ಸೋಮವಾರ, ಜನವರಿ 27, 2020
21 °C
ಅಂಗವಿಕಲರ ಅಭಿವೃದ್ಧಿ: ನಿಲ್ಲದ ಕೂಗು

ಅರ್ಹ ಅಂಗವಿಕಲರಿಗೆ ಸಿಗದ ‘ಆಧಾರ’!

ಪ್ರಜಾವಾಣಿ ವಾರ್ತೆ/ಉ.ಮ.ಮಹೇಶ್‌ Updated:

ಅಕ್ಷರ ಗಾತ್ರ : | |

ಅರ್ಹ ಅಂಗವಿಕಲರಿಗೆ ಸಿಗದ ‘ಆಧಾರ’!

ಬೀದರ್: ‘ಅಂಗವಿಕಲರಿಗೆ ಬೇಕಾಗಿರುವುದು ಕರುಣೆ, ಅನುಕಂಪ ಅಲ್ಲ; ಸ್ವಾವಲಂಬಿ ಬದುಕು ಕಟ್ಟಿಕೊಡುವ ಮನಸ್ಸು’.

ಅಂಗವಿಕಲರ ಅಭಿವೃದ್ಧಿ ಕುರಿತ ಚರ್ಚೆಯ  ಸಂದರ್ಭದಲ್ಲೆಲ್ಲಾ ಪ್ರಮುಖವಾಗಿ ಕೇಳಿಬರುವ ಮಾತಿದು.ಅಂಗವಿಕಲರರ ಕಲ್ಯಾಣಕ್ಕಾಗಿಯೇ ವಿವಿಧ ಯೋಜನೆಗಳು ಇದ್ದರೂ, ಅದಕ್ಕಾಗಿ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಹಣ ವೆಚ್ಚವಾಗಿದೆ. ಕಡತಗಳಲ್ಲಿರುವ ದಾಖಲೆಗಳು ಹೇಳಿದರೂ ಇಂಥ ಕೂಗು ಮರೆಯಾಗಿಲ್ಲ. ಬದಲಾಗಿ ಪ್ರತಿ ಬಾರಿ ಹೆಚ್ಚುತ್ತಲೇ ಇದೆ.ಅರ್ಹರಿಗೆ ಸೌಲಭ್ಯ ತಲುಪುತ್ತಿಲ್ಲ. ಅಂಗವಿಕಲರ ಹೆಸರಿನಲ್ಲಿ ಪೂರ್ಣ ಅರ್ಹರಲ್ಲದವರು, ಪ್ರಭಾವಿಗಳ ಶಿಫಾರಸಿನ ಅನುಗುಣವಾಗಿ ಬಹುತೇಕ ಈ ಸೌಲಭ್ಯ ಹಂಚಿಕೆ ಆಗುವುದು ಇದಕ್ಕೆ ಕಾರಣ ಎನ್ನುತ್ತಾರೆ ಜಿಲ್ಲೆಯಲ್ಲಿ ಅಂಗವಿಕಲರ ಕಲ್ಯಾಣಕ್ಕಾಗಿ ಹೋರಾಡುತ್ತಿರುವ ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ ಸಂತೋಷ್‌ ಎಂ ಭಾಲ್ಕೆ.ಕಾಲು ಊನವಾಗಿರುವ ಊರುಗೋಲು ಹಿಡಿದು ನಡೆದಾಡುವ ಅವರು ಅಂಗವಿಕಲರಿಗಾಗಿ ವಿವಿಧ ಯೋಜನೆಗಳ ಮಾಹಿತಿ ನೀಡಲು ಕಚೇರಿ ತೆರೆದಿದ್ದು, ಸಹಾಯವಾಣಿ ಆರಂಭಿಸಲು ಚಿಂತನೆ ನಡೆಸಿದ್ದಾರೆ.‘ಅಂಗವಿಕಲರಿಗಾಗಿ ಇರುವ ಸರ್ಕಾರದ ವಿವಿಧ ಯೋಜನೆಗಳು ಅರ್ಹರಿಗೆ ತಲುಪಬೇಕು. ಆಗ ಮಾತ್ರ ನಿಜವಾದ ಕಲ್ಯಾಣ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ತಮ್ಮ ಕಚೇರಿಗೆ ಬರುವ ವಿವಿಧ ಯೋಜನೆಗಳ ಬಗೆಗೆ ಮಾಹಿತಿ ನೀಡುವುದು, ಅರ್ಜಿ ನಮೂನೆ ಒದಗಿಸುವುದು ಇತ್ಯಾದಿ ನೆರವು ನೀಡಲಾಗುತ್ತಿದೆ’ ಎನ್ನುತ್ತಾರೆ.ಜಿಲ್ಲೆಯಲ್ಲಿ ಅಂಗವಿಕಲರಿಗಾಗಿಯೇ ಸಹಾಯವಾಣಿ ಆರಂಭಿಸಬೇಕು ಎಂಬುದು ನಮ್ಮ ಒತ್ತಾಯ. ಆದರೆ, ಜಿಲ್ಲಾಡಳಿತದಿಂದ ಇದಕ್ಕೆ ಸರಿಯಾದ ಸ್ಪಂದನೆಯೇ ಸಿಗುತ್ತಿಲ್ಲ. ಕೇವಲ ನೋಡೊಣ, ಮಾಡೋಣ ಎಂಬ ಭರವಸೆಗಳೇ ಸಿಗುತ್ತಿವೆ. ಬರುವ  ಸಚಿವರು, ಅಧಿಕಾರಿಗಳಿಗೆಲ್ಲಾ ಮನವಿ ಸಲ್ಲಿಸುತ್ತಿದ್ದೇನೆ. ಆದರೂ ಯಾವುದೇ ಪ್ರಯೋಜನ ಆಗಿಲ್ಲ. ಸಹಾಯವಾಣಿ ಆದರೆ ಅರ್ಹರು ಕಷ್ಟದಲ್ಲಿದ್ದಾಗ ಸೌಲಭ್ಯ ಪಡೆಯಲು ನೆರವಾಗಲಿದೆ ಎಂದು ಹೇಳುತ್ತಾರೆ.ಇಂದಿಗೂ  ಅಂಗವಿಕಲ ಕಲ್ಯಾಣ ಇಲಾಖೆಯ ಕಚೇರಿ ಬಳಿ ಸಾಗಿದರೆ ಊರುಗೋಲು ಹಿಡಿದ, ತ್ರಿಚಕ್ರದಲ್ಲಿ ಸೌಲಭ್ಯಕ್ಕಾಗಿ ಕಾದು ಕುಳಿತ ಅಂಗವಿಕಲರು ಕಾಣಿಸುತ್ತಾರೆ.  ಸೌಲಭ್ಯಗಳು ಅರ್ಹರಿಗೆ ತಲುಪುತ್ತಿಲ್ಲ ಎಂಬುದಕ್ಕೆ ಇದೆ ನಿದರ್ಶನ. ಗೋಚರವಾಗುವಷ್ಟು ಅಂಗವಿಕಲತೆ ಇದ್ದರೆ ನೇರವಾಗಿ ಮಾಸಾಶನ ಸೌಲಭ್ಯ ವಿತರಿಸಬಹುದು ಎಂಬ ನಿಯಮವಿದೆ. ಆದರೂ ಪ್ರಮಾಣ ಪತ್ರ ನೀಡಲು ಸತಾಯಿಸುತ್ತಾರೆ. ಅಂಗವಿಕಲತೆ ಪ್ರಮಾಣ ಪರಿಶೀಲಿಸಿ ಪ್ರಮಾಣಪತ್ರ ನೀಡಲು ಇರುವ ಜಿಲ್ಲಾ ಸರ್ಜನ್‌ ನೇತೃತ್ವದ ಸಮಿತಿ ಸಭೆಯನ್ನೇ ಸೇರುವುದಿಲ್ಲ. ಪ್ರಮಾಣಪತ್ರ ಸಿಗದೇ ಸೌಲಭ್ಯ ಸಿಗುವುದಿಲ್ಲ. ಇನ್ನೊಂದೆಡೆ ಅಂಗವಿಕಲರು ಸ್ವ ಉದ್ಯೋಗ ಕೈಗೊಳ್ಳಲು ಇರುವ ಆಧಾರ್ ಯೋಜನೆಯಡಿ ಫಲಾನುಭವಿಗಳನ್ನೇ ಗುರುತಿಸಿಲ್ಲ ಎನ್ನುತ್ತಾರೆ.ಅಂಗವಿಕಲರಿಗಾಗಿ ವಿವಿಧ ಸೌಲಭ್ಯ ವಿತರಿಸಲು ಎರಡು ವರ್ಷದ ಹಿಂದೆ ಬಂದ ಸುಮಾರು ₨ 9 ಲಕ್ಷ ಹಣ ಹಾಗೆಯೇ ಉಳಿದಿದೆ. ಅದನ್ನು ವಿತರಿಸುವ ನಿಟ್ಟಿನಲ್ಲಿ ಸಭೆಯೂ ಆಗುತ್ತಿಲ್ಲ. ವರ್ಷದ ಹಿಂದೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ಆಯಿತು. ಇನ್ನೂ ಫಲ ನೀಡಿಲ್ಲ. ಈಚೆಗೆ ಜಿಲ್ಲಾಧಿಕಾರಿಗಳ ಜೊತೆಗೆ ಪ್ರಸ್ತಾಪ ಮಾಡಿದಾಗಲೂ ‘ಮಾಡೋಣ’ ಎಂದು ಪ್ರತಿಕ್ರಿಯಿಸಿದ್ದರು. ನಿಜವಾಗಿ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವ ಮನಸ್ಥಿತಿ ಬರದೇ ಪರಿಸ್ಥಿತಿಯೂ ಬದಲಾಗುವುದಿಲ್ಲ ಎಂದು ವಿಷಾದಿಸುತ್ತಾರೆ.ಇವರ ಮಾತು ಸಾಂಕೇತಿಕವಾದರೂ, ಬಹುತೇಕ ಅಂಗವಿಕಲರ ಮಾತುಗಳು  ಇದೇ ದನಿಯನ್ನು ಮೊಳಗಿಸುತ್ತವೆ. ಈ ಮಾತುಗಳು ಯೋಜನೆಗಳ ಅನುಷ್ಠಾನ ಕ್ರಮಕ್ಕೇ ಅಂಗವೈಕಲ್ಯ ತಟ್ಟಿದೆಯೇನೋ ಎಂಬ ಶಂಕೆ ಮೂಡಿಸುತ್ತದೆ.

ಪ್ರತಿಕ್ರಿಯಿಸಿ (+)