ಅರಿವಿನ ಮನೆ ಅಭಿವೃದ್ಧಿ ನಿರ್ಲಕ್ಷ್ಯ

7

ಅರಿವಿನ ಮನೆ ಅಭಿವೃದ್ಧಿ ನಿರ್ಲಕ್ಷ್ಯ

Published:
Updated:
ಅರಿವಿನ ಮನೆ ಅಭಿವೃದ್ಧಿ ನಿರ್ಲಕ್ಷ್ಯ

ಬಸವಕಲ್ಯಾಣ: ಇಲ್ಲಿರುವ ಬಸವಣ್ಣನವರ ಅರಿವಿನ ಮನೆ ಜೀರ್ಣೋದ್ಧಾರ ಕೈಗೊಳ್ಳುವಲ್ಲಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ಬಿಕೆಡಿಬಿ)ಯಿಂದ ನಿರ್ಲಕ್ಷ ತೋರಲಾಗಿದ್ದು ಕೆಲ ಪ್ರಮಾಣದಲ್ಲಿ ಮಾತ್ರ ಕೆಲಸ ನಡೆದಿದೆ.ಬಸವಣ್ಣನವರಿಗೆ ಸಂಬಂಧಿಸಿದ ಹಳೆಯ ಕಾಲದ ಪರುಷಕಟ್ಟೆ ಮತ್ತು ಅರಿವಿನ ಮನೆ ಈ ಎರಡು ಸ್ಮಾರಕಗಳು ಮಾತ್ರ ಇವೆ. ಇವುಗಳಲ್ಲಿ ಪರುಷಕಟ್ಟೆಯ ಅಭಿವೃದ್ಧಿ ನಡೆಸಲಾಗಿಲ್ಲ. ಇನ್ನುಳಿದಂತೆ ಅರಿವಿನ ಮನೆಯ ಗವಿ ಎದುರಿಗೆ ಸಣ್ಣ ಕಲ್ಲಿನ ಮಂಟಪ ಮತ್ತು ಸ್ವಾಗತ ದ್ವಾರ ಕಟ್ಟಿರುವುದು ಬಿಟ್ಟರೆ ಬೇರೆ ಕಾಮಗಾರಿ ಕೈಗೊಳ್ಳದಿರುವ ಬಗ್ಗೆ ಸಾರ್ವಜನಿಕರಿಂದ ಅತೃಪ್ತಿ ವ್ಯಕ್ತವಾಗಿದೆ.ಅಭಿವೃದ್ಧಿ ಮಂಡಳಿ ರಚನೆ ಆಗುವುದಕ್ಕೆ ಮೊದಲು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಮುದಪ್ಪ ಅವರು ಅಧ್ಯಕ್ಷರಾಗಿದ್ದ ಬೆಂಗಳೂರಿನ ವೀರಶೈವ ಕ್ಷೇಮಾಭ್ಯುದಯ ಸಂಸ್ಥೆಯಿಂದ ಇಲ್ಲಿನ ಸ್ಮಾರಕಗಳ ವಿಕಾಸಕ್ಕೆ ಯೋಜನೆ ಹಾಕಿಕೊಳ್ಳಲಾಗಿತ್ತು. ಅವರು ಪ್ರಥಮವಾಗಿ ಬಸವಣ್ಣನವರ ಅರಿವಿನ ಮನೆಯ ಕಾಮಗಾರಿ ಕೈಗೆತ್ತಿಕೊಂಡಿದ್ದರು.ಸಂಸ್ಥೆಯವರು ದೇಣಿಗೆ ಸಂಗ್ರಹಿಸಿ ಇಲ್ಲಿನ ಎರಡು ಸಣ್ಣ ಗವಿಗಳನ್ನು ದೊಡ್ಡದನ್ನಾಗಿ ಮಾಡಿ ಮಣ್ಣು ಕೆಳಕ್ಕೆ ಬೀಳದಂತೆ ಗಿನೆಟಿಂಗ್ ಮಾಡಿದ್ದರು. ಎದುರಿನ ಜಾಗ ಅಗೆದು ಸಮತಟ್ಟಾಗಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅಗೆಯುವಾಗ ಕಲ್ಲಿನ ಕೆತ್ತನೆಯ ಕಂಬಗಳು ದೊರೆತಿದ್ದವು. ಅವನ್ನು ಹಾಗೆಯೇ ಎದುರುಗಡೆ ಸಂರಕ್ಷಿಸಿ ಇಡಲಾಗಿದೆ. ಮುಂದೆ ಅಭಿವೃದ್ಧಿ ಮಂಡಳಿ ರಚನೆಯಾದಾಗ ಕ್ಷೇಮಾಭ್ಯುದಯ ಸಂಸ್ಥೆಯವರು ತಮ್ಮ ಕೆಲಸವನ್ನು ಸ್ಥಗಿತಗೊಳಿಸಿದರು. ನಂತರ ಮಂಡಳಿಯವರು ಸಹ ಈ ಸ್ಥಳದ ಮಹತ್ವ ಇನ್ನಷ್ಟು ಹೆಚ್ಚುವಂತಹ ಕಾರ್ಯ ಕೈಗೊಳ್ಳಲಿಲ್ಲ.ಇದಲ್ಲದೆ ಮಂಟಪ ನಿರ್ಮಾಣಕ್ಕೆ ಇಲ್ಲಿ ನೆಲ ಅಗೆಯುವಾಗ ದೊರೆತ ಕಲ್ಲಿನ ಕಂಬಗಳನ್ನು ಉಪಯೋಗಿಸದೆ ಬೇರೆ ಕಡೆಯಿಂದಲೇ ತರಲಾಯಿತು. ಅಲ್ಲದೆ ಕಂಬಗಳು ದೊರೆತಿವೆಯೆಂದರೆ ನೆಲದಲ್ಲಿ ಇನ್ನೇನಾದರೂ ಇರಬಹುದು ಎಂದು ನೋಡುವುದಕ್ಕಾಗಿ ಉತ್ಖನನ ಕಾರ್ಯ ಸಹ ಕೈಗೊಳ್ಳಲಿಲ್ಲ. ಆ ಕಂಬಗಳು ಮುಳ್ಳುಗಂಟೆಗಳ ಮಧ್ಯೆ ಅನಾಥವಾಗಿ ಬಿದ್ದಿವೆ.ಮಂಡಳಿಯ ಯೋಜನೆಯಂತೆ ಪ್ರಥಮ ಹಂತದಲ್ಲಿ ಸಮಗ್ರವಾಗಿ ಅಭಿವೃದ್ಧಿ ಕೈಗೊಳ್ಳಬೇಕಾದ 19 ಸ್ಮಾರಕಗಳ ಪಟ್ಟಿಯಲ್ಲಿ ಅರಿವಿನ ಮನೆಯ ಹೆಸರು ಸಹ ಇದೆ. ಆದರೂ ಇಲ್ಲಿ ಅನ್ಯ ಸ್ಮಾರಕಗಳ ಎದುರಿಗೆ ನಿರ್ಮಿಸಿದಂತೆ ಕಲ್ಲಿನ ಕಂಬಗಳ ದೊಡ್ಡ ಮಂಟಪ, ಉದ್ಯಾನವನ ಏಕೆ ಮಾಡಲಾಗಿಲ್ಲ ಎಂದು ಜನರು ಪ್ರಶ್ನಿಸುತ್ತಿದ್ದಾರೆ.ಅರಿವಿನ ಮನೆ ಮಹತ್ವದ ಸ್ಥಳವಾಗಿದ್ದು ಇಲ್ಲಿ ಬಸವಣ್ಣನವರು ಜಪ, ತಪ ಮತ್ತು ಧ್ಯಾನ ಕೈಗೊಂಡಿದ್ದರು ಎಂದು ಹೇಳಲಾಗುತ್ತದೆ. ಆದ್ದರಿಂದ ಇಲ್ಲಿ ಇನ್ನೂ ಹೆಚ್ಚಿನ ಕಾಮಗಾರಿ ನಡೆಸಬೇಕು. ಬಸವಣ್ಣನವರು ಪೂಜಾನಿರತರಾದ ಭಂಗಿಯಲ್ಲಿನ ದೊಡ್ಡ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭೆ ತಾಲ್ಲೂಕು ಅಧ್ಯಕ್ಷ ಶಶಿಕಾಂತ ದುರ್ಗೆ ಒತ್ತಾಯಿಸಿದ್ದಾರೆ.ಬೇರೆ ಶರಣ ಸ್ಮಾರಕಗಳ ಎದುರು ಹುಲ್ಲು, ಹೂಗಿಡಗಳನ್ನು ಬೆಳೆಸಿದ್ದರಿಂದ ಪರಿಸರ ಹಸಿರಿನಿಂದ ಕಂಗೊಳಿಸುತ್ತಿದೆ. ಆದರೆ ಅರಿವಿನ ಮನೆ ಎದುರು ಮಾತ್ರ ಗಿಡಗಳಿಲ್ಲದೆ ಪರಿಸರ ಭಣಗುಡುತ್ತಿದೆ. ಹಾಸುಗಲ್ಲುಗಳು ಹಾಕದೆ ಧೂಳು ಏಳುತ್ತಿದೆ. ಆದ್ದರಿಂದ ಉದ್ಯಾನವನ ನಿರ್ಮಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದ್ದಾರೆ.ಮಂಡಳಿಯ ಕೆಲ ಅಧಿಕಾರಿಗಳು ಹೇಳುವ ಪ್ರಕಾರ ಅನುಭವ ಮಂಟಪ, ಮಹಾಮನೆ ಮತ್ತು ಅರಿವಿನ ಮನೆಗಳನ್ನು ಎರಡನೇ ಹಂತದಲ್ಲಿ ಬೇರೆಡೆ ನಿರ್ಮಿಸಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ. ಇವುಗಳಲ್ಲಿ 12ನೇ ಶತಮಾನದಲ್ಲಿದ್ದ ಅನುಭವ ಮಂಟಪ, ಮಹಾಮನೆಗಳ ಸ್ಥಳ ಇದುವರೆಗೆ ಪತ್ತೆಯಾಗಿಲ್ಲ. ಆದ್ದರಿಂದ ಅವುಗಳನ್ನು ಎಲ್ಲಿಯಾದರೂ ನಿರ್ಮಿಸಲಿ. ಆದರೆ ಮೊದಲಿನಿಂದಲೂ ಅರಿವಿನ ಮನೆ ಎಂದು ನಂಬಿಕೊಂಡು ಬಂದ ಸ್ಥಳ ಇರುವುದರಿಂದ ಇದಕ್ಕೆ ಮಾತ್ರ ಮಹತ್ವ ಕೊಡಬೇಕು ಎನ್ನುವುದು ಇಲ್ಲಿನ ಪ್ರಮುಖರ ಅಭಿಪ್ರಾಯವಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry