ಸೋಮವಾರ, ಜನವರಿ 27, 2020
22 °C

ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ: ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಅರಸೀಕೆರೆ ರಸ್ತೆಯಲ್ಲಿ ನಿರ್ಮಿಸಿರುವ ಎಸ್.ಎಂ. ಕೃಷ್ಣ ಬಡಾವಣೆಯ ಗೊಂದಲಗಳೆಲ್ಲ ಪರಿಹಾರಗೊಂಡಿದ್ದು, ಶೀಘ್ರದಲ್ಲೇ ಲಾಟರಿ ಮೂಲಕ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗುವುದು’ ಎಂದು ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ತಿಳಿಸಿದರು.ಎಸ್.ಎಂ. ಕೃಷ್ಣ ನಗರದ ಬಡಾವಣೆಗೆ ಭೂಮಿ ನೀಡಿದ ರೈತರೊಂದಿಗೆ ಸೋಮವಾರ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಚರ್ಚಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ರೈತರ ಸಮಸ್ಯೆಗಳಿಗೆ ಪ್ರಾಧಿಕಾರ ಸ್ಪಂದಿಸುತ್ತಾ ಬಂದಿದೆ. ಸರ್ಕಾರದ ಆದೇಶದಂತೆ ನಿವೇಶನ ಹಂಚಿಕೆಗ ಕ್ರಮ ಜರುಗಿಸಲಾಗಿದೆ. ಈಗ ರೈತರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಪ್ರಾಧಿಕಾರ ಅಭಿವೃದ್ಧಿಪಡಿಸಿದ ಭೂಮಿಯಲ್ಲಿ ರೈತರಿಗೆ ಪರಿಹಾರದ ರೂಪದಲ್ಲಿ 60: 40ರ ಅನುಪಾತದಲ್ಲಿ ಭೂಮಿ ನೀಡಲಾಗುವುದು. ರೈತರಿಗೆ ಪರಿಹಾರ ನೀಡುವ ಸಲುವಾಗಿಯೇ ಪ್ರಾಧಿಕಾರ 55 ಕೋಟಿ ರೂಪಾಯಿ ಕಾಯ್ದಿರಿಸಿದೆ. ಇದರಲ್ಲಿ ಯಾವುದೇ ಸಮಸ್ಯೆ ಇದ್ದಲ್ಲಿ ರೈತರು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಪರಿಹರಿಸಬಹುದು’ ಎಂದರು.ರೈತರ ಪರವಾಗಿ ಮಾತನಾಡಿದ ಸಮಿತಿಯ ಜಂಟಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಹಾಗೂ ಲಕ್ಷ್ಮೀಕಾಂತ ಅವರು ನೀಡಿದ ಸಲಹೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ‘ಪ್ರಾಧಿಕಾರ ರೈತರ ಬೆೇಡಿಕೆಗಳನ್ನು ಗೌರವಿಸುತ್ತದೆ. ಬಡಾವಣೆಯಲ್ಲಿ ಅಭಿವೃದ್ಧಿ­ಪಡಿಸಿರುವ ನಿವೇಶನದಲ್ಲಿ ಶೇ 40ನ್ನು ರೈತರಿಗೆ ನೀಡಲಾಗುತ್ತಿದೆ. ಆದರೆ ವಾಣಿಜ್ಯ ಉದ್ದೇಶಕ್ಕಾಗಿ ಕಾಯ್ದಿರಿಸಿದ ನಿವೇಶನದಲ್ಲಿ ಪರಿಹಾರ ಕಲ್ಪಿಸಲು ಅವಕಾಶವಿಲ್ಲ ಎಂದರು.ಜಮೀನಿಗೆ ಸಂಬಂಧಿಸಿದಂತೆರೈತರು ಪ್ರಾಧಿಕಾರಕ್ಕೆ ಹೆಚ್ಚಿನ ಹಣ ಪಾವತಿಸಿದ್ದಲ್ಲಿ ಅದಕ್ಕೆ ಬಡ್ಡಿ ನೀಡಲು ಕಾನೂನಿನಲ್ಲಿ ಅವಕಾಶ ಇದ್ದರೆ ನೀಡಲಾಗುವುದು. ಎಸ್.ಎಂ. ಕೃಷ್ಣ ನಗರ ಅಭಿವೃದ್ಧಿಗೆ  ಸರ್ಕಾರ ತಯಾರಿಸಿದ ನಕ್ಷೆಯನ್ನು ರೈತರು ಒಪ್ಪಿಕೊಂಡಲ್ಲಿ ಮುಂದಿನ ಸಂಕ್ರಾಂತಿಯ ನಂತರ ನಿವೇಶನಗಳ ಹಂಚಿಕೆ ಕಾರ್ಯ ಆರಂಭಿಸಲಾಗುವುದು. ಒಂದು ತಿಂಗಳೊಳಗಾಗಿ ಈ ಬಡಾವಣೆಯ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಜರುಗಿಸಲಾಗುವುದು ಎಂದರು.ಜಿಲ್ಲಾಧಿಕಾರಿ ಕೈಗೊಂಡ ಎಲ್ಲ ತೀರ್ಮಾನಗಳಿಗೆ ಭೂಮಾಲೀಕರು ಕೈ ಎತ್ತುವ ಮೂಲಕ ಸಮ್ಮತಿ ಸೂಚಿಸಿದರು. ಒಂದು ವಾರದೊಳಗೆ ಮುಖಂಡರೊಂದಿಗೆ ಇನ್ನೊಂದು ಸಭೆ ಆಯೋಜಿಸಿ ಅಂತಿಮ ತೀರ್ಮಾನಗಳನ್ನು ಕೈಗೊಳ್ಳಲಾಗುವುದು. ಬಳಿಕ ನಿವೇಶನ ಹಂಚಿಕೆಗೆ ಸರ್ಕಾರದಿಂದ ಅನುಮೋದನೆ ಪಡೆದು ಕಾನೂನು ರೀತಿಯಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಶಾಸಕ ಎಚ್.ಎಸ್.ಪ್ರಕಾಶ್, ವಿಧಾನಸಭಾ ಸದಸ್ಯರಾದ ಪಟೇಲ್ ಶಿವರಾಮ್‌ ಹಾಜರಿದ್ದು ಸಲಹೆ ಸೂಚನೆ ನೀಡಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎನ್.­ಗೋಪಾಲಕೃಷ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ, ವಿವಿಧ ಇಲಾಖಾಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.

ಪ್ರತಿಕ್ರಿಯಿಸಿ (+)