ಅರಿವು ವಿಸ್ತಾರ: ಅಸ್ಮಿತೆ ವಿಸ್ಮೃತಿ

7

ಅರಿವು ವಿಸ್ತಾರ: ಅಸ್ಮಿತೆ ವಿಸ್ಮೃತಿ

Published:
Updated:
ಅರಿವು ವಿಸ್ತಾರ: ಅಸ್ಮಿತೆ ವಿಸ್ಮೃತಿ

ಗುಲ್ಬರ್ಗ: ಕನ್ನಡ ಸಾಹಿತ್ಯದಲ್ಲಿ ಅರಿವು ವಿಸ್ತಾರಗೊಂಡಿದೆ. ಅಸ್ಮಿತೆ ವಿಸ್ಮೃತಿಗೊಂಡಿದೆ ಎಂದು ವಿಶ್ರಾಂತ ಕುಲಪತಿ ಎಂ.ಎಂ.ಕಲಬುರ್ಗಿ ಹೇಳಿದರು. ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಸಂಘವು ಏರ್ಪಡಿಸಿದ್ದ  ಕಾರ್ಯಕ್ರಮದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಅರಿವು ಮತ್ತು ಅಸ್ಮಿತೆ’ ಬಗ್ಗೆ ಶುಕ್ರವಾರ ಅವರು ಉಪನ್ಯಾಸ ನೀಡಿದರು.ಸಾಹಿತ್ಯವನ್ನು ಚೆನ್ನಾಗಿ ಬರೆಯುತ್ತಾರೆ. ಆದರೆ ಸರಿಯಾಗಿ ಬರೆಯುವುದಿಲ್ಲ. ಈ ತಪ್ಪನ್ನು ನಾವೆಲ್ಲ ಮಾಡಿದ್ದೇವೆ ಎಂದ ಅವರು, ಕೃತಿಗಳಲ್ಲಿ ಮೌಲ್ಯಗಳು, ಸಾಹಿತ್ಯ ಪ್ರಕಾರಗಳೆಲ್ಲವೂ ಇದ್ದರೂ ಸ್ಥಳೀಯತೆ ಮರೆಮಾಚಿದೆ. ಕವನ-ಕಾವ್ಯಗಳಲ್ಲಿ ಜ್ವಲಂತ ವಿಚಾರಗಳು ಕಡಿಮೆಯಾಗಿದೆ ಎಂದರು.ಕನ್ನಡಿಗರು ಸೊಬಗರು, ಅಭಿಮಾನಿಗಳು ಎಂಬ ಭ್ರಮೆಯಲ್ಲಿದ್ದೇವೆ. ಒಂದು ಘಟನೆಯ ಉದಾಹರಣೆ ಹೇಳಿ ಎಲ್ಲರೂ ಹೀಗೆ ಎಂದು ಸಾರ್ವತ್ರೀಕರಣ ಮಾಡುತ್ತೇವೆ. ನಾವು ವಾಸ್ತವ ಸ್ಥಿತಿ ನೋಡಬೇಕು ಎಂದರು. ಹಳೆಗನ್ನಡದ ಸಾಹಿತ್ಯದಲ್ಲಿ ರಾಮಾಯಣ, ಮಹಾಭಾರತ, ತೀರ್ಥಂಕರರು, ಪಂಚತಂತ್ರ ಎಂಬಿತ್ಯಾದಿ ಉತ್ತರ ಭಾರತದ ಕತೆಗಳು ಬರುತ್ತವೆ. ಆದರೆ ಕನ್ನಡ ಅಸ್ಮಿತೆ ಅಲ್ಲಿಲ್ಲ. ಜೈನ ಮತ್ತು ವೈದಿಕ ಜಗ್ಗಾಟದಲ್ಲಿ ಕನ್ನಡತನ ಮಾಯವಾಗಿದೆ. ಸ್ಥಳೀಯ ವಿಚಾರಗಳು, ಸಿದ್ಧಾಂತಗಳು, ನಾಯಕರು ಅಲ್ಲಿ ಎಲ್ಲಿದ್ದಾರೆ ಎಂದರು.ರಾಜಕೀಯವಾಗಿ ಅನ್ಯರನ್ನು ವಿರೋಧಿಸಿದ ನಾವು, ಧಾರ್ಮಿಕವಾಗಿ ಸ್ವಾಗತಿಸಿದ್ದೇವೆ. ಹಾಗೆ ಬಂದವರು   ಭಾಷಿಕ, ಸಂಸ್ಕೃತಿ ಮೂಲಕ ದಬ್ಬಾಳಿಕೆ ನಡೆಸಿದ್ದಾರೆ. ಧರ್ಮದ ಸೋಗಿನಲ್ಲಿ ರಾಜಕೀಯವಾಗಿಯೂ ಸಾಧಿಸಿದ್ದಾರೆ ಎಂದ ಅವರು, ಅಧಿಕಾರ ಹೋದರು ಸಾಂಸ್ಕೃತಿಕ ದಬ್ಬಾಳಿಕೆ ಹೋಗುವುದಿಲ್ಲ ಎಂಬುದನ್ನು ನಾವು ಬ್ರಿಟಿಷರ ಆಳ್ವಿಕೆಯಿಂದ ಅರಿಯಬಹುದು ಎಂದರು.ವಿವೇಕಾನಂದ, ರಾಮಕೃಷ್ಣ, ಗೋಖಲೆ ಎಂದು ರಸ್ತೆ, ಗಲ್ಲಿ, ಸಂಸ್ಥೆಗಳಿಗೆ ನಾವು ಹೆಸರಿಟ್ಟಿದ್ದೇವೆ.

 

ಬೆಂಗಾಲಿಗಳು, ಉತ್ತರ ಭಾರತೀಯರು ಕನ್ನಡಿಗರ ಬಗ್ಗೆ ಈ ರೀತಿ ಗೌರವ ಪಡುತ್ತಾರೆಯೇ?, ಪಾರ್ವತಿ, ಗಣಪತಿ, ಲಕ್ಷ್ಮೀ ಎಂದು ಉತ್ತರದ ದೇವರನ್ನು ನಾವು ಆಮದು ಮಾಡಿದ ಹಾಗೆ ಅವರು ನಮ್ಮ ದೇವರನ್ನು ಪೂಜಿಸುತ್ತಾರೆಯೇ? ಎಂದು ಪ್ರಶ್ನಿಸಿದ ಅವರು, ಮೌಲ್ಯಗಳ ಬಗ್ಗೆ ಎರಡು ಮಾತಿಲ್ಲ, ಆದರೆ ಸ್ಥಳೀಯತೆಯೇ ಹೋದರೆ ‘ನಮ್ಮತನ’ ಏನಿದೆ ಎಂದರು.ಕರ್ನಾಟಕದೊಳಗೆ ಮರಾಠಿ, ಉರ್ದು, ತಮಿಳು, ತೆಲುಗು ದ್ವೀಪಗಳು ನಿರ್ಮಾಣಗೊಂಡಿವೆ. ಅಸ್ಮಿತೆ ಕಳೆದುಕೊಂಡು, ಗುಲಾಮತನ ಹಾಸುಹೊಕ್ಕಾಗಿದೆ.ನಾವು ಸ್ವಾಭಿಮಾನಿಗಳಾಗಬೇಕು. ಸ್ವಪ್ರಜ್ಞೆ ಮೂಡಬೇಕು. ಎಲಿಜಬೆತ್‌ಗಿಂತ ನಮ್ಮ ತಾಯಿ ದೊಡ್ಡವಳು ಎಂಬ ಭಾವ ಬರಬೇಕು ಎಂದರು. ಕನ್ನಡಿಗರ ಮೇಲೆ ಕಾಲಕಾಲಕ್ಕೆ ಧಾರ್ಮಿಕ, ಭಾಷಿಕ ಹಾಗೂ ಸಾಹಿತ್ಯಿಕ ದಾಳಿಗಳು ನಡೆದಿವೆ. ಇದರ ವಿರುದ್ಧ 12ನೇ ಶತಮಾನದಲ್ಲಿ ಸ್ಥಳೀಯ ಚಳವಳಿ ಎದ್ದಿತು. ದೊಡ್ಡ ಸುಳ್ಳುಗಳನ್ನು ಸಣ್ಣ ಸತ್ಯವು ಬಯಲು ಮಾಡಿತು.ಮಹಿಳೆಯರು, ಶೂದ್ರರು, ಹಿಂದುಳಿದರು, ಸ್ಥಳೀಯರು, ಶ್ರಮಿಕರು ಕಥಾ ನಾಯಕರಾದರು. ಆದರೆ ಆ ಶರಣ ಚಳವಳಿಯೂ ಈಗ ಕೈಲಾಸಕ್ಕೆ ಹೋಗಿದೆ ಎಂದರು.ಕನ್ನಡಕ್ಕೆ ಉರ್ದುವಿನಿಂದ ಬಂದ ವಿರೋಧಕ್ಕಿಂತ ಹೆಚ್ಚಾಗಿ ಮರಾಠಿಗರಿಂದ ತೊಂದರೆ ಉಂಟಾಗಿದೆ. ಅವರ ಹೇರಿಕೆಯಿಂದ ನಮ್ಮತನಕ್ಕೆ ಹೊಡೆತ ಬಿದ್ದಿದೆ ಎಂದ ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ ಡಾ.ವೀರಣ್ಣ ದಂಡೆ, ತೆಲುಗು ಪಂಡಿತರೇ ತುಂಬಿದ್ದ ಸುರಪುರ ಆಸ್ಥಾನದಲ್ಲಿ ನಿಷ್ಠಿ ಮನೆತನದವರು ಮಾಡಿದ ಕನ್ನಡ ಕಾರ್ಯ ಮತ್ತಿತರ ಸ್ಥಳೀಯ ಹೋರಾಟಗಳೂ ಬಹುಮುಖ್ಯ ಎಂದರು. ಕುಲಸಚಿವ ಎಸ್.ಎಲ್.ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಡಾ.ವಿ.ಬಿ.ಪೂಜಾರ, ಚಿದಾನಂದ ಚಿಕ್ಕಮಠ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry