ಮಂಗಳವಾರ, ಮೇ 18, 2021
24 °C

ಅರ್ಹತಾ ಟೂರ್ನಿ ಕೈ ತಪ್ಪುವುದಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಹಾಕಿ ಇಂಡಿಯಾ (ಎಚ್‌ಐ) ಹಾಗೂ ಭಾರತ ಹಾಕಿ ಫೆಡರೇಷನ್ (ಐಎಚ್‌ಎಫ್) ನಡುವಿನ ಹೊಂದಾಣಿಕೆಯ ಕೊರತೆ ಲಂಡನ್ ಒಲಿಂಪಿಕ್ಸ್ ಅರ್ಹತಾ ಟೂರ್ನಿಯ ಆತಿಥ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ~ ಎಂದು ಐಎಚ್‌ಎಫ್ ಅಧ್ಯಕ್ಷ ಆರ್.ಕೆ. ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.ಒಲಿಂಪಿಕ್ಸ್ ಅರ್ಹತಾ ಸುತ್ತಿನ ಟೂರ್ನಿ ಫೆಬ್ರುವರಿಯಲ್ಲಿ ನಡೆಯಲಿದೆ. ಎರಡೂ ಸಂಸ್ಥೆಗಳ ನಡುವೆ ಅಧಿಕಾರ ಹಂಚಿಕೆ ಮಾಡುವ ಬಗ್ಗೆ ಕೇಂದ್ರ ಕ್ರೀಡಾ ಸಚಿವ ಕ್ರೀಡಾ ಸಚಿವ ಅಜಯ್ ಮಾಕನ್ ಚಿಂತನೆ ನಡೆಸಿದ್ದಾರೆ. ಈ ಅಧಿಕಾರ ಹಂಚಿಕೆ ವಿಚಾರದಲ್ಲಿ ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಮಧ್ಯ ಪ್ರವೇಶ ಮಾಡುವುದು ಅಗತ್ಯವಿದೆ.

 

ಹೀಗಾದರೂ ಸಮಸ್ಯೆಗೆ ಅಂತ್ಯ ಕಾಣಲಿ ಎಂದು ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

`ಹಾಕಿ ಇಂಡಿಯಾ ಹಾಗೂ ಭಾರತ ಹಾಕಿ ಫೆಡರೇಷನ್ ಹೊಂದಿಕೆ ಮಾಡಿಕೊಂಡು ಆಡಳಿತ ನಡೆಸಬೇಕು ಎನ್ನುವುದು ಆಗದ ಮಾತು.ಆದ್ದರಿಂದಲೇ ಹಾಕಿ ಆಡಳಿತವನ್ನು ನೋಡಿಕೊಳ್ಳಲು ಒಂದೇ ಸಂಸ್ಥೆ ಇರಬೇಕು ಎನ್ನುವ ಅಭಿಪ್ರಾಯಗಳು ಬಲವಾಗಿ ಕೇಳಿ ಬರುತ್ತಿವೆ. ಕೇಂದ್ರ ಕ್ರೀಡಾ ಇಲಾಖೆಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎರಡೂ ಸಂಸ್ಥೆಗಳು ಜೊತೆಯಾಗಿ ಕಾರ್ಯನಿರ್ವಹಿಸುವ ತಾತ್ಕಾಲಿಕ ಒಪ್ಪಂದ ನಡೆದಿತ್ತು. ಈ ಒಪ್ಪಂದ 2012ರ ಡಿಸೆಂಬರ್‌ವರೆಗೂ ಮುಂದುವರಿಯಬೇಕಿತ್ತು~ ಎಂದು ವಿವರಿಸಿದರು.ಎಚ್‌ಐ ಹಾಗೂ ಐಎಚ್‌ಎಫ್ ನಡುವಿನ ಮನಸ್ತಾಪದಿಂದ ಭಾರತ ಈಗಾಗಲೇ ಚಾಂಪಿಯನ್ಸ್ ಟ್ರೋಫಿ  ಟೂರ್ನಿಯ ಆತಿಥ್ಯದ ಹಕ್ಕು  ಕಳೆದುಕೊಂಡಿದೆ. ಇದಕ್ಕೆ ಹಾಕಿ ಇಂಡಿಯಾ ಬಳಿ ಹಣ ಇಲ್ಲದಿರುವುದೇ ಕಾರಣ. ಎಚ್‌ಐನ ಖಜಾನೆ ಖಾಲಿಯಾಗಿದೆ.ಭಾರತ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿ  ಗೆದ್ದು ಬಂದಾಗ ಕೇವಲ 25,000 ರೂಪಾಯಿ ಮಾತ್ರ ಬಹುಮಾನ ಪ್ರಕಟಿಸಿದ್ದು ಅದಕ್ಕೆ ಸಾಕ್ಷಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ದೇಶದಲ್ಲಿ ಎರಡೂ ಹಾಕಿ ಸಂಸ್ಥೆಗಳ ನಡುವಿನ ಸಮಸ್ಯೆ ದೊಡ್ಡದೇನೂ ಅಲ್ಲ. ಆದರೆ ಹಣದ್ದೇ ಸಮಸ್ಯೆ. 2010ರ ಹಾಕಿ ವಿಶ್ವಕಪ್ ಟೂರ್ನಿ ಬೇರೆಡೆಗೆ ವರ್ಗಾಯಿಸಲು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಚಿಂತನೆ ನಡೆಸಿತ್ತು.ಏಕೆಂದರೆ ಇದಕ್ಕೆ ಕಾರಣವೂ ಬಲವಾಗಿತ್ತು. ರಿಸರ್ವ್ ಬ್ಯಾಂಕ್ ಈ ವೇಳೆ 2.35 ಕೋಟಿ ರೂಪಾಯಿಯನ್ನು ತಡೆ ಹಿಡಿದಿತ್ತು. ಇದರಿಂದ ಟೂರ್ನಿ ನಡೆಸಲು ಹಣದ ಅಭಾವ ಉಂಟಾಗಿತ್ತು. ಈ ವಿಷಯವನ್ನು ಮಾಧ್ಯಮಗಳ ಮೂಲಕ ತಿಳಿದಿದ್ದೆ ಎಂದು ವಿವರಿಸಿದರು.ಚಾಂಪಿಯನ್ಸ್ ಟ್ರೋಫಿಗೂ ಹಣದ ಅಭಾವ ಎದುರಾಯಿತು. ಪ್ರಾಯೋಜಕರು ಸಿಗಲಿಲ್ಲ. ಆದ ಕಾರಣ ಇದು ನ್ಯೂಜಿಲೆಂಡ್‌ಗೆ ವರ್ಗಾವಣೆಯಾಯಿತು.  ದೇಶದಲ್ಲಿ ಕ್ರೀಡಾಳಿತವನ್ನು ನೋಡಿಕೊಳ್ಳಲು ಒಂದೇ ಸಂಸ್ಥೆ ಇರುವುದು ಅಗತ್ಯವಿದೆ.ಈ ಎಲ್ಲಾ ವಿವಾದಗಳಿಂದ ಮುಕ್ತವಾಗಿ ಒಂದೇ ಸಂಸ್ಥೆ ಆಡಳಿತ ನೋಡಿಕೊಳ್ಳುವ ಕಾಲ ಬರುತ್ತದೆ. ಆದರೆ ಇನ್ನಷ್ಟು ಕಾಲಾವಕಾಶ ಬೇಕಾಗುತ್ತದೆ. ಇದಕ್ಕಾಗಿ ಸರ್ಕಾರ ಪ್ರಯತ್ನಿಸುತ್ತಿದೆ. ಒಲಿಂಪಿಕ್ಸ್ ಕೂಟದ ಅರ್ಹತಾ ಟೂರ್ನಿ ಭಾರತದ ಕೈ ತಪ್ಪುವುದಿಲ್ಲ ಎನ್ನುವ ವಿಶ್ವಾಸ ನನ್ನದು. ಇದಕ್ಕೆ ಸರ್ಕಾರದ ಬೆಂಬಲ ಬೇಕು ಎಂದು ಶೆಟ್ಟಿ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.