ಮಂಗಳವಾರ, ಮೇ 18, 2021
24 °C

ಅರ್ಧಕ್ಕೆ ನಿಂತ ಅಭಿವೃದ್ಧಿ ಕಾರ್ಯಗಳು

ರಾಹುಲ ಬೆಳಗಲಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: `ಕೆಲವೇ ದಿನಗಳಲ್ಲಿ ಜಿಲ್ಲೆಯ ಚಿತ್ರಣವೇ ಬದಲಾಗಲಿದೆ. ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲೇ ಇರುವ ಜಿಲ್ಲೆಯು ಯಾವುದೇ ಕಾರಣಕ್ಕೂ ಹಿಂದುಳಿಯಬಾರದು. ಚಿಕ್ಕಬಳ್ಳಾಪುರವನ್ನು ಅತ್ಯಾಧುನಿಕ ಸೌಕರ್ಯಗಳಿಂದ ಕೂಡಿದ ನಗರವನ್ನಾಗಿ ಮಾಡುವುದಲ್ಲದೇ ಇಡೀ ಜಿಲ್ಲೆಗೆ ಹೊಸ ರೂಪ ನೀಡಲಾಗುವುದು~.ಕೆಲ ತಿಂಗಳುಗಳ ಹಿಂದೆ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅವರು ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೀಗೆ ಭರವಸೆಯ ಮಾತುಗಳನ್ನು ಆಡಿದಾಗ, ಇಲ್ಲಿನ ಜನರಲ್ಲಿ ಆಶಾಕಿರಣ ಮೂಡಿತ್ತು. ನಂತರದ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಶೋಭಾ ಕರಂದ್ಲಾಜೆಯವರು ಭರವಸೆಗಳನ್ನು ಈಡೇರಿಸುವುದಾಗಿ ಮಾತು ನೀಡಿದಾಗ, ಆಶಯಕ್ಕೆ ಭಂಗ ಬಾರದು ಎಂಬ ಹಲವರು ಭಾವಿಸಿದ್ದರು.ಇತ್ತೀಚೆಗಷ್ಟೇ ಎ.ನಾರಾಯಣ ಸ್ವಾಮಿಯವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡಾ ಗಲೂ ಜನರಲ್ಲಿನ ಆಶಾಭಾವನೆ ಕಮರರಿಲಿಲ್ಲ. ಆದರೆ ಜಿಲ್ಲೆಯಲ್ಲಿನ ಅಭಿವೃದ್ಧಿ ಕಾರ್ಯಗಳು ವಿಳಂಬವಾಗುತ್ತಿರುವುದು ಮತ್ತು ಕೆಲ ಕಾಮಗಾರಿಗಳಿಗೆ ಚಾಲನೆ ಸಿಗದಿರುವುದು ಕಂಡು ಜನರಲ್ಲಿ ಅದರಲ್ಲೂ ಅಭಿವೃದ್ದಿಗಾಗಿ ಹೋರಾಡುತ್ತಿರುವ ಸಂಘ ಸಂಸ್ಥೆಗಳ ಪ್ರತಿನಿಧಿಗಳಲ್ಲಿ ನಿರಾಸೆ ಮೂಡುತ್ತಿದೆ.ಕೇಂದ್ರ ಸರ್ಕಾರದಲ್ಲಿ ಕ್ಷೇತ್ರವನ್ನು ಪ್ರತಿನಿಧಿಸುವ ಇಬ್ಬರು ಪ್ರಭಾವಿ ಸಚಿವರಿದ್ದರೂ ಚಿಕ್ಕಬಳ್ಳಾಪುರ ರೈಲು ನಿಲ್ದಾಣಕ್ಕೆ ಪೂರ್ಣಪ್ರಮಾಣದ ಕಾಯಕಲ್ಪ ದೊರಕಿಲ್ಲ ಎಂಬ ಕೊರಗು ರೈಲ್ವೆ ಹೋರಾಟ ಸಮಿತಿ ಸದಸ್ಯರಲ್ಲಿದ್ದರೆ, ರೇಷ್ಮೆ ಉದ್ಯಮದ ರಕ್ಷಣೆಗಾಗಿ ರಾಜ್ಯಮಟ್ಟದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಿದರೂ ಸಚಿವರಿಂದ ಅಥವಾ ಸರ್ಕಾರದಿಂದ ನ್ಯಾಯ ಸಿಗಲಿಲ್ಲ ಎಂಬ ಬೇಸರ ರೇಷ್ಮೆ ಕೃಷಿಕರಲ್ಲಿ ಇದೆ.ಕೈಗಾರಿಕೆಗಳ ಸ್ಥಾಪನೆ ಮತ್ತು ಇತರ ಕಾರ್ಯಗಳಿಗೆ ಸರ್ಕಾರದ ಮಾರ್ಗದರ್ಶನದಲ್ಲಿ ಜಮೀನುಗಳನ್ನು ಮಂಜೂರು ಮಾಡುವ ಜಿಲ್ಲಾಡಳಿತ ನಿವೇಶನರಹಿತ ಮತ್ತು ವಸತಿರಹಿತರಿಗೆ ನಿವೇಶನ ನೀಡುತ್ತಿಲ್ಲ ಎಂದು ಹೋರಾಟಗಾರರು ಆರೋಪಿಸಿದರೆ, ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಾರೆ.ಅಭಿವೃದ್ಧಿ ಕಾಣದ ನಿಲ್ದಾಣ: `ರೈಲು ಮಾರ್ಗ ವಿಸ್ತರಣೆ ಮಾಡುವುದರ ಜೊತೆಗೆ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಅವರು ಜಿಲ್ಲೆಗೆ ಭೇಟಿ ನೀಡಿದಾಗಲೆಲ್ಲ ಹೇಳುತ್ತಾರೆ. ರೈಲು ಮಾರ್ಗದ ವಿಸ್ತರಣೆಗೆ ಕೆಲವಡೆ ಮನೆಗಳನ್ನು ತೆರವುಗೊಳಿಸಬೇಕಾದ ಕಾರ್ಯವನ್ನು ಜಿಲ್ಲಾಡಳಿತ ಇಲ್ಲವೇ ಶಾಸಕರಿಗೆ ವಹಿಸುತ್ತಾರೆ. ಮತ್ತೆ ಸಮಯ ಸಿಕ್ಕಾಗ ಜಿಲ್ಲೆಗೆ ಬರುವ ಸಚಿವರು ಆ ವಿಷಯವನ್ನು ಪ್ರಸ್ತಾಪಿಸುತ್ತಾರೆ. ಯಾವುದೇ ಕಾರ್ಯ ಪ್ರಗತಿಯಾಗದಿರುವುದು ಕಂಡು ಮತ್ತೆ ಭರವಸೆಯನ್ನು ನೀಡಿ, ನವದೆಹಲಿಗೆ ಪ್ರಯಾಣಿಸುತ್ತಾರೆ~ ಎಂದು ರೈಲ್ವೆ ಹೋರಾಟ ಸಮಿತಿಯವರು ಹೇಳುತ್ತಾರೆ.`ಸುಂಕ ರಹಿತ ರೇಷ್ಮೆ ಆಮದು ಕ್ರಮವನ್ನು ಹಿಂಪಡೆಯಬೇಕು ಮತ್ತು ರೇಷ್ಮೆಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ರಾಜ್ಯ ಸರ್ಕಾರವಲ್ಲದೇ ಕೇಂದ್ರ ಸರ್ಕಾರದ ಮೇಲೆಯೂ ಒತ್ತಡ ಹೇರಿದೆವು. ಜಿಲ್ಲಾ ಬಂದ್ ಮಾಡುವುದರ ಮೂಲಕ ಆಕ್ರೋಶವನ್ನೂ ವ್ಯಕ್ತಪಡಿಸಿದ್ದೆವು. ಒಂದೆರಡು ಬಾರಿ ನವದೆಹಲಿಗೆ ರೇಷ್ಮೆಕೃಷಿಕರ ನಿಯೋಗ ಕರೆದೊಯ್ದಿದ್ದು ಬಿಟ್ಟರೆ, ಮತ್ತ್ಯಾವುದೇ ಕ್ರಮ ಕೈಗೊಳ್ಳಲಿಲ್ಲ. ನಮ್ಮ ಹೋರಾಟಕ್ಕೆ ಸ್ಪಂದನೆ ಸಿಗುವುದಿಲ್ಲ ಎಂದು ಕೇಂದ್ರ ಸಚಿವರನ್ನು ಭೇಟಿಯಾಗುವುದನ್ನೇ ಕೈಬಿಟ್ಟಿದ್ದೇವೆ~ ಎಂದು ರೇಷ್ಮೆಕೃಷಿಕರು ಬೇಸರದಿಂದ ಹೇಳುತ್ತಾರೆ.ದುರಸ್ತಿಯಾಗದ ರಸ್ತೆಗಳು: `ಕಳೆದ ಜೂನ್ ತಿಂಗಳಲ್ಲಿ ಭಾರಿ ಮಳೆಯಾದಾಗ, ನಂದಿ ಕ್ರಾಸ್ ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ಭಾರಿ ಹಾನಿಯಾಗಿತ್ತು. ಮುಖ್ಯ ರಸ್ತೆ, ಸರ್ವಿಸ್ ರಸ್ತೆ ಹಾನಿಗೊಂಡು ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದಾಗ, ಶೀಘ್ರ ಕಾಮಗಾರಿಯ ಭರವಸೆ ನೀಡಲಾಗಿತ್ತು. ಭರವಸೆ ನೀಡಿ ಮೂರು ತಿಂಗಳು ಮೇಲಾದರೂ ಸರ್ವಿಸ್ ರಸ್ತೆಯು ಸುಧಾರಣೆಗೊಂಡಿಲ್ಲ. ಬೇಡಿಕೆಯು ಈಡೇರಿಸಲಾಗಿಲ್ಲ~ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.`ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕಳೆದ ವರ್ಷ ತುರ್ತು ಕ್ರಮ ಕೈಗೊಂಡು ಪ್ರಮುಖ ರಸ್ತೆಗಳಲ್ಲಿನ ಮತ್ತು ಪಾದಚಾರಿ ಮಾರ್ಗದಲ್ಲಿನ ಪ್ರಾರ್ಥನಾ ಕೇಂದ್ರಗಳನ್ನು ತೆರವುಗೊಳಿಸಲಾಯಿತು. ಬಡಾವಣೆಗಳಲ್ಲಿನ ಅಶ್ವತ್ಥ್‌ಕಟ್ಟೆ, ನಾಗರಕಟ್ಟೆಗಳನ್ನು ತೆರವುಗೊಳಿಸ ಲಾಯಿತು. ಜಿಲ್ಲಾ ಕ್ರೀಡಾಂಗಣದ ಒತ್ತುವರಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಯಿತು.

ಆದರೆ ಒತ್ತುವರಿ ಮಾಡಿದ ವರು ಮತ್ತು ಸಂಘಸಂಸ್ಥೆಗಳವರು ಪ್ರತಿಭಟನೆ ನಡೆಸಿದರು ಎಂಬ ಕಾರಣಕ್ಕೆ ಜಿಲ್ಲಾಡಳಿತ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿತು. ಒತ್ತುವರಿ ತೆರವುಗೊಳಿಸುವುದು ಜಿಲ್ಲಾಡಳಿತದ ಕರ್ತವ್ಯ ಅಲ್ಲವೇ~ ಎಂದು ಕ್ರೀಡಾಪಟುಗಳು ಪ್ರಶ್ನಿಸುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.