ಗುರುವಾರ , ಅಕ್ಟೋಬರ್ 17, 2019
22 °C

ಅರೆನಗ್ನ ನೃತ್ಯ ಪ್ರಕರಣ: ವಿವರಣೆ ಕೇಳಿದ ಸೋನಿಯಾ

Published:
Updated:

ನವದೆಹಲಿ: ಜರಾವಾ ಬುಡಕಟ್ಟು ಮಹಿಳೆಯರ ಅರೆನಗ್ನ ಪ್ರಕರಣ ಕುರಿತು ಕಳವಳಗೊಂಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಈ ಕುರಿತು ರ್ಕಾರದಿಂದ ವಿವರಣೆ ಕೇಳಿದ್ದಾರೆ.ಬುಡಕಟ್ಟು ಸಚಿವ ಕಿಶೋರ್‌ಚಂದ್ರ ದೇವ್ ಅವರಿಂದ ಸೋನಿಯಾ ಪ್ರಕರಣ ಕುರಿತು ವಿವರಣೆ ಕೇಳಿದ್ದಾರೆ. ಖುದ್ದು ಬುಡಕಟ್ಟು ಸಚಿವರೇ ಈ ವಿಷಯವನ್ನು ಶುಕ್ರವಾರ ಪತ್ರಕರ್ತರಿಗೆ ತಿಳಿಸಿದರು.ಇದು ಕಾನೂನು- ಸುವ್ಯವಸ್ಥೆಗೆ ಸಂಬಂಧಪಟ್ಟ ವಿಷಯವಾದ್ದರಿಂದ ಗೃಹ ಸಚಿವ ಪಿ. ಚಿದಂಬರಂ ಪ್ರಕರಣದ ಬಗ್ಗೆ ಪರಿಶೀಲಿಸುತ್ತಿದ್ದಾರೆ. ಸದ್ಯವೇ ಅಂಡಮಾನ್‌ಗೂ ಭೇಟಿ ನೀಡಲಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ನಡೆಯುತ್ತಿರುವ ಕಾರ್ಯಾಚರಣೆ ಉಸ್ತುವಾರಿಯನ್ನು ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರು ಹೊತ್ತಿದ್ದಾರೆ ಎಂದರು.ಈ ಪ್ರಕರಣ ಕುರಿತು ಅಂಡಮಾನ್ ಲೆ. ಗವರ‌್ನರ್ ಅವರಿಗೆ ಮಾತನಾಡಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ. ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ತಿಳಿಸಲಾಗಿದೆ ಎಂದು ಅವರು ಹೇಳಿದರು.`ಬುಡಕಟ್ಟು ಜನರ ಶೋಷಣೆ ನಡೆಯದಂತೆ ನೋಡಿಕೊಳ್ಳುವುದು ನಮ್ಮ ಹೊಣೆ. ಇಂಥ ಪ್ರಕರಣಗಳನ್ನು ಮಾನವೀಯ ದೃಷ್ಟಿಯಿಂದ ನೋಡಬೇಕಾಗಿದೆ. ದ್ವೀಪದ ಜನ, ಪ್ರಜ್ಞಾವಂತರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಜತೆ ಸಮಗ್ರವಾಗಿ ಚರ್ಚಿಸಿದ ಬಳಿಕ ನಿರ್ದಿಷ್ಟ ತೀರ್ಮಾನ ಮಾಡಲಾಗುವುದು~ ಎಂದು ಕಿಶೋರ್‌ಚಂದ್ರ ದೇವ್ ನುಡಿದರು.

Post Comments (+)