ಮಂಗಳವಾರ, ಮೇ 11, 2021
21 °C

ಅರ್ಜಿ ಸಲ್ಲಿಕೆ ಮುನ್ನವೇ ವಿಲೇವಾರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇವನಹಳ್ಳಿ ತಾಲ್ಲೂಕು ಕಚೇರಿಯ ಅಧಿಕಾರಿಗಳು ಮೂವರು ಅಂಗವಿಕಲರ ಮಾಸಿಕ ಪಿಂಚಣಿ ಅರ್ಜಿಯನ್ನು ಅದು ಸಲ್ಲಿಕೆಯಾಗುವ ಮುನ್ನವೇ ವಿಲೇವಾರಿ ಮಾಡಿದ್ದಾರೆ!ಇನ್ನೊಂದು ಪ್ರಕರಣದಲ್ಲಿ, ಪಿಂಚಣಿ ಅರ್ಜಿಯೊಂದರ ತಿರಸ್ಕಾರಕ್ಕೆ ಕಾರಣವನ್ನು 2010ರ ಫೆಬ್ರುವರಿ 29ರಂದು ಲಿಖಿತ ರೂಪದಲ್ಲಿ ನೀಡಿದ್ದಾರೆ!! (ಆ ವರ್ಷ ಫೆಬ್ರುವರಿಯಲ್ಲಿ 28 ದಿನಗಳು ಮಾತ್ರ ಇದ್ದವು.)

ಇಷ್ಟೇ ಅಲ್ಲ, 2011ರ ಜನವರಿ 30ರಂದು (ಭಾನುವಾರ) ಒಂಬತ್ತು ಅರ್ಜಿಗಳನ್ನು ಇದೇ ಕಚೇರಿಯ ಸಿಬ್ಬಂದಿ ಸ್ವೀಕರಿಸಿದ್ದಾರೆ. 2010ರ ಮೇ 1 (ಕಾರ್ಮಿಕರ ದಿನ), ಸೆಪ್ಟೆಂಬರ್ 10 (ರಂಜಾನ್) ಮತ್ತು ನವೆಂಬರ್ 1 ರಂದು ( ರಾಜ್ಯೋತ್ಸವ) ಇದೇ ಸಿಬ್ಬಂದಿ ಕಡತಗಳನ್ನು ವಿಲೇವಾರಿ ಮಾಡಿದ್ದಾರೆ!!ಮಾಹಿತಿ ಹಕ್ಕು ಕಾಯ್ದೆಯಡಿ ಕೆಲವು ಪ್ರಶ್ನೆಗಳನ್ನು ಕೇಳಿದ್ದ ಅರ್ಜಿದಾರರೊಬ್ಬರಿಗೆ, ಕಾಯ್ದೆಯನ್ನೇ ಅಣಕಿಸುವಂತೆ, ಈ ಮೇಲಿನ `ಬೇಜವಾಬ್ದಾರಿ~ ಉತ್ತರಗಳನ್ನು ನೀಡಲಾಗಿದೆ.`ಆರ್‌ಟಿಐ~ ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ದೊರೆತಿರುವ ಉತ್ತರದ ಪ್ರತಿ `ಪ್ರಜಾವಾಣಿ~ಗೆ ಲಭ್ಯವಾಗಿದೆ. ಇಲ್ಲಿರುವ ಮಾಹಿತಿಯ ಪ್ರಕಾರ, ಮೂವರು ಅಂಗವಿಕಲರು ಮಾಸಿಕ ಪಿಂಚಣಿಗೆ ಅರ್ಜಿ ಸಲ್ಲಿಸಿದ್ದು 2010ರ ಜುಲೈ 6 (ಎರಡು ಅರ್ಜಿಗಳು) ಮತ್ತು ಜುಲೈ 12ರಂದು (ಒಂದು ಅರ್ಜಿ). ಆದರೆ, ಕಚೇರಿಯ ಸಿಬ್ಬಂದಿ, ಈ ಮೂರು ಅರ್ಜಿಗಳನ್ನು ಜುಲೈ 1ರಂದೇ ವಿಲೇವಾರಿ ಮಾಡಲಾಗಿದೆ ಎಂದು ಉತ್ತರ ನೀಡಿದ್ದಾರೆ.

ಅರ್ಜಿಯೊಂದನ್ನು 2010ರ ಫೆ. 29ರಂದು ತಿರಸ್ಕರಿಸಲಾಗಿದೆ ಎಂದು ಉತ್ತರದಲ್ಲಿ ಹೇಳಲಾಗಿದೆ. ಆದರೆ, ಆ ವರ್ಷ ಫೆಬ್ರುವರಿಯಲ್ಲಿ 29ನೇ ತಾರೀಖು ಬಂದೇ ಇಲ್ಲ!ನಿಯಮಗಳ ಅನುಸಾರ, ಅಂಗವಿಕಲರ ಮಾಸಿಕ ಪಿಂಚಣಿ ಅರ್ಜಿಯನ್ನು ತಾಲ್ಲೂಕು ಕಚೇರಿಯಲ್ಲಿ ಸಲ್ಲಿಸಬೇಕು. ಅರ್ಜಿಗೆ ಪೂರಕವಾಗಿ ಸಂಬಂಧಪಟ್ಟ ಕಂದಾಯ ಅಧಿಕಾರಿ ಮತ್ತು ತಹಶೀಲ್ದಾರ್‌ರಿಂದ ದೈಹಿಕ ಪರಿಶೀಲನಾ ಪತ್ರ ಪಡೆಯಲಾಗುತ್ತದೆ. ಆದರೆ, ತಾಲ್ಲೂಕು ಕಚೇರಿ ನೀಡಿರುವ ಉತ್ತರದಲ್ಲಿರುವಂತೆ ಪಿಂಚಣಿ ಕೋರಿ ಸಲ್ಲಿಸಿದ್ದ ಏಳು ಅರ್ಜಿಗಳನ್ನು ಒಂದೇ ದಿನದಲ್ಲಿ ವಿಲೇವಾರಿ ಮಾಡಲಾಗಿದೆ.2010ರ ಜನವರಿ 1 ಮತ್ತು 2011ರ ಸೆಪ್ಟೆಂಬರ್ 15ರ ನಡುವೆ ಒಟ್ಟು 280 ಅರ್ಜಿಗಳನ್ನು ಸ್ವೀಕರಿಸಿರುವ ತಾಲ್ಲೂಕು ಕಚೇರಿ, ಉಳಿದ ಅರ್ಜಿಗಳನ್ನು ವಿಲೇವಾರಿ ಮಾಡುವಲ್ಲಿ ಇದೇ ಉತ್ಸುಕತೆ ಪ್ರದರ್ಶಿಸಿಲ್ಲ. ಇದು ಸಿಬ್ಬಂದಿಯ ಕುರಿತು ಅನುಮಾನ ಹುಟ್ಟಿಸುತ್ತದೆ.ಅಲ್ಲದೆ, ಈ ಕಚೇರಿಯ ಸಿಬ್ಬಂದಿ ಒಟ್ಟು ಒಂಬತ್ತು ಭಾನುವಾರ (2010ರ ಏಪ್ರಿಲ್ 25, ಮೇ 9, ಜೂನ್ 6 ಹಾಗೂ 20, ಜುಲೈ 4, ಆಗಸ್ಟ್ 1, ಡಿಸೆಂಬರ್ 12, 2011ರ ಫೆಬ್ರುವರಿ 13 ಮತ್ತು 20) ಕೆಲಸ ಮಾಡಿದ್ದಾರೆ ಎಂದು ಉತ್ತರದಲ್ಲಿ ಹೇಳಲಾಗಿದೆ.  ಎರಡನೆಯ ಶನಿವಾರ ಕೂಡ ಇವರು ಕೆಲಸ ಮಾಡಿದ್ದಾರೆ!

ಒಂದು ಪ್ರಕರಣದಲ್ಲಿ 2011ರ ಜನವರಿ 30ರಂದು (ಭಾನುವಾರ) ಅರ್ಜಿ ಸ್ವೀಕರಿಸಿದ ಕಚೇರಿ, ಅದೇ ವರ್ಷದ ಫೆಬ್ರುವರಿ 13ರಂದು (ಭಾನುವಾರ) ವಿಲೇವಾರಿ ಮಾಡಿದೆ.2011ರ ಸೆಪ್ಟೆಂಬರ್ 21ರಂದು ಸಲ್ಲಿಸಿದ್ದ ಅರ್ಜಿಯಲ್ಲಿ ಅಂಗವಿಕಲರಿಗೆ ನೀಡುವ ಮಾಸಿಕ ಪಿಂಚಣಿ ಕೋರಿ ದೇವನಹಳ್ಳಿ ತಾಲ್ಲೂಕಿನಲ್ಲಿ ಎಷ್ಟು ಅರ್ಜಿಗಳು ಬಂದಿವೆ ಎಂಬ ಕುರಿತು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.

ಇದಾದ ಒಂದು ತಿಂಗಳ ನಂತರ ಪ್ರಮುಖ ಪ್ರಶ್ನೆಗಳಿಗೆ ಉತ್ತರವೇ ಇಲ್ಲದ ಪ್ರತಿಕ್ರಿಯೆ ತಾಲ್ಲೂಕು ಕಚೇರಿಯಿಂದ ಅರ್ಜಿದಾರರಿಗೆ ಬಂತು.2011ರ ಅಕ್ಟೋಬರ್ 21ರಂದು ನೀಡಿರುವ ಉತ್ತರದಲ್ಲಿ, ಮಾಸಿಕ ಪಿಂಚಣಿಗೆ ಸರ್ಕಾರ ಅನುದಾನ ನೀಡಿದೆ, ತಾಲ್ಲೂಕು ಕಚೇರಿಗೆ ಈ ಸಂಬಂಧ ಬಂದಿದ್ದ 280 ಅರ್ಜಿಗಳ ಪೈಕಿ 229 ಅರ್ಜಿಗಳನ್ನು ಮಾನ್ಯ ಮಾಡಲಾಗಿದೆ. 15 ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, 36 ಅರ್ಜಿಗಳು ಪರಿಶೀಲನೆಯಲ್ಲಿವೆ ಎಂದು ಹೇಳಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.