ಸೋಮವಾರ, ಏಪ್ರಿಲ್ 19, 2021
29 °C

ಅರ್ಹತೆ ಹೆಚ್ಚಿಸಿ, ಆಸೆ ಅಲ್ಲ: ನ್ಯಾ. ಶ್ರೀಧರರಾವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಕೇವಲ ಆಸೆಯನ್ನು ಹೆಚ್ಚಿಸಿದರೆ ಸಾಲದು. ಅರ್ಹತೆಯನ್ನು ಹೆಚ್ಚಿಸಿಕೊಳ್ಳಬೇಕು. ಗುಲ್ಬರ್ಗ ನೆಲವು ಹಿಂದುಳಿದಿಲ್ಲ. ಸಿರಿವಂತವಾಗಿದೆ. ನೀವು ಪರಿಶ್ರಮ ಪಟ್ಟು ಸಾಧನೆ ಮಾಡಬೇಕಾಗಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಕೆ. ಶ್ರೀಧರ ರಾವ್ ಹೇಳಿದರು.ಕರ್ನಾಟಕ ಹೈಕೋರ್ಟ್ ಗುಲ್ಬರ್ಗ ಸಂಚಾರಿ ಪೀಠದ ನಾಲ್ಕನೇ ವರ್ಷಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಗುಲ್ಬರ್ಗ ವಕೀಲರ ಸಂಘ ಸೋಮವಾರ ರಾತ್ರಿ ಕಾರ್ಯಕ್ರಮ ಆಯೋಜಿಸಿತ್ತು.

ದೇಶದ ಮೂರನೇ ಒಂದರಷ್ಟು ಸಿಮೆಂಟ್ ಉತ್ಪಾದನೆ, ಎರಡು ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು, ನೀರಾವರಿ ಪ್ರದೇಶ ಮತ್ತಿತರ ಸೌಕರ್ಯಗಳನ್ನು ಹೊಂದಿದ ಗುಲ್ಬರ್ಗವು ಶ್ರೀಮಂತವಾಗಿದೆ.ಪ್ರತಿಯೊಂದಕ್ಕೂ  ಹಿಂದುಳಿದ ಜಿಲ್ಲೆ ಎಂದು ನೆಪ ಹೇಳಿಕೊಂಡು ನಿಜವಾಗಿಯೂ ಹಿಂದುಳಿಯಬೇಡಿ. ಹಳೇ ನೆನಪಲ್ಲಿ ನಿಮ್ಮನ್ನೇ ನೀವು ಹೂಳಬೇಡಿ. ಕಷ್ಟಪಟ್ಟು ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಿ. ಆಸಕ್ತಿ ಬೆಳೆಸಿಕೊಳ್ಳಿ. ಜಾಗತಿಕ ಭಾಷೆ ಇಂಗ್ಲಿಷ್ ಕಲಿಯಿರಿ. ವೈಫಲ್ಯಕ್ಕೆ ನೆಪ ಕೊಡುವುದನ್ನು ಬಿಟ್ಟು ಬಿಡಿ ಎಂದು ನ್ಯಾಯಮೂರ್ತಿ ನಿಷ್ಠುರವಾಗಿ ನುಡಿದರು.  ಜಿಲ್ಲಾ ನ್ಯಾಯಾಲಯಗಳು ಉತ್ತಮ ಗುಣಮಟ್ಟದಲ್ಲಿವೆ. ಅಲ್ಲಿಂದಲೇ ನಮಗೆ ಪ್ರಕರಣಗಳು ಬರುತ್ತವೆ. ಆದರೆ ತಹಸೀಲ್ ಕೋರ್ಟ್‌ಗಳ ತರಹ ವರ್ತಿಸಬೇಡಿ ಎಂದ ಅವರು, ಹೈಕೋರ್ಟ್ ಬಂದು ಕೇವಲ ನಾಲ್ಕು ವರ್ಷಗಳಾಗಿವೆ. ನಾವು `ಬಾಲವಾಡಿ~ ಹಂತದಲ್ಲೇ ಇದ್ದೇವೆ ಎಂಬ ಸಬೂಬು ಬೇಡ. ಕಷ್ಟಪಟ್ಟು ಮುಂದೆ ಬರುತ್ತೇವೆ ಎಂಬ ಛಲವಿರಲಿ ಎಂದು ಹಿತವಚನ ಹೇಳಿದರು.ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಅಂಬ್ಳಿಕಲ್ ಎನ್. ವೇಣುಗೋಪಾಲಗೌಡ ಕನ್ನಡದಲ್ಲೇ ಮಾತನಾಡಿ, ಕೆಂಪು ಮಣ್ಣಿನ ಕೆಜಿಎಫ್ ಪ್ರದೇಶದಲ್ಲಿ ಕಷ್ಟಪಟ್ಟು ದುಡಿದು ಚಿನ್ನ ತೆಗೆಯುತ್ತಾರೆ. ಇಲ್ಲಿನ  ಕಪ್ಪುಮಣ್ಣಿನ ಈ ನೆಲ ನೋಡಿದರೆ ಹಿಂದುಳಿದ ನಾಡು ಎಂದು ಹೇಳಲು ಸಾಧ್ಯವೇ ಇಲ್ಲ. ಈ ಮಣ್ಣು ಮಳೆಯ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದುವೇ ಚಿನ್ನದಂಥ ನೆಲ. ನೀವು ಯಾರಿಗೂ ಕಮ್ಮಿಯಿಲ್ಲ. ಯಾವುದೇ ವೃತ್ತಿಯಾದರೂ ಕಷ್ಟಪಟ್ಟು ದುಡಿಯುವುದನ್ನು ರೂಢಿಸಿಕೊಳ್ಳಿ ಎಂದು ಹೇಳಿದರು.ಹೈಕೋರ್ಟ್ ನ್ಯಾಯಾಧೀಶೆ ನ್ಯಾಯಮೂರ್ತಿ ಬಿ.ಎಸ್.ಇಂದ್ರಕಲಾ ಮಾತನಾಡಿ, ಕಂಪ್ಯೂಟರ್ ಬಳಸುವ, ಆಕರ ಮಾಹಿತಿ ಸಂಗ್ರಹಿಸುವ, ಜ್ಞಾನ ಹೆಚ್ಚಿಸುವ, ಕೌಶಲ  ವೃದ್ಧಿಸುವ, ಶ್ರಮ ಪಡುವ ಅಭ್ಯಾಸಗಳನ್ನು ಮಾಡಿಕೊಳ್ಳಿ. ಹೈಕೋರ್ಟ್‌ನಲ್ಲಿ ಯಶಸ್ವಿಯಾದ ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸುವ ಕೆಲವು ಗುರಿಯಾದರೂ ಇಟ್ಟುಕೊಳ್ಳಿ. ಧನಾತ್ಮಕವಾಗಿ ಮುನ್ನಡೆಯಿರಿ. ಈ ಕಾರ್ಯಕ್ರಮವು ಆತ್ಮಾವಲೋಕನವಾಗಲಿ ಎಂದು ಆಶಿಸಿದರು.ಹಿರಿಯ ವಕೀಲ ಪಿ.ವಿಲಾಸ್‌ಕುಮಾರ್ ಮಾತನಾಡಿ, ಸಂಚಾರಿ ಪೀಠ ಬಂದ ಬಳಿಕ ಈ ಭಾಗದ ಜನರು ನ್ಯಾಯಕ್ಕಾಗಿ ಶ್ರಮ, ಸಮಯ ಹಾಗೂ ಹಣ ವ್ಯರ್ಥ ಮಾಡುವುದು ಉಳಿತಾಯವಾಗಿದೆ. ವೈಯಕ್ತಿಕವಾಗಿ ತೊಂದರೆ ಆಗುತ್ತಿದ್ದರೂ ನ್ಯಾಯಮೂರ್ತಿಗಳು ತ್ವರಿತ ಹಾಗೂ ಉತ್ಕೃಷ್ಟ ರೀತಿಯಲ್ಲಿ ನ್ಯಾಯದಾನ ಮಾಡುತ್ತಿರುವುದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.ಹಿರಿಯ ವಕೀಲ ಉಸ್ತಾದ್ ಸಾದತ್ ಹುಸೇನ್ ಮಾತನಾಡಿ, ಸಂಚಾರಿ ಪೀಠದ ಮೂಲಕ ವಕೀಲರ ಬೆಳವಣಿಗೆಗಿಂತ ಹೆಚ್ಚಾಗಿ ಈ ಭಾಗದ ಬಡಜನರು ನ್ಯಾಯ ಪಡೆಯುತ್ತಿರುವುದು ಸಂತಸ. ಅವರ ಆಶೀರ್ವಾದವೇ ವಕೀಲರು, ನ್ಯಾಯಾಧೀಶರಿಗೆ ಶ್ರೇಷ್ಠ ಕೊಡುಗೆ ಎಂದರು.ಗುಲ್ಬರ್ಗ ವಕೀಲರ ಸಂಘದ ಅಧ್ಯಕ್ಷ ಬಿ.ಹನುಮಂತ ರೆಡ್ಡಿ, ಉಪಾಧ್ಯಕ್ಷ ಬಸವರಾಜ ಯಾಲಕ್ಕಿ, ಪ್ರಧಾನ ಕಾರ್ಯದರ್ಶಿ ರಾಜಕುಮಾರ್ ಕಡಗಂಚಿ, ವಕೀಲರ ಮಂಡಳಿಯ ಎ.ಎಂ.ಮುಗ್ದಂ ಇದ್ದರು. ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಹಿರಿಯ ವಕೀಲರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.