ಅರ್ಚನಾ ಹೊಸದಿನಗಳು.....

ಬುಧವಾರ, ಜೂಲೈ 17, 2019
26 °C

ಅರ್ಚನಾ ಹೊಸದಿನಗಳು.....

Published:
Updated:

`ಆ ದಿನಗಳು'- ವೈಭವೀಕೃತ ಭೂಗತ ಲೋಕದ ಕಥನಗಳ ನಡುವೆ ಕ್ರೌರ್ಯದ ಲೇಪವಿಲ್ಲದೆ ರೌಡಿಸಂ ಪ್ರಪಂಚ ಮತ್ತು ಅದರೊಳಗೆ ಬೆರೆತ ಪ್ರೇಮಕಥನವನ್ನು ನವಿರಾಗಿ ಚಿತ್ರಿಸಿದ ಸಿನಿಮಾ. ಆ ಚಿತ್ರದಲ್ಲಿ ಸ್ವಾವಲಂಬಿ, ದಿಟ್ಟೆ ಹಾಗೂ ಪ್ರಬುದ್ಧ ಮನಸ್ಸಿನ ತರುಣಿಯಾಗಿ ನಟಿಸಿದವರು ತೆಲುಗಿನ ನಟಿ ಅರ್ಚನಾ.

`ಮಲ್ಲಿಕಾ' ಪಾತ್ರದಲ್ಲಿನ ಅವರ ಅಭಿನಯದ ಕಂಪು ಸಿನಿರಸಿಕರನ್ನು ಸೆಳೆದಿತ್ತು. ಸಿನಿಮಾದಷ್ಟೇ ಮೆಚ್ಚುಗೆ ಗಳಿಸಿತ್ತು ಅವರ ನಟನೆ. ಆದರೆ `ಆ ದಿನಗಳು' ಬಳಿಕ ಅರ್ಚನಾ ಮತ್ತೆ ಕನ್ನಡ ಚಿತ್ರರಂಗದ ಹೊಸ್ತಿಲು ದಾಟಿದ್ದು ಒಮ್ಮೆ ಮಾತ್ರ. ತೆಲುಗು ಮತ್ತು ತಮಿಳುಗಳಲ್ಲಿ ಬಿಡುವಿಲ್ಲದೆ ತೊಡಗಿಕೊಂಡಿದ್ದ ಅವರು ಕನ್ನಡ ಚಿತ್ರರಂಗದೊಂದಿಗೆ ಈಗ `ಮೈತ್ರಿ' ಮಾಡಿಕೊಂಡಿದ್ದಾರೆ. ಆ ದಿನಗಳ ವೈಭವವನ್ನು ಪುನಃ ಕಣ್ತುಂಬಿಕೊಳ್ಳುವ ಕಾತರ ಅವರದು.ಗಿರಿಧರ್ ನಿರ್ದೇಶನದ `ಮೈತ್ರಿ' ಚಿತ್ರದಲ್ಲಿ ಅರ್ಚನಾ ಮಲಯಾಳಂನ ಖ್ಯಾತ ನಟ ಮೋಹನ್‌ಲಾಲ್‌ಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಮತ್ತು ಮೋಹನ್‌ಲಾಲ್‌ರಂಥ ನಟರ ಜೊತೆಗೆ ನಟಿಸುವ ಅವಕಾಶವನ್ನು ಅದೃಷ್ಟ ಎಂದೇ ಅವರು ಭಾವಿಸಿದ್ದಾರೆ.`ಆ ದಿನಗಳು' ಯಶಸ್ಸಿನ ಬಳಿಕ ತೆಲುಗು ಮೂಲದ ವೇದಾ ಅರ್ಚನಾ ಶಾಸ್ತ್ರಿ ಕನ್ನಡ ಚಿತ್ರರಂಗದಿಂದ ಅವಕಾಶಗಳನ್ನು ನಿರೀಕ್ಷಿಸಿದ್ದರು. ಕನ್ನಡದಲ್ಲಿ ಮಾತ್ರವಲ್ಲ, ತೆಲುಗಿನ ಚಿತ್ರರಂಗದ ಅನೇಕರೂ ಮತ್ತೆ ಕನ್ನಡದಲ್ಲಿ ಏಕೆ ನಟಿಸಲಿಲ್ಲ ಎಂದು ಕೇಳಿದ್ದಿದೆ. ಆಗಾಗ್ಗೆ ಬೆಂಗಳೂರಿಗೆ ಬಂದಾಗಲೆಲ್ಲಾ ಜನ `ಆ ದಿನಗಳು ಹುಡುಗಿ' ಎಂದು ಗುರುತಿಸಿದ್ದನ್ನು ಕಂಡು ಅರ್ಚನಾ ಪುಳಕಿತರಾದದ್ದಿದೆ. ಇಷ್ಟೆಲ್ಲಾ ಇದ್ದರೂ ನಟನೆಯ ಆಹ್ವಾನ ಮಾತ್ರ ಬರಲಿಲ್ಲ. ಆಸಕ್ತಿಕರ ಕಥೆ ತಮ್ಮ ಬಳಿ ಬರಲಿಲ್ಲ.

ಬಹುಶಃ ತಾವು ತೆಲುಗಿನಲ್ಲಿ ಬಿಜಿಯಾಗಿದ್ದೂ ಇದಕ್ಕೆ ಕಾರಣವಿರಬಹುದು ಎಂದು ಊಹಿಸುತ್ತಾರೆ ಅರ್ಚನಾ. ಈ ನಡುವೆ `ಮಿಂಚು' ಎಂಬ ಚಿತ್ರದಲ್ಲಿ ಅರ್ಚನಾ ನಟಿಸಿದ್ದರು. ಚಿತ್ರ ಗೆಲ್ಲದಿದ್ದರೂ ಅವರ ನಟನೆಗೆ ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು. ರೀಮೇಕ್ ಚಿತ್ರವಾಗಿದ್ದ ಇದರಲ್ಲಿ ನೆಗೆಟಿವ್ ಛಾಯೆಯ ಪಾತ್ರದ ಕನ್ನಡಿಯಲ್ಲಿ ತಮ್ಮನ್ನು ನೋಡಿಕೊಳ್ಳುವ ಹಂಬಲಕ್ಕಾಗಿಯಷ್ಟೇ ಅವರು ನಟಿಸಿದ್ದು.ಈಗ ಸುಮಾರು ನಾಲ್ಕು ವರ್ಷದ ನಂತರ ಅರ್ಚನಾ ಕನ್ನಡದಲ್ಲಿ ಬಣ್ಣಹಚ್ಚುತ್ತಿರುವ `ಮೈತ್ರಿ'ಯ ಪಾತ್ರವೂ ಅಷ್ಟೇ ಪ್ರಬುದ್ಧತೆಯಿಂದ ಕೂಡಿದೆ. ಆ ಛಾಯೆ ಈ ಚಿತ್ರದಲ್ಲಿಯೂ ಇದೆ. ಕಥೆಯೂ ವಾಸ್ತವಿಕತೆಯಿಂದ ಕೂಡಿದೆ. ನಾಟಕೀಯ ಸನ್ನಿವೇಶಗಳು ಮೋಹನ್‌ಲಾಲ್ ಬದುಕಿನ ಮೇಲೆ ಪರಿಣಾಮ ಬೀರಿದಾಗ ಅವರಿಗೆ ಬೆಂಬಲವಾಗಿ ನಿಂತು ಸ್ಥೈರ್ಯ ತುಂಬುವ ಪಾತ್ರ ಅವರದು. ಈ ಚಿತ್ರದಲ್ಲಿ ಅವರ ಜೊತೆ ನಾಯಕಿಯ ಸ್ಥಾನವನ್ನು ಭಾವನಾ ಮೆನನ್ ಹಂಚಿಕೊಂಡಿದ್ದಾರೆ.

ಚಿಕ್ಕ ಪಾತ್ರವಾದರೂ ಕಥೆಯಲ್ಲಿ ಪ್ರಾಮುಖ್ಯ ಹೊಂದಿರುವ ಪಾತ್ರ. ಇದೊಂದು ಹೃದಯ ಸ್ಪರ್ಶಿ, ಸಂದೇಶ ಸಾರುವ ಕಥೆ ಎಂದು ಅವರು ವಿವರಿಸುತ್ತಾರೆ. ಮರಳಿ ಕನ್ನಡದ ಬೆಳ್ಳಿಪರದೆ ಮೇಲೆ ಕಾಣಿಸಿಕೊಳ್ಳಲು ಇದಕ್ಕಿಂತ ಉತ್ತಮ ವೇದಿಕೆ ಸಿಗಲಾರದು ಎಂಬ ಭಾವನೆ ಅವರದು. ಚಿತ್ರ ದೊಡ್ಡ ಯಶಸ್ಸು ಪಡೆಯುತ್ತದೆ. ತಮಗೆ ಇಲ್ಲಿ ಅವಕಾಶಗಳ ಬಾಗಿಲು ತೆರೆಯುತ್ತದೆ ಎನ್ನುವ ಭರವಸೆ ಅವರಲ್ಲಿದೆ. `ನನಗೆ ಮೃದು ಸ್ವಭಾವದ ಹುಡುಗಿಯ ಪಾತ್ರ ಸಾಕು. ವಿಭಿನ್ನ ಪಾತ್ರಗಳು ಸಿಗಲಿ' ಎಂದು ನಗುತ್ತಾ ನುಡಿಯುತ್ತಾರೆ ಅರ್ಚನಾ.ಮೋಹನ್‌ಲಾಲ್ ಜೊತೆಗೆ ನಟಿಸಿದ ಮೊದಲ ಅನುಭವ ಅವರಿಗೆ ರೋಮಾಂಚನ ಉಂಟುಮಾಡಿದೆ. ಭಾರತೀಯ ಚಿತ್ರರಂಗದ ಸ್ಟಾರ್‌ಗಳಲ್ಲಿ ಒಬ್ಬರಾದರೂ ಕಿಂಚಿತ್ತೂ ಅಹಂ ಇಲ್ಲದೆ ಎಲ್ಲರೊಳಗೆ ಒಂದಾಗುವ ಮೋಹನ್‌ಲಾಲ್ ವ್ಯಕ್ತಿತ್ವ ಅವರನ್ನು ಸೆಳೆದಿದೆ. ಸ್ಟಾರ್‌ಗಿರಿ ಮರೆತು ನಿರ್ದೇಶಕರಿಗೆ ಸಹಾಯ ಮಾಡುವ ಅವರ ಗುಣದಿಂದ ಅರ್ಚನಾ ಪಾಠ ಕಲಿತಿದ್ದಾರಂತೆ. ಮೋಹನ್‌ಲಾಲ್ ಜೊತೆಗೆ ಅಭಿನಯಿಸಿರುವುದು, ಮುಂದೆ ಮಲಯಾಳಂ ಚಿತ್ರರಂಗದಲ್ಲಿಯೂ ತಮ್ಮನ್ನು ಗುರುತಿಸಲು ನೆರವಾಗುತ್ತದೆ ಎಂಬ ವಿಶ್ವಾಸ ಅವರದು.ನಿರ್ದೇಶಕ ಗಿರಿಧರ್ ಕುರಿತು ಅರ್ಚನಾ ಮೆಚ್ಚುಗೆ ಮಾತುಗಳನ್ನಾಡುತ್ತಾರೆ. ಪ್ರತಿ ಸನ್ನಿವೇಶವನ್ನೂ ಹೀಗೆಯೇ ಸೆರೆಹಿಡಿಯಬೇಕು ಎಂಬ ಸ್ಪಷ್ಟ ಕಲ್ಪನೆ ಹೊಂದಿರುವ ಗಿರಿಧರ್ ಬದ್ಧತೆ ಅವರಿಗೆ ಖುಷಿ ನೀಡಿದೆ. ಪ್ರತಿ ಸನ್ನಿವೇಶವನ್ನೂ ಅವರು ಎಳೆಎಳೆಯಾಗಿ ವಿವರಿಸುವ ಪರಿ ಇಷ್ಟವಾಗಿದೆ. ರಂಗಭೂಮಿ ಹಿನ್ನೆಲೆಯಿಂದ ಬಂದವರು ಮಾನಸಿಕವಾಗಿ ಹೆಚ್ಚು ಸದೃಢರಾಗಿರುತ್ತಾರೆ. ಅವರಲ್ಲಿ ತಮ್ಮ ಕೆಲಸಗಳ ಬಗ್ಗೆ ನಿಖರತೆ ಇರುತ್ತದೆ ಎಂದು ಗಿರಿಧರ್ ಅವರನ್ನು ಉದಾಹರಿಸಿ ಹೇಳುತ್ತಾರೆ ಅವರು.ತೆಲುಗು ಮಾತೃಭಾಷೆಯಾದರೂ ಅರ್ಚನಾರ ಪೋಷಕರಿಗೆ ಕನ್ನಡದ ನಂಟಿದೆ. ಹೀಗಾಗಿ ಮಾತನಾಡಲು ಬಾರದಿದ್ದರೂ ಭಾಷೆಯನ್ನು ಗ್ರಹಿಸುವ ಸಾಮರ್ಥ್ಯ ಅವರಿಗಿದೆ. ಗ್ಲಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಂಡರೂ ತಾವು ಗ್ಲಾಮರ್ ಗೊಂಬೆಯಾಗಲಾರೆ ಎನ್ನುವ ನೀತಿ ಅವರದು. ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಅಭಿನಯ ಪ್ರತಿಭೆಯಿಂದಲೇ ಅವರು ಹೆಸರು ಮಾಡಿದವರು. ಅಭಿನಯದ ವಿಷಯದಲ್ಲಿ ನೆಚ್ಚಿನ ನಟಿ ಶ್ರೀದೇವಿ ಅವರನ್ನು ಹಿಂಬಾಲಿಸುವ ಇರಾದೆ.

ಒಂದು ಬಗೆಯ ಪಾತ್ರಕ್ಕೆ ಸೀಮಿತವಾಗದೆ ವೈವಿಧ್ಯಮಯ ಪಾತ್ರಗಳಿಂದ ಗಮನ ಸೆಳೆದ ಏಕೈಕ ನಟಿ ಶ್ರೀದೇವಿ. ಆಕೆಯ ಸಾಧನೆಯ ಶೇ 10ರಷ್ಟು ಸಾಧನೆಯನ್ನಾದರೂ ವೃತ್ತಿ ಜೀವನದಲ್ಲಿ ಮಾಡಬೇಕು ಎಂದು ಹೇಳಿಕೊಳ್ಳುತ್ತಾರೆ ಅರ್ಚನಾ. ಎರಡನೇ ವಯಸ್ಸಿಗೇ ಕೂಚಿಪುಡಿ ನೃತ್ಯ ಕಲಿಕೆ ಆರಂಭಿಸಿದ ಅರ್ಚನಾರಿಗೆ ನೃತ್ಯ ಪ್ರಧಾನ ಸಿನಿಮಾದಲ್ಲಿ ನಟಿಸುವ ಬಯಕೆ.ನಾನು ಎಂದಿಗೂ ಅವಕಾಶಗಳನ್ನು ಹುಡುಕಿಕೊಂಡು ಹೋದವಳಲ್ಲ, ಅವು ತಾನಾಗಿಯೇ ನನ್ನ ಬಳಿ ಬಂದದ್ದು ಎನ್ನುವ ಅರ್ಚನಾ, ತೆಲುಗು ಮತ್ತು ತಮಿಳಿನಲ್ಲಿ ನಟಿಸಿದ ಒಟ್ಟು ಆರು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಮುಂದಿನ ತಿಂಗಳು ಮತ್ತೆ ನಾಲ್ಕೈದು ಚಿತ್ರಗಳು ಸೆಟ್ಟೇರಲಿವೆ. ಹೀಗೆ ಬಿಡುವಿಲ್ಲದೆ ಬಿಜಿಯಾಗಿರುವ ಅರ್ಚನಾರಿಗೆ ಕನ್ನಡ ಚಿತ್ರರಂಗದಿಂದ ಇಷ್ಟು ಕಾಲ ಯಾಕೆ ಕರೆ ಬಂದಿರಲಿಲ್ಲ ಎಂಬ ಪ್ರಶ್ನೆ ಈಗಲೂ ಕಾಡುತ್ತಿದೆಯಂತೆ. ಉತ್ತರ ಸಿಗದಿದ್ದರೂ ತೊಂದರೆಯಿಲ್ಲ, `ಆ ದಿನಗಳು', `ಮೈತ್ರಿ'ಯಂಥ ಉತ್ತಮ ಕಥೆಗಳ ಚಿತ್ರಗಳಲ್ಲಿ ಅವಕಾಶ ಮತ್ತೆ ಮತ್ತೆ ಸಿಗಲಿ ಎಂಬ ಆಶಯ ಅವರದು.

-ಅಮಿತ್ ಎಂ.ಎಸ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry