ಅರಿಯಿರಿ ಅಕ್ಷರಗಳ ಮರ್ಮ

7
ಕೈಬರಹ - ಕೈಪಿಡಿ ಭಾಗ 10

ಅರಿಯಿರಿ ಅಕ್ಷರಗಳ ಮರ್ಮ

Published:
Updated:
ಅರಿಯಿರಿ ಅಕ್ಷರಗಳ ಮರ್ಮ

ಕನ್ನಡ ಭಾಷೆಯಲ್ಲಿ ಇರುವುದು ಒಂದೇ ವರ್ಣಮಾಲೆ. ಕನ್ನಡದಲ್ಲಿ ನಾವು ಬರೆಯುವ ಅಕ್ಷರಗಳಿಗೂ ಮುದ್ರಣದ ಅಕ್ಷರಗಳಿಗೂ ವ್ಯತ್ಯಾಸವಿಲ್ಲ. ಆದರೆ ಇಂಗ್ಲಿಷ್ ಭಾಷೆಯಲ್ಲಿ ನಾಲ್ಕು ಬಗೆಯ ವರ್ಣಮಾಲೆಗಳಿವೆ. ಬರೆಯುವ ದೊಡ್ಡಕ್ಷರ (capitals) ಮತ್ತು ಚಿಕ್ಕ ಅಕ್ಷರಗಳು, ಮುದ್ರಣದ ದೊಡ್ಡಕ್ಷರ ಮತ್ತು ಚಿಕ್ಕಕ್ಷರಗಳು. ಇದಲ್ಲದೆ ಬರೆದದ್ದನ್ನೋ ಮುದ್ರಣವಾಗಿದ್ದನ್ನೋ ಓದುವಾಗ ಕೆಲವು ಅಕ್ಷರಗಳನ್ನು ಉಚ್ಚಾರ ಮಾಡಬೇಕಾಗಿಲ್ಲ. ಸೈಲೆಂಟ್  ಲೆಟರ್ಸ್‌ ಬೇರೆ ಇದೆ. ಆದರೆ ಆ ವಿಷಯ ಕೈಬರಹಕ್ಕೆ ಸಂಬಂಧಿಸಿಲ್ಲ. ಆದ್ದರಿಂದ ನಾನು ಅದನ್ನು ಮುಂದುವರಿಸುವುದಿಲ್ಲ.ಇಂಗ್ಲಿಷ್ ಭಾಷೆಯಲ್ಲಿ ಇನ್ನೊಂದು ವಿಶೇಷ ಇದೆ. ನೀವು ಅದರ ಅಕ್ಷರಗಳನ್ನು ಬಿಡಿಬಿಡಿಯಾಗಿ ಆದರೂ ಬರೆಯಬಹುದು ಅಥವಾ ಕೂಡಿಸಿ ಬೇಕಾದರೂ ಬರೆಯಬಹುದು. ಕನ್ನಡದಲ್ಲಾದರೆ ಕೂಡಿಸಿ ಬರೆಯುವ ಅಕ್ಷರಗಳು ಎಂಬುದಿಲ್ಲ.ಕನ್ನಡವೇ ಆಗಲಿ ಅಥವಾ ಇಂಗ್ಲಿಷೇ ಆಗಲಿ ಅಕ್ಷರಗಳಲ್ಲಿ ಮೂರು ವಲಯ ಅಥವಾ ಭಾಗಗಳಿವೆ. ಮೇಲ್ಭಾಗ, ಮಧ್ಯದ ಭಾಗ ಹಾಗೂ ಕೆಳಗಿನ ಭಾಗ. ಇದರಲ್ಲಿ ಮುಖ್ಯವಾದ ಭಾಗವೆಂದರೆ ಮಧ್ಯ ಭಾಗ. ಕನ್ನಡ ಅಕ್ಷರಗಳ ಮೇಲ್ಭಾಗದಲ್ಲಿ ತಲೆಗಟ್ಟು ಮತ್ತು ಏತ್ವಗಳಿರುತ್ತವೆ. ಕೆಳಭಾಗದಲ್ಲಿ ಒತ್ತಕ್ಷರಗಳು ಇರುತ್ತವೆ.ಇಂಗ್ಲಿಷಿನ 26 ಚಿಕ್ಕಕ್ಷರಗಳಲ್ಲಿ 13 ಅಕ್ಷರಗಳು ಕೇವಲ ಮಧ್ಯ ಭಾಗವನ್ನು ಮಾತ್ರ ಹೊಂದಿವೆ. 6 ಅಕ್ಷರಗಳು ಮೇಲ್ಭಾಗ ಮತ್ತು ಮಧ್ಯ ಭಾಗಗಳನ್ನು ಹೊಂದಿವೆ. ಇನ್ನು 5 ಅಕ್ಷರಗಳು ಮಧ್ಯ ಭಾಗ ಮತ್ತು ಕೆಳ ಭಾಗಗಳನ್ನೂ ಹಾಗೂ 2 ಅಕ್ಷರಗಳು ಮೂರೂ ಭಾಗಗಳನ್ನು ಹೊಂದಿವೆ. ದೊಡ್ಡಕ್ಷರಗಳಾದರೆ ಮೇಲ್ಭಾಗ ಮತ್ತು ಮಧ್ಯ ಭಾಗವನ್ನು ಹೊಂದಿರುತ್ತವೆ. (ದೃಷ್ಟಾಂತ 1 ನೋಡಿ) ಇಂಗ್ಲಿಷ್ `ಕಾಪಿ'ಯನ್ನು 4 ಗೆರೆಗಳ ಪುಸ್ತಕದಲ್ಲಿ ಬರೆಯುವುದೇ ಈ ಭಾಗಗಳನ್ನು ಗುರುತಿಸುವ ಸಲುವಾಗಿ. ಅದರಲ್ಲಿ ಅಕ್ಷರಗಳ ಯಾವ ಯಾವ ಭಾಗ ಎಲ್ಲಿ ಬರೆಯಬೇಕು ಎಂಬುದನ್ನು ನಾವು ಯೋಚಿಸಬೇಕು. ಇಂಗ್ಲಿಷ್ ಹಾಗೂ ಕನ್ನಡಕ್ಕೆ ಒಂದು ಸಾಮಾನ್ಯ ಅಂಶವೆಂದರೆ ಮಧ್ಯ ಭಾಗದಲ್ಲೇ ಗೆರೆಗಳ ಸಾಂದ್ರತೆ (Density of line) ಹೆಚ್ಚು. ಮೇಲ್ಭಾಗ ಮತ್ತು ಕೆಳ ಭಾಗದಲ್ಲಿ ಗೆರೆಗಳು ವಿರಳ.ನಾವು ಸಾಮಾನ್ಯವಾಗಿ ಒಂದೊಂದೇ ಗೆರೆಯುಳ್ಳ ((single line)ಪುಸ್ತಕದಲ್ಲಿ ಬರೆಯುತ್ತೇವೆ. ಆದರೆ 4 ಗೆರೆಯುಳ್ಳ (ಇಂಗ್ಲಿಷ್) ಅಥವಾ 2 ಗೆರೆಯುಳ್ಳ (ಕನ್ನಡ) ಪುಸ್ತಕದಲ್ಲಿ ಕಾಪಿ ಬರೆದ `ಜ್ಞಾನ' ಒಂದೊಂದೇ ಗೆರೆಯ ಪುಸ್ತಕದಲ್ಲಿ ಬರೆಯುವಾಗ ಸ್ಥಿತ್ಯಂತರ ಆಗುವುದಿಲ್ಲ! ಬೇಕಾದರೆ ಒಂದೊಂದೇ ಗೆರೆಯುಳ್ಳ ಪುಸ್ತಕವನ್ನೂ 4 ಗೆರೆಯ ಪುಸ್ತಕವನ್ನಾಗಿ ಪರಿವರ್ತಿಸಬಹುದು. ಹೇಗೆಂದರೆ ಎರಡು ಅನುಕ್ರಮ ಗೆರೆಗಳ (consecutive lines)ನಡುವೆ ಪೆನ್ಸಿಲ್‌ನಿಂದ ಎರಡು ಗೆರೆ ಹಾಕುವುದರ ಮೂಲಕ (ದೃಷ್ಟಾಂತ 2 ನೋಡಿ). ಆಗ ಅದು ಮೂರು ಸಮಭಾಗವಾಗಿ ಬದಲಾಗುತ್ತದೆ. ಆದರೆ ನಾವು ಬರೆಯುವ ಅಕ್ಷರಗಳು ಯಾವಾಗಲೂ ಮುದ್ರಿತ ಗೆರೆಯ(Base line)ಮೇಲೆ ಸರಿಯಾಗಿ ಕುಳಿತಿರುವಂತೆ ಬರೆಯಬೇಕು. ಎರಡು ಮುದ್ರಿತ ಗೆರೆಗಳ ನಡುವೆ ಬರೆಯುವುದು ಸರಿಯಲ್ಲ.ಯಾವುದೇ ಭಾಷೆಯಾಗಲಿ ಚಿಕ್ಕ ಮಕ್ಕಳು ಬರೆಯುವ ಅಕ್ಷರಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಕ್ರಮೇಣ ಅವರು ದೊಡ್ಡವರಾಗುತ್ತಾ ಹೋದಂತೆ ಅಕ್ಷರಗಳು ಸಣ್ಣದಾಗುತ್ತವೆ. ಆ ನಂತರ ಗಾತ್ರ ಸ್ಥಿರಗೊಳ್ಳುತ್ತದೆ. ಚಿಕ್ಕ ಮಕ್ಕಳಿಗೆ ದೃಢವಾದ ಹಿಡಿತ ಇಲ್ಲದಿರುವುದರಿಂದ ಅವರದು childish handwriting ಆಗಿರುತ್ತದೆ. ಬರಬರುತ್ತಾ ಬರವಣಿಗೆಯಲ್ಲಿ ಪ್ರಬುದ್ಧತೆ ಬರುತ್ತದೆ, ಬರಬೇಕು. ಆಗ ಅದು ಪ್ರಬುದ್ಧ ಬರವಣಿಗೆ ಎನಿಸಿಕೊಳ್ಳುತ್ತದೆ. (ದೃಷ್ಟಾಂತ 3 ನೋಡಿ) ಆದರೆ ಕೆಲವರು ದೊಡ್ಡವರಾದರೂ ಬರಹ ಮಾತ್ರ ಮಕ್ಕಳ ಬರಹದಂತೆಯೇ ಇರುತ್ತದೆ. ಕೈಬರಹವನ್ನು ನೋಡಿ ಸುಮಾರಾಗಿ ವಯಸ್ಸನ್ನು ಅಂದಾಜು ಮಾಡಬಹುದಲ್ಲವೇ?ಕನ್ನಡ ಅಕ್ಷರಗಳನ್ನು ಬಿಡಿಬಿಡಿಯಾಗಿ ಬರೆಯಬೇಕಾದ್ದರಿಂದ ಮತ್ತು ಕನ್ನಡ ಅಕ್ಷರಗಳಲ್ಲಿ ಹಿಮ್ಮುಖ ಚಲನೆ ಹೆಚ್ಚಾಗಿರುವುದರಿಂದ ವೇಗವಾಗಿ ಬರೆಯಲು ಸಾಧ್ಯವಾಗುವುದಿಲ್ಲ. ಇಂಗ್ಲಿಷನ್ನು ಕೂಡಿಸಿ ಬರೆಯಬಹುದಾದ್ದರಿಂದ ವೇಗವಾಗಿ ಬರೆಯಲು ಸಾಧ್ಯ. ಕೂಡಿಸಿ ಬರೆಯುವ ಒಂದು ಮುಖ್ಯ ಉದ್ದೇಶವೇ ವೇಗವಾಗಿ ಬರೆಯಬಹುದೆಂದು. ಚಿಕ್ಕಂದಿನಲ್ಲಿ ಇಂಗ್ಲಿಷ್ ಅಕ್ಷರಗಳನ್ನು ಬಿಡಿಬಿಡಿಯಾಗಿ ಬರೆಯುತ್ತಿದ್ದವರೂ ದೊಡ್ಡವರಾದ ಮೇಲೆ ಕೂಡಿಸಿ ಬರೆಯತೊಡಗುತ್ತಾರೆ! ಸಹಿಯನ್ನೂ ಕೂಡಿಸಿಯೇ ಮಾಡುತ್ತಾರೆ! ಆದ್ದರಿಂದ ಇಂಗ್ಲಿಷನ್ನು ಚಿಕ್ಕಂದಿನಿಂದಲೇ ಕೂಡಿಸಿ ಬರೆಯುವುದನ್ನು ಚೆನ್ನಾಗಿ ಕಲಿಯುವುದು ಒಳ್ಳೆಯದು. ಇದರಿಂದ ಮುಂದೆ ದೊಡ್ಡ ಪರೀಕ್ಷೆಗಳಲ್ಲಿ ಸಮಯದ ನಿರ್ವಹಣೆ ಸುಲಭವಾಗುತ್ತದೆ.ಬೇಗ ಕೆಲಸ ಆಗಬೇಕು ಅಥವಾ ಹೋಂವರ್ಕ್ ಬೇಗ ಮಾಡಿ ಮುಗಿಸಿ ಬಿಡಬೇಕು ಎಂಬ ಆತುರ ಇಲ್ಲದಿದ್ದಾಗ ನಿಧಾನವಾಗಿ ಬರೆಯಲು ಅಡ್ಡಿ ಇಲ್ಲ.

ಮುಂದಿನ ವಾರ: ಕೈಬರಹ ಸೌಂದರ್ಯಕ್ಕೆ ಬ್ಯೂಟಿ ಟಿಪ್ಸ್- 1

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry