`ಅರ್ಹರಿಗೆ ಸೌಲಭ್ಯ ತಲುಪುತ್ತಿಲ್ಲ'

ಗುರುವಾರ , ಜೂಲೈ 18, 2019
24 °C
ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ: ಶಾಸಕ ಜಾರಕಿಹೊಳಿ

`ಅರ್ಹರಿಗೆ ಸೌಲಭ್ಯ ತಲುಪುತ್ತಿಲ್ಲ'

Published:
Updated:

ಗೋಕಾಕ:  ಕಂದಾಯ ಇಲಾಖೆಯ ಕೆಲ ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ ಮುಳುಗಿರುವ ಪರಿಣಾಮ ಅರ್ಹ ಫಲಾನುಭವಿಳಿಗೆ ಸರ್ಕಾರದ ಸೌಲಭ್ಯಗಳು ತಲುಪುತ್ತಿಲ್ಲ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು.ನಗರದ ಹೊರವಲಯದ ಬಸವೇಶ್ವರ ಸಭಾ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಅರಭಾವಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬಡವರಿಗೆ ಸಿಗಬೇಕಾದ ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ಸೇರಿದಂತೆ ವಿವಿಧ ಸೌಲಭ್ಯಗಳು ಶ್ರೀಮಂತರ ಪಾಲಾಗುತ್ತಿವೆ. ಈ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ದಿಟ್ಟ ಕ್ರಮ ಕೈಗೊಳ್ಳುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದರು.ಒಂದು ವಾರದೊಳಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ಪಿಂಚಣೆ ನೀಡಬೇಕು. ಇಲಾಖೆಯ ಅಧಿಕಾರಿಗಳು ಫಲಾನುಭವಿಗಳ ಮನೆಗೇ ಆದೇಶ ಪತ್ರಗಳನ್ನು ತಲುಪಿಸುವ ವ್ಯವಸ್ಥೆ ಮಾಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳಿಂದ ಸೂಕ್ತ ಪ್ರತಿಕ್ರಿಯೆ ವ್ಯಕ್ತವಾಗದೇ ಇದ್ದಲ್ಲಿ ಎನ್‌ಎಸ್‌ಎಫ್ ಅತಿಥಿ ಗೃಹ ಕಚೇರಿಗೆ ಭೇಟಿ ನೀಡಬೇಕು. ಅರ್ಹ ಕುಟುಂಬಗಳಿಗೆ ವಿವಿಧ ಸೌಲಭ್ಯಗಳನ್ನು ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಬೈಲಹೊಂಗಲ ಉಪ ವಿಭಾಗಾಧಿಕಾರಿ ಮೇಜರ್ ಸಿದ್ಧಲಿಂಗಯ್ಯೊ ಹಿರೇಮಠ ಮಾತನಾಡಿ, ಸಾಮಾಜಿಕ ಭದ್ರತಾ ಯೋಜನೆ ಕುರಿತು ವಿವರಿಸಿದರು. ನಕಲಿ ಪ್ರಮಾಣ ಪತ್ರ ನೀಡಿ ಯೋಜನೆ ಲಾಭ ಪಡೆದುಕೊಂಡ ಫಲಾನುಭವಿಗಳ ಮಾಸಾಶನವನ್ನು ರದ್ದುಪಡಿಸುವ ಜೊತೆಗೆ, ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಬಸಗೌಡ ಪಾಟೀಲ (ನಾಗನೂರ), ಜಿ.ಪಂ. ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ, ಅರಭಾವಿ ಉಪತಹಶೀಲ್ದಾರ ಎಸ್.ಎಲ್.ಚೂನಪ್ಪಗೋಳ, ಕಂದಾಯ ನಿರೀಕ್ಷಕ ರಾಘವೇಂದ್ರ ಪೂಜೇರಿ ಉಪಸ್ಥಿತರಿದ್ದರು.  ತಹಶೀಲ್ದಾರ ಉದಯಕುಮಾರ ಕುಂಬಾರ ಸ್ವಾಗತಿಸಿದರು. ಶಿಕ್ಷಕ ಎ.ಜೆ. ಕೋಳಿ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry