ಶುಕ್ರವಾರ, ಮೇ 7, 2021
20 °C

ಅರ್ಜುನನ ರೂಪಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಧುನಿಕ ಮಹಾಭಾರತದಲ್ಲಿ ಅರ್ಜುನನ ಪಾತ್ರ ಬದಲಾಗಿದೆ. ಆತನೇ ಅಭಿಮನ್ಯುವಾಗಿ ರೂಪಾಂತರ ಹೊಂದುತ್ತಿದ್ದಾನೆ. ಈ ಕಲಿಯುಗದಲ್ಲೂ ಅಭಿಮನ್ಯು ಚಕ್ರವ್ಯೂಹ ನುಸುಳಲಿದ್ದಾನೆ. ಒಂದು ಬದಲಾವಣೆ. ಚಕ್ರವ್ಯೂಹ ಹೊಕ್ಕ ಅಭಿಮನ್ಯು ಅದನ್ನು ಭೇದಿಸಿ ಜಯಿಸುತ್ತಾನೆ.ನಟ ಅರ್ಜುನ್ ಸರ್ಜಾ ಮತ್ತೆ ಕನ್ನಡಕ್ಕೆ ಮರಳಿದ್ದಾರೆ. `ಅಭಿಮನ್ಯು' ಆಗಿ ಕಾಣಿಸಿಕೊಳ್ಳುತ್ತಿರುವ ಅವರದು ಸಿನಿಮಾದಲ್ಲಿ ತ್ರಿಪಾತ್ರ. ಕ್ಯಾಮೆರಾ ಮುಂದೆ ನಟನಾಗಿ. ಕ್ಯಾಮೆರಾ ಹಿಂದೆ ನಿರ್ಮಾಪಕ ಮತ್ತು ನಿರ್ದೇಶಕನಾಗಿ. ಕನ್ನಡದಲ್ಲಿ ಅವರು ನಿರ್ದೇಶಿಸುತ್ತಿರುವ ಮೊದಲ ಚಿತ್ರವಿದು. ಕನ್ನಡದಲ್ಲಿ ಸಿನಿಮಾ ನಿರ್ದೇಶಿಸಬೇಕೆಂಬುದು ಹಲವು ವರ್ಷಗಳ ಕನಸು. ಅದಕ್ಕಾಗಿ ಗುಣಮಟ್ಟದ ಕಥೆಗಾಗಿ ಹುಡುಕಾಡುತ್ತಿದ್ದ ಅವರಿಗೆ ಕಂಡಿದ್ದು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ನಿಯತಕಾಲಿಕೆಯೊಂದರಲ್ಲಿ ಬರೆದಿದ್ದ ಶಿಕ್ಷಣ ಕುರಿತ ಲೇಖನ.ಚಿತ್ರದಲ್ಲಿ ಚಕ್ರವ್ಯೂಹವಾಗಿರುವುದು ಇದೇ ಶಿಕ್ಷಣ ವ್ಯವಸ್ಥೆ. ಇಲ್ಲಿ ಅವರು ಓದಿದ ಲೇಖನವಷ್ಟೇ ಕಥಾವಸ್ತುವಾಗಿಲ್ಲ. ಭಾರತದ ಇಡೀ ಶಿಕ್ಷಣ ಪದ್ಧತಿಯನ್ನು ಅವರು ಅಧ್ಯಯನ ಮಾಡಿದ್ದಾರಂತೆ. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಸುಮಾರು ಶೇ 75ರಷ್ಟು ಮಕ್ಕಳನ್ನು ಅವರು ಪ್ರತಿನಿಧಿಸಲಿದ್ದಾರಂತೆ. ಸಾಮಾನ್ಯ ಮನುಷ್ಯನೊಬ್ಬನ ಕೋಪ, ನೋವುಗಳು ಸಿನಿಮಾ ವಸ್ತುವಾಗಿದೆ ಎಂದರು ಅರ್ಜುನ್.ಮೊದಲ ಚಿತ್ರದ ಪ್ರಥಮ ಸುದ್ದಿಗೋಷ್ಠಿಯಲ್ಲಿ ಅರ್ಜುನ್ ಸರ್ಜಾ ಜೊತೆಗಿದ್ದವರು ರವಿಚಂದ್ರನ್. ಇಬ್ಬರೂ ಬಾಲ್ಯ ಸ್ನೇಹಿತರು. ಅರ್ಜುನ್ ಅವರನ್ನು ಮೊದಲು ತಮಿಳುನಾಡಿಗೆ ಕರೆದೊಯ್ದದ್ದೇ ರವಿಚಂದ್ರನ್. `ಆದರೆ ನನ್ನನ್ನು ಇಲ್ಲಿ ಬಿಟ್ಟು ಅವನು ಮಾತ್ರ ಅಲ್ಲೇ ಸೇರಿಕೊಂಡ' ಎಂದು ಚಟಾಕಿ ಹಾರಿಸಿದರು ರವಿಚಂದ್ರನ್. ಈ ಚಿತ್ರಕ್ಕೂ ರವಿಚಂದ್ರನ್ ಅವರಿಗೂ ಹಳೆಯ ನಂಟು. `ಅಭಿಮನ್ಯು' ಮತ್ತು `ಚಕ್ರವ್ಯೆಹ' ಎಂಬ ಚಿತ್ರಗಳು ಹಿಂದೆ ಅವರದೇ ನಿರ್ಮಾಣದಲ್ಲಿ ಹೊರಬಂದಿದ್ದವು.`ನನ್ನನ್ನು ಯಾವ ಮುಲಾಜಿಲ್ಲದೆ ಏಕವಚನದಲ್ಲಿ ಕರೆಯುವುದು ಇಬ್ಬರೇ. ಒಬ್ಬರು ಅರ್ಜುನ್ ಸರ್ಜಾ, ಮತ್ತೊಬ್ಬರು ಬ್ರಹ್ಮಾಂಡ ಗುರೂಜಿ' ಎಂದು ನಕ್ಕರು ರವಿಚಂದ್ರನ್.ಕನ್ನಡವಲ್ಲದೆ ಈ ಚಿತ್ರ ತಮಿಳು ಮತ್ತು ತೆಲುಗಿನಲ್ಲಿಯೂ ತಯಾರಾಗಲಿದೆ. ನಾಯಕಿಯರನ್ನು ಹೊರತುಪಡಿಸಿ ಉಳಿದ ಭಾಷೆಗಳಲ್ಲಿ ಕಲಾವಿದರು ಬದಲಾಗಲಿದ್ದಾರೆ. ಆದರೆ ತಾಂತ್ರಿಕ ತಂಡ ಮಾತ್ರ ಹಾಗೆಯೇ ಉಳಿಯಲಿದೆ. ಈ ಮೂಲಕ ಛಾಯಾಗ್ರಾಹಕ ವೇಣು ಮತ್ತು ಸಂಗೀತ ನಿರ್ದೇಶಕ ಹರಿಕೃಷ್ಣ ಅನ್ಯಭಾಷೆಗೂ ಕಾಲಿಡುವ ಅವಕಾಶ ಪಡೆದಂತಾಗಿದೆ.ಪಂಜಾಬಿ ಬೆಡಗಿ ಸುರ್ವಿನ್ ಚಾವ್ಲಾ ಮತ್ತು ಮುಂಬೈನ ಶಾರ್ಲೆಟ್ ಕ್ಲೇರ್ ನಾಯಕಿಯರು. ಸುರ್ವಿನ್ ಕನ್ನಡದ `ಪರಮೇಶಿ ಪಾನ್‌ವಾಲಾ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದವರು. ಕ್ಲೇರ್‌ಗೆ ಇದು ಮೊದಲ ಚಿತ್ರ.

ಕಿರುತೆರೆಯಲ್ಲಿ ನಗು ಹರಿಸುತ್ತಿರುವ ಜಹಾಂಗೀರ್ ಬೆಳ್ಳಿತೆರೆಯಲ್ಲಿಯೂ ಅದೇ ಕಾರ್ಯ ಮುಂದುವರಿಸಲಿದ್ದಾರೆ.ಕಲಾನಿರ್ದೇಶಕ ಶಶಿಧರ ಅಡಪ, ಶಾಸಕ ಅಶೋಕ್ ಖೇಣಿ, ನಟರಾದ ಧ್ರುವ ಸರ್ಜಾ ಮತ್ತು ಚಿರಂಜೀವಿ ಸರ್ಜಾ `ಅಭಿಮನ್ಯು'ವಿನ ಸುತ್ತ ಮಾತು ಹರಿಸಿದರು. ಅಂದಹಾಗೆ, ಅರ್ಜುನ್ ಸರ್ಜಾ ಈ ಚಿತ್ರವನ್ನು ಅಬ್ದುಲ್ ಕಲಾಂ ಮತ್ತು ಭಾರತೀಯ ಪತ್ರಿಕೋದ್ಯಮಕ್ಕೆ ಅರ್ಪಿಸುತ್ತಾರಂತೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.