ಅರ್ಥ ಮೀರುವ ರೇಖೆಗಳು

7

ಅರ್ಥ ಮೀರುವ ರೇಖೆಗಳು

Published:
Updated:

ನಕ್ಷತ್ರ ಕನ್ನಿಕೆ ಹಿಡಿದಿರುವ ಮಿಂಚು ಕೋಲಲ್ಲಿ 5,00,000 ವೋಲ್ಟ್ಸ್ ವಿದ್ಯುತ್ ಅಪಾಯದ ಎಚ್ಚರ...ಸ್ಯಾಂಡ್‌ವಿಚ್‌ನ ಒಳಗೆ ಬ್ಲೇಡುಗಳ ಕಂತೆ...

ಬೂಮ್ ಬೂಮ್ `ಮಾ~ಡು; ಬೂಮ್ ಬೂಮ್ `ಮಾ~ಡಬೇಡ~ ಎನ್ನುವ ಕೋಲೆ ಬಸವನ ಮಾತಿನಲ್ಲಿ ಇಂಗ್ಲಿಷ್, ತಮಿಳು, ಕನ್ನಡಗಳ ಕಲಸುಮೇಲೋಗರ...ಮೊದಲು ಮೀನಾಗಿ, ನಂತರ ಮನುಷ್ಯನಾಗಿ, ಆನಂತರ ಕಪ್ಪೆಯಾಗಿ ಉಭಯವಾಸಿಯಾಗುವ ಪಿ.ವಿ.ನರಸಿಂಹರಾವ್ ಚಿತ್ರದ ಕೆಳಗೆ `ಮೋರ್ ನೆಕ್ಟ್ಸ್ ಟೈಮ್~ ಎಂಬ ಮುಂದಿನ ಅವತಾರದ ಬಗೆಗಿನ ಕುತೂಹಲ...

ಬದುಕಿನ ಜಂಜಡಗಳ ವೃತ್ತದೊಳಗೇ ತಿರುಗುವ ಮನುಷ್ಯನ ಲೈಫ್ ಸರ್ಕಲ್‌ನೊಳಗೇ `ಅಂಡ್ ಅದರ್ ಥಿಂಗ್ಸ್~...ಇದನ್ನೆಲ್ಲ ಬರೆಯಲು ಬೇಕಾದ ಇಂಕಿಗಾಗಿ ತಾವೇ ತೋಡಿಕೊಂಡ `ಇಂಕಿನ ಬಾವಿ~. ಹಾಳೆಯ ಮೇಲೆಯೇ ಈ ಇಂಕಿನ ಬಾವಿಯನ್ನು ತೋಡಿಕೊಂಡವರು ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್.ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯಲ್ಲಿ ಇದೇ 18ರಿಂದ ಆರಂಭಗೊಂಡಿರುವ ಆರ್.ಕೆ.ಲಕ್ಷ್ಮಣ್ ಅವರ `ಡೂಡೂಸ್ ಡೂಡಲ್ಸ್~ ಪ್ರದರ್ಶನದಲ್ಲಿ ಕಂಡುಬರುವ ಅಪರೂಪದ ಗಂಭೀರ ವ್ಯಂಗ್ಯ ಚಿತ್ರಗಳಿವು. ಆರ್.ಕೆ.ಲಕ್ಷ್ಮಣ್ ಅವರ ಮನೆಯಲ್ಲಿ ಅವರನ್ನು ಪ್ರೀತಿಯಿಂದ ಕರೆಯುತ್ತಿದ್ದ ಅಡ್ಡಹೆಸರು `ಡೂಡೂ~. ಇದೇ ಹೆಸರನ್ನು ಪ್ರದರ್ಶನಕ್ಕೂ ಇಡಲಾಗಿದೆ.1975ರಿಂದ 1991ರವರೆಗೆ ಬರೆದ 74 ಅಪರೂಪದ ಹಾಗೂ ಈವರೆಗೆ ಎಲ್ಲಿಯೂ ಪ್ರದರ್ಶನ ಕಾಣದ ವ್ಯಂಗ್ಯಚಿತ್ರಗಳ ಜೊತೆಗೆ ಇನ್ನುಳಿದ 23 ವ್ಯಂಗ್ಯಚಿತ್ರಗಳೂ ಸೇರಿ ಒಟ್ಟು 97 `ಡೂಡಲ್~ಗಳನ್ನು ಪ್ರದರ್ಶನಕ್ಕಿಡಲಾಗಿದೆ.ಇಲ್ಲಿನ ಒಂದೊಂದು ಚಿತ್ರವೂ ಕೇವಲ ವ್ಯಂಗ್ಯಚಿತ್ರವಾಗಿ ಉಳಿಯದೆ ಅದರಾಚೆಗೂ ಜಿಗಿಯುವಂತೆ ಕಾಣುತ್ತದೆ. ರೇಖೆಗಳು ತಾವು ತೋರುವ ಸತ್ಯದ ಹಿಂದೆ ಸಾವಿರಾರು ಭಾವಗಳನ್ನು ಇಂಚಿಂಚೇ ಬಿಟ್ಟು ಕೊಡುತ್ತವೆ. ಹಾಗೆಂದು ನೋಡ್ದ್ದಿದನ್ನು ಮಾತ್ರ ಸತ್ಯವೆಂದುಕೊಂಡರೆ ಮತ್ತೆ ತೆರೆದುಕೊಳ್ಳುವ ಹೊಸ ಅರ್ಥ, ಹೊಸ ಸತ್ಯ ಕಾಣದೇಹೋದೀತು.

 

ಇದೇ ಡೂಡಲ್ಸ್‌ಗಳ ವಿಶೇಷತೆ. ಇವು ವ್ಯಂಗ್ಯ ಚಿತ್ರಗಳನ್ನು ಮೀರಿ ಬೆಳೆಯುವ ಅನಂತ ಸತ್ಯದ ಒಳದಾರಿಗಳು. ಪ್ರತಿ ರೇಖೆಗೂ ಇಲ್ಲಿ ತನ್ನದೇ ಆದ ಸ್ಥಾನವಿದೆ, ಮಹತ್ವವಿದೆ. ಒಂದು ರೇಖೆಯನ್ನು ತಳಕು ಹಾಕಿಕೊಳ್ಳುವ ಮತ್ತೊಂದು ರೇಖೆ ಅದನ್ನು ಬೆನ್ನತ್ತುವ ಮತ್ತೊಂದು ರೇಖೆ. ಹೀಗೆ ರೇಖೆಗಳೇ ಇಲ್ಲಿನ ಕಾಲ ಮತ್ತು ಅಂತರವನ್ನು ನಿರ್ಧರಿಸುತ್ತವೆ.ಮುಳ್ಳುಗಳಿಲ್ಲದ ಗಡಿಯಾರದಲ್ಲಿ ಬರೆದಿರುವ `ನಾಟ್ ಟೈಮ್~ ಕಲಾಕೃತಿಯ ಅರ್ಥಗರ್ಭವನ್ನು ಮೀರಿ ಬೆಳೆಯುತ್ತದೆ. `ಆಬ್ಸೆನ್ಸ್ ಟ್ರೀ~ ಕೃತಿಯಲ್ಲಿನ ಮರದ ಚಿತ್ರ ಕೇವಲ ರೂಪಕವೋ ಅಥವಾ ಇದು ಹೀಗೇ ಅಂತರ್ಗತವಾಗುವ ಲಕ್ಷಣವೋ ಎಂದು ನೋಡುಗನನ್ನು ಬೆರಗುಗೊಳಿಸುತ್ತದೆ.1977ರ ಶಾ ಕಮಿಷನ್ ಕುರಿತ ವ್ಯಂಗ್ಯಚಿತ್ರ ತುರ್ತು ಪರಿಸ್ಥಿತಿ ಸಂದರ್ಭದ ರಾಜಕೀಯ ಹಿಡಿತವನ್ನು ವಿಡಂಬಿಸುವ ಪರಿ ಗಂಭೀರವಾಗಿದೆ. ಹಾಗೆಯೇ ಮುಳ್ಳಿನ ಮೇಲೆ ನಡೆಯುತ್ತಾ ಸೂರ್ಯನನ್ನೇ ಹಿಡಿಯ ಹೊರಟ ಇಂದಿರಾ ಗಾಂಧಿಯ ಚಿತ್ರ ಆಡಳಿತದ ದುರ್ಬರತೆ ಹಾಗೂ ಅಭದ್ರತೆಯನ್ನು ಸೂಚಿಸುವಂತಿದೆ.ಕೃಷಿಯಲ್ಲಿ ರಾಸಾಯನಿಕಗಳ ಬಳಕೆಯ ಬಗ್ಗೆ ಅವರ ಬಾಳೆಹಣ್ಣು ಮತ್ತು ಸೇಬಿಗೆ ಸೈನೆಡ್ ಇಂಜೆಕ್ಟ್ ಮಾಡುತ್ತಿರುವ ಡೂಡಲ್ ಗಮನ ಸೆಳೆಯುತ್ತದೆ. ಎಲ್ಲರೂ ನಗುತ್ತಿರುವುದನ್ನೇ ನೋಡಿ ನಗುತ್ತಿರುವ ಮನುಷ್ಯನ ಡೂಡಲ್ ನಗುವಿನ ಬಹುಮುಖಗಳನ್ನು ತೆರೆದಿಡುತ್ತದೆ. ಬಿಟ್ಟ ಬಾಣ ತನಗೇ ತಿರುಗಿ ಬರುವ ಪರಿಗೆ ಬೆರಗಾಗುವ ಇಲ್ಲಿನ ಮನುಷ್ಯ ಎಲ್ಲ ಸಾಮ್ರಾಜ್ಯಶಾಹಿಗಳ ಪ್ರತಿನಿಧಿಯಂತೆ ಕಾಣುತ್ತಾನೆ. ಬೆಕ್ಕು ಮತ್ತು ಎಲೆಯ ಚಿತ್ರಗಳಿರುವ ಡೂಡಲ್‌ನಲ್ಲಿಯೂ ಇಂಗ್ಲಿಷ್ ಹಾಗೂ ಕನ್ನಡ ಪದಗಳ ಮೂಲಕ `ಎ~ಲೆ  `ಬೆಕ್ಕೆ~ ಎಂಬ ಪದ ಹಾಗೂ ಚಿತ್ರವನ್ನು ಒಂದು ಮಾಡುವ ಪ್ರಯತ್ನವನ್ನು ಕಾಣಬಹುದು.`ಹೊರನೋಟಕ್ಕೆ ಒಂದು ಅರ್ಥಕ್ಕೆ ಸಿಗುವ ಈ ಚಿತ್ರಗಳ ಮಿತಿ ಇಷ್ಟೇ ಅಲ್ಲ. ಅವು ಒಂದೊಂದು ಕೋನದಿಂದ, ಒಂದೊಂದು ನೋಟದಿಂದ ಬೇರೆ ಬೇರೆಯ ಅರ್ಥ ಸ್ವರೂಪಗಳನ್ನು ಬಿಚ್ಚಿಕೊಳ್ಳುತ್ತಲೇ ಹೋಗುವಂಥವು. ಹೀಗಾಗಿಯೇ ಇವು ಕೇವಲ ಪತ್ರಿಕೆಗಳಿಗಾಗಿ ಬರೆಯುವ ಸಾಮಾನ್ಯ ವ್ಯಂಗ್ಯಚಿತ್ರಗಳಲ್ಲ. ಇವು ಗಂಭೀರ ರೇಖಾ ಚಿತ್ರಗಳು~ ಎಂಬುದು ದಾವಣಗೆರೆಯ ಹಿರಿಯ ವ್ಯಂಗ್ಯ ಚಿತ್ರ ಕಲಾವಿದ ಎಚ್.ಬಿ.ಮಂಜುನಾಥ್ ಅವರ ಮಾತು.`ದೆಹಲಿ ಹಾಗೂ ಮೈಸೂರಿನಲ್ಲಿ ನಮ್ಮ ಮನೆಗೆ ಬಂದಾಗ ಚಿಕ್ಕಪ್ಪ ಮಾಡುತ್ತಿದ್ದ ವ್ಯಂಗ್ಯ ಚಿತ್ರಗಳ ರಚನೆಗಳು ಒಂಡೆದೆ ಉಳಿದುಕೊಂಡಿದ್ದೇ ಅದೃಷ್ಟ. ಅವುಗಳನ್ನು ಈಗ ಪ್ರದರ್ಶನಕ್ಕೆ ಇಡಲಾಗಿದೆ. ಕಾಲದ ಹೊಡೆತಕ್ಕೆ ಸಿಕ್ಕು ಅಳಿದುಹೋಗಬೇಕಿದ್ದ ಇವುಗಳನ್ನು ಪ್ರದರ್ಶಿಸಲು ಮುಂದಾದ ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ ಕಾರ್ಯ ಸ್ತುತ್ಯಾರ್ಹ.ಚಿಕ್ಕಪ್ಪ ಮನೆಗೆ ಬಂದಾಗ ಒಂಟಿಯಾಗಿ ಕುಳಿತು ಇವುಗಳನ್ನು ರಚಿಸುತ್ತಿದ್ದರು. ಆಗ ಏನೋ ಮಾಡುತ್ತಿದ್ದಾರೆ ಎಂದು ನೋಡಿ ಸುಮ್ಮನಾಗುತ್ತಿದ್ದೆವು. ಆದರೆ ಈಗ ಈ ಚಿತ್ರಗಳ್ನು ನೋಡಿದರೆ ಇವು ಎಂತಹ ಅದ್ಭುತ ಹಾಗೂ ಮಹತ್ವದ ಕಲಾಕೃತಿಗಳು ಎಂಬುದು ತಿಳಿಯುತ್ತದೆ. ಅಪ್ಪನ ಸಾವಿನ ನಂತರ ಡೂಡಲ್ಸ್ ಬರೆಯುವುದಿಲ್ಲ ಎಂಬ ಚಿಕ್ಕಪ್ಪ ಆ ಮಾತನ್ನು ಮುರಿದಿಲ್ಲ~ ಎಂದು ತಮ್ಮ ನೆನಪಿನ ಪುಟಗಳನ್ನು ತಿರುವಿ ಹಾಕಿದವರು ಆರ್.ಕೆ.ಲಕ್ಷ್ಮಣ್ ಅಣ್ಣನ (ಆರ್.ಕೆ.ಶ್ರೀನಿವಾಸ್) ಮಗ ಹಾಗೂ ಈ ಡೂಡಲ್ಸ್‌ಗಳ ಸಂಗ್ರಹಕಾರ ಆರ್.ಎಸ್.ಕೃಷ್ಣಸ್ವಾಮಿ.ಅರ್ಥಕ್ಕೆ ಮೀರುವ ಈ ಡೂಡಲ್‌ಗಳನ್ನು ನೋಡಿ ನಿಮ್ಮ ನೋಟವನ್ನೂ ವಿಸ್ತಾರ ಮಾಡಿಕೊಳ್ಳಬೇಕೆಂದಿದ್ದರೆ ಮಹಾತ್ಮಾ ಗಾಂಧಿ ರಸ್ತೆಯ ಟ್ರಿನಿಟಿ ವೃತ್ತದ ಬಳಿಯ ಮಿಡ್‌ಫೋರ್ಡ್ ಹೌಸ್‌ಗೆ ಭೇಟಿ ನೀಡಿ. ಮಾರ್ಚ್ 10ರವರೆಗೆ ಚಿತ್ರಗಳು ನಿಮಗಾಗಿ ಕಾಯುತ್ತಿರುತ್ತವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry