ಭಾನುವಾರ, ನವೆಂಬರ್ 17, 2019
29 °C

ಅರೋಮಾ ಥೆರಪಿಯ ಬ್ಲಾಸಮ್

Published:
Updated:

ಅರೋಮಾ ಥೆರಪಿ ಬಗ್ಗೆ ಮಾತನಾಡುವಾಗ ನೆನಪಾಗುವುದು ಬ್ಲಾಸಮ್ ಕೊಚಾರ್ ಎಂಬ ಬ್ರಾಂಡ್‌ನೇಮ್. ಪಕ್ಕಾ ನೈಸರ್ಗಿಕ ಮತ್ತು ಸಸ್ಯಜನ್ಯ ಉತ್ಪನ್ನಗಳಿಗೆ ವಿಶ್ವಮಾನ್ಯತೆ ಗಳಿಸಿರುವ ಈ ಭಾರತೀಯ ಮಹಿಳೆ ಈಗ ಪ್ರಸಾಧನ ತಯಾರಿಕಾ ಕ್ಷೇತ್ರದಲ್ಲಿ ದೊಡ್ಡ ಹೆಸರು.

 

ಊಟಿಯ ನಿಸರ್ಗದ ಮಡಿಲಲ್ಲಿ ಎಳವೆಯನ್ನು ಕಳೆದ ಬ್ಲಾಸಮ್ ಆಗಲೇ ನೆಗಡಿ, ಜ್ವರಕ್ಕೂ ನಿಸರ್ಗದತ್ತವಾದ ಕಶಾಯಗಳ ಸತ್ವಗಳನ್ನು ಅರಗಿಸಿಕೊಂಡವರು.ಕಳೆದ ವಾರಾಂತ್ಯದಲ್ಲಿ ತಮ್ಮ ಹೊಸ ಶ್ರೇಣಿಯ ಉತ್ಪನ್ನಗಳನ್ನು ಬಿಡುಗಡೆ ಮಾಡಲು ನಗರಕ್ಕೆ ಭೇಟಿ ನೀಡಿದ್ದ ಬ್ಲಾಸಮ್, `ಮೆಟ್ರೊ~ದೊಂದಿಗೆ ತಮ್ಮ ಅನುಭವ ಹಂಚಿಕೊಂಡರು.ಅರೋಮಾ ಥೆರಪಿ ಎಂದರೇನು?

ಅರೋಮಾ ಅಂದರೆ ಸುವಾಸನೆ. ನೈಸರ್ಗಿಕ ಅಂಶಗಳನ್ನು ಒಳಗೊಂಡ ತೈಲ, ಕ್ರೀಮ್, ಲೋಶನ್‌ಗಳ ಮೂಲಕ ತ್ವಚೆ, ಕೂದಲು ಮತ್ತು ಸೌಂದರ್ಯ ಚಿಕಿತ್ಸೆಗೆ ಬಳಸುವುದು ಅರೋಮಾ ಥೆರಪಿ.ನಿಮ್ಮ ಕಂಪೆನಿಯ ಉತ್ಪನ್ನಗಳ ಬಗ್ಗೆ ಹೇಳಿ?

ನಮ್ಮಲ್ಲಿ ಅರೋಮಾ ಮ್ಯಾಜಿಕ್ ಮತ್ತು ಅರೋಮಾ ಮ್ಯಾಜಿಕ್ ಪ್ರೊಫೆಷನಲ್ ಎಂಬ ಎರಡು ಶ್ರೇಣಿಯ ಉತ್ಪನ್ನಗಳಿವೆ. ಅರೋಮಾ ಮ್ಯಾಜಿಕ್, ಮನೆಯಲ್ಲೇ ಸೌಂದರ್ಯ ಚಿಕಿತ್ಸೆ, ಕೇಶ ಚಿಕಿತ್ಸೆ ಮಾಡಿಕೊಳ್ಳುವ ಗ್ರಾಹಕರಿಗಾಗಿ ಇರುವಂತಹುದು. ಅರೋಮಾ ಮ್ಯಾಜಿಕ್ ಪ್ರೊಫೆಷನಲ್, ಸ್ಪಾ ಹಾಗೂ ಬ್ಯೂಟಿ ಪಾರ್ಲರ್‌ಗಳಲ್ಲಿ ವಾಣಿಜ್ಯಿಕ ಉದ್ದೇಶಕ್ಕಾಗಿ ತಯಾರಿಸಿರುವ ಉತ್ಪನ್ನ.ಇವುಗಳ ವೈಶಿಷ್ಟ್ಯವೇನು?

ಈ ಎರಡೂ ಶ್ರೇಣಿಯ ಉತ್ಪನ್ನಗಳು ನೂರಕ್ಕೆ ನೂರು ಸಸ್ಯಜನ್ಯ. ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಸಿಗುವ ಲ್ಯಾವೆಂಡರ್, ಗುಲಾಬಿ, ಮಲ್ಲಿಗೆಯ ಮೂಲಸತ್ವವನ್ನು ಒಳಗೊಂಡ ಉತ್ಪನ್ನಗಳು ಸೌಂದರ್ಯ ಮತ್ತು ಆರೋಗ್ಯ ಸಂಬಂಧಿ ಚಿಕಿತ್ಸೆಗೆ ಪ್ರಮುಖವಾಗಿ ಬಳಸುತ್ತೇವೆ. ವಿಶಿಷ್ಟವಾದ ಸುವಾಸನೆ ನೀಡುವುದೂ ಈ ಅಂಶಗಳೇ.ಸೌಂದರ್ಯ ರಕ್ಷಣಾ ಕ್ಷೇತ್ರದಲ್ಲಿ ಯಾವ ರೀತಿ ತೊಡಗಿಸಿಕೊಂಡಿದ್ದೀರಿ?

ಸೌಂದರ್ಯ ರಕ್ಷಣೆ ಎಂದಾಕ್ಷಣ ನಮಗೆ ನೆನಪಾಗುವುದು ಪ್ರಸಾಧನಗಳು. ಬ್ಯೂಟಿ ಪಾರ್ಲರ್‌ಗಳೊಂದಿಗೆ ಸ್ಪಾಗಳೂ ಮಹತ್ವದ ಪಾತ್ರ ವಹಿಸುತ್ತಿವೆ. ಹೀಗಾಗಿ ವೃತ್ತಿಪರರಿಗೆ ಅಕಾಡೆಮಿಕ್ ಆಗಿ ಶಿಕ್ಷಣ ನೀಡುವ ಉದ್ದೇಶದಿಂದ `ಕೊಚಾರ್ ಕಾಲೇಜ್ ಆಫ್ ಕ್ರಿಯೇಟಿವ್ ಆರ್ಟ್ಸ್ ಅಂಡ್ ಡಿಸೈನ್~ ಎಂಬ ಸಂಸ್ಥೆಯನ್ನು ದೆಹಲಿ, ಮುಂಬೈ ಮತ್ತು ಚೆನ್ನೈನಲ್ಲಿ ಆರಂಭಿಸಿದ್ದು, ನಾನೇ ನಿಯಮಿತವಾಗಿ ಅಧ್ಯಾಪನ ಮಾಡುತ್ತೇನೆ.ದಶಕಗಳ ಹಿಂದಿನ ಮಾತು. ಅರೋಮಾ ಥೆರಪಿ ಎಂಬ ಸೌಂದರ್ಯ ಸೂತ್ರದೊಂದಿಗೆ ಪ್ರಸಾಧನ ಉದ್ಯಮ ಕ್ಷೇತ್ರಕ್ಕೆ ನಾನು ಕಾಲಿಟ್ಟದ್ದು `ಅರೋಮಾ ಥೆರಪಿ ಬಾರ್~ ಎಂಬ ಚಿಕಿತ್ಸಾ ಕೇಂದ್ರದ ಮೂಲಕ, ದೆಹಲಿಯಲ್ಲಿ.ನನ್ನ ಮನಸ್ಸಿನಲ್ಲಿದ್ದುದು ಮಹಿಳಾ ಗ್ರಾಹಕರು. ಆದರೆ `ಬಾರ್~ ಎಂಬ ಹೆಸರು ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರನ್ನು ಸೆಳೆಯುತ್ತಿತ್ತು. ಪ್ರತಿದಿನವೂ ಪುರುಷರಿಗೆ `ಬಾರ್ ಎಂದರೆ ವಿಸ್ಕಿ ರಮ್ ಸೇವಿಸುವ ತಾಣವಲ್ಲ, ಮಹಿಳೆಯರಿಗಾಗಿ ತೆರೆಯಲಾಗಿರುವ ಸೌಂದರ್ಯ ಚಿಕಿತ್ಸಾ ಕೇಂದ್ರ~ ಎಂದು ತಿಳಿಹೇಳಿ ಆಚೆ ಸಾಗಹಾಕುವುದೇ ದೊಡ್ಡ ಸವಾಲಾಗುತ್ತಿತ್ತು.`ಬಾರ್~ ತೆಗೆದುಹಾಕಿದ ನಂತರ ಈ ಹಾವಳಿ ನಿಂತುಹೋಯಿತು.ಬೆಂಗಳೂರೆಂದರೆ ಏನನ್ನಿಸುತ್ತದೆ?

ಇದು ನನ್ನ ನೆಚ್ಚಿನ ನಗರ. ಪ್ರಪಂಚದ ಯಾವುದೇ ನಗರಕ್ಕೆ ಭೇಟಿ ನೀಡಿದರೂ ಇಲ್ಲಿಗೆ ಬಂದಷ್ಟು ಖುಷಿಯಾಗುವುದಿಲ್ಲ. ಬೆಂಗಳೂರಂದ್ರೆ ನನಗೆ ಏನೋ ಒಂಥರಾ ಸೆಳೆತ. ಇಲ್ಲಿ ಬಂದಾಗಲೆಲ್ಲ `ಪಾಮ್‌ಗ್ರೋವ್~ನಲ್ಲಿ ತಂಗುತ್ತೇನೆ. ಆ ಹಸಿರು, ಅಲ್ಲಿನ ಸ್ನೇಹಮಯ ವಾತಾವರಣ... ನನ್ನ ದೃಷ್ಟಿಯಲ್ಲಿ ಇಡೀ ಬೆಂಗಳೂರೇ ಪರಿಸರಸ್ನೇಹಿ!ಇಲ್ಲಿನ ಜನರು ಜೀವನಪ್ರೀತಿಯುಳ್ಳವರು. ವೈವಿಧ್ಯಮಯವಾಗಿ ಬದುಕುವುದು ಅವರಿಗಿಷ್ಟ. ಹೊಸತನಕ್ಕೆ ಬಹುಬೇಗನೆ ತೆರೆದುಕೊಳ್ಳುತ್ತಾರೆ. ಫ್ಯಾಷನ್, ಲೈಫ್‌ಸ್ಟೈಲ್ ವಿಚಾರ ಬಂದಾಗಲಂತೂ ಅವರು ಸದಾ ಮುಂದಿರುತ್ತಾರೆ. ನಮ್ಮ ಸೌಂದರ್ಯ ಉತ್ಪನ್ನಗಳಿಗೆ ಇಲ್ಲಿ ದೊಡ್ಡ ಸಂಖ್ಯೆಯ ಗ್ರಾಹಕರಿದ್ದಾರೆ. ಇಲ್ಲೂ ಒಂದು ಅರೋಮಾ ಥೆರಪಿ ಶಾಖೆಯನ್ನು ತೆರೆಯಬೇಕೆಂದಿದ್ದೇನೆ. 

ಪ್ರತಿಕ್ರಿಯಿಸಿ (+)