ಗುರುವಾರ , ಏಪ್ರಿಲ್ 15, 2021
24 °C

ಅರೆಬರೆ ಕಾಮಗಾರಿ: ಹುಷಾರಾಗಿ ಮನೆ ಸೇರಿ!

ಪ್ರಜಾವಾಣಿ ವಾರ್ತೆ / ಚಿದಾನಂದ ಕಮ್ಮಾರ್ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಒಂದೆಡೆ ಅಭಿವೃದ್ಧಿಯ ಪಥ, ಇನ್ನೊಂದೆಡೆ ಪಥಿಕನಿಗೆ ಪಥವೇ ಇಲ್ಲದ ಪರಿಸ್ಥಿತಿ! ಇದು, ಸೂರ್ಯನಗರದಲ್ಲೆಗ ವಿವಿಧ ರಸ್ತೆಗಳಲ್ಲಿ ಕಂಡುಬರುವ ಸಾಮಾನ್ಯ ಚಿತ್ರಣ. ಬೇಸಿಗೆ ಮುಗಿದು, ಮಳೆಗಾಲ ಆರಂಭವಾದರೂ ಬಿಸಿಗಾಳಿಯೇ ಸುಳಿದಾಡುತ್ತಿರುವ ನಗರದಲ್ಲಿ ಸುಗಮ ಸಂಚಾರ ಕೈಗೊಳ್ಳುವುದು ವಾಹನ ಸವಾರರಿಗೆ, ಪಾದಚಾರಿಗಳಿಗೆ ಫಜೀತಿಯಾಗುತ್ತಿದೆ. ರಸ್ತೆಯ ಮೇಲೆ ರಾಜಾರೋಷವಾಗಿ ಹರಿದಾಡುವ ಒಳಚರಂಡಿ ನೀರು, ಮೂಗುಮುಚ್ಚಿಕೊಂಡು ಹೆಜ್ಜೆಹಾಕುವ ಪಾದಚಾರಿಗಳನ್ನು ಕಂಡು ಮುಸಿಮುಸಿ ನಗುತ್ತದೆ.ನಗರದಲ್ಲಿ ಕೈಗೊಂಡಿರುವ ಒಳಚರಂಡಿ ದುರಸ್ತಿ ಕಾರ್ಯಗಳು, ಹೊಸ ಚರಂಡಿಗಳ ನಿರ್ಮಾಣ ಕಾಮಗಾರಿಗಳ ಸುತ್ತ ಒಮ್ಮೆ ಕಣ್ಣಾಡಿಸಿದರೆ, ಪಕ್ಕದಲ್ಲೇ ಪ್ರಯಾಣಿಕರು ರಸ್ತೆಗುಂಡಿಗಳಿಂದ ಪಾರಾಗಲು ಹೆಣಗುತ್ತಿರುವ ದೃಶ್ಯಗಳೂ ಕಾಣಿಸುತ್ತವೆ.ವಿಭಾಗೀಯ ಕೇಂದ್ರವಾದ ಗುಲ್ಬರ್ಗ ನಗರದಲ್ಲಿ ಮೊದಲ ಬಾರಿಗೆ ರಸ್ತೆ ಸಂಚಾರಕ್ಕೊಂದು ಶಿಸ್ತು ಪ್ರಾಪ್ತವಾಗುತ್ತಿದೆ. ಎಲ್ಲಿ ಬೇಕೆಂದರೆ ಅಲ್ಲಿ, ಹೇಗೆ ಬೇಕೆಂದರೆ ಹಾಗೆ ಭುರ‌್ರನೇ ಗಾಡಿ ಬಿಟ್ಟುಕೊಂಡು ಹಾರುತ್ತಿದ್ದವರ ಹಾರಾಟಕ್ಕೆ ಕಡಿವಾಣ ಹಾಕಲು ಸಂಚಾರ ವಿಭಾಗದ ಪೊಲೀಸರು ಸನ್ನದ್ಧರಾಗಿ ನಿಂತಿದ್ದಾರೆ.

 

ನಗರದ ಮುಖ್ಯ ರಸ್ತೆಗಳಲ್ಲೆಗ ಜೀಬ್ರಾ ಪಟ್ಟಿಗಳು ಪಡಮೂಡಿವೆ. ರಾತ್ರಿ ಹೊತ್ತು `ಕ್ಯಾಟ್ ಐ~ ಡಿವೈಸ್‌ಗಳು ಮಿರಮಿರ ಮಿಂಚಿದರೆ, ಹಗಲು ರಾಷ್ಟ್ರಪತಿ ವೃತ್ತ, ಜೇವರ್ಗಿ ರಿಂಗ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆ ತಿರುವುಗಳಲ್ಲಿ ಸಂಚಾರ ದೀಪಗಳು `ಸಿಗ್ನಲ್~ ಕೊಡಲು ಶುರು ಹಚ್ಚಿಕೊಂಡಿವೆ. ಸಾಲದೆಂಬಂತೆ ಸಂಚಾರ ನಿಯಮಗಳ ಉಲ್ಲಂಘನೆಯನ್ನು ತಡೆಗಟ್ಟಲು ಸಿ.ಸಿ. ಕ್ಯಾಮೆರಾಗಳ ಅಳವಡಿಕೆಯೂ ಆಗಿದೆ. ಇಲ್ಲಿ ನಿಯಮ ಮೀರುವವರು ತಪ್ಪಿಸಿಕೊಳ್ಳಲಾರರೇನೋ ಹೌದು. ಆದರೆ, ನಗರದ ಹದಗೆಟ್ಟ ಒಳ ರಸ್ತೆಗಳಲ್ಲಿ ಮಾತ್ರ ಸಾವಾರರು ಕೆರೆಯಂತಹ ಗುಂಡಿಗಳಲ್ಲಿ ಸಿಕ್ಕುಬೀಳುವುದಂತೂ ಖರೆ.ಆನಂದ ಹೋಟೆಲ್‌ನಿಂದ ಆಳಂದ ನಾಕಾದವರೆಗಿನ ರಸ್ತೆಯಲ್ಲೊಮ್ಮೆ ನಡೆದುಹೋದರೆ ಸಾಕು, ಆಗೀಗ ಸುರಿದ ಸಣ್ಣ ಮಳೆಗೇ ಅಭಿವೃದ್ಧಿಯ ಮಂತ್ರ ಜಪಿಸುವ ಪಾಲಿಕೆಯ ಬಣ್ಣ ಬಯಲಾಗಿರುವುದು ಕಣ್ಣಿಗೆ ರಾಚುತ್ತದೆ. ಒಳಚರಂಡಿ ನೀರು ಉಕ್ಕುಕ್ಕಿ ಹರಿಯುವ, ಥೇಟು ಕೆಸರುಗದ್ದೆಯಂತಾಗಿರುವ ಈ ರಸ್ತೆಯಲ್ಲಿ ವಾಹನ ಸಮೇತರಾಗಿ ಸುರಕ್ಷಿತವಾಗಿ ಸಂಚರಿಸುವುದು ಪವಾಡವೇ ಸರಿ ಎಂಬಂತಹ ದುಃಸ್ಥಿತಿ ನಿರ್ಮಾಣವಾಗಿದೆ. ಈ ಮಾರ್ಗವಾಗಿ ಸಂಚರಿಸುವ ದ್ವಿಚಕ್ರವಾಹನ ಸವಾರರು, ಪಾದಚಾರಿಗಳು ಅತ್ಯಂತ ಸಹನಾಮಯಿಗಳೇ ಎನ್ನಬೇಕು.ಚರಂಡಿ ನಿರ್ಮಾಣಕ್ಕಾಗಿ ರಸ್ತೆಯ ಆ ಕಡೆ- ಈ ಕಡೆ ಬದಿಗಳ ಅಗೆತ ನಡೆದಿರುವಲ್ಲಿ ಹೂಳೆತ್ತಿದ ಮಣ್ಣನ್ನು ರಸ್ತೆಯ ಇಕ್ಕೆಲಗಳಲ್ಲಿಯೇ ಗುಡ್ಡೆ ಹಾಕಲಾಗುತ್ತಿದೆ. ಮೊದಲೇ ಕಿರಿದಾಗಿರುವ ಒಳ ರಸ್ತೆಗಳು ಈ ಮಣ್ಣಿನ ಗುಂಪಿಗಳಿಂದಾಗಿ ಇನ್ನಷ್ಟು ಕಿರಿದಾಗಿ, ಸಂಚಾರಿಗಳಿಗೆ ಕಿರಿಕಿರಿಯುಂಟು ಮಾಡುತ್ತಿವೆ. ಗೋವಾ ಹೋಟೆಲ್ ವೃತ್ತದಲ್ಲಿ ರಸ್ತೆ ವಿಸ್ತರಣೆ, ಚರಂಡಿ ಕಾಮಗಾರಿ ಏಕಕಾಲದಲ್ಲೇ ನಡೆಯುತ್ತಿರುವುದರಿಂದ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ ಎನ್ನುತ್ತಾರೆ ಸ್ಥಳೀಯರು.ಬೇಸಿಗೆಯಲ್ಲಿಯೇ ರಸ್ತೆ ವಿಸ್ತರಣೆಯಾಗಲೀ, ಚರಂಡಿ ಕಾಮಗಾರಿಗಳನ್ನಾಗಲೀ ಆರಂಭಿಸಿ ಮಳೆಗಾಲದ ಹೊತ್ತಿಗೆ ಪೂರ್ಣಗೊಳಿಸಿದರೆ ಸುಗಮ ಸಂಚಾರಕ್ಕೆ ಅಡಚಣೆಗಳು ಎದುರಾಗುವುದಿಲ್ಲ. ಆದರೆ, ಮಳೆಗಾಲ ಆರಂಭವಾಗುತ್ತಿದ್ದಂತೆ ಕಾಮಗಾರಿಗಳನ್ನೂ ಕೈಗೆತ್ತಿಕೊಳ್ಳುವುದರಿಂದ ಸಂಚಾರ ಸಮಸ್ಯೆಗಳು ಉದ್ಭವಿಸುತ್ತವೆ ಎನ್ನುತ್ತಾರೆ ಆಟೊ ಚಾಲಕ ರೆಹಮಾನ.ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನೂ ಕೈಗೊಂಡಾಗಲೂ ಸಾರ್ವಜನಿಕರಿಗೆ ಅಲ್ಪಸ್ವಲ್ಪ ತೊಂದರೆಯಾಗುವುದು ಸಹಜ. ರಸ್ತೆ ಕಾಮಗಾರಿಗಳ ವಿಷಯದಲ್ಲಿ ಸಾರ್ವಜನಿಕರು ತುಸು ಸಹಕಾರ ಮನೋಭಾವ ಹೊಂದುವುದು ಅವಶ್ಯ. ಆದರೆ, ಕಾಮಗಾರಿ ವಿಳಂಬವಾಗುತ್ತ ಹೋದಂತೆ ಜನರ ಅಸಹನೆಯೂ ಹೆಚ್ಚುವುದೂ ಅಷ್ಟೇ ಸತ್ಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.