ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿ: ಆರೋಪ

7

ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿ: ಆರೋಪ

Published:
Updated:

ತಾಳಿಕೋಟೆ: ಸಮೀಪದ ಬ.ಸಾಲವಾಡಗಿಯಲ್ಲಿ ಮುಖ್ಯ ರಸ್ತೆಯಿಂದ ಸರ್ಕಾರಿ ಶಾಲೆಯ ಮುಂದೆ ಹಾಯ್ದು ಎಸ್.ಸಿ. ಕಾಲೊನಿ ವರೆಗೆ ಡಾಂಬರೀಕರಣಕ್ಕಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 700 ಮೀ ಉದ್ದದ ಕಾಮಗಾರಿಗೆ ರೂ 5.30 ಲಕ್ಷ ಮಂಜೂರಾಗಿದೆ.

ಎರಡು ತಿಂಗಳ ಹಿಂದೆ ಡಾಂಬರು ರಸ್ತೆ ನಿರ್ಮಾಣಕ್ಕೆಂದು ಖಡಿ ಹಾಕಲಾಗಿದೆ. ಆದರೆ ಕಾಮಗಾರಿ ಅರ್ಧಕ್ಕೆ ನಿಂತು ನಿತ್ಯ ಸಂಚಾರಕ್ಕೆ ಸಾರ್ವಜನಿಕರು ಪರದಾಡುತ್ತಿದ್ದಾರೆ.ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಗೆ ಬರುವ ಮಕ್ಕಳು ಕಲ್ಲುಗಳ ಮೇಲೆ ಪ್ರಯಾಸದಿಂದ ನಡೆಯುವುದು ಅನಿವಾರ್ಯವಾಗಿದೆ.

ಕಲ್ಲು ರಸ್ತೆಯಲ್ಲಿ ಬಿದ್ದು ಕೆಲವು ಮಕ್ಕಳು ಗಾಯಗೊಂಡಿದ್ದಾರೆ. ರಸ್ತೆ ಮೇಲೆ ದಪ್ಪನೆಯ ಖಡಿ ಕಲ್ಲು ಹಾಕಿದ್ದರಿಂದ ಜಮೀನುಗಳಿಗೆ ಸಂಚರಿಸುವ  ಎತ್ತುಗಳು, ಗಾಡಿಯನ್ನು ಎಳೆಯಲು ಪ್ರಯಾಸ ಪಡಬೇಕಾಗಿದೆ.ರೂ 50 ಸಾವಿರ ಕೊಟ್ಟು ತಂದ ಎತ್ತುಗಳು ಈ ರಸ್ತೆ ಮೇಲೆ ತಿರುಗಿ ಕಾಲು ಮುರಿದುಕೊಳ್ಳುವಂತಾಗಿದೆ ಎಂಬುದು ರೈತರ ಅಸಮಾಧಾನ. ವಾರದ ಹಿಂದೆ ಗ್ರಾಮದ ಯಾಳಗಿ ಓಣಿ ಹಾಗೂ ವಠಾರ ಓಣಿಯ ಜನತೆ, ಎಸ್‌ಸಿ ಕಾಲೊನಿಯ ಜನತೆ ಗ್ರಾ.ಪಂ.ಗೆ ಮುತ್ತಿಗೆ ಹಾಕಿ ರಸ್ತೆಯಲ್ಲಿ ಹಾಕಿರುವ ಖಡಿ ಕಲ್ಲುಗಳಿಂದ ಆಗುತ್ತಿರುವ ತೊಂದರೆ ಬಗ್ಗೆ ಜಗಳವಾಡಿದ್ದಾರೆ.ಖಡಿ ಹಾಕಿದ ತಕ್ಷಣ ನೀರು ಹೊಡೆದು ಭಾರದ ರೋಲರ್ ಓಡಾಡಿದ್ದರೆ ರಸ್ತೆ ಸಮತಟ್ಟಾಗಿರುತ್ತಿತ್ತು. ಅದನ್ನು ಮಾಡದೇ ಹಾಗೇ ಬಿಟ್ಟಿದ್ದಾರೆ.  ಈಗ ರಾಶಿಯ ಕಾಲ. ದನಕರುಗಳುಗಳಿಗೆ ತೊಂದರೆ ಆಗುತ್ತಿದೆ ಎನ್ನುತ್ತಾರೆ ಹಿರಿಯರಾದ ಅಮರಯ್ಯ ಹಿರೇಮಠ.ಪಿಡಿಒ ನಿಂಗಣ್ಣ ದೊಡಮನಿ ಮಾತನಾಡಿ, `ನಾಳೆ ಬರುತ್ತೇವೆ' ಎಂದು ಜಿ.ಪಂ. ಎಂಜಿನಿಯರ್ ಹೇಳುವರು. ಆದರೆ ದಿನ ಮುಂದೂಡುತ್ತಲೇ ಇದೆ ಹೊರತು ಕೆಲಸ ಆಗಿಲ್ಲ. ಡಾಂಬರು ಸಿಕ್ಕಿಲ್ಲ, ಡಾಂಬರು ಕಲೆಸುವ ಯಂತ್ರ ಲಭ್ಯವಾಗುತ್ತಿಲ್ಲ. ಅಥವಾ ಕಾರ್ಮಿಕಲು ಇಲ್ಲ ಎಂಬ ಸಬೂಬು ಹೇಳುತ್ತಿದ್ದಾರೆ ಎನ್ನುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry