ಭಾನುವಾರ, ಮೇ 9, 2021
19 °C

ಅರಸೀಕೆರೆ ಸಂತೆಗೆ ಜಾಗದ ಕೊರತೆ

ಮಾಡಾಳು ಶಿವಲಿಂಗಪ್ಪ Updated:

ಅಕ್ಷರ ಗಾತ್ರ : | |

ಅರಸೀಕೆರೆ: ಪಟ್ಟಣದಲ್ಲಿ ಹಲವು ವರ್ಷಗಳಿಂದಲೂ ಪ್ರತಿ ಶುಕ್ರವಾರ ನಡೆಯುವ ವಾರದ ಸಂತೆ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ವಿಶಾಲ ವಾದ ಮೈದಾನದಲ್ಲಿ ನಡೆಯುತ್ತಿದೆ.ತಾಲ್ಲೂಕಿನಲ್ಲಿ ನಡೆಯುವ ಅತಿ ದೊಡ್ಡ ಸಂತೆಗಳಲ್ಲಿ ಇದಕ್ಕೆ ಎರಡನೇ ಸ್ಥಾನವಿದೆ. ಸಂತೆಯಲ್ಲಿ ಸ್ಥಳಾವಕಾಶದ ಕೊರತೆಯಿಂದ ವ್ಯಾಪಾರಸ್ಥರು ಹಾಗೂ ಜನರಿಗೆ ತೊಂದರೆ ಯಾಗುತ್ತಿದೆ. ರೈತರಿಗೆ ತಾವು ಬೆಳೆದ ತರಕಾರಿ ಕಾಳುಗಳು ಸೇರಿದಂತೆ ಆಗತ್ಯ ವಸ್ತುಗಳ ಮಾರಾಟ ಸ್ಥಳ ಹಾಗೂ ಇತರೆ ಪದಾರ್ಥಗಳನ್ನು ಕೊಳ್ಳುವ ಸ್ಥಳ.

ತಾಲ್ಲೂಕಿನ ಕಸಬಾ ಹೋಬಳಿಯ ಅಗ್ಗುಂದ, ದುಮ್ಮೇನಹಳ್ಳಿ, ಭೈರ ನಾಯಕನಹಳ್ಳಿ, ನಾಗತೀಹಳ್ಳಿ, ಜಾಜೂರು, ಗೀಜೀಹಳ್ಳಿ, ತಿರುಪತಿ ಹಳ್ಳಿ ಮಾಲೇಕಲ್ ತಿರುಪತಿ, ಸಿದ್ದರಹಳ್ಳಿ, ಬೆಳಗುಂಬ ಬಂಡೀಹಳ್ಳಿ, ಸೂಳೇಕೆರೆ, ಪನ್ನಸಂದ್ರ, ಜಿ.ಶಂಕರನ ಹಳ್ಳಿ, ಯಳವಾರೆ, ಅಣ್ಣಾಯಕನಹಳ್ಳಿ, ಯಾದಾಪುರ, ಮುರುಂಡಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಹಳ್ಳಿಗಳ ಜನರು ಈ ಸಂತೆಗೆ ಬರುತ್ತಾರೆ.ಸುಂಕ ಕೊಟ್ಟರೂ ಸೌಕರ್ಯವಿಲ್ಲ: ಸಂತೆ ಮೈದಾನದಲ್ಲಿ ವ್ಯಾಪಾರಸ್ಥರಿಗೆ ಕೂರಲು ಸ್ಥಳವಿದ್ದರೂ ನೀರಿಲ್ಲ, ನೆರಳಿಲ್ಲ, ಗಿಡ ಮರಗಳನ್ನು ನೆಡುವ ಅಥವಾ ಶೆಡ್‌ಗಳನ್ನು ನಿರ್ಮಿಸುವ ಕಾರ್ಯಕ್ಕೆ ಮುಂದಾಗಿಲ್ಲ. ಸಂತೆಯಲ್ಲಿ ಕರ ವಸೂಲಿ ಮಾಡಲಾಗುತ್ತದೆ. ಆದರೆ, ಸಂತೆ ಮೈದಾನದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ.ಮುಖ್ಯ ರಸ್ತೆಯಲ್ಲಿ ರಭಸವಾಗಿ ಸಂಚರಿಸುವ ವಾಹನಗಳ ಮಧ್ಯೆ ಸಂತೆಗೆ ಬಂದ ಜನರು ಜೀವ ಹಿಡಿದುಕೊಂಡೇ ದಿನಸಿ, ತರಕಾರಿ ಖರೀದಿಸಬೇಕಾದ ಅನಿವಾರ್ಯತೆ ಇದೆ. ಎಡಬಿಡದೆ ಓಡಾಡುವ ಸಾರಿಗೆ ಸಂಸ್ಥೆ ಬಸ್‌ಗಳು, ಜನರನ್ನು ಕುರಿ ಗಳಂತೆ ತುಂಬಿಕೊಂಡು ಅಡ್ಡಾದಿಡ್ಡಿ ಸಂಚರಿಸುವ ಆಟೊ ರಿಕ್ಷಾಗಳ ನಡುವೆ ಸಂತೆಗೆ ಬಂದ ಗ್ರಾಹಕರು ವಸ್ತುಗಳನ್ನು ಕೊಂಡು ಮನೆ ಸೇರಿದರೆ ಸಾಕಪ್ಪ ಎನ್ನುವ ಸ್ಥಿತಿಯಿದೆ.ಈ ಸಂತೆಯನ್ನು ಬೇರೆ ಪ್ರದೇಶಕ್ಕೆ ಸ್ಥಳಾಂತರಗೊಳಿಸುವಂತೆ ಸ್ಥಳೀಯ ನಿವಾಸಿಗಳು ಹಾಗೂ ಸಂಘ-ಸಂಸ್ಥೆಗಳು ಪ್ರತಿಭಟನೆ ಹೋರಾಟ ನಡೆಸಿವೆ. ಆದರೆ, ಪುರಸಭೆ ಅಧಿಕಾರಿಗಳು ಇದುವರೆಗೆ ಅಂಥ ತೀರ್ಮಾನ ಕೈಗೊಂಡಿಲ್ಲ. ಸಂತೆಯಲ್ಲಿ ವಾಹನಗಳ ಸುಗಮ ಸಂಚಾರದ ವ್ಯವಸ್ಥೆಗೆ ಪ್ರತಿ ವಾರವೂ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಆದರೆ, ವೇಗವಾಗಿ ವಾಹನ ಓಡಿಸುವವರೇನೂ ಕಡಿಮೆ ಆಗಿಲ್ಲ. ಟ್ರಾಫಿಕ್ ಜಾಮ್ ಆದರೂ ಪೊಲೀಸರು ಕ್ರಮ ಕೈಗೊಳ್ಳುವ ಉಸಾಬರಿಗೆ ಹೋಗುವುದಿಲ್ಲ. ಈ ಅವ್ಯವಸ್ಥೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬುದು ಜನರ ಅಭಿಪ್ರಾಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.