ಸೋಮವಾರ, ಮೇ 16, 2022
30 °C

ಅಲಕ್ಷ್ಯಗೊಳಗಾದ ಹಿಂದುಳಿದ ವರ್ಗಗಳ ಆಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡಲ್ ವರದಿ ಕುರಿತಾಗಿ 1992ರ ನವೆಂಬರ್ 16 ರಂದು ನೀಡಿದ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು ಹಿಂದುಳಿದ ವರ್ಗಗಳನ್ನು ಗುರುತಿಸುವುದರಲ್ಲಿ ನ್ಯೂನತೆಗಳು ಮರುಕಳಿಸದಂತೆ ಸರಿಪಡಿಸಿಕೊಳ್ಳಬೇಕಾದಂತಹ ಮಾರ್ಗ ಸೂಚಿಯನ್ನು ನೀಡಿದೆ.ರಾಷ್ಟ್ರಮಟ್ಟದಲ್ಲಿ ಹಾಗೂ ಪ್ರತಿ ರಾಜ್ಯದಲ್ಲಿ ಹಿಂದುಳಿದ ವರ್ಗಗಳನ್ನು ಗುರುತಿಸಿ ಸಂವಿಧಾನದತ್ತವಾದ ಹಕ್ಕುಗಳನ್ನು ಆದ್ಯತೆ ಮೇಲೆ ನೀಡಲು ಕಡ್ಡಾಯವಾಗಿ `ಶಾಶ್ವತ ಆಯೋಗ~ ವನ್ನು ಸ್ಥಾಪಿಸಬೇಕು, ಅಂತಹ ಆಯೋಗವನ್ನು ಸಂವಿಧಾನ ವಿಧಿ 16(4) ಮತ್ತು 340 ರ ಅಡಿಯಲ್ಲಿ ಸ್ಥಾಪಿಸಬಹುದು ಎಂಬುದು ನ್ಯಾಯಾಲಯದ ಮಹತ್ವದ ತೀರ್ಪು.  ತೀರ್ಪಿಗನುಗುಣವಾಗಿ ಹೆಚ್ಚಿನ ರಾಜ್ಯಗಳಲ್ಲಿ ಪ್ರತ್ಯೇಕ ಕಾಯ್ದೆಯನ್ನು ಜಾರಿಗೆ ತಂದು, ಹಿಂದುಳಿದ ವರ್ಗಗಳ ಶಾಶ್ವತ ಆಯೋಗಗಳು ರಚನೆಯಾಗಿವೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ (1995) ರಾಜ್ಯದಲ್ಲಿ 1997ರ ಡಿಸೆಂಬರ್ 1ರಿಂದ ಜಾರಿಯಲ್ಲಿದೆ.ಈ ಕಾಯ್ದೆ ಅನ್ವಯ ಒಬ್ಬ ಅಧ್ಯಕ್ಷ, ಐವರು ಸದಸ್ಯರು ಹಾಗೂ ಐಎಎಸ್ ದರ್ಜೆಯ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗುತ್ತದೆ. ಅಧ್ಯಕ್ಷರ ಹಾಗೂ ಸದಸ್ಯರ ಅವಧಿ ಮೂರು ವರ್ಷ (ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ).ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಳ್ಳುವವರು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿರಬೇಕು ಅಥವಾ ನ್ಯಾಯಮೂರ್ತಿಯಾಗುವ ಅರ್ಹತೆಯನ್ನು ಹೊಂದಿರಬೇಕು. ಇಲ್ಲವೇ ಸಾಮಾಜಿಕ ತಜ್ಞರಾಗಿರಬೇಕು. ಸದಸ್ಯರುಗಳಿಗೆ ಹಿಂದುಳಿದ ವರ್ಗಗಳ ಬಗ್ಗೆ ಸಂಬಂಧ ಪಟ್ಟ ವಿಷಯಗಳಲ್ಲಿ ವಿಶೇಷವಾದ ಅರಿವು ಇರಬೇಕು.ಅವರಲ್ಲಿ ಒಬ್ಬರು ಸಾಮಾಜಿಕ ತಜ್ಞರಿರಬೇಕು. ವಿವಿಧ ಕ್ಷೇತ್ರಗಳಲ್ಲಿ ನುರಿತ ಅನುಭವ ಇರಬೇಕು. ಕಾಯ್ದೆ ಪರಿಚ್ಛೇದ 9ರಂತೆ ಆಯೋಗವು ಯಾವುದೇ ವರ್ಗವನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಬೇಕೆಂದು ಬಂದ ಅರ್ಜಿಗಳನ್ನು ಪರೀಶೀಲಿಸುವುದು. ಪಟ್ಟಿಯಲ್ಲಿರುವ ಹಿಂದುಳಿದ ವರ್ಗಗಳನ್ನು ಹೆಚ್ಚಾಗಿ ಸೇರಿಸಲಾಗಿದೆ ಎಂದು ಬಂದ ದೂರುಗಳಿದ್ದರೆ ತೀರ್ಮಾನಿಸಿ ಸೂಕ್ತ ಸಲಹೆ ನೀಡುವುದು. ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡುವುದು.ಹಿಂದುಳಿದ ವರ್ಗಗಳಿಗಾಗಿ ಇರುವ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮೇಲ್ವಿಚಾರಣೆ ಮಾಡಿ, ಹಿಂದುಳಿದ ವರ್ಗಗಳ ಬಡತನ, ಆರೋಗ್ಯ, ವಿದ್ಯಾಭ್ಯಾಸ, ನಿರುದ್ಯೋಗ, ಅಸಮಾನತೆ, ಸಾಮಾಜಿಕ ಭದ್ರತೆ - ಹೀಗೆ ಸಂಬಂಧ ಪಟ್ಟ ಸಮಸ್ಯೆಗಳ ಬಗ್ಗೆ ವಿಶೇಷ ವರದಿ ನೀಡುವುದು.ಆಯೋಗ ಯಾವತ್ತೂ ಕಾರ್ಯನಿರತವಾಗಿರಬೇಕೆಂಬುದು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಮುಖ್ಯ ಉದ್ದೆೀಶ. ಆದರೆ ಹಿಂದುಳಿದ ವರ್ಗಗಳ ಆಯೋಗದ ಬಗ್ಗೆ ರಾಜ್ಯ ಸರ್ಕಾರಕ್ಕೆ ಸರ್ವೋಚ್ಚ ನ್ಯಾಯಾಲಯದ ಆಶಯದ ಬಗ್ಗೆ ನಿರ್ಲಕ್ಷ್ಯ ಇರುವುದು ಸ್ಪಷ್ಟ. ಸಿ.ಎಸ್.ದ್ವಾರಕಾನಾಥ್ ಅಧ್ಯಕ್ಷರಾಗಿದ್ದ ಅವಧಿ 2010 ರ ಜುಲೈನಲ್ಲಿ ಮತ್ತು ಸದಸ್ಯರ ಅವಧಿ ಅದೇ ವರ್ಷ ಸೆಪ್ಟೆಂಬರ್‌ನಲ್ಲಿ ಮುಗಿದಿತ್ತು. ಒಂದು ವರ್ಷದಿಂದ ಈ ಆಯೋಗ ಅಸ್ತಿತ್ವದಲ್ಲಿ ಇಲ್ಲ.ಮುಖ್ಯಮಂತ್ರಿಗಳು `ಒಂದು ವಾರದಲ್ಲಿ ಆಯೋಗಕ್ಕೆ ಅಧ್ಯಕ್ಷರ ನೇಮಕ ಮಾಡುತ್ತೇನೆ~ ಎಂದು ಹೇಳಿ ತಿಂಗಳುಗಳೇ ಉರುಳಿದವು. ಆಯೋಗ ಪುನರ್‌ರಚನೆ ಆಗಿಲ್ಲ. ಅಲಕ್ಷ್ಯ, ವಿಳಂಬ, ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡುವ ಸಂಸ್ಥೆಗಳಿಗೆ ಹೊಸದೇನಲ್ಲ. ಹಾಗಾಗಿಯೇ ಸ್ವಾತಂತ್ರ್ಯ ಬಂದು 64 ವರ್ಷ ಕಳೆದರೂ ಶೋಷಿತ ವರ್ಗಕ್ಕೆ ಅನೇಕ ಕ್ಷೇತ್ರಗಳಲ್ಲಿ ನ್ಯಾಯ ದೊರಕುತ್ತಿಲ್ಲ.ಅನೇಕ  ಪ್ರತಿಷ್ಠಿತ ಸಂಘ ಸಂಸ್ಥೆಗಳಲ್ಲಿ ಇವತ್ತಿಗೂ ಮೀಸಲಾತಿ ಇಲ್ಲದೆ ಚುನಾವಣೆಗಳು ನಡೆಯುತ್ತಿವೆ. ಉನ್ನತ ಮಟ್ಟದ ನ್ಯಾಯಾಲಯಗಳಲ್ಲಿ ಶೋಷಿತರಿಗೆ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಸಿಗಬೇಕಾದ ಪಾಲು ಸಿಗುತ್ತಿಲ್ಲ.

 

ಸವಲತ್ತು ಪಡೆಯುತ್ತಿರುವ ಅರೆ ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಮೀಸಲಾತಿ ಇನ್ನೂ ನಿರೀಕ್ಷಿತ ಮಟ್ಟ ತಲುಪಿಲ್ಲ. 2011 ರ ಜನಸಂಖ್ಯಾ ಸಮೀಕ್ಷೆಯಲ್ಲಿ ಇದು ಸ್ಪಷ್ಟವಾಗಿದೆ. ಇಂತಹ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಹುಡುಕಲು ಬದ್ಧತೆ ಇರುವ ಆಡಳಿತ ವ್ಯವಸ್ಥೆ ಇದ್ದಾಗ ಮಾತ್ರ ಸಾಧ್ಯ.  2009ರ ರಾಷ್ಟ್ರೀಯ (ಎನ್.ಸಿ.ಎ.ಇ.ಆರ್) ಸಮೀಕ್ಷೆ 460 ದಶಲಕ್ಷ ಯುವಕರಲ್ಲಿ ಶೇ 75ರಷ್ಟು ಅಕ್ಷರ ಬಲ್ಲವರು ಎಂದು ಹೇಳಿದೆ. ಆದರೆ ಶೋಷಿತ ವರ್ಗಗಳಲ್ಲಿ ಶೇಕಡಾವಾರು ಎಷ್ಟು ಜನ ಅಕ್ಷರ ಬಲ್ಲವರಾಗಿದ್ದಾರೆ ಎನ್ನುವುದು ಬಹು ಮುಖ್ಯ.ಜುಲೈ ತಿಂಗಳಲ್ಲಿ ಲೋಕಾಯುಕ್ತರ ಅವಧಿ ಮುಗಿಯುವುದಕ್ಕಿಂತ ಮೊದಲೇ ಒಂದು ದಿನವೂ ಸ್ಥಾನ ಖಾಲಿ ಇಲ್ಲದಂತೆ ಹೊಸ ಲೋಕಾಯುಕ್ತರನ್ನು ನೇಮಕ ಮಾಡಲಾಗಿತ್ತು. ಜ್ಞಾನ ಆಯೋಗದ ಅವಧಿಯನ್ನು ಸಕಾಲಕ್ಕೆ ಸರಿಯಾಗಿ ವಿಸ್ತರಿಸಲಾಗಿದೆ. ಆದರೆ ಹಿಂದುಳಿದ ವರ್ಗಗಳ ಆಯೋಗದ ರಚನೆಯ ಬಗ್ಗೆ ಇನ್ನೂ ಕ್ರಮವಿಲ್ಲ.ಸರ್ಕಾರ ನಡೆಸುವವರಿಗೆ ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ ವರ್ಗಗಳ ಬಗ್ಗೆ ಇಷ್ಟೊಂದು ಅಸಡ್ಡೆ ಏಕೆ?

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.