇಂಡಿ–27,178, ಸಿಂದಗಿ–20,983 sರಷ್ಟು ಹೆಚ್ಚು ಮತಗಳನ್ನು ಬಿಜೆಪಿ ಪಡೆದಿದೆ.ದುರಂತ ನಾಯಕ

ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ ರಾಠೋಡ ಒಂದರ್ಥದಲ್ಲಿ ‘ದುರಂತ ನಾಯಕ’. ಸ್ಪರ್ಧಿಸಿದ ಯಾವ ಚುನಾವಣೆಯಲ್ಲಿಯೂ ಅವರು ಗೆಲುವು ಸಾಧಿಸಿಲ್ಲ. ಹಿಂದಿನ ಬಳ್ಳೊಳ್ಳಿ ಮೀಸಲು ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದರು. ವಿಜಾಪುರ ಲೋಕಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗುವ ಮುನ್ನವೇ ಒಂದು ಬಾರಿ ಮತ್ತು ಪರಿಶಿಷ್ಟ ಜಾತಿಗೆ ಮೀಸಲಾದ ನಂತರ ಎರಡು ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ನಾಲ್ಕೂ ಚುನಾವಣೆಗಳಲ್ಲಿ ಅವರಿಗೆ ‘ವಿಜಯ ಲಕ್ಷ್ಮಿ’ ಒಲಿಯಲಿಲ್ಲ.ಪ್ರಕಾಶರಿಗೆ ಇದು ಜಿಗಜಿಣಗಿ ವಿರುದ್ಧ ಎರಡನೇ ಸೋಲು. ಕ್ರಿಕೆಟ್‌ ಪಟು ಎಂಬ ಕಾರಣಕ್ಕೆ ಪ್ರಕಾಶ ಅವರನ್ನು ವಿಧಾನ ಪರಿಷತ್‌ಗೆ ನಾಮಕರಣ ಮಾಡಲಾಗಿತ್ತು.ತಿರಸ್ಕಾರದ ಮತಕ್ಕೆ 4ನೇ ಸ್ಥಾನ

‘ಈ ಮೇಲಿನ ಯಾವ ಅಭ್ಯರ್ಥಿಗೂ ನಾನು ಮತ ಚಲಾಯಿಸುವುದಿಲ್ಲ’ ಎಂಬ ತಿರಸ್ಕಾರದ (ನೋಟಾ) ಮತಗಳು ಈ ಬಾರಿ ಹೆಚ್ಚಾಗಿ ಚಲಾವಣೆಯಾಗಿವೆ.ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಮತ ಯಂತ್ರದಲ್ಲಿ ತಿರಸ್ಕಾರದ ಮತ ಚಲಾಯಿಸಲು ಅವಕಾಶ ಕಲ್ಪಿಸಿತ್ತು. ಈ ಹಿಂದಿನ ಚುನಾವಣೆಯಲ್ಲಿ ಈ ಅವಕಾಶ ಇತ್ತಾದರೂ, ಮತಯಂತ್ರದಲ್ಲಿ ಅದನ್ನು ನಮೂದಿಸಲು ಅವಕಾಶ ಇರಲಿಲ್ಲ. ತಿರಸ್ಕಾರದ ಮತ ಹಾಕುವವರು ಪತ್ರ ಬರೆದು ಮತಗಟ್ಟೆ ಅಧಿಕಾರಿಗೆ ಕೊಡಬೇಕಿತ್ತು.ವಿಜಾಪುರ ಲೋಕಸಭಾ ಚುನಾವಣೆಯಲ್ಲಿ 8,287 ತಿರಸ್ಕಾರದ ಮತಗಳು ಚಲಾವಣೆಯಾಗಿವೆ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ನಂತರದ ಸ್ಥಾನವನ್ನು ನೋಟಾ ಪಡೆದಿದೆ. ಕಣದಲ್ಲಿದ್ದ ಆಮ್‌ ಆದ್ಮಿ ಪಾರ್ಟಿ, ಬಿಎಸ್‌ಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳಿಗೂ ‘ನೋಟಾ’ದಷ್ಟು ಮತ ಚಲಾವಣೆಯಾಗಿಲ್ಲ.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.