ಅರಸೀಕೆರೆ: ಚಿರತೆ ಮರಿ ಪ್ರತ್ಯಕ್ಷ

7

ಅರಸೀಕೆರೆ: ಚಿರತೆ ಮರಿ ಪ್ರತ್ಯಕ್ಷ

Published:
Updated:
ಅರಸೀಕೆರೆ: ಚಿರತೆ ಮರಿ ಪ್ರತ್ಯಕ್ಷ

ಹರಪನಹಳ್ಳಿ: ತಾಲ್ಲೂಕಿನ ಅರಸೀಕೆರೆ ಗ್ರಾಮದ ಹೊರವಲಯದಲ್ಲಿನ ಬೀಜೋತ್ಪಾದನಾ ಪ್ಲಾಟ್‌ನ ಜಮೀನಿನಲ್ಲಿ ಫಸಲಿಗೆ ಹೊದಿಸಲಾಗಿದ್ದ ಹಸಿರುಮನೆ ಒಳಭಾಗದಲ್ಲಿ ಭಾನುವಾರ ಬೆಳಿಗ್ಗೆ 9ಕ್ಕೆ ಗಂಡು ಚಿರತೆ ಮರಿಯೊಂದು ಪತ್ತೆಯಾಗಿದೆ.ಕೋಲಶಾಂತೇಶ್ವರ ಮಠಕ್ಕೆ ಸೇರಿದ ಜಮೀನು ಇದಾಗಿದ್ದು, ಜಮೀನು ಉಳುಮೆ ಮಾಡುವ ರೈತರ ಬೆಳಿಗ್ಗೆ ಬೀಜೋತ್ಪಾದನಾ ಪ್ಲಾಟ್ ಒಳಗೆ ನೋಡುತ್ತಿದ್ದಂತಿಯೇ ಚಿರತೆ ಮರಿ ಕಣ್ಣಿಗೆ ಬಿದ್ದಿದೆ. ಚಿರತೆ ಮರಿಯನ್ನು ನೋಡಿದ ರೈತ ಗ್ರಾಮಸ್ಥರಿಗೆ ವಿಷಯ ತಲುಪಿಸಿದ್ದಾನೆ. ಕೂಡಲೇ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಗ್ರಾಮಸ್ಥರ ಮಾಹಿತಿ ಮೇರೆಗೆ ವಲಯ ಅರಣ್ಯಾಧಿಕಾರಿ ಎಂ.ಡಿ. ಮೋಹನ್ ನೇತೃತ್ವದಲ್ಲಿ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳ ತಂಡ, ಚಿರತೆ ಮರಿಗೆ ಬಲೆ ಬೀಸಿ ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ. ಬಳಿಕ, ಅರಣ್ಯ ಸಿಬ್ಬಂದಿ ಚಿರತೆ ಮರಿಯನ್ನು ಜಿಲ್ಲಾ ಅರಣ್ಯಾಧಿಕಾರಿ ಕಚೇರಿಗೆ ಕೊಂಡೊಯ್ದರು. ನೀರು ಹುಡುಕಿಕೊಂಡು ತಾಯಿ ಚಿರತೆ ಸಮೇತ ಮರಿ ಬೀಜೋತ್ಪಾದನಾ ಪ್ಲಾಟ್‌ನ ಹಸಿರುಮನೆ ಹೊಕ್ಕಿದೆ. ತಾಯಿ ಚಿರತೆ ಸುಲಭವಾಗಿ ಹೊರಹೋಗಿದ್ದು, ಮರಿ ಚಿರತೆ ಹೊರಹೋಗಲು ಸಾಧ್ಯವಾಗಿರಲಿಕ್ಕಿಲ್ಲ ಎಂದು ಅರಣ್ಯ ಅಧಿಕಾರಿಗಳು ಹೇಳಿದರು.ಸೆರೆ ಸಿಕ್ಕಿರುವ ಚಿರತೆ ಮರಿ ಅರೋಗ್ಯವಾಗಿದ್ದು, ಸ್ವತಂತ್ರವಾಗಿ ಜೀವಿಸಬಹುದಾದ ಸಹಜ ವಯೋಮಾನದ ಬೆಳವಣಿಗೆ ಹೊಂದಿದೆ. ಹೀಗಾಗಿ, ವನ್ಯಪ್ರಾಣಿ ಸಂಗ್ರಹಾಲಯಕ್ಕೆ ಸಾಗಿಸಿ ಪೋಷಿಸಬೇಕಾದ ಪ್ರಮೇಯ ಇಲ್ಲ. ಸೆರೆ ಸಿಕ್ಕಿರುವ ಮರಿಯನ್ನು ಹಿರಿಯ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ. ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು `ಪ್ರಜಾವಾಣಿ'ಗೆ ತಿಳಿಸಿದರು.ಉಪ ವಲಯಾಧಿಕಾರಿ ಚಂದ್ರಶೇಖರಗೌಡ, ಅರಣ್ಯಾಧಿಕಾರಿ ಎಚ್.ಎಸ್. ಚಂದ್ರಶೇಖರ್, ವನಪಾಲಕ ಮಲ್ಲಪ್ಪ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry