ಅರೆರೆ, ಹರಿದ ನೀರು ಹೋಯಿತೆಲ್ಲಿಗೆ?

7
ಬಾಯಾರಿದೆ ಬೆಂಗಳೂರು 2

ಅರೆರೆ, ಹರಿದ ನೀರು ಹೋಯಿತೆಲ್ಲಿಗೆ?

Published:
Updated:
ಅರೆರೆ, ಹರಿದ ನೀರು ಹೋಯಿತೆಲ್ಲಿಗೆ?

ಬೆಂಗಳೂರು: ನಗರದ ಕೆಂಪೇಗೌಡ (ಕೆ.ಜಿ) ರಸ್ತೆಯಲ್ಲಿರುವ ಜಲ ಮಂಡಳಿ ಪ್ರಧಾನ ಕಚೇರಿ ಪ್ರವೇಶಿಸಿದೊಡನೆ ಕಾವೇರಿ ಮಾತೆ ತುಂಬಿದ ಕೊಡದಿಂದ ಆಯಾಸವಿಲ್ಲದೆ ನೀರು ಸುರಿಯುವ ದೃಶ್ಯ ಕಾಣುತ್ತದೆ. ಆದರೆ, ವಾಸ್ತವ ಸಂಗತಿ ಎಂದರೆ ನೀರು ಈಗ ಅಷ್ಟೊಂದು ಸುಲಭವಾಗಿ ಸಿಗುತ್ತಿಲ್ಲ. ಮಳೆ ಬರುವವರೆಗೆ ಅಳಿದುಳಿದ ನೀರಿನಲ್ಲಿ ಬೇಸಿಗೆ ಕಳೆಯಲು ದೊಡ್ಡ ಕಸರತ್ತನ್ನೇ ನಡೆಸಬೇಕಿದೆ.ಕಾವೇರಿ ಕಣಿವೆಯಿಂದ ನೀರು ತರುವುದು ತುಂಬಾ ಕಷ್ಟವಾಗಿದ್ದರೂ ತಂದ ನೀರನ್ನು ಬಳಕೆ ಮಾಡಿಕೊಳ್ಳುವಲ್ಲಿ ಸ್ವಲ್ಪವೂ ಬಿಗುವು ಕಾಣುತ್ತಿಲ್ಲ. ಜಲ ಮಂಡಳಿ ದಾಖಲೆಗಳೇ ಹೊರಹಾಕುವ ಅಂಶ ಇದು. ಶೇ 38ರಷ್ಟು ಪ್ರಮಾಣದ ನೀರು ದಶಕಗಳಿಂದ ಪೋಲಾಗುತ್ತಿದ್ದರೂ ಅದು ಎಲ್ಲಿ ಹೋಗುತ್ತಿದೆ ಎನ್ನುವುದು ಇನ್ನೂ ಪತ್ತೆಯಾಗಿಲ್ಲ.ಕೊಳವೆ ಮಾರ್ಗದಲ್ಲಿ ವ್ಯಾಪಕ ಸೋರಿಕೆ ಮತ್ತು ಅಕ್ರಮ ನಲ್ಲಿ ಸಂಪರ್ಕದ ಸಮಸ್ಯೆಗಳು ಈ ಪೋಲಾಗುವ ನೀರಿನೊಂದಿಗೆ ತಳಕು ಹಾಕಿಕೊಂಡಿವೆ. ಸದ್ಯದ ಸ್ಥಿತಿಯಲ್ಲಿ ನಿತ್ಯ 1,300 ದಶಲಕ್ಷ ಲೀಟರ್ ನೀರು ನಗರಕ್ಕೆ ಪೂರೈಕೆ ಆಗುತ್ತಿದೆ. ಅದರ ಶೇ 38ರಷ್ಟು, ಅಂದರೆ, 456 ದಶಲಕ್ಷ ಲೀಟರ್ ನೀರು ಚರಂಡಿ ಪಾಲಾಗುತ್ತಿದೆ. ಒಂದೆಡೆ ಹನಿ ನೀರಿಗೂ ಜನ ಬಾಯಿ ಬಿಡುತ್ತಿದ್ದರೆ, ಇನ್ನೊಂದೆಡೆ ಜೀವಜಲ ಕೊಳಚೆಯನ್ನು ಸೇರುತ್ತಿದೆ.`ಹಾಲಿ ಇರುವ ಅಧಿಕೃತ ನಲ್ಲಿ ಸಂಪರ್ಕಗಳಿಗೆ ನಿತ್ಯ 8,000 ದಶಲಕ್ಷ ಲೀಟರ್ ನೀರು ಸಾಕು. ಆದರೆ, ಸೋರಿಕೆ ಪ್ರಮಾಣವೇ ಅಧಿಕವಾಗಿರುವ ಕಾರಣ ನಗರಕ್ಕೆ ಎಷ್ಟು ಯೋಜನೆಗಳ ಮೂಲಕ ನೀರು ತಂದರೂ ಸಾಲುವುದಿಲ್ಲ' ಎಂದು ಜಲ ಮಂಡಳಿ ನಿವೃತ್ತ ಎಂಜಿನಿಯರ್ ಎಂ.ಎನ್. ತಿಪ್ಪೆಸ್ವಾಮಿ ಹೇಳುತ್ತಾರೆ.`ಹೆಚ್ಚುವರಿ ನೀರು ತರಲಷ್ಟೇ ಜಲ ಮಂಡಳಿ ಕಾರ್ಯೋನ್ಮುಖವಾಗಿದೆಯೇ ಹೊರತು ಇದ್ದ ನೀರನ್ನು ಸದ್ಬಳಕೆ ಮಾಡುವತ್ತ ಯಾವುದೇ ಕ್ರಮ ಕೈಗೊಂಡಿಲ್ಲ. ನಗರದ ಬಹುತೇಕ ನೀರು ಪೂರೈಕೆ ಕೊಳವೆಗಳು ಹಳೆಯದಾಗಿದ್ದು, ಸಿಕ್ಕ-ಸಿಕ್ಕಲ್ಲಿ ಸೋರುತ್ತಿವೆ. ಅವುಗಳನ್ನು ಬದಲಾಯಿಸದೆ ನೀರಿನ ಮಿತ ಬಳಕೆ ಸಾಧ್ಯವಿಲ್ಲ' ಎಂದು ವಿವರಿಸುತ್ತಾರೆ.ಜಲ ಮಂಡಳಿ ನಗರದಲ್ಲಿ 7,865 ಕಿ.ಮೀ. ವಿತರಣಾ ಜಾಲ ಹೊಂದಿದ್ದು, ದಶಕಗಳ ಹಿಂದಿನ ಈ ಮಾರ್ಗದ ಮೇಲೆ ನಿಗಾ ಇಡುವುದೇ ಸಮಸ್ಯೆಯಾಗಿ ಪರಿಣಮಿಸಿದೆ. ಸೋರಿಕೆ ಉಂಟಾದಾಗ ದುರಸ್ತಿ ಮಾಡಲು ಸಾರ್ವಜನಿಕರ ಮಾಹಿತಿಯನ್ನೇ ಅವಲಂಬಿಸಬೇಕಾದ ಸ್ಥಿತಿ ಉಂಟಾಗಿದೆ.ನೀರಿನ ಸೋರಿಕೆ ಮತ್ತು ಅಕ್ರಮ ಸಂಪರ್ಕಗಳ ಕುರಿತು ವ್ಯಾಪಕ ದೂರುಗಳು ಕೇಳಿ ಬಂದಿವೆ. ಮಂಡಳಿ ದಾಖಲೆಗಳು ಸಹ ವ್ಯರ್ಥ ಪೋಲನ್ನು ಎತ್ತಿ ತೋರಿವೆ. ಇದರಿಂದ ಕಾರ್ಯಪ್ರವೃತ್ತರಾದ ಜಲ ಮಂಡಳಿ ಅಧ್ಯಕ್ಷ ಗೌರವ್ ಗುಪ್ತಾ, ಈ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. ಪ್ರಾಯೋಗಿಕವಾಗಿ ದಕ್ಷಿಣ ವಲಯದಲ್ಲಿ ಲೆಕ್ಕವಿಲ್ಲದ ನೀರಿನ ಲೆಕ್ಕ ಪಡೆಯುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.ದಕ್ಷಿಣ ವಲಯದ 52 ಚದರ ಕಿ.ಮೀ. ವ್ಯಾಪ್ತಿಯಲ್ಲಿ ನೀರಿನ ಸೋರಿಕೆ ತಡೆಗಟ್ಟಿ, ಪೂರೈಕೆಯಾಗುವ ಪ್ರತಿ ನೀರಿಗೂ ಲೆಕ್ಕ ಇಡುವ ಕಾರ್ಯವನ್ನು ಎಲ್ ಅಂಡ್ ಟಿ ಸಂಸ್ಥೆ ಎರಡು ವರ್ಷಗಳ ಅವಧಿಗೆ ಗುತ್ತಿಗೆ ಪಡೆದುಕೊಂಡಿದೆ. ಈ ಉದ್ದೇಶಕ್ಕಾಗಿ ರೂ 173 ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ವಿವರಿಸುತ್ತಾರೆ ಜಲ ಮಂಡಳಿ ಪ್ರಧಾನ ಎಂಜಿನಿಯರ್ ಟಿ. ವೆಂಕಟರಾಜು.`ನಗರದ ಎಲ್ಲಾ ಪ್ರದೇಶಗಳಲ್ಲಿ ಲಕ್ಷಾಂತರ ಅಕ್ರಮ ಸಂಪರ್ಕಗಳು ಇದ್ದು, ಇದುವರೆಗೆ ಅವುಗಳನ್ನು ಪತ್ತೆ ಹಚ್ಚುವುದೇ ಕಷ್ಟವಾಗಿತ್ತು. ಒಂದೊಮ್ಮೆ ಎಲ್ ಅಂಡ್ ಟಿ ಸಂಸ್ಥೆ ಕೊಳವೆ ಮಾರ್ಗವನ್ನು ಬದಲಾಯಿಸಿದ ಮೇಲೆ ಎಲ್ಲಿಯೇ ಅಕ್ರಮ ಸಂಪರ್ಕಗಳು ಇದ್ದರೂ ಪತ್ತೆಯಾಗಲಿವೆ. ಆಗ ಇಡೀ ಜಾಲವನ್ನು ಕಂಪ್ಯೂಟರ್ ಮೂಲಕ ನಿರ್ವಹಣೆ ಮಾಡಲಾಗುತ್ತದೆ. ಸೋರಿಕೆ ಕೂಡ ಕ್ಷಣಾರ್ಧದಲ್ಲಿ ಗೊತ್ತಾಗಲಿದೆ' ಎಂದು ಅವರು ಮಾಹಿತಿ ಕೊಡುತ್ತಾರೆ.`ದಕ್ಷಿಣ ವಲಯದ ಯಶಸ್ಸು ನೋಡಿಕೊಂಡು ನಗರದ ಇತರ ಭಾಗಗಳಿಗೂ ಹಂತ-ಹಂತವಾಗಿ ಈ ಯೋಜನೆಯನ್ನು ವಿಸ್ತರಣೆ ಮಾಡಲಾಗುವುದು. ಎಲ್ ಅಂಡ್ ಟಿ ಸಂಸ್ಥೆ ಈಗಾಗಲೇ ಕಾರ್ಯ ಪ್ರವೃತ್ತವಾಗಿದೆ' ಎಂದು ಹೇಳುತ್ತಾರೆ ವೆಂಕಟರಾಜು.ಲೆಕ್ಕವಿಲ್ಲದ ನೀರಿನ ಸ್ಥಿತಿ ಇದಾದರೆ, ಲೆಕ್ಕವಿಟ್ಟ ಜಲವೂ ಪೋಲಾಗುತ್ತಿರುವುದು ಜಲ ಮಂಡಳಿಗೆ ತಲೆನೋವಾಗಿ ಪರಿಣಮಿಸಿದೆ. ನಲ್ಲಿಗೆ ಪೈಪ್ ಜೋಡಿಸಿ ರಸ್ತೆ ಮೇಲೆ ಕಾರು ತೊಳೆಯುತ್ತಾ ನಿಲ್ಲುವುದು, ಮನೆಯೊಳಗೆ ಬೆಳೆಸಿದ ಉದ್ಯಾನಕ್ಕೂ ನಲ್ಲಿಯ ನೀರು ಬಿಡಲು ಆರಂಭಿಸಿ,  ಪಾತಿ ತುಂಬಿಕೊಂಡ ಮೇಲೆ ಉಳಿದ ನೀರು ಚರಂಡಿ ಕಡೆಗೆ ಹರಿಯುತ್ತದೆ.`ಈ ವಿಷಯವಾಗಿ ತಿಳಿಹೇಳಲು ಹೋದರೆ ನಾವು ದುಡ್ಡು ಕೊಡುವುದಿಲ್ಲವೆ, ನೀರು ಹೇಗೆ ಉಪಯೋಗಿಸಿದರೆ ನಿಮಗೇನು ಎಂದು ನಮಗೇ ಉಲ್ಟಾ ದಬಾಯಿಸುತ್ತಾರೆ' ಎಂದು ಜಲ ಮಂಡಳಿ ಸಿಬ್ಬಂದಿ ಹೇಳುತ್ತಾರೆ. ಕೆಲವು ದೇಶಗಳಲ್ಲಿ ನೀರು ಪೋಲು ಮಾಡಿದರೆ ದಂಡ ವಿಧಿಸಲಾಗುತ್ತದೆ. ಆದರೆ, ನಮ್ಮ ದೇಶದಲ್ಲಿ ಅಂತಹ ಯಾವ ಕಾನೂನು ಇಲ್ಲ. ಗುಪ್ತಾ ಅವರನ್ನು ಈ ಕುರಿತು ಕೇಳಿದರೆ, `ಪೋಲು ತಡೆಯಲು ಯಾವ ನಿಯಮವೂ ಇಲ್ಲ. ಹೆಚ್ಚೆಂದರೆ ನಾವು ಅವರಲ್ಲಿ ಮನವಿ ಮಾಡಿಕೊಳ್ಳಬಹುದು ಅಷ್ಟೇ' ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.`ನಿಯಮದ ನಿರ್ಬಂಧ ಹೇರುವುದಕ್ಕಿಂತ ತಮಗೆ ಬೇಕಾದ ಅಮೂಲ್ಯ ಜಲವನ್ನು ಕಾಪಾಡಿಕೊಳ್ಳುವ ಮನಸ್ಸು ಅವರಲ್ಲೇ ಉದ್ಭವ ಆಗಬೇಕು. ಆಗಮಾತ್ರ ನೀರಿನ ಪೋಲು ಆಗದಂತೆ ಸಮರ್ಪಕವಾಗಿ ತಡೆ ಬೀಳಲಿದೆ' ಎಂದು ಹೇಳುತ್ತಾರೆ.ಕೊಳವೆ ಬಾವಿಗಳ ವೈಫಲ್ಯ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಹಿಸಿಕೊಟ್ಟ ಕೊಳವೆ ಬಾವಿಗಳೂ ಸೇರಿದಂತೆ ಜಲ ಮಂಡಳಿ ಬಳಿ ಸದ್ಯ 12,000 ಕೊಳವೆ ಬಾವಿಗಳಿವೆ. ಅವುಗಳಲ್ಲಿ 750 ಕೊಳವೆ ಬಾವಿಗಳು ಸಂಪೂರ್ಣವಾಗಿ ಬತ್ತಿಹೋಗಿದ್ದು, ಮಿಕ್ಕವುಗಳಲ್ಲಿ ನೀರು ಈಗಾಗಲೇ ಪಾತಾಳ ಕಂಡಿದೆ. ವಿವಿಧ ವಲಯಗಳಿಂದ ನಿತ್ಯ ಒಂದಿಲ್ಲೊಂದು ಕೊಳವೆ ಬಾವಿ ವಿಫಲವಾದ ವರದಿ ಪ್ರಧಾನ ಕಚೇರಿಗೆ ಬರುತ್ತಲೇ ಇದೆ. ಕೆಲವೆಡೆ ಕಾವೇರಿ ನೀರಿನ ಜೊತೆಗೆ ಕೊಳವೆ ಬಾವಿ ಜಲವನ್ನೂ ಪೂರೈಸಲಾಗುತ್ತಿದೆ.ಕಾವೇರಿಯಲ್ಲಿ ನೀರಿಲ್ಲ ಎನ್ನುವ ವರ್ತಮಾನ ಬಂದಿರುವ ಬೆನ್ನಿಗೇ ಅಂತರ್ಜಲ ಕುಸಿತ ಕಂಡಿರುವ ವಿದ್ಯಮಾನ ಜಲ ಮಂಡಳಿಗೆ ಕಳವಳ ತಂದಿದೆ.

 

ಜಲ ಮಂಡಳಿ ಪ್ರವರ

ವ್ಯಾಪ್ತಿ:  800 ಚದರ ಕಿ.ಮೀಸಂಪರ್ಕ ಜಾಲ:  7,865 ಕಿ.ಮೀ

ನಲ್ಲಿ ಸಂಪರ್ಕ:  7.05 ಲಕ್ಷಪಂಪಿಂಗ್ ಸ್ಟೇಶನ್:  45ನೆಲಮಟ್ಟದ ಸಂಗ್ರಹಾಗಾರ: 52ಸದ್ಯದ ಸಾಮರ್ಥ್ಯ:  ನಿತ್ಯ 1,500 ದ. ಲೀಹಾಲಿ ಪೂರೈಕೆ:  ನಿತ್ಯ 1,300 ದ. ಲೀ ಕೊಳವೆ ಬಾವಿಗಳ ಸಂಖ್ಯೆ:  12,000ವಿಫಲವಾದ ಕೊಳವೆ

ಬಾವಿಗಳ ಸಂಖ್ಯೆ:  752ವೈಫಲ್ಯದ ಹಾದಿಹಿಡಿದ ಕೊಳವೆ ಬಾವಿಗಳ ಸಂಖ್ಯೆ:  3,200ಒಳಚರಂಡಿ ಜಾಲ:  3,932 ಕಿ.ಮೀ.ಕೊಳಚೆ ನೀರು ಶುದ್ಧೀಕರಣ ಘಟಕಗಳು:  14ಶುದ್ಧೀಕರಣ ಸಾಮರ್ಥ್ಯ:  ನಿತ್ಯ 720 ದ. ಲೀ.

* ದಶಲಕ್ಷ ಲೀಟರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry