ಅರಸರ ಆಳು ಇದ್ದ ಊರು ಅರಸಾಳು!

7

ಅರಸರ ಆಳು ಇದ್ದ ಊರು ಅರಸಾಳು!

Published:
Updated:
ಅರಸರ ಆಳು ಇದ್ದ ಊರು ಅರಸಾಳು!

ಶೆಟ್ಟಿಹಳ್ಳಿ ಅಭಯಾರಣ್ಯದ ನಡುವೆ ಝಳುಝಳು ನಿನಾದ ಹೊಮ್ಮಿಸುವ ಕುಮದ್ವತಿ ನದಿ ತೀರದಲ್ಲಿರುವ ಹೊಸನಗರ ತಾಲ್ಲೂಕಿನ ಹಳ್ಳಿ ಅರಸಾಳು. ಶಿವಮೊಗ್ಗ-ಹೊಸನಗರದ ರಾಜ್ಯ ಹೆದ್ದಾರಿಯ ಸಂಖ್ಯೆ 26ರಲ್ಲಿ ಸಿಗುವ ಈ ಊರು ಹಿಂದೆ ಶಿವಮೊಗ್ಗ-ತಾಳಗುಪ್ಪ ರೈಲು ಮಾರ್ಗದಲ್ಲಿ ಇರುವ ಹೊಸನಗರ ತಾಲ್ಲೂಕಿನ ಪ್ರಮುಖ ರೈಲು ನಿಲ್ದಾಣವೂ ಆಗಿತ್ತು. ಈ ಗ್ರಾಮದ ಮೂಲ ಹೆಸರು ಶಿವೇಶ್ವರ ಎಂದಾಗಿತ್ತು. ಹಿಂದೆ ಬಿದನೂರಿನ ಆಡಳಿತ ನಡೆಸುತ್ತಿದ್ದ ಅರಸರ ಪ್ರತಿನಿಧಿ (ಅರಸರ ಆಳು) ಇದ್ದ ಕಾರಣದಿಂದ ಅರಸಾಳು ಎಂಬ ಅಡ್ಡ ಹೆಸರು ಬಂತು. ರಾಜ ಪ್ರತಿನಿಧಿ ಪರಿವಾರದ ವಾಸ್ತವ್ಯ ಪ್ರದೇಶದ ಗ್ರಾಮದ ಒಂದು ಭಾಗವಾಗಿ ಅರಸಾಳು ಮಜರೆ (ಬಡಾವಣೆ ) ಪ್ರದೇಶ ಈಗಲೂ ಗುರುತಿಸಲ್ಪಟ್ಟಿದೆ. 1930ರಲ್ಲಿ ಗ್ರಾಮದಲ್ಲಿ ರೈಲುನಿಲ್ದಾಣ ಪ್ರಾರಂಭಗೊಂಡಾಗ ತಾಂತ್ರಿಕ ಕಾರಣದಿಂದ ಶಿವೇಶ್ವರ ಎಂಬ ಹೆಸರು ಬದಲಾಯಿಸಿ `ಅರಸಾಳು~ ಎಂಬ ಹೆಸರು ಅಧಿಕೃತವಾಗಿರಬಹುದು ಎಂಬುದು ಹಿರಿಯರ ಅನಿಸಿಕೆ.ಅದಕ್ಕೆ ಪೂರಕವಾಗಿ 1914ರಲ್ಲಿ ಆರಂಭವಾದ ಇಲ್ಲಿನ ಸಹಕಾರ ಸಂಘದ ನೋಂದಣಿ ಪ್ರಕಾರ ಶಿವೇಶ್ವರ ಶ್ರೀಕೃಷ್ಣ ಪ್ರಸಾದ ಸಹಕಾರ ಸಂಘವೆಂದು ನಾಮಕರಣಗೊಂಡಿದ್ದು. 1960-61ರ ನಂತರ ಸೇವಾ ಸಹಕಾರ ಸಂಘವೆಂದು ಹೆಸರು ಬದಲಾವಣೆಯಾಗಿದೆ. ಅರಣ್ಯ ಸಂಪತ್ತು

ಅರಸಾಳು ವಾಪ್ತಿಯ ದಟ್ಟಅರಣ್ಯ ಪ್ರದೇಶದಲ್ಲಿ ಹೇರಳವಾಗಿ ಬೆಲೆ ಬಾಳುವ ಸಾಗವಾನಿ, ನಂದಿ, ಹೊನ್ನೆ ಸೇರಿದಂತೆ ವಿವಿಧ ಜಾತಿಯ ಮರಗಳಿವೆ.  ವಿಶೇಷವೆಂದರೆ ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಆಗ ಇಂಧನಕ್ಕೆ ಪರ‌್ಯಾಯವಾಗಿ ಬಳಕೆ ಮಾಡುತ್ತಿದ್ದ ಅರಣ್ಯ ಉತ್ಪನ್ನಗಳಾದ ಮರದ ಇದ್ದಿಲು, ಬಿದಿರು ಹಾಗೂ ಯೋಗಿ ಮಳಲಿ ಗಣಿ ಪ್ರದೇಶದ ಮ್ಯಾಂಗನೀಸ್ ಅದಿರು ಹಾಗೂ ಪ್ಲೈವುಡ್‌ಗೆ ಬೇಕಾದ ಮೃದುಮರಗಳು ಭಾರೀ ಪ್ರಮಾಣದಲ್ಲಿ ಗೂಡ್ಸ್ ರೈಲಿನ ಮೂಲಕ ಸಾಗಣೆಯಾಗುತ್ತಿದ್ದದ್ದು ಇತಿಹಾಸ.ಈ ರೀತಿಯಾಗಿ ಅರಣ್ಯ ಸಂಪತ್ತು ಇಲ್ಲಿ ದೊರೆಯುತ್ತಿದ್ದ ಕಾರಣ ಸರ್ಕಾರವು 9ದಶಕಗಳ ಹಿಂದೆಯೇ ಇದರ ಉಸ್ತುವಾರಿಗಾಗಿ ಒಂದು ಪ್ರತ್ಯೇಕ ಅರಣ್ಯ ಇಂಧನ ವಲಯ ಹಾಗೂ ವಲಯ ಅರಣ್ಯಾಧಿಕಾರಿ ಕಚೇರಿ ಸಹ ತೆರೆಯಲಾಗಿತ್ತು.ರೈಲುನಿಲ್ದಾಣ: ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಹೊಸನಗರ ತಾಲ್ಲೂಕಿನ ಏಕೈಕ ಈ ರೈಲು ನಿಲ್ದಾಣವು ಮೀಟರ್‌ಗೇಜ್ ವ್ಯವಸ್ಥೆ ಇದ್ದಾಗ ರಾಜಧಾನಿ ಹಾಗೂ ಮುಂತಾದ ಮುಖ್ಯ ಸ್ಥಳಗಳಿಗೆ ನೇರ ಟಿಕೆಟ್ ಬುಕ್ಕಿಂಗ್, ಸ್ಲೀಪರ್‌ಕೋಚ್, ಸೀಟು ಕಾಯ್ದಿರುಸುವಿಕೆ ಇತ್ಯಾದಿ ಸೌಲಭ್ಯಗಳಿದ್ದವು. ಸರಕು ಸಾಗಣಿಕೆಗಳ ವ್ಯವಸ್ಥೆಯೂ ಇತ್ತು.ರಾಜಧಾನಿಗೆ ಸಂಪರ್ಕವಾಗುವ ಪ್ರಮುಖ ರೈಲ್ವೆ ಮಾರ್ಗವನ್ನು ಬ್ರಾಡ್‌ಗೇಜ್ ಆಗಿ ಪರಿವರ್ತನೆಗೊಳಿಸಿದ ನಂತರ ಇಲ್ಲಿಯ ಜನತೆ ಈ ಎಲ್ಲಾ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಊರಿನ ಮಧ್ಯದಲ್ಲಿ ಹಾದು ಹೋಗಿರುವ ಬ್ರಾಡ್‌ಗೇಜ್ ತಾಳಗುಪ್ಪ ರೈಲು ಮಾರ್ಗ ಸ್ಥಳೀಯರ ಪಾಲಿಗೊಂದು ಶಾಪವಾಗಿ ಪರಿಣಮಿಸಿದೆ.ಸಾರಿಗೆ ವ್ಯವಸ್ಥೆ: ಮಲೆನಾಡಿನ ಪ್ರಮುಖ ಐತಿಹಾಸಿಕ ಧಾರ್ಮಿಕ ಕೇಂದ್ರವಾದ ಹೊಂಬುಜ ಜೈನಮಠ, ರಾಮಚಂದ್ರಪುರ ಮಠ, ಕೊಲ್ಲೂರು, ಸಿಗಂದೂರು, ಅಮ್ಮನಘಟ್ಟ ಹಾಗೂ ಪ್ರವಾಸಿ ತಾಣಗಳಾದ ಕೊಡಚಾದ್ರಿ, ಬಿದನೂರು ಕೋಟೆ, ಕವಲೆದುರ್ಗಾ, ಸಮುದ್ರತೀರ ಪಟ್ಟಣಗಳಾದ ಕುಂದಾಪುರ ಭಟ್ಕಳ ಮುರುಡೇಶ್ವರಕ್ಕೆ ರಾಜ್ಯ ಹೆದ್ದಾರಿ ನಂ. 26ರ ಮೂಲಕ ದಿನದ ಎಲ್ಲಾ ಸಮಯದಲ್ಲಿ ಸಂಚರಿಸುವ ಬಸ್‌ಗಳೆಲ್ಲವೂ ಅರಸಾಳಿನ ಮೂಲಕವೇ ಹೋಗುವುದರಿಂದ ಸಾರಿಗೆ ವ್ಯವಸ್ಥೆ ಉತ್ತಮವಾಗಿದೆ.ಇಲ್ಲಿಯ ಹೆಚ್ಚಿನ ಅಭಿವೃದ್ಧಿಗಾಗಿ ಜಿಲ್ಲಾಡಳಿತದವರು, ಜನಪ್ರತಿನಿಧಿಗಳು ಸ್ಥಳೀಯರ ಸಮಸ್ಯೆಗಳಿಗೆ ಗಮನ ಹರಿಸಬೇಕಾಗಿದೆ ಎಂಬುದು ಸ್ಥಳೀಯರ ಅನಿಸಿಕೆ .ರೈಲುನಿಲ್ದಾಣದಲ್ಲಿ ರೈಲು ನಿಲುಗಡೆಯಾಗಿ ಈ ಹಿಂದೆ ಇದ್ದ ಸೌಕರ್ಯಗಳು ಪುನಃ ಲಭ್ಯವಾಗುವಂತೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಗಮನಹರಿಸಬೇಕಾಗಿದೆ.ಈ ಊರಿನ ವ್ಯವಸಾಯ ಭೂಮಿಗಳು ಕೆಲವು ಗೈರು ಹಾಜರಿ ಭೂಮಾಲೀಕರಿಗೆ ಸೇರ್ದ್ದಿದು, ಭೂಸುಧಾರಣೆ ಕಾಯ್ದೆಯಡಿ ಉಳುವವರ ಒಡೆತನಕ್ಕೆ ದಕ್ಕಿದೆ. ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅರಸಾಳು ಸೇರಿದಂತೆ ಬೆನವಳ್ಳಿ, ಹಾರೋಹಿತ್ಲು, ಬಸವಾಪುರ ಹಾಗೂ ತಮಡಿಕೊಪ್ಪ ಸೇರಿ ಸುಮಾರು 12 ಸಾವಿರ ಜನಸಂಖ್ಯೆಯನ್ನು ಹೊಂದಿದೆ.ಬಟಾಣಿಜಡ್ಡು ಮಜರೆ ಗ್ರಾಮದಲ್ಲಿ ಸುಮಾರು 40 ಕುಣಬಿ ಜನಾಂಗದ ಕುಟುಂಬಗಳಿದ್ದು, ಅವಿದ್ಯಾವಂತರೇ ಇರುವ ಆ ಗ್ರಾಮಕ್ಕೆ ಕಳೆದ 4 ದಶಕಗಳಿಂದ ಯಾವುದೇ ಸಂಪರ್ಕ ರಸ್ತೆಗಳಿಲ್ಲ. ಮಳೆಗಾಲದಲ್ಲಿ ದ್ವೀಪದ ನಡುಗಡ್ಡೆಯ ಜೀವನ ದುಸ್ತರ. ಈ ಭಾರಿ ಮುಖ್ಯಮಂತ್ರಿ ವಿಶೇಷ ಅನುದಾನದಡಿ ಕುಮದ್ವತಿ ತೀರಕ್ಕೆ ಸೇತುವೆ ನಿರ್ಮಾಣ ಕಾಮಗಾರಿ ಹಂತದಲ್ಲಿದೆ.ಗ್ರಾಮದ ಪ್ರಾಮುಖ್ಯತೆ

ದಿ. ಶಂಕರ್‌ನಾಗ್ ಅವರ ಮಾಲ್ಗುಡಿ ಡೇಸ್ ಚಿತ್ರೀಕರಣ ಹಾಗೂ ಡಾ.ರಾಜ್ ಅಭಿನಯದ ತರಾಸು ಕಾದಂಬರಿ ಆಧಾರಿತ ಆಕಸ್ಮಿಕ ಚಿತ್ರದಲ್ಲಿ ಅರಸಾಳು ರೈಲುನಿಲ್ದಾಣ ಬಳಕೆಯಾಗಿ ಗುರುತಿಸಲ್ಪಟ್ಟಿದೆ.ಸುಶಿಕ್ಷಿತರ ತವರೂರು

ಸುಮಾರು 8 ದಶಕಗಳ ಹಿಂದಿನಿಂದಲೂ ಈ ಹಳ್ಳಿ ತಾಲ್ಲೂಕಿನ ಒಂದು ಮಾದರಿ ಗ್ರಾಮವಾಗಿದ್ದು, ಸ್ವಂತದ್ದಾದ ಗ್ರಾಮ ಪಂಚಾಯ್ತಿ ಕಟ್ಟಡ, ಕುಡಿಯುವ ನೀರಿನ ಕೊಳವೆಬಾವಿ ಹೊಂದಿದೆ. ಆಗಿನ ಗ್ರಾ.ಪಂ.ನ ಅಧ್ಯಕ್ಷ (ದಿವಂಗತ) ಗುಂಡಪ್ಪ ಅವರ ದಕ್ಷ ಆಡಳಿತದಿಂದ ಊರಿನಲ್ಲಿ ರಾತ್ರಿ ಕಾವಲು ಸರದಿಯಂತೆ ನಡೆಯುತ್ತಿದ್ದದ್ದು ಮಾದರಿ ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಗ್ರಾಮದವರಾದ ಶಿಕ್ಷಕ ದಿ.ಎಂ.ಬಿ. ಕೆಂಚಪ್ಪ ಅವರಿಗೆ ರಾಷ್ಟ್ರಪ್ರಶಸ್ತಿ ಲಭಿಸಿದೆ. ರೈತ ಕುಟುಂಬದ ಕೆ. ಗಿರಿಯಪ್ಪ ಕರ್ನಾಟಕ ವಿದ್ಯುತ್ ಮಂಡಳಿಯಲ್ಲಿ ಮುಖ್ಯ ಎಂಜಿನಿಯರ್‌ರಾಗಿ ನಿವೃತ್ತರಾಗಿದ್ದಾರೆ. ರಾಜಕೀಯದಲ್ಲಿ ಗುರುತಿಸಿಕೊಂಡ ಪಿಯೂಸ್ ಡಿಸೋಜ, ಎಂ.ಬಿ. ಹೊನ್ನಪ್ಪ, ಮಂಜುಳಾ ಬೋರ್ಕರ್, ರಾಮಚಂದ್ರರಾವ್ ಮತ್ತಿತರರು ಪ್ರಮುಖರು. ಅರಸಾಳು ಊರಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾತ್ರ ಇದ್ದಾಗ ಈ ಶಾಲೆಯಲ್ಲಿ ಕಲಿತ ವಿಶ್ವನಾಥ ರಾವ್, ಅನಂತ ಆರಾಧ್ಯ ಅವರು ವಿದೇಶಗಳಿಗೂ ಹೋಗಿ ಬಂದಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸಾಧಕರಾಗಿದ್ದಾರೆ. ಇಲ್ಲಿಯ ಹಿರಿಯ ಸಹಕಾರಿ ಹಾಗೂ ಪತ್ರಕರ್ತ ಅರಸಾಳು ರಂಗನಾಥ ಅವರು ಜಿಲ್ಲಾ ಬ್ರಾಹ್ಮಣ ಮಹಾ ಸಭೆಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ (1998-2004)ರಲ್ಲಿ ಶಿವಮೊಗ್ಗ ನಗರದ ಗಾಯಿತ್ರಿ ಮಾಂಗಲ್ಯ ಮಂದಿರದ ನಿರ್ಮಾಣಕ್ಕೆ ಚಾಲನೆ ನೀಡಿದ ಅವರು, ತಮ್ಮ 80ನೇ ಇಳಿವಯಸ್ಸಿನಲ್ಲಿಯೂ ಜಿಲ್ಲೆಯ ಕೇಂದ್ರ ಗ್ರಾಹಕರ ಸೌಹಾರ್ದ ಸಹಕಾರ ಸಂಸ್ಥೆಯ ಉಪಾಧ್ಯಕ್ಷರಾಗಿ ಸಕ್ರಿಯರಾಗಿದ್ದಾರೆ.ಅರಸಾಳು ಜೋಯಿಸರು: 50ರ ದಶಕದಲ್ಲಿ ಸುತ್ತಮುತ್ತಲಿನ 60-70ಹಳ್ಳಿಗಳಿಗೆ ಯಾವುದೇ ಶುಭಕಾರ್ಯಕ್ಕೆ ಅರಸಾಳಿನಿಂದ ಜೋಯಿಸರು ಬರಬೇಕಿತ್ತು. ಈ ವೃತ್ತಿಯಲ್ಲಿ ದಿ. ಲಿಂಗಾ ಜೋಯಿಸ್, ದಿ. ಮೆಂಕಟರಮಣ ಜೋಯಿಸ್, ದಿ. ಮಲ್ಲಾಜೋಯಿಸ್ಸರು, ದಿ. ತಮ್ಮಣ್ಣಜೋಯ್ಸ ಪ್ರಮುಖರಾಗಿದ್ದರು. ಈಗಲೂ ತಲತಲಾಂತರದಿಂದ ಅವರ ಮಕ್ಕಳು, ಮೊಮ್ಮಕ್ಕಳು ಜೊಯ್ಸಿಕೆ ಕಾರ್ಯಕ್ರಮ ನಿರ್ವಹಿಸುತ್ತಿದ್ದಾರೆ.ತರಹೇವಾರು ಮಿಡಿಮಾವು: ಅರಸಾಳು ಗ್ರಾಮದಲ್ಲಿ ಪಕ್ಕದಲ್ಲಿಯೇ ಹರಿಯುತ್ತಿರುವ ಕುಮದ್ವತಿ ನದಿ ತೀರದಲ್ಲಿ ಹಿಂದಿನವರು ನಟ್ಟು ಬೆಳಸಿದ ತರಹೇವಾರು ಜಾತಿಯ ಮಾವಿನ ಮಿಡಿಗಳ ಉಪ್ಪಿನಕಾಯಿಯ ಕಂಪು ದೇಶ ವಿದೇಶಗಳಲ್ಲಿ ಪಸರಿಸಿದ್ದು, ಇತ್ತೀಚಿನ ಮಾನವ ದುರಾಸೆಯಿಂದ ಎಷ್ಟೋ ಅಪರೂಪದ ಮಾವಿನ ತಳಿಗಳು  ನಶಿಸುತ್ತಿದ್ದು, ಅವುಗಳ ರಕ್ಷಣೆ ಅಗತ್ಯವಾಗಿದೆ.ಗ್ರಾಮದಲ್ಲಿ ಇರುವುದು: ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪ್ರಾಥಮಿಕ ಉಪ ಆರೋಗ್ಯಕೇಂದ್ರ, ಪಶುವೈದ್ಯಕೀಯ ಕೇಂದ್ರ, ಪಾತೀಮಾ ಮಾತೆ ಚರ್ಚ್, ವರಸಿದ್ಧಿ ವಿನಾಯಕ ದೇವಸ್ಥಾನ, ಅರಣ್ಯ ಇಲಾಖೆಯ ಪ್ರವಾಸಿ ಮಂದಿರ, ವಲಯ ಅರಣ್ಯಾಧಿಕಾರಿ ಕಚೇರಿ, ನರ್ಸರಿ ಹಾಗೂ ಶ್ರೀರಾಮ ಮಂದಿರ ಇದ್ದು ಇಲ್ಲಿ ಪ್ರತಿ ಶನಿವಾರ ಭಜನೆ ನಡೆಯುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry