ಭಾನುವಾರ, ಜೂನ್ 20, 2021
23 °C

ಅಲಂಕಾರ ಕಟ್ಟಿಕೊಟ್ಟಬದುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹವ್ಯಾಸ ಅಂತ ಆರಂಭಿಸಿದ್ದು. ವೃತ್ತಿಯಾಗುತ್ತೆ ಎಂಬ ಪರಿಕಲ್ಪನೆಯೇ ಇರಲಿಲ್ಲ. ಅದೂ ಕೇವಲ ವಧುವಿನ ಅಲಂಕಾರ ಅಂದ್ಕೊಂಡಿದ್ದೆ. ಆದರೆ ಈಗ `ಮದುವೆ ಅಲಂಕಾರ ನಿರ್ವಹಣೆ~ ಮಾಡುವಷ್ಟು ಬೆಳೆಯಬಲ್ಲೆ ಅಂತ ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ... ಅಶ್ವಿನಿ ಹೇಳುತ್ತಾಹೋದರು.ಓದಿದ್ದು ಬರೀ ಬಿ.ಎ. ಕಲಿತದ್ದು ಬ್ಯೂಟಿಷಿಯನ್ ತರಬೇತಿ. ಮದುವೆಯ ನಂತರ ಮನೇಲಿ ಸುಮ್ಮನಿರಲಾಗದೆ `ಮೊಬೈಲ್ ಪಾರ್ಲರ್~ ಎಂಬಂತೆ ಕೆಲಸ ಆರಂಭಿಸಿದರು. ಈಗ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡುಗಳಲ್ಲಿಯೂ ಮದುವೆಯ ಅಲಂಕಾರಕ್ಕೆ ಅಶ್ವಿನಿ ಓಡಾಡುತ್ತಿದ್ದಾರೆ.ಒಂದು ಸಣ್ಣ ಅಲ್ಬಮ್‌ನಲ್ಲಿ ತಮ್ಮ ಅಲಂಕಾರದ ಸಂಗ್ರಹಗಳನ್ನಿರಿಸಿಕೊಂಡಿದ್ದ ಅಶ್ವಿನಿ ಈಗ ಲ್ಯಾಪ್‌ಟಾಪ್‌ನಲ್ಲಿ ಹಲವಾರು ಬಗೆಯ ಪ್ಯಾಕೇಜುಗಳನ್ನು ಬಿಚ್ಚಿಡುತ್ತಾರೆ. ಈ ಪಯಣ ಕೇವಲ ಕೆಲ ವರ್ಷಗಳದ್ದು ಎಂದಾಗ ಹೆಮ್ಮೆಗಿಂತಲೂ ಅಲ್ಲಿ ತೃಪ್ತಿಯೇ ಎದ್ದುಕಾಣುತ್ತದೆ.ವಧುವಿನ ಅಲಂಕಾರದಲ್ಲೂ ನಾವೀನ್ಯ ಅನುಭವ ನೀಡುವುದು ಅಶ್ವಿನಿ ಪ್ರಯತ್ನವಾಗಿತ್ತು. ಸೀರೆಗೆ ಹೊಂದುವಂಥ ಆಭರಣಗಳು, ವರ್ಣ ವಿನ್ಯಾಸಕ್ಕೆ ತಕ್ಕಂತೆ ಜಡೆ, ಮೊಗ್ಗಿನ ಜಡೆ, ಜಡೆಬಿಲ್ಲೆಗಳ ಅಲಂಕಾರ ಎಲ್ಲವನ್ನೂ ಮಾಡುತ್ತಿದ್ದರು. ವಧುವಿನ ಅಲಂಕಾರಕ್ಕೆಂದು ಮನೆಮನೆಗೆ ಹೋಗುತ್ತಿದ್ದ ಅಶ್ವಿನಿ ಅಲ್ಲಿಯ ಮದುವೆ ಅಲಂಕಾರಕ್ಕೂ ಮುಂದಾದರು.

 

ಮೊದಲು ಗೌರಿಪೂಜೆಗೆ ಕೊಬ್ಬರಿ ಬಟ್ಟಲಿನಲ್ಲಿ ಅಂದದ ಗೌರಿಯನ್ನು ತಯಾರಿಸಿ ಕೊಡಲಾರಂಭಿಸಿದರು. ಅಷ್ಟು ಚೆಂದದ ಗೊಂಬೆಯನ್ನು ಪೂಜೆಗೆ ಅಚ್ಚುಕಟ್ಟಾಗಿ ಅಣಿಮಾಡದೇ ಇರುವುದನ್ನು ಕಂಡು ಅವರೇ ಪೂಜೆಯ ಅಲಂಕಾರಕ್ಕೂ ನಿಂತರು. ಈ ಪಯಣ ಮುಂದುವರೆಯುತ್ತಾ ಹೋಯಿತು.ಹೂವಿನಲಂಕಾರಕ್ಕೆ ಕೈಹಚ್ಚಿದ್ದೂ ಆಯಿತು. ಸ್ವಾಗತ ಸ್ತಂಭಗಳ ತಯಾರಿಯನ್ನೂ ಕೈಗೊಂಡರು. ಇಂಥ ಕೆಲಸಗಳಲ್ಲಿ ಅವರದ್ದು ಸೃಜನಶೀಲ ಮನಸ್ಸು. ಮನದಲ್ಲಿ ಮೂಡಿದ ಕಲ್ಪನೆ ಕೈಚಳಕದಿಂದ ಸಾಕಾರಗೊಳ್ಳುತ್ತಿತ್ತು.ಹೂವು, ಹಣ್ಣು, ಧಾನ್ಯಗಳ ಬಳಕೆಯಿಂದ ವರ್ಣಮಯ ವಿನ್ಯಾಸಗಳನ್ನು ಸಿದ್ಧಪಡಿಸಿದರು. ಜೊತೆಗೆ ಮನೆಯ ಸದಸ್ಯರೂ ಸಹಾಯಕ್ಕೆ ಮುಂದಾದರು. ಎಲ್ಲರೂ ಒಗ್ಗಟ್ಟಿನಿಂದ ಬೆಂಬಲಿಸಿದರು. ಹೂವಿನಲಂಕಾರಕ್ಕೆ ಹೂ ಕೊಳ್ಳುವುದರಿಂದ ಆಲಂಕಾರಿಕ ವಸ್ತು, ವಸ್ತ್ರ ವಿನ್ಯಾಸ ಹಾಗೂ ತಯಾರಿಗಳಿಗೂ ಬೆಂಬಲ ನೀಡಿದರು. ಮನೆಮಂದಿಯೆಲ್ಲಾ ಇಂಥ ಕೆಲಸದ ನೊಗಕ್ಕೆ ಹೆಗಲು ಕೊಟ್ಟಿದ್ದನ್ನು ಅಶ್ವಿನಿ ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಾರೆ.ತಮ್ಮ ಅತ್ತೆ ಮನೆ ಹಾಗೂ ಅಮ್ಮನ ಮನೆ, ಸೋದರ ಮಾವಂದಿರು ಎಲ್ಲರೂ ಯಾವ್ಯಾವ ನೆರವನ್ನು ನೀಡಿದ್ದಾರೆಂಬುದರ ಸಣ್ಣಪುಟ್ಟ ವಿವರವನ್ನೂ ಬಿಚ್ಚಿಡುತ್ತಾರೆ.

`ಮೊದಲ ಪ್ರಯತ್ನವಂತೂ ಸಾಹಸವೇ ಆಗಿತ್ತು. ಕೇವಲ ಮೇಕಪ್ ಕಿಟ್ ಮಾತ್ರ ಹಿಡಿದು ಹೋಗುತ್ತಿದ್ದ ನನಗೆ ಕಲ್ಯಾಣಮಂಟಪದ ಸಂಪೂರ್ಣ ಅಲಂಕಾರದ ಜವಾಬ್ದಾರಿ ಹೊರುವ ಅವಕಾಶ ಸಿಕ್ಕಿದ್ದು ಆತಂಕ ಹುಟ್ಟಿಸಿತ್ತು.ಆದರೆ ಕುಟುಂಬದವರ ಸಹಕಾರದಿಂದ ಇಂದು ನನ್ನ ಪಾಲಿಗೆ ಉದ್ಯಮವಾಗಿಯೇ ಬೆಳೆದಿದೆ. ಹಲವಾರು ಜನರಿಗೆ ಅವಕಾಶಗಳನ್ನು ನೀಡುತ್ತಿದ್ದೇನೆ. ಅದು ಸಂತೋಷ ತಂದಿದೆ~ ಎನ್ನುತ್ತಾರೆ ಅಶ್ವಿನಿ.ಮದುವೆಗೆಂದು ಬಂದವರೆಲ್ಲ ತಮ್ಮ ಕುಟುಂಬದ ಸಮಾರಂಭಗಳ ಅಲಂಕಾರಕ್ಕೆ ಸಂಪರ್ಕಿಸಲು ಆರಂಭಿಸಿದರು. ಯಾವ ಜಾಹೀರಾತೂ ಇಲ್ಲದೆ ತಮ್ಮ ಅಲಂಕಾರವಿದ್ಯೆಯನ್ನೇ ನೆಚ್ಚಿ ಅವಕಾಶ ನೀಡಿದ್ದೇ ಹವ್ಯಾಸ ವೃತ್ತಿಯಾಗಲು ಕಾರಣವಾಯಿತು. ಇದೆಲ್ಲಾ ಸಾಧ್ಯವಾದದ್ದು ಕೆಲಸದಲ್ಲಿನ ಶ್ರದ್ಧೆ ಮತ್ತು ಸೃಜನಶೀಲ ಶಕ್ತಿಯಿಂದ ಎನ್ನುವ ಅಶ್ವಿನಿಯವರಿಗೆ ಈಗ ತುಂಬು ಆತ್ಮವಿಶ್ವಾಸ.ಈಗ ಅಶ್ವಿನಿ ಅವರ ಸಂಗಾತಿ ಪ್ರದೀಪ್ ಸಹ ಈ ಉದ್ಯಮದಲ್ಲಿ ಕೈಗೂಡಿಸಿದ್ದಾರೆ. ಚೆನ್ನೈ, ಉದಕಮಂಡಲ, ಸೇಲಂ, ವಾರಂಗಲ್, ಹೈದರಾಬಾದ್, ಜಹಿರಾಬಾದ್, ಕರ್ನೂಲ್, ಹುಬ್ಬಳ್ಳಿ, ರಾಯಚೂರು ಮುಂತಾದೆಡೆಯೆಲ್ಲ ಅಶ್ವಿನಿ ಅಲಂಕಾರ ಮಾಡಲೆಂದೇ ಹೋಗಿ ಬಂದಿದ್ದಾರೆ.ವಧುವಿಗೆ `ಬ್ರೈಡಲ್ ಮೇಕಪ್ ಪ್ಯಾಕೇಜ್~ ಮೂಲಕ ಅಶ್ವಿನಿ ಮಾಡುವ ಮದುವೆ ಅಲಂಕಾರ 20 ಸಾವಿರ ರೂಪಾಯಿಗಳಿಂದ ಆರಂಭವಾಗುತ್ತದೆ. ಹೂವಿನಲಂಕಾರ, ಕಾಶಿಯಾತ್ರೆ, ಗೌರಿ ಪೂಜೆ, ಊಟದ ಅಲಂಕಾರ, ಧಾರೆ ಅಲಂಕಾರ, ಡೋಲಿ ಮುಂತಾದವುಗಳನ್ನು ಕೂಡ ಒದಗಿಸುತ್ತಾರೆ.ವೈಭವದ ಮದುವೆಗಳು ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ರಾಜವೈಭವ ಬಯಸುವವರೂ ಹೆಚ್ಚಾಗಿದ್ದಾರೆ. ಸಾಂಪ್ರದಾಯಿಕ ಮನೋಭಾವಕ್ಕೆ ಸಮಕಾಲೀನ ಅಲಂಕಾರದ ಸ್ಪರ್ಶ ನೀಡುತ್ತಿರುವುದರಿಂದ ಇದು ಹೆಚ್ಚು ಹೆಚ್ಚು ಜನಪ್ರಿಯಗೊಳ್ಳುತ್ತಿದೆ ಎನ್ನುತ್ತಾರೆ ಅವರು.

 ಅರೇಬಿಕ್ ವಿನ್ಯಾಸ, ಗುಜರಾತಿ, ಜೋಧ್‌ಪುರಿ ವಿನ್ಯಾಸಗಳಲ್ಲೂ ಅಶ್ವಿನಿ ಅವರ ಕೈ ಪಳಗಿದೆ. ಹೆಚ್ಚಿನ ಮಾಹಿತಿಗೆ 93412 62757ಗೆ ಸಂಪರ್ಕಿಸಬಹುದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.