ಗುರುವಾರ , ನವೆಂಬರ್ 21, 2019
21 °C

`ಅರ್ಪಣಾ ಭಾವದಿಂದ ಕ್ರಿಕೆಟ್ ಬೆಳೆದಿದೆ'

Published:
Updated:

ಹುಬ್ಬಳ್ಳಿ: `ಇತರ ಯಾವುದೇ ಕ್ರೀಡೆಯಲ್ಲಿ ತೊಡಗಿಸಿಕೊಂಡವರಿಗೆ ಹೋಲಿಸಿದರೆ ಕ್ರಿಕೆಟ್ ಆಟಗಾರರ ಅರ್ಪಣಾ ಮನೋಭಾವ ಗಮನಾರ್ಹ. ಈ ಕಾರಣದಿಂದಲೇ ಕ್ರಿಕೆಟ್ ಇಂದು ಹೆಚ್ಚು ಜನಪ್ರಿಯವಾಗಲು ಕಾರಣ' ಎಂದು ಮಾಜಿ ಕ್ರಿಕೆಟಿಗ, ಎಡಗೈ ಸ್ಪಿನ್ನರ್ ಸುನಿಲ್ ಜೋಶಿ ಅಭಿಪ್ರಾಯಪಟ್ಟರು.ನಗರದ ಕೆಎಲ್‌ಇ ಸೊಸೈಟಿಯ ವ್ಯವಸ್ಥಾಪನಾ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆ (ಐಬಿಎಂಆರ್) ಹಮ್ಮಿಕೊಂಡಿದ್ದ ಗ್ರಾಮೀಣ ಕ್ರೀಡೆಗಳ ಸ್ಪರ್ಧೆ `ಕುಡೋಸ್-13'ರ ಸಮಾರೋಪ ಸಮಾರಂಭದ ಅಂಗವಾಗಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದರು.`ಎಲ್ಲ ಕ್ರೀಡೆಯೂ ಬೆಳೆಯಬೇಕು. ಆದರೆ ಅದರಲ್ಲಿ  ಕ್ರೀಡಾಪಟುಗಳ ಕಾಣಿಕೆಯೂ ಮುಖ್ಯವಾಗಿರಬೇಕು. ಟೂರ್ನಿಯ ನಂತರವೂ ಸಂಬಂಧಪಟ್ಟ  ಕ್ರೀಡೆಯನ್ನು ಬೆಳೆಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು' ಎಂದು ಅವರು ಕಿವಿಮಾತು ಹೇಳಿದರು.`ಗ್ರಾಮೀಣ ಕ್ರೀಡೆಗಳು ಬೆಳೆಯಬೇಕು. ನಾವು ಚಿಕ್ಕವರಿದ್ದಾಗ ಲಗೋರಿ, ಚಿನ್ನಿದಾಂಡು ಮುಂತಾದ ಆಟಗಳನ್ನು ಎಲ್ಲ ಕಡೆ ಆಡಲಾಗುತ್ತಿತ್ತು. ಆದರೆ ಈಗ ಇಂಥ ಆಟಗಳು ನಶಿಸಿ ಹೋಗುತ್ತಿವೆ. ಉತ್ತರ ಕರ್ನಾಕಟದಲ್ಲಿ ಇವುಗಳನ್ನು ಬೆಳೆಸುವ ಕಾಳಜಿ ಇದೆ. ಬೆಂಗಳೂರಿನಂಥ ಮಹಾನಗರಗಳಲ್ಲಿ ಇಂಥ ಆಟಗಳ ಹೆಸರು ಕೇಳಲೂ ಸಿಗದು. ನಾನೂ ಈ ಆಟಗಳನ್ನು ಆಡಿದ್ದೆ. ಎಡಗೈ ಆಟಗಾರನಾದ್ದರಿಂದ ನನಗೆ ಎಲ್ಲರಿಗಿಂತ ಚೆನ್ನಾಗಿ ಆಡಲು ಸಾಧ್ಯವಾಗುತ್ತಿತ್ತು' ಎಂದು ಅವರು ಹೇಳಿದರು.ಕರ್ನಾಟಕದ ಆಟಗಾರರಿಗೆ ಇಂದು ಭಾರತ ತಂಡದಲ್ಲಿ ಯಾಕೆ ಸ್ಥಾನ ಸಿಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಜೋಶಿ ಯುವ ಆಟಗಾರರಲ್ಲಿ ಸ್ಥಿರತೆಯ ಕೊರತೆ ಕಾಣುತ್ತಿದೆ. ಒಂದು ಸರಣಿಯಲ್ಲಿ ಮಿಂಚಿದವರು ಮುಂದಿನ ಸರಣಿಯಲ್ಲಿ ಅದೇ ರೀತಿಯ ಆಟವನ್ನು ಪ್ರದರ್ಶಿಸಲು ವಿಫಲರಾಗುತ್ತಿದ್ದಾರೆ ಎಂದರು.ಕ್ರೀಡಾಕ್ಷೇತ್ರದಲ್ಲೂ ಉತ್ತರ ಕರ್ನಾಟಕದವರಲ್ಲಿ ಕೀಳರಿಮೆ ಕಾಣುತ್ತಿದೆಯೇ ಎಂದು ಐಎಂಎಸ್‌ಆರ್ ನಿರ್ದೇಶಕ ಡಾ. ರೂಡಗಿ ಕೇಳಿದರು. ಇದಕ್ಕೆ ಉತ್ತರಿಸಿದ ಜೋಶಿ, ನಿಜವಾದ ಆಸಕ್ತಿ ಇದ್ದರೆ ಎಲ್ಲೂ ಸೋಲು ಉಂಟಾಗದು, ಇದಕ್ಕೆ ನಾನೇ ಉದಾಹರಣೆ ಎಂದು ಹೇಳಿದರು.

ಸಚಿನ್ ನಿವೃತ್ತಿ ಬಗ್ಗೆ ಕೇಳಿದಾಗ ಕ್ರೀಡಾಪಟುವಿಗೆ ಸಂಬಂಧಪಟ್ಟು ನಿವೃತ್ತಿ ಎಂಬ ಪದ ಬಳಕೆ ಸರಿಯಲ್ಲ, ಅದು ಕ್ರೀಡಾಪಟುವಿನ ಜೀವನದ ಮತ್ತೊಂದು ಮಗ್ಗುಲು ಎಂದರು.ಬಾಪೂಜಿ ಸಂಸ್ಥೆಗೆ ಪ್ರಶಸ್ತಿ

ಹುಬ್ಬಳ್ಳಿ:
ದಾವಣಗೆರೆಯ ಬಾಪೂಜಿ ವ್ಯವಸ್ಥಾಪನಾ ಅಧ್ಯಯನ ಸಂಸ್ಥೆ ತಂಡ `ಕುಡೋಸ್-13'ರ ಸಮಗ್ರ ಪ್ರಶಸ್ತಿಯನ್ನು ಬಗಲಿಗೆ ಹಾಕಿಕೊಂಡಿತು.ಕಬಡ್ಡಿ ಹಾಗೂ ಬುಡಕಟ್ಟು ಜನರ ನೃತ್ಯ `ಅಗಮ್ಯ'ದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ ತಂಡ ಉತ್ತರ ಕರ್ನಾಟಕದ 11 ಕಾಲೇಜುಗಳ ತಂಡಗಳನ್ನು ಹಿಂದಿಕ್ಕಿ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.ಕಬಡ್ಡಿಯಲ್ಲಿ ಹುಬ್ಬಳ್ಳಿಯ ಚೇತನಾ ಬಿಸಿನೆಸ್ ಸ್ಕೂಲ್ ತಂಡ ರನ್ನರ್ ಅಪ್ ಆಯಿತು. ಖೋ-ಖೋದಲ್ಲಿ ಹುಬ್ಬಳ್ಳಿ ತಾರಿಹಾಳದ ಐಇಎಂಎಸ್ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡರೆ ಐಬಿಎಂಆರ್ ತಂಡ ರನ್ನರ್ ಅಪ್ ಆಯಿತು.ಚಿನ್ನಿದಾಂಡು ಸ್ಪರ್ಧೆಯ ಪ್ರಶಸ್ತಿ ಹುಬ್ಬಳ್ಳಿಯ ಜಿಬಿಎಸ್ ಕಾಲೇಜು ತಂಡದ ಪಾಲಾಯಿತು. ರನ್ನರ್ ಅಪ್ ಪ್ರಶಸ್ತಿ ಚೇತನಾ ಬಿಸಿನೆಸ್ ಸ್ಕೂಲ್ ತಂಡಕ್ಕೆ ಲಭಿಸಿತು. ಲಗೋರಿಯಲ್ಲಿ ಬೆಳಗಾವಿಯ ಕೆಎಲ್‌ಇ ಕಾಲೇಜು ತಂಡ  ಪ್ರಶಸ್ತಿ ಗಳಿಸಿದರೆ ರನ್ನರ್ ಅಪ್ ಸ್ಥಾನವನ್ನು ಚೇತನಾ ಬಿಸಿನೆಸ್ ಸ್ಕೂಲ್ ತಂಡ ಗಳಿಸಿಕೊಂಡಿತು. ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ಐಎಂಎಸ್‌ಆರ್ ತಂಡಕ್ಕೆ ಪ್ರಶಸ್ತಿ ಸಂದಿತು. ಜಿಬಿಎಸ್ ತಂಡ ರನ್ನರ್ ಅಪ್ ಆಯಿತು.ಐಎಂಎಸ್‌ಆರ್ ತಂಡ ಹಾಗೂ ಜಿಬಿಎಸ್ ತಂಡ ಪಗಡೆ ಆಟದ ಮೊದಲ ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಕುಂಟೆ ಬಿಲ್ಲೆ ಸ್ಪರ್ಧೆಯಲ್ಲಿ ಐಎಂಎಸ್‌ಆರ್ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಬೆಳಗಾವಿಯ ಕೆಎಲ್‌ಇ ಬಿಬಿಎಂ ಕಾಲೇಜು ತಂಡಕ್ಕೆ ರನ್ನರ್ ಅಪ್ ಪ್ರಶಸ್ತಿ ಸಂದಿತು. ಸಾಂಸ್ಕೃತಿಕ ಸ್ಪರ್ಧೆ ಅಗಮ್ಯದ ಎರಡನೇ ಬಹುಮಾನ ಐಎಂಎಸ್‌ಆರ್ ತಂಡದ ಪಾಲಾಯಿತು.

ಪ್ರತಿಕ್ರಿಯಿಸಿ (+)