ಮಂಗಳವಾರ, ಜೂನ್ 15, 2021
24 °C

ಅರಿವು ಹಬ್ಬ: ಸಂತಸದ ಹೊನಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಅಬ್ಬರದ ಸಂಗೀತ ಅಲ್ಲಿರಲಿಲ್ಲ. ಆದರೂ ಮಕ್ಕಳೂ, ಪೋಷಕರು ಕುಣಿದು ಕುಪ್ಪಳಿಸಿದರು.

ನಗರದ ಲಿಂಗಾಂಬುದಿಪಾಳ್ಯದ ಅರಿವು ವಿದ್ಯಾಸಂಸ್ಥೆಯ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ `ಅರಿವು ಹಬ್ಬ~ ಭಾನುವಾರ ಸಂಭ್ರಮದಿಂದ ನಡೆಯಿತು. ಸಿ.ಡಿ, ಕೆಸೆಟ್‌ಗಳ ಅಬ್ಬರದ ಸಂಗೀತವನ್ನು ತಿರಸ್ಕರಿಸಿ, ಮಧುರ ಹಾಡುಗಳಿಗೆ ಮಕ್ಕಳು ನೃತ್ಯ ಮಾಡಿ ಗಮನ ಸೆಳೆದರು. ತಾವೇನು ಕಡಿಮೆ ಎಂಬಂತೆ ಪೋಷಕರು ಕೋಲಾಟಕ್ಕೆ ಹೆಜ್ಜೆ ಹಾಕಿ ಮಕ್ಕಳ ಮನ ತಣಿಸಿದರು.ಮೂರನೇ ತರಗತಿಯ ಮಕ್ಕಳು ಹಾಡುತ್ತಿದ್ದರೆ, ಒಂದು ಮತ್ತು ಎರಡನೇ ತರಗತಿಯ ಚಿಣ್ಣರು ನೃತ್ಯ ಮಾಡುತ್ತಿದ್ದರು. ಎಲ್‌ಕೆಜಿ ಮತ್ತು ಯುಕೆಜಿ ಪುಟಾಣಿಗಳು ಸಹ ಸಂಭ್ರಮದಲ್ಲಿ ಪಾಲ್ಗೊಂಡರು. ಸುಮಧುರ ಹಾಡಿಗೆ ತಕ್ಕಂತೆ ವಿವಿಧ ವೇಷಗಳಲ್ಲಿ ಸಿಂಗಾರಗೊಂಡಿದ್ದ ವಿದ್ಯಾರ್ಥಿಗಳು ಹೆಜ್ಜೆ ಹಾಕಿ ಪೋಷಕರನ್ನು ರಂಜಿಸಿದರು.ನಾಟಕ ಪ್ರದರ್ಶನ: ಕನ್ನಡದ ಅನೇಕ ಕವಿಗಳ ಕುರಿತು ಮಕ್ಕಳು ಗೀತೆ ರಚಿಸಿ ಹಾಡಿದರು. ಪುಟಾಣಿಗಳೇ ಹಾಡಿದ ಭಾವಗೀತೆ, ರಂಗಗೀತೆ, ಜನಪದ ಗೀತೆ, ಲಾವಣಿ, ದಾಸರ ಪದಗಳನ್ನೂ ಮಕ್ಕಳು ಪ್ರಸ್ತುತಪಡಿಸಿದರು.

 

`ಒಂದು ಗಂಟೆ ಒಂದು ನಿಮಿಷ~ ಎನ್ನುವ ಪರಿಸರ ಪ್ರಜ್ಞೆ ಮೂಡಿಸುವ ನಾಟಕವನ್ನೂ ಮಕ್ಕಳು ಪ್ರದರ್ಶಿಸಿದರು.

ಪೋಷಕರ ಕೋಲಾಟ: ಇದರಿಂದ ಪುಳಕಿತರಾದ ಪೋಷಕರು ಮಕ್ಕಳನ್ನು ರಂಜಿಸಲು ವೇದಿಕೆ ಏರಿ ಕೋಲಾಟ ಪ್ರದರ್ಶಿಸಿದರು. ಉತ್ತರ ಕರ್ನಾಟಕ ಶೈಲಿಯ ಸೀರೆಯಲ್ಲಿ ಕಂಗೊಳಿಸುತ್ತಿದ್ದ ನೀರೆಯರು ಸುಮಾರು 16 ನಿಮಿಷ ಮಾಡಿದ ಆಕರ್ಷಕ ನೃತ್ಯಕ್ಕೆ ಮಕ್ಕಳು ಮನಸೋತರು.ಸ್ವಂತಿಕೆ ಕಾಪಾಡಬೇಕು

ಮೈಸೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಡಿ.ವಿ.ಕಾಂತಾ ಮಾತನಾಡಿ, `ಹಿನ್ನೆಲೆ ಸಂಗೀತದ ಅಬ್ಬರವಿಲ್ಲದೇ ಅಪ್ಪಟ ಭಾರತೀಯ ಸಂಸ್ಕೃತಿಯಲ್ಲಿ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಉತ್ತಮವಾಗಿತ್ತು. ಇದು ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುತ್ತದೆ. ಇಂತಹ ಸ್ವಂತಿಕೆ ಕಾಪಾಡುವ ಕೆಲಸಕ್ಕೆ `ಅರಿವು~ ಮುಂದಾಗಿರುವುದು ಉತ್ತಮ ಬೆಳವಣಿಗೆ~ ಎಂದರು.ಹಿರಿಯ ಗಮಕ ಕಲಾವಿದ ರಾಮಚಂದ್ರ, ನಾಟ್ಯ ಕಲಾವಿದರಾದ ತುಳಸಿ ರಾಮಚಂದ್ರ, ಗ್ರಾಮ ಪಂಚಾ ಯಿತಿ ಸದಸ್ಯ ಬಂಗಾರಪ್ಪ ಮಾತ ನಾಡಿದರು ಎಂದು ಮೇನೇಜಿಂಗ್ ಟ್ರಸ್ಟಿ ಡಾ.ಎಂ.ಸಿ. ಮನೋಹರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.