ಅರಳುವ ಹೂವುಗಳೇ ಆಲಿಸಿರಿ...

ಭಾನುವಾರ, ಜೂಲೈ 21, 2019
26 °C

ಅರಳುವ ಹೂವುಗಳೇ ಆಲಿಸಿರಿ...

Published:
Updated:

ಅಂದು ಸಂಜೆ ಸೂರ್ಯ ಬಾನಂಗಳದಲ್ಲಿ ಪಶ್ಚಿಮ ದಿಕ್ಕಿನಲ್ಲಿ ಅಸ್ತಂಗತನಾಗುತ್ತಿದ್ದ. ಇಲ್ಲಿ ಮನೆಯಲ್ಲಿ ನೀರವ ಮೌನ, ಒಬ್ಬಳು ತಾಯಿ ತನ್ನ ಎದೆ ಬಡಿದುಕೊಂಡು ಕರುಳ ಕುಡಿಗಾಗಿ ರೋದಿಸುತ್ತಿದ್ದಳು.

 

ಅಪ್ಪ ಮಾತೇ ಬರದೆ ಮೂಕನಾಗಿದ್ದ. ಅವರ ಒಂದೇ ಕರುಳ ಬಳ್ಳಿ ಶಾಶ್ವತವಾಗಿ ಮರಳಿ ಬರದ ಮನೆಗೆ ಪಯಣ ಬೆಳೆಸಿದ್ದ. ಅಪ್ಪನೇ ಚಿತೆಗೆ ಬೆಂಕಿಯಿಡುವ ಘೋರ ಕಾರ್ಯಕ್ಕೆ ಅವರನ್ನು ದೂಡಿ ಹೋಗಿದ್ದ.ಇನ್ನೊಂದೆಡೆ ಮಗಳು ರಿಜಲ್ಟ್ ನೋಡಿ ಬರುವೆನೆಂದು ಹೋದವಳು ಸಂಜೆಯಾದರೂ ಮನೆಗೆ ಮರಳದೆ, ಮನೆಯಲ್ಲಿ ಗಾಢಾಂಧಕಾರ ಚೆಲ್ಲಿ ಹೋಗಿದ್ದಳು. ಅರಳಬೇಕಾದ ಹೂವು ಅರಳಿ ಕಂಪು ಸೂಸುವ ಮೊದಲೇ ಬಾಡಿ ಹೋಗಿತ್ತು.

 

ಸೋಲಿನ ನಂತರ ಗೆಲುವು ಎಂಬ ಅರಿವಿಲ್ಲದೆ ಜೀವಗಳು ಮುದುಡಿ ಹೋದವು. ಬದುಕು ಅರ್ಥವಾಗುವ ಮೊದಲೇ ತಮ್ಮ ಜೀವನಕೊಂದು ಕೊನೆ ಹಾಡಿದ ಮಕ್ಕಳು ನೆನಪಾಗಿ ಕಾಡುತ್ತಾರೆ.ಮೊನ್ನೆ ತಾನೆ ಬಂದ ಪಿಯುಸಿ, ಎಸ್ಸೆಸ್ಸೆಲ್ಸಿ ಫಲಿತಾಂಶ ನೋಡಿ ಬಾಳಿಗೆ ಕೊನೆ ಹಾಡಿದವರ ಕಥೆ ನೋಡಿ ಮನಸ್ಸಿಗೆ ಖೇದವೆನಿಸುತ್ತೆ. ಒಂದು ಸಣ್ಣ ಸೋಲನ್ನು ಸಹಿಸದ ಶಕ್ತಿ ಇರದ ಈ ಮಕ್ಕಳು ಬದುಕನ್ನು ಕಂಡರಿಯದೆ ಹೀಗೆ ಬಾಳಿಗೆ ಕೊನೆ ಹಾಡಿದರೆ ಹೇಗೆ? ಎಲ್ಲಕಿಂತ ದೊಡ್ಡದು ಈ ಬದುಕು.

 

ಬದುಕಿದ್ದರೆ ತಾನೆ ಏನನ್ನಾದರೂ ಸಾಧಿಸಲು ಸಾಧ್ಯ. ಬದುಕೆ ಇಲ್ಲವೆಂದ ಮೇಲೆ ಏನು ಮಾಡಲು ಸಾಧ್ಯ? ಕನಸುಗಳು, ಆ ಕನಸುಗಳನ್ನು ಕಟ್ಟಿಕೊಳ್ಳಲು ಸಹಾಯಕವಾಗುವ ನಿರೀಕ್ಷೆಗಳೇ ಬಾಳಿನ ತಳಹದಿ. ಎಷ್ಟು ಬೇಗ ಕನಸುಗಳು, ನಿರೀಕ್ಷೆಗಳನ್ನು ಕಳೆದುಕೊಳ್ಳುತ್ತೆವಯೋ ಅಷ್ಟು ಬೇಗ ಜೀವನ ಕೊನೆಯಾಗುತ್ತದೆ.ಆಶಾವಾದವಿರಬೇಕು ಅಲ್ಲವೇ? ದಿಢೀರ್ ಒಂದು ನಿರ್ಧಾರ, ಒಂದು ಸೋಲು ಬದುಕಿನ ಅಂತ್ಯವಾಗಬಾರದು. ಬದುಕಿನ ಕೊನೆಗೆ ಒಂದು ದಾರಿಯಾದರೆ, ಬದುಕಲು ಹಲವಾರು ದಾರಿ. ಆ ದಾರಿಗಳನ್ನು ನಾವು ಹುಡುಕಬೇಕು. ಅದಕ್ಕೆ ತಾಳ್ಮೆ ಬೇಕು. ಆ ತಾಳ್ಮೆ ಇಂದಿನ ಮಕ್ಕಳಲ್ಲಿ ಮರೆಯಾಗುತ್ತಿರುವುದು ಆತಂಕಕಾರಿ ವಿಷಯ.ತಾಳ್ಮೆಹೀನ ಬದುಕಿಗೆ ಮೂಲಬೇರು ಯಾವುದು ಎಂಬುದನ್ನು ನಾವ್ಯಾರಾದರೂ ಸತ್ಯವಾಗಿ ಅರಿತುಕೊಂಡಿದ್ದೇವೆ..? ನಮ್ಮ ಸಹ ಮಾನವರ ನೋವು- ನಲಿವುಗಳನ್ನು ಹಂಚಿಕೊಂಡಿದ್ದೇವೆಯೆ..? ಇಲ್ಲ. ನಮ್ಮದೆ ಸ್ವಾರ್ಥ ಮತ್ತು ಸಂಕುಚಿತ ನಡೆ- ನುಡಿಗಳಲ್ಲಿ ನಾವೆಲ್ಲ ಕಳೆದುಹೊಗುತ್ತಿದ್ದೇವೆ. ನಮ್ಮವರ ಬಗ್ಗೆ ನಾವು ಚಿಂತಿಸಿದ್ದರೆ ಆ ಕಂದಮ್ಮಗಳನ್ನು ಕಳೆದುಕೊಳ್ಳುತ್ತಿದ್ದೇವೆಯೆ..?ಈಗ ಸಾಮಾನ್ಯವಾಗಿ ಕೇಳಿಬರುವ ಮಾತೆಂದರೆ, ಪೋಷಕರ ಅತಿ ನಿರೀಕ್ಷೆ ಮತ್ತು ಒತ್ತಡ ಮಕ್ಕಳು ಸಾಯಲು ಕಾರಣವೆಂದು. ಇದು ಸ್ವಲ್ಪ ಮಟ್ಟಿಗೆ ನಿಜವಿರಬಹುದೇನೋ? ಆದರೆ, ಜನ್ಮ ನೀಡಿ,  ಬೆಳೆಸಿ, ತಮ್ಮ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ತಮ್ಮ ಮಕ್ಕಳ ಏಳ್ಗೆಯಲ್ಲಿಯೇ ಬದುಕನ್ನು ಕಂಡು ಕೊಂಡ ತಂದೆ ತಾಯಿಗೆ ಮಕ್ಕಳಿಂದ ಇಷ್ಟು ನಿರೀಕ್ಷೆ ಇರುವುದು ತರವಲ್ಲವೇ? ಅಪ್ಪ-ಅಮ್ಮನನ್ನೇ ದೂಷಿಸುವುದು ಎಷ್ಟರಮಟ್ಟಿಗೆ ಸರಿ.ಮಕ್ಕಳು ಸಹ ಅಪ್ಪ-ಅಮ್ಮನ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು. ಅಲ್ಲದೇ, ಪೋಷಕರು ಸಹ ತಮ್ಮ ಮಕ್ಕಳ ಅಭಿಲಾಷೆಯನ್ನು ಅರ್ಥ ಮಾಡಿಕೊಂಡು ಪರಸ್ಪರ ಕನಸುಗಳು ಸಾಕಾರಗೊಳ್ಳಲು ಪೂರಕವಾಗಿ ನಿಲ್ಲಬೇಕು. ಆಗಲೇ ಎಲ್ಲರ ಜೀವನ ಹಸನಾಗಲು ಸಾಧ್ಯ.ದಿಢೀರ್ ಒಂದು ನಿರ್ಧಾರದಿಂದ ಬದುಕನ್ನು ಕೊನೆಗೊಳಿಸುವುದು ಸೂಕ್ತವಲ್ಲ. ಆ ಸಮಯದಿ ಮಕ್ಕಳಿಗೆ ತಂದೆ-ತಾಯಿಯರು ಪೂರಕವಾಗಿ ನಿಲ್ಲಬೇಕು. ಬದುಕಿನ ಒಂದು ತಪ್ಪು ನಿರ್ಧಾರ ಬದುಕಿನ ಅರ್ಥವನ್ನೆ ಕಳೆದು ಬಿಡುತ್ತದೆ ಅಲ್ಲವೇ? ಹಾಗಾಗಬಾರದು.

 

ಬಾಳಿ ಬದುಕಬೇಕಾದ ಕುಡಿಗಳು ಮುಂದಿನ ಜೀವನದ ಭವಿತವ್ಯದ ಬಗೆಗೆ ಯೋಚಿಸಬೇಕು. ಆಶಾವಾದವಿರಬೇಕು. ಏನಾದರೂ ಸಾಧಿಸುವ ಛಲವಿರಬೇಕು.ಅಪ್ಪ-ಅಮ್ಮನ ಕನಸಿನ ಕೂಸುಗಳೇ, ಎದೆಗುಂದಬೇಡಿ, ಕಣ್ತೆರೆದು ನೋಡಿ ಉಜ್ವಲ ಬದುಕು ನಿಮಗಾಗಿ ಕಾಯುತಿಹುದು. ಸ್ವಲ್ಪ ತಾಳ್ಮೆಯಿಂದಿರಿ. ಸೋತವರೇ ಕೊನೆಗೆ ಜಯಿಸುತ್ತಾರೆ. ಬದುಕನ್ನು ಅಂತ್ಯಗೊಳಿಸುವ ಮುನ್ನ ಯೋಚಿಸಿ...... ಸಹಮಾನವರೆ ಕನಸಿನ ಕಂದಮ್ಮಗಳಿಗೆ ನೆರವಾಗಿ.... ಅರಳುವ ಹೂವುಗಳೇ ಆಲಿಸಿರಿ, ಬಾಳೊಂದು ಹೋರಾಟ ಮರೆಯದಿರಿ...

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry