ಭಾನುವಾರ, ನವೆಂಬರ್ 17, 2019
28 °C

ಅರ್ಕಾವತಿಗೆ ಹರಿಗೋಲು ಆಗೋಣ

Published:
Updated:

ಬೆಂಗಳೂರು: ಅರ್ಕಾವತಿ ಮತ್ತು ಕುಮುದ್ವತಿ ನದಿಗಳು ಹಾಗೂ ತಿಪ್ಪಗೊಂಡನಹಳ್ಳಿ ಕೆರೆ ಸಂರಕ್ಷಣೆಗಾಗಿ ರಾಜ್ಯ ಸರ್ಕಾರ 2003ರ ನವೆಂಬರ್ 18ರಂದು ಅಧಿಸೂಚನೆಯೊಂದನ್ನು (ನಂ. ಎಫ್‌ಇಎಫ್/ಇಎನ್‌ವಿ/2002) ಹೊರಡಿಸಿದೆ.ನಗರದ ದಿಕ್ಕುತಪ್ಪಿದ ಅಭಿವೃದ್ಧಿ ಯೋಜನೆಗಳು, ನೀರು ಹರಿಯುವ ಪ್ರದೇಶದಲ್ಲಿ ತಲೆ ಎತ್ತಿದ ಕೈಗಾರಿಕೆಗಳು, ಅವುಗಳು ಹೊರಹಾಕುತ್ತಿರುವ ಮಾಲಿನ್ಯ - ಜಲ ಮೂಲಗಳು ಅಪಾಯ ಎದುರಿಸುತ್ತಿರಲು ಮುಖ್ಯ ಕಾರಣವಾಗಿವೆ ಎಂದು ಆ ಅಧಿಸೂಚನೆಯಲ್ಲಿ ಸರ್ಕಾರವೇ ಒಪ್ಪಿಕೊಂಡಿದೆ. ತಿಪ್ಪಗೊಂಡನಹಳ್ಳಿ ಕೆರೆ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬ ಸಂಶೋಧನಾ ವರದಿಗಳ ಪ್ರಸ್ತಾಪವೂ ಅದರಲ್ಲಿದೆ.ಭಾರತೀಯ ಬಾಹ್ಯಾಕಾಶ ಸಂಸ್ಥೆಯು (ಇಸ್ರೊ), ಸಂಶೋಧನಾ ಮಾಹಿತಿ ಮತ್ತು ನಿರ್ವಹಣಾ ತಂತ್ರಜ್ಞಾನ ಸಂಸ್ಥೆ (ಇನ್-ರಿಮ್ಟ) ಸಹಯೋಗದಲ್ಲಿ ನಡೆಸಿದ ಅಧ್ಯಯನ ವರದಿಯಲ್ಲಿ ನದಿಗಳು ಅಪಾಯದ ಮಡುವಿನಲ್ಲಿ ಬೀಳಲು ಕಾರಣವಾದ ಅಂಶಗಳ ಕುರಿತು ವಿವರ ಇದೆ. ತಿಪ್ಪಗೊಂಡನಹಳ್ಳಿ ಕೆರೆ ಜಲಾನಯನ ಪ್ರದೇಶದಲ್ಲಿ ತಲೆ ಎತ್ತಿರುವ ಕೈಗಾರಿಕೆಗಳು ಮಾಡಿರುವ ಎಡವಟ್ಟಿನ ಕುರಿತು ಅದರಲ್ಲಿ ವಿಸ್ತೃತವಾಗಿ ಮಾಹಿತಿ ಒದಗಿಸಲಾಗಿದೆ. ಅಂತರ್ಜಲದಲ್ಲೂ ವಿಷ ಬೆರೆತಿರುವುದನ್ನು ಇನ್-ರಿಮ್ಟ ಸಂಶೋಧನೆ ಪತ್ತೆ ಹಚ್ಚಿದೆ.ನದಿಪಾತ್ರವನ್ನು ಸಂರಕ್ಷಿಸಬೇಕು. ಅದಕ್ಕಾಗಿ ರಕ್ಷಿತ ವಲಯಗಳನ್ನು ರಚಿಸಬೇಕು. ಜಲಾನಯನ ಪ್ರದೇಶದ ಭೂಮಿ ಉಪಯೋಗಕ್ಕೆ ಸಂಬಂಧಿಸಿದಂತೆ ನಿಯಮಾವಳಿ ರೂಪಿಸಬೇಕು. ನಗರೀಕರಣದ ಮೇಲೆ ನಿರ್ಬಂಧ ವಿಧಿಸಬೇಕು. ತಿಪ್ಪಗೊಂಡನಹಳ್ಳಿ ಕೆರೆ ಸುತ್ತಲಿನ ಹತ್ತು ಕಿ.ಮೀ. ವ್ಯಾಪ್ತಿಯ ಪ್ರದೇಶ ಮತ್ತು ನದಿಗಳ ಜಲಾನಯನ ಪ್ರದೇಶದ ಸುತ್ತಲಿನ ಎರಡು ಕಿ.ಮೀ. ಪ್ರದೇಶವನ್ನು ರಕ್ಷಿತ ವಲಯವನ್ನಾಗಿ ಘೋಷಣೆ ಮಾಡಬೇಕು. ಅಲ್ಲಿ ಯಾವುದೇ ಚಟುವಟಿಕೆ ನಡೆಸಲು ಆಸ್ಪದ ನೀಡಬಾರದು. ಮುಚ್ಚಿಕೊಂಡ ಕಾಲುವೆಗಳಿಗೆ ಮರುಜೀವ ನೀಡಬೇಕು. ಯಾವುದೇ ಬಗೆಯ ತ್ಯಾಜ್ಯ ನದಿಗೆ ಸೇರ್ಪಡೆ ಆಗದಂತೆ ನೋಡಿಕೊಳ್ಳಬೇಕು ಎಂದು ಇನ್-ರಿಮ್ಟ ಶಿಫಾರಸು ಮಾಡಿತ್ತು.ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹ ನದಿ ಪಾತ್ರದಲ್ಲಿ ಕೈಗಾರಿಕೆಗಳ ಕಾರ್ಯಾಚರಣೆಗೆ ಅವಕಾಶ ನೀಡಬಾರದು ಎಂದು ಪ್ರತ್ಯೇಕವಾಗಿ ಮನವಿ ಮಾಡಿತ್ತು. ಎಲ್ಲವನ್ನೂ ಗಣನೆಗೆ ತೆಗೆದುಕೊಂಡ ರಾಜ್ಯ ಸರ್ಕಾರ, ನದಿ ಮೂಲಗಳ ರಕ್ಷಣೆಗೆ ಅಧಿಸೂಚನೆ ಹೊರಡಿಸಿತ್ತು. ಅಧಿಸೂಚನೆ ಪ್ರಕಾರ, ತಿಪ್ಪಗೊಂಡನಹಳ್ಳಿ ಕೆರೆ ಮತ್ತು ಅದಕ್ಕೆ ನೀರು ತರುವ ನದಿಗಳ ರಕ್ಷಣೆಗೆ ನಾಲ್ಕು ವಲಯ ರಚನೆ ಮಾಡಲಾಗಿದೆ.ನಗರಾಭಿವೃದ್ಧಿ ಇಲಾಖೆ, ಜಲ ಸಂಪನ್ಮೂಲ ಇಲಾಖೆ, ಗಣಿ ಮತ್ತು ಭೂವಿಜ್ಞಾನ ನಿರ್ದೇಶನಾಲಯ, ಜಲ ಮಂಡಳಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬಿಬಿಎಂಪಿ, ನೆಲಮಂಗಲ ಯೋಜನಾ ಪ್ರಾಧಿಕಾರ, ಬೆಂಗಳೂರು ಮಹಾನಗರ ವಲಯ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಆರ್‌ಎಡಿಎ) ಸೇರಿದಂತೆ ಸರ್ಕಾರದ ಹಲವು ಇಲಾಖೆಗಳಿಗೆ ನದಿ ಸಂರಕ್ಷಣೆ ಜವಾಬ್ದಾರಿ ವಹಿಸಲಾಗಿದೆ. ಸಮನ್ವಯದಿಂದ ಕಾರ್ಯ ನಿರ್ವಹಿಸಲು ಈ ಇಲಾಖೆಗಳ ಮುಖ್ಯಸ್ಥರು ತಿಂಗಳಿಗೊಮ್ಮೆ ಸಭೆ ನಡೆಸುವುದೂ ಕಡ್ಡಾಯವಾಗಿದೆ. ಆದರೆ, ಇದುವರೆಗೆ ಜಲ ಮೂಲದ ರಕ್ಷಣೆಗೆ ಸಂಬಂಧಿಸಿದಂತೆ ನಿಯಮಿತವಾಗಿ ಸಭೆಗಳನ್ನೇ ನಡೆಸಲಾಗಿಲ್ಲ.ಅಂತರ್ಜಲದ ಬಳಕೆ ಮೇಲೆ ನಿರ್ಬಂಧ ವಿಧಿಸಲಾಗಿದ್ದು, ಮರಳು ಮತ್ತು ಕಲ್ಲು ಗಣಿಗಾರಿಕೆಯನ್ನೂ ನಿಷೇಧಿಸಲಾಗಿದೆ. ಘನ ಇಲ್ಲವೆ ದ್ರವ ತ್ಯಾಜ್ಯವನ್ನು ಯಾವುದೇ ವ್ಯಕ್ತಿಗಳು ನದಿ ಪಾತ್ರದಲ್ಲಿ ಹಾಕಬಾರದು. ಅಂತಹ ಕೃತ್ಯಗಳು ಕಂಡುಬಂದರೆ ಆ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿಕೊಳ್ಳಬೇಕು. ಜಲಾನಯನ ಪ್ರದೇಶದ ಪ್ರತಿ ಕಟ್ಟಡದಲ್ಲೂ ಮಳೆ ನೀರು ಸಂಗ್ರಹದ ವ್ಯವಸ್ಥೆ ಮಾಡಬೇಕು. ಕೃಷಿಗೆ ರಾಸಾಯನಿಕ ಬೆಳೆಯದಂತೆ ಎಚ್ಚರವಹಿಸಿ, ಸಾವಯವ ಕೃಷಿಯನ್ನು ಪ್ರೋತ್ಸಾಹಿಸಬೇಕು. ಕೃಷಿಯೊಂದನ್ನು ಹೊರತುಪಡಿಸಿ ಜಲಾನಯನ ಪ್ರದೇಶದಲ್ಲಿ ಬೇರೆ ಯಾವುದೇ ಚಟುವಟಿಕೆ ನಡೆಸುವಂತಿಲ್ಲ ಎಂದು ಸರ್ಕಾರ ತನ್ನ ಆದೇಶದಲ್ಲಿ ಬಹು ಸ್ಪಷ್ಟವಾಗಿ ತಿಳಿಸಿದೆ.ಎಲ್ಲ ಆದೇಶಗಳನ್ನು ಉಲ್ಲಂಘಿಸಿದ ಕುರುಹುಗಳು ನದಿ ಪಾತ್ರದ ಉದ್ದಕ್ಕೂ ಸಿಗುತ್ತವೆ. ಸರ್ಕಾರದ ಅಧಿಕಾರಿಗಳು ಮತ್ತು ನದಿ ಪಾತ್ರದ ಗ್ರಾಮಸ್ಥರು ತಮ್ಮ ಜವಾಬ್ದಾರಿ ಮರೆತು ವರ್ತಿಸಿದ್ದನ್ನು ನದಿ ಪುನಶ್ಚೇತನ ಸಮಿತಿ ಸದಸ್ಯರು ಹೆಜ್ಜೆ, ಹೆಜ್ಜೆಗೂ ಎತ್ತಿ ತೋರಿಸುತ್ತಾರೆ.ಅಟ್ಟ ಸೇರಿದ ಹರಿಗೋಲು

ಅರ್ಕಾವತಿ ನದಿಯೇ ಬತ್ತಿದ ಮೇಲೆ ಹರಿಗೋಲುಗಳಿಗೆ ಇನ್ನೇನು ಕೆಲಸ? ಹರಿಗೋಲನ್ನು ಅಟ್ಟಕ್ಕೇರಿಸಿ, ತೆಪ್ಪವನ್ನು ತಿಪ್ಪೆಗೆಸೆದು ಕೆಟ್ಟು ಪಟ್ಟಣ ಸೇರಿದರು ಎನ್ನುವ ಗಾದೆಯಂತೆ ಹಳ್ಳಿಗಳ ಜನ ನಗರದ ಕಡೆಗೆ ಮುಖ ಮಾಡುತ್ತಿದ್ದಾರೆ ಎಂದು ಸಿ.ನಾರಾಯಣಸ್ವಾಮಿ ವಿಷಾದಿಸುತ್ತಾರೆ.ಸ್ವರಾಜ್ ಸೇರಿದಂತೆ ವಿವಿಧ ಸಂಸ್ಥೆಗಳು ನಡೆಸಿದ ಜಲಜಾಗೃತಿ ಪರಿಣಾಮ ಅಲ್ಲಿಷ್ಟು, ಇಲ್ಲಿಷ್ಟು ಒಳ್ಳೆಯ ಪ್ರಯತ್ನಗಳು ಆರಂಭವಾಗಿವೆ. ಕೆರೆ ಪಾತ್ರವನ್ನು ಸ್ವಚ್ಛಗೊಳಿಸುವುದು, ಕೃಷಿಹೊಂಡ ನಿರ್ಮಿಸುವುದು, ಕೃಷಿಯಲ್ಲಿ ಮತ್ತೆ ನೈಸರ್ಗಿಕ ಪದ್ಧತಿಯತ್ತ ವಾಪಸಾಗುವುದು ಮತ್ತಿತರ ಚಟುವಟಿಕೆಗಳು ನಡೆದಿವೆ. ಅಂತಹ ಯತ್ನಗಳು ಪ್ರತಿ ಗ್ರಾಮದಲ್ಲೂ ನಡೆಯಬೇಕು ಎನ್ನುವುದು ದೊಡ್ಡಿ ಶಿವರಾಂ, ಡಾ. ಎಲೆ ಲಿಂಗರಾಜು ಮತ್ತಿತರರ ಅಭಿಲಾಷೆಯಾಗಿದೆ.ಕೈಗಾರಿಕೆಗಳ ನೀರು ನದಿಪಾತ್ರ ಸೇರದಂತೆ ತಡೆಯಬೇಕು. ಪ್ರತಿಯೊಂದು ಕಾರ್ಖಾನೆಯಲ್ಲೂ ಶುದ್ಧೀಕರಣ ಘಟಕ ತೆರೆಯಬೇಕು. ಒತ್ತುವರಿಯನ್ನು ಸಂಪೂರ್ಣವಾಗಿ ತೆರುವುಗೊಳಿಸಬೇಕು. ಗಣಿಗಾರಿಕೆಯನ್ನು ತಡೆಗಟ್ಟಬೇಕು. ಮಳೆ ನೀರು ಸಂಗ್ರಹದ ವ್ಯವಸ್ಥೆ ಜಾರಿಗೆ ಬರಬೇಕು. ನದಿಗಳ ಕುರಿತು ಯಾವುದೇ ನಿರ್ಧಾರ ಕೈಗೊಳ್ಳಲು ಒಂದು ಸಮನ್ವಯ ಸಮಿತಿ ರಚಿಸಬೇಕು. ಅದರಲ್ಲಿ ಅಧಿಕಾರಿಗಳು, ಸ್ವಯಂಸೇವಾ ಪ್ರತಿನಿಧಿಗಳು, ಪರಿಸರವಾದಿಗಳು ಮತ್ತು ಗ್ರಾಮಸ್ಥರು ಇರಬೇಕು ಎಂಬ ಬೇಡಿಕೆಗಳನ್ನು ಅವರು ಮುಂದಿಡುತ್ತಾರೆ.ಎಲ್ಲಕ್ಕಿಂತ ಮುಖ್ಯವಾಗಿ ನೀರಿನ ಮೇಲೆ ಗ್ರಾಮಸ್ಥರಿಗೆ ಮೊದಲಿದ್ದ ನಂಬಿಕೆ, ಭಕ್ತಿ, ಪ್ರೀತಿ ಮರು ಪ್ರತಿಷ್ಠಾಪನೆ ಆಗಬೇಕು. ಆಗ ನದಿಯ ಎಲ್ಲ ಸಮಸ್ಯೆಗಳು ಬಗೆಹರಿಯುವುದರಲ್ಲಿ ಸಂಶಯವೇ ಇಲ್ಲ ಎಂಬುದು ನದಿ ಪುನಶ್ಚೇತನದಲ್ಲಿ ತೊಡಗಿದ ಪ್ರತಿಯೊಬ್ಬ ಕಾರ್ಯಕರ್ತನ ಬಲವಾದ ನಂಬಿಕೆಯಾಗಿದೆ.

ಪ್ರತಿಕ್ರಿಯಿಸಿ (+)