ಅರುಣ್ ಮೀಸೆ ಮಾತು

7

ಅರುಣ್ ಮೀಸೆ ಮಾತು

Published:
Updated:
ಅರುಣ್ ಮೀಸೆ ಮಾತು

`ಬೆಳಗಿನ ಜಾವ ಐದು ಗಂಟೆಗೆ ಎದ್ದು ಸಿದ್ಧವಾಗಿ ಸುಂಕದ ಕಟ್ಟೆ ಸರ್ಕಲ್‌ಗೆ ಬಂದಿದ್ದೆ. ಆರೂವರೆಯಿಂದ ಏಳೂವರೆವರೆಗೆ ಒಂದೇ ಭಂಗಿಯಲ್ಲಿ ನಿಂತು ಕಾದರೂ ಸೂರ್ಯ ಬರಲೇ ಇಲ್ಲ. ಹಾಗೆ ಆಗಿದ್ದು ಅದೊಂದೇ ದಿನವಲ್ಲ, ಮೂರ‌್ನಾಲ್ಕು ದಿನ ಸೂರ್ಯ ಆಟವಾಡಿಸಿದ. ಪಟ್ಟು ಬಿಡದ ನಿರ್ದೇಶಕರು ಸೂರ್ಯಬಂದ ದಿನವೇ ಫೋಟೋಶೂಟ್ ಮಾಡಿ ಮುಗಿಸಿದರು. ಅಲ್ಲಿಗೆ ಹದಿನೈದು ದಿನವಾಗಿತ್ತು' ಎಂದು ಒಂದೇ ಉಸಿರಿಗೆ ಒಪ್ಪಿಸಿದರು ಅರುಣ್. ಅವರು `ನಾನು ನಮ್ಮುಡ್ಗಿ' ಚಿತ್ರದ ನಾಯಕ. ನಿರ್ದೇಶಕ ಅಮರ್.ಯಾವುದೇ ಕೃತಕ ಬೆಳಕು ಬಳಸದೇ ಸುಂಕದ ಕಟ್ಟೆಯ ದೂಳು ತುಂಬಿದ ಸರ್ಕಲ್‌ನಲ್ಲಿ ತೆಗೆಸಿಕೊಂಡ ಫೋಟೋಗೆ ಸಿಗುತ್ತಿರುವ ಪ್ರತಿಕ್ರಿಯೆ ಅವರನ್ನು ಪ್ರಫುಲ್ಲವಾಗಿಸಿದೆ. ವಿಜಯನಗರದ ಲೈಟ್‌ಕಂಬದ ಕೆಳಗೆ ಬುಲೆಟ್ ಒರಗಿ ನಿಂತ ಫೋಟೋ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ. `ನಾನು ನಮ್ಮುಡ್ಗಿ' ಚಿತ್ರದ ಮುಹೂರ್ತಕ್ಕಾಗಿ ತೆಗೆದ ಭಾವಚಿತ್ರಗಳಿವು. ಅವುಗಳಿಗೆ ಅರುಣ್ ಅವರ ಫೇಸ್‌ಬುಕ್ ಅಕೌಂಟ್ ಭರ್ತಿಯಾಗುವಷ್ಟು ಸಂದೇಶಗಳು ಬಂದಿವೆಯಂತೆ. ಅದನ್ನು ಖುಷಿಯಿಂದ ಹೇಳಿಕೊಂಡ ಅವರು, `ಇದು ಒಳ್ಳೆಯ ಲಕ್ಷಣ' ಎಂದು ಮುದಗೊಂಡರು. ಜ.16ರಿಂದ `ನಾನು ನಮ್ಮುಡ್ಗಿ' ಚಿತ್ರೀಕರಣ ಆರಂಭವಾಗುತ್ತಿದ್ದು ಅದರ ಸಿದ್ಧತೆಯಲ್ಲಿ ಅರುಣ್ ಮುಳುಗಿದ್ದಾರೆ.ಹಾಸನದಲ್ಲಿ ಹುಟ್ಟಿದ ಅರುಣ್, ಬೆಂಗಳೂರಿನಲ್ಲಿ ಓದಿ-ಬೆಳೆದವರು. ವಿಜಯಾ ಕಾಲೇಜಿನಲ್ಲಿ ಬಿಎಸ್ಸಿ ಮುಗಿಸಿ ಗಾಂಧಿನಗರದಲ್ಲಿ ಗುರುತಿಸಿಕೊಳ್ಳಬೇಕೆಂಬ ಹಂಬಲಕ್ಕೆ ಬಿದ್ದವರು. ನಟ ಮೈಕೆಲ್ ಮಧು ಪರಿಚಯದಿಂದ 4ಎಂ ಚಾನೆಲ್‌ನಲ್ಲಿ ನಿರೂಪಕನಾಗಿ ಕೆಲಸ ಮಾಡಿದವರು. ಸುನೀಲ್ ಬನವಾಸಿ ಅವರ ಗೆಳೆಯರ ಬಳಕ ತಂಡದಲ್ಲಿ `ವಧುದಕ್ಷಿಣೆ' ನಾಟಕಕ್ಕೆ ಬಣ್ಣ ಹಚ್ಚಿಕೊಂಡವರು. ಅದರಲ್ಲಿ ಅವರಿಗೆ ಖಳನ ಪಾತ್ರ ಸಿಕ್ಕಿತ್ತು.ನಾಟಕಗಳಲ್ಲಿ ನಟಿಸುತ್ತಾ ಇರುವಾಗ `ಒಗ್ಗರಣೆ ಡಬ್ಬಿ' ಕಾರ್ಯಕ್ರಮದ ನಿರೂಪಣೆ ಮಾಡುವ ಅವಕಾಶ ದೊರೆಯಿತು. ಅದು ಮುಗಿದಿದ್ದೇ ತಡ `ಪ್ಯಾಟೆ ಮಂದಿ ಕಾಡಿಗ್ ಬಂದ್ರು' ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಕರೆ ಬಂತು. ಅದರಲ್ಲಿ ಅಂತಿಮ ಸುತ್ತಿಗೂ ಪ್ರವೇಶ ಪಡೆದ ಅರುಣ್ ಆತ್ಮವಿಶ್ವಾಸ ಗಳಿಸಿದರು. ಆಗ ಸಿನಿಮಾದಲ್ಲಿ ನಟಿಸಬೇಕೆಂಬ ಮನದಾಸೆಯನ್ನು ಛಾಯಾಗ್ರಾಹಕ ಕೆ.ಎನ್.ನಾಗೇಶ್ ಕುಮಾರ್ ಅವರಲ್ಲಿ ಹೇಳಿಕೊಂಡರು. ಅವರು `ಕೋಕೋ' ಸಿನಿಮಾದಲ್ಲಿ ಸಣ್ಣಪಾತ್ರ ಕೊಡಿಸಿದರು.ಬಳಿಕ ನಿರ್ದೇಶಕ ಯೋಗರಾಜ್ ಭಟ್ ಅವರ ತಂಡದಲ್ಲಿ ಸೇರಿದರು. ಡಾನ್ಸ್, ಫೈಟ್, ಅಭಿನಯದ ತರಬೇತಿ ಪಡೆದುಕೊಳ್ಳಲಾರಂಭಿಸಿದ್ದರು. ಮೌನೀಶ್ ನೀನಾಸಂ ಅವರ ಕಾರ್ಯಾಗಾರದಲ್ಲಿ ಭಾಗವಹಿಸಿ ನಟನೆಯನ್ನು ತಿದ್ದಿತೀಡಿಕೊಂಡರು. ಇದೀಗ ಅವರು `ನಾನು ನಮ್ಮುಡ್ಗಿ' ಸಿನಿಮಾದ ನಾಯಕ.ಸದ್ಯ ಗಡಸು ದನಿಗಾಗಿ ತರಬೇತಿ ಪಡೆಯುತ್ತಿರುವ ಅವರಿಗೆ `ನಾನು ನಮ್ಮುಡ್ಗಿ' ಫೋಟೋ ನೋಡಿಯೇ ಸಾಕಷ್ಟು ಅವಕಾಶಗಳು ಬರುತ್ತಿವೆಯಂತೆ. ಸದ್ಯಕ್ಕೆ `ನಾನು ನಮ್ಮುಡ್ಗಿ' ಚಿತ್ರಕ್ಕಾಗಿ ಸಂಪೂರ್ಣ ಶ್ರದ್ಧೆಯಿಂದ ದುಡಿದು ನಂತರ ಬೇರೆ ಕಡೆ ಮುಖ ತಿರುಗಿಸುವುದಾಗಿ ನಿರ್ಧರಿಸಿದ್ದಾರೆ ಅರುಣ್. ಅವರಿಗೆ ನಿರ್ದೇಶಕರ ಮೇಲೆ ಅಪಾರ ಭರವಸೆ.`ನಿರ್ದೇಶಕ ಮೇಲೆ ನಾನು ಸಂಪೂರ್ಣ ಅವಲಂಬಿಯಾಗಿರುವೆ. ವಾಸ್ತವಕ್ಕೆ ಹತ್ತಿರವಾದ ಕತೆ ಇರುವ ಈ ಚಿತ್ರ ಹೀಗೆಯೇ ಇರಬೇಕು ಎಂಬ ಹಟ ಅವರಿಗಿದೆ. ಅದಕ್ಕೆ ಬದ್ಧವಾಗಿ ನಾನು ನಡೆದುಕೊಳ್ಳುವೆ' ಎಂದು ನುಡಿಯುತ್ತಾರೆ ಅರುಣ್. ಅವರಿಗೆ ಚಾಕೊಲೇಟ್ ಹೀರೋ ಎನಿಸಿಕೊಳ್ಳುವುದಕ್ಕಿಂತ ಒಳ್ಳೆಯ ನಟ ಎನಿಸಿಕೊಳ್ಳುವಾಸೆ.ಅಂದಹಾಗೆ `ನಾನು ನಮ್ಮುಡ್ಗಿ' ಒಂದೂವರೆ ತಿಂಗಳ ಹಿಂದೆಯೇ ಆರಂಭವಾಗಬೇಕಿತ್ತಂತೆ. ಅರುಣ್ ಬೆಳೆಸಿದ್ದ ಮೀಸೆ ಅಕಸ್ಮಾತ್ತಾಗಿ ಕಟ್ ಆದ ಕಾರಣ ಮುಹೂರ್ತವನ್ನು ಮುಂದೂಡಲಾಯಿತಂತೆ. `ನನಗೆ ಕೃತಕ ಮೀಸೆ ಅಂಟಿಸಿಕೊಳ್ಳಲು ಇಷ್ಟ ಇರಲಿಲ್ಲ. ಅದರಿಂದ ಮೀಸೆ ಬೆಳೆಯುವವರೆಗೆ ಕಾಯಲು ಕೋರಿಕೊಂಡೆ' ಎಂದು ನಗುತ್ತಾರೆ ಅರುಣ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry