ಅರಿವು ಕಾರ್ಯಕ್ರಮ: ಸಭಾಂಗಣ ಭಣ ಭಣ!

7

ಅರಿವು ಕಾರ್ಯಕ್ರಮ: ಸಭಾಂಗಣ ಭಣ ಭಣ!

Published:
Updated:

ಶ್ರೀರಂಗಪಟ್ಟಣ: ಸರ್ಕಾರದ ಪ್ರಾಯೋಜಕತ್ವದಲ್ಲಿ ಶನಿವಾರ ಪಟ್ಟಣದ ಯುವಜನ ಕೇಂದ್ರದಲ್ಲಿ `ವಯಸ್ಕರ ಶಿಕ್ಷಣ~, `ಹೆಣ್ಣು ಭ್ರೂಣಹತ್ಯೆ~, `ಮಾಹಿತಿ ಹಕ್ಕು ಅಧಿನಿಯಮ-2005~ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಒಬ್ಬರೂ ಭಾಗವಹಿಸಲಿಲ್ಲ. ಕಲಾವಿದರು ತಮ್ಮಷ್ಟಕ್ಕೆ ತಾವು ಅರಿವು ಗೀತೆ ಹಾಡಿ ಮರಳಿದ ಪ್ರಸಂಗ ನಡೆಯಿತು.ಕಾರ್ಯಕ್ರಮ ಸಂಜೆ 6 ಗಂಟೆಗೆ ಶುರುವಾಯಿತು. ಒಂದು ತಾಸು ಕಳೆದರೂ ಒಬ್ಬರೂ ಕೂಡ ಇತ್ತ ಬರಲಿಲ್ಲ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮತ್ತು ಸಂತೆ ಮೈದಾನದ ಪಕ್ಕದಲ್ಲೇ ಕಾರ್ಯಕ್ರಮ ನಡೆದರೂ ಒಬ್ಬರೂ ಮುಖ ಮಾಡಲಿಲ್ಲ. ಮೈಸೂರಿನ ಜಗದೀಶ್ ಮತ್ತು ತಂಡ ಸುಗಮ ಸಂಗೀತ ಹಾಡುತ್ತಲೇ ಇದ್ದರು. ಪಿರಿಯಾಪಟ್ಟಣದ ಮಾನಸ ಕಲಾ ತಂಡದ ಸದಸ್ಯರು ಕಿರು ನಾಟಕ ಪ್ರಸ್ತುತಪಡಿಸಿದರು. ಇಷ್ಟಾದರೂ ಕಾರ್ಯಕ್ರಮಕ್ಕೆ ಯಾರೂ ಬರಲಿಲ್ಲ. ಇಡೀ ಸಭಾಂಗಣ ಬಿಕೋ ಎನ್ನುತ್ತಿತ್ತು. ಸಂಗೀತ ಮತ್ತು ನಾಟಕ ವಿಭಾಗದ ನಿರ್ದೇಶಕ ಪುರುಷೋತ್ತಮ ಗಂಗೊಂಡೆ ಅವರು ಕೆಲವೊತ್ತು ಕಾರ್ಯಕ್ರಮ ವೀಕ್ಷಿಸಿ ತೆರಳಿದರು.ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಬೆಂಗಳೂರಿನ ಸಂಗೀತ ಮತ್ತು ನಾಟಕ ವಿಭಾಗ ಜಂಟಿಯಾಗಿ ಈ ಅರಿವು ಕಾರ್ಯಕ್ರಮ ಆಯೋಜಿಸಿದ್ದವು. `ಸಕಾಲ, ಪರಿಸರ ಸಂರಕ್ಷಣೆ ಹಾಗೂ ದೇಶಭಕ್ತಿ~ ಬಗ್ಗೆಯೂ ಕಲಾವಿದರು ಕಾರ್ಯಕ್ರಮ ನಡೆಸಿಕೊಟ್ಟರು. ಆದರೆ, ಇದನ್ನು ಕೇಳಲು ಯಾರೂ ಇರಲಿಲ್ಲ.ಮೇ 17ರಿಂದ ತಾಲ್ಲೂಕಿನ ಬಾಬುರಾಯನಕೊಪ್ಪಲು, ಕಿರಂಗೂರು, ದರಸಗುಪ್ಪೆ ಇತರೆಡೆ 5 ದಿನಗಳ ಕಾಲ ಜಾಗೃತಿ ಕಾರ್ಯಕ್ರಮ ನೀಡಲಿದ್ದೇವೆ ಎಂದು ಕಲಾವಿದರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry