ಭಾನುವಾರ, ಆಗಸ್ಟ್ 25, 2019
20 °C
ಜಿಲ್ಲಾ ಕೇಂದ್ರ ಸ್ಥಾಪನೆ ಬೇಡಿಕೆ * ಹೆಚ್ಚಿದ ಪೈಪೋಟಿ * ದೇವನಹಳ್ಳಿಯೋ-ದೊಡ್ಡಬಳ್ಳಾಪುರವೋ ?

ಅರ್ಹತೆ ಇರುವ ಕಡೆ ಸ್ಥಾಪನೆ: ಸಿದ್ದರಾಮಯ್ಯ

Published:
Updated:

ದೊಡ್ಡಬಳ್ಳಾಪುರ: `ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರವನ್ನು ಎಲ್ಲಿ ಸ್ಥಾಪಿಸಬೇಕು ಎಂಬುದರ ಬಗ್ಗೆ ಈ ಭಾಗದ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಗ್ರ ಅಭಿಪ್ರಾಯ ಸಂಗ್ರಹಿಸಿದ ನಂತರವೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರ ಮಾಡಬೇಕೆಂದು ಹೋರಾಟ ಸಮಿತಿಯ ಮುಖಂಡರು ಗುರುವಾರ ಬೆಂಗಳೂರಿನಲ್ಲಿ ನೀಡಿದ ಮನವಿ ಸ್ವೀಕರಿಸಿ ಮಾತನಾಡಿದ ಸಿದ್ದರಾಮಯ್ಯ, `ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರವನ್ನು ನಮ್ಮಲ್ಲಿಯೇ ಸ್ಥಾಪನೆ ಮಾಡಿ ಎಂದು ಈಗಾಗಲೇ ದೇವನಹಳ್ಳಿಯವರೂ ಮನವಿ ಅರ್ಪಿಸಿದ್ದಾರೆ. ಈಗ ನೀವೂ ನೀಡುತ್ತಿದ್ದೀರಿ. ಈ ಕುರಿತು ಎರಡು ತಾಲ್ಲೂಕುಗಳ ಮನವಿಗಳನ್ನು ಪರಿಶೀಲಿಸುತ್ತೇನೆ' ಎಂದರು.`ಜಿಲ್ಲಾ ಕೇಂದ್ರ ಸ್ಥಾಪನೆಗೆ ಯಾವ ಪ್ರದೇಶ ಸೂಕ್ತ ಎಂಬ ಬಗ್ಗೆ ಅಗತ್ಯವಿರುವ ಎಲ್ಲ ರೀತಿಯ ಮಾನದಂಡಗಳನ್ನೂ ಪರಿಶೀಲಿಸಲಾಗುವುದು. ಅರ್ಹತೆ ಇರುವ ತಾಲ್ಲೂಕಿನಲ್ಲಿ ಜಿಲ್ಲಾ ಕೇಂದ್ರ ಸ್ಥಾಪನೆ ಮಾಡಲಾಗುವುದು. ಯಾವುದೇ ಒತ್ತಡಕ್ಕೆ ಮಣಿದು ಏಕಾಏಕಿ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ' ಎಂದು ಅವರು ಮುಖಂಡರಿಗೆ ತಿಳಿಸಿದರು.ದೊಡ್ಡಬಳ್ಳಾಪುರದಲ್ಲೇ ಜಿಲ್ಲಾ ಕೇಂದ್ರ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಶಾಸಕ ಟಿ.ವೆಂಕಟರಮಣಯ್ಯ ಅವರು ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹಾಗೂ ತಾಲ್ಲೂಕಿನ ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ ಆರ್.ಎಲ್. ಜಾಲಪ್ಪ ಅವರಿಗೆ ಮನವಿ ಸಲ್ಲಿಸಿದರು.ಪರಿಶೀಲನೆ: ಭೌಗೋಳಿಕ, ಜನಸಂಖ್ಯೆ ಹಾಗೂ ಆದಾಯ ಸೇರಿದಂತೆ ಎಲ್ಲಾ ರೀತಿಯ ಅರ್ಹತೆ ಹೊಂದಿರುವ ದೊಡ್ಡಬಳ್ಳಾಪುರದಲ್ಲೇ ಗ್ರಾಮಾಂತರ ಜಿಲ್ಲಾ ಕೇಂದ್ರವನ್ನು ಸ್ಥಾಪನೆ ಮಾಡಬೇಕು ಎಂದು ಹೋರಾಟ ಸಮಿತಿಯು  ವಿರೋಧ ಪಕ್ಷದ ನಾಯಕ ಎಚ್. ಡಿ.ಕುಮಾರಸ್ವಾಮಿ ಅವರಿಗೂಮನವಿ ಸಲ್ಲಿಸಿತು.ಮನವಿ ಸ್ವೀಕರಿಸಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, `ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರಗಳ ಎರಡೂ ತಾಲ್ಲೂಕಿನ ಜನರು ಜಿಲ್ಲಾ ಕೇಂದ್ರ ಸ್ಥಾಪನೆಗೆ ಬೇಡಿಕೆ ಇಟ್ಟಿದ್ದಾರೆ. ಸೂಕ್ತ ಅಂಕಿ ಅಂಶಗಳನ್ನು ಗಮನಿಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ' ಎಂದು ಹೇಳಿದರು.ಹೋರಾಟ ಬೆಂಬಲಿಸಲು ಮನವಿ:

ದೊಡ್ಡಬಳ್ಳಾಪುರವನ್ನು ಗ್ರಾಮಾಂತರ ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಹೋರಾಟವನ್ನು ಬೆಂಬಲಿಸುವಂತೆ ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರಿಗೂ ಹೋರಾಟ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.ಈ ಬಗ್ಗೆ ಪ್ರತಿಕ್ರಿಯಿಸಿದ ಆರ್.ಎಲ್. ಜಾಲಪ್ಪ, `ದೊಡ್ಡಬಳ್ಳಾಪುರದಲ್ಲಿ ಗ್ರಾಮಾಂತರ ಕೇಂದ್ರ ಸ್ಥಾಪನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಶೀಘ್ರದಲ್ಲೇ ಚರ್ಚಿಸುತ್ತೇನೆ' ಎಂದು ತಿಳಿಸಿದರು.ಜಿಲ್ಲಾ ಹೋರಾಟ ಸಮಿತಿ ಸಂಚಾಲಕರಾದ ರಾಜೇಂದ್ರಕುಮಾರ್, ತೂಬಗೆರೆ ಷರೀಫ್, ಕಸಾಪ, ತಾಲ್ಲೂಕು ಅಧ್ಯಕ್ಷ ಕೆ.ಆರ್.ರವಿಕಿರಣ್, ತಾ.ಪಂ.ಸದಸ್ಯ ಡಾ.ಎಚ್.ಜಿ.ವಿಜಯ್‌ಕುಮಾರ್, ನಗರಸಭೆ ಸದಸ್ಯ ಟಿ.ಎನ್.ಪ್ರಭುದೇವ್, ಕೆ.ಜಿ.ರಘುರಾಂ, ಮಲ್ಲೇಶ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ, ಕರವೇ ರಾಜ್ಯ ಘಟಕದ ಉಪಾಧ್ಯಕ್ಷ  ಬಿ.ಎಸ್. ಚಂದ್ರಶೇಖರ್, ಕಾರ್ಯನಿತರ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜ್, ಕನ್ನಡ ಜಾಗೃತ ವೇದಿಕೆ ವಿಮಲಮ್ಮ, ವೆಂಕಟೇಶ್, ಪ್ರಾಂತ್ಯ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಸಿ.ಎಚ್.ರಾಮಕೃಷ್ಣ, ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಜಿ.ಲಕ್ಷ್ಮೀಪತಿ, ಕನ್ನಡ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಡಿ. ಸಂಜೀವ್‌ನಾಯ್ಕ, ಅಭಿವೃದ್ಧಿ ಸಮಿತಿ ಸಂಚಾಲಕ ಎಸ್.ನಟರಾಜ್ ಇದ್ದರು.

Post Comments (+)