ಅಲಿ ಆಸ್ತಿ ಅಗಾಧ ಏರಿಕೆ
ನವದೆಹಲಿ (ಪಿಟಿಐ): ಪುಣೆ ಮೂಲದ ಹಂದಿ ಉದ್ಯಮಿ ಹಸನ್ ಅಲಿ ಖಾನ್ ಅವರ ಆಸ್ತಿ ಕಳೆದ ಆರು ವರ್ಷಗಳಲ್ಲಿ ನೂರು ಪಟ್ಟು ಹೆಚ್ಚಾಗಿದ್ದು, 529 ಕೋಟಿಯಿಂದ 54,268 ಕೋಟಿಗೆ ಹೆಚ್ಚಿದೆ ಎಂದು ಸಂಸತ್ತಿನಲ್ಲಿ ಶುಕ್ರವಾರ ಮಂಡನೆಯಾದ 2006-07ರ ಸಾಲಿನ ಮಹಾಲೇಖಪಾಲರ ವರದಿಯಲ್ಲಿ ತಿಳಿಸಲಾಗಿದೆ.
ಸದ್ಯ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಹಸನ್ ಅಲಿ ಕೋಟ್ಯಂತರ ರೂಪಾಯಿ ಗಳಿಸಿದ್ದರೂ ಕಳೆದ ಹಲವು ವರ್ಷಗಳಿಂದ ಸರ್ಕಾರಕ್ಕೆ ತೆರಿಗೆ ತುಂಬಿಲ್ಲ.
ಆದಾಯ ತೆರಿಗೆಯ ಲೆಕ್ಕಪರಿಶೋಧನೆ ನಡೆಸಿರುವ ತೆರಿಗೆ ಇಲಾಖೆಯ ಅಧಿಕಾರಿಗಳ ಪ್ರಕಾರ, 2001-02ರಲ್ಲಿದ್ದ 528.9 ಕೋಟಿಯಷ್ಟಿದ್ದ ಹಣ 2002-03ರಲ್ಲಿ 540.7 ಕೋಟಿ ಮತ್ತು 2006-07ರಲ್ಲಿ 54,268 ಕೋಟಿಯಷ್ಟಾಯಿತು. ಅಲ್ಲದೇ 2001-02ರಿಂದ 2003-04 ಮತ್ತು 2005ರಿಂದ 2007ರ ವರೆಗಿನ ತೆರಿಗೆ ಪಾವತಿಸಿಲ್ಲ. ಆದರೆ, ಮೇ 2007ರಲ್ಲಿ ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿರುವ ಸಂದರ್ಭದಲ್ಲಿ ಆ ಸಾಲಿನ ತೆರಿಗೆ ಭರಿಸಿದ್ದಾನೆ ಎಂದು ವಿವರಿಸಲಾಗಿದೆ.
ಹಸನ್ ಅಲಿ ನಿಖರವಾದ ಆಸ್ತಿಯ ಮೊತ್ತ ತಿಳಿಸದೇ 4,056 ಕೋಟಿ ರೂಪಾಯಿ ಬದಲಾಗಿ ಕೇವಲ 706.1 ಕೋಟಿ ಮತ್ತು 10,033.3 ಕೋಟಿ ಬದಲು 9,756.9 ಕೋಟಿ ರೂಪಾಯಿ ತೆರಿಗೆ ಸಲ್ಲಿಸುವ ಮೂಲಕ ತೆರಿಗೆ ಇಲಾಖೆಗೆ ವಂಚನೆ ಮಾಡಿದ್ದಾನೆ ಎಂದು ವಾರ್ಷಿಕ ಲೆಕ್ಕ ಪರಿಶೋಧನೆಯಿಂದ ಕಂಡುಕೊಳ್ಳಲಾಗಿದೆ. ಮತ್ತು 2008-09ರ ವರೆಗೆ ಹಸನ್ ಅಲಿಯಿಂದ 2 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸಬೇಕಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಒಟ್ಟಾರೆ ಹಸನ್ ಅಲಿ ಹಾಗೂ ಇನ್ನಿತರ ಇಬ್ಬರು ಸರ್ಕಾರಕ್ಕೆ ಪಾವತಿಸಬೇಕಿರುವ ತೆರಿಗೆ ಮೊತ್ತ 75,000 ಕೋಟಿ ರೂಪಾಯಿ ಎಂಬುದನ್ನು ವರದಿ ಒತ್ತಿ ಹೇಳಿದೆ.
ಗುರುವಾರ ಜಾರಿ ನಿರ್ದೇಶನಾಲಯಕ್ಕೆ ಹಸನ್ ಅಲಿ ಶರಣಾಗಿದ್ದ. ಆದರೆ, ಸುಪ್ರೀಂಕೋರ್ಟ್ ಆತನ ಜಾಮೀನು ರದ್ದುಪಡಿಸಿ ಮತ್ತೆ ನಾಲ್ಕು ದಿನಗಳವರೆಗೆ ಜಾರಿ ನಿರ್ದೇಶನಾಲಯ ತನ್ನ ವಶದಲ್ಲಿಟ್ಟುಕೊಳ್ಳುವಂತೆ ಸೂಚಿಸಿತ್ತು.
ನ್ಯಾಯಾಂಗ ಬಂಧನಕ್ಕೆ: ನಾಲ್ಕು ದಿನಗಳ ವರೆಗೆ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿದ ನಂತರವೂ ಹಸನ್ ಅಲಿಯನ್ನು ಜೈಲಿನಲ್ಲಿಯೇ ಇಡಬೇಕು. ಮುಂದಿನ ಆದೇಶ ಹೊರಬೀಳುವ ತನಕ ಆತ ಜಾಮೀನಿನ ಮೇಲೆ ಹೊರಬರಲು ಅವಕಾಶ ಇಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ತಿಳಿಸಿದೆ.
ಹಸನ್ ಅಲಿಗೆ ಗುರುವಾರ ಕೆಳ ನ್ಯಾಯಾಲಯ ನೀಡಿದ್ದ ಜಾಮೀನು ಆದೇಶವನ್ನು ತಡೆಹಿಡಿದಿರುವ ಸುಪ್ರೀಂಕೋರ್ಟ್, ಮುಂದಿನ ಆದೇಶ ಬರುವ ತನಕ ಜಾಮೀನು ಆದೇಶ ರದ್ದುಗೊಂಡಿರುತ್ತದೆ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.