ಅಲೆಗಳು ಕಡೆದ ಹೂದಾನಿ ದ್ವೀಪ

7
ನೋಟ ನವನವೀನ

ಅಲೆಗಳು ಕಡೆದ ಹೂದಾನಿ ದ್ವೀಪ

Published:
Updated:
ಅಲೆಗಳು ಕಡೆದ ಹೂದಾನಿ ದ್ವೀಪ

ನೀ  ರ ಅಲೆಗಳು ಕಲ್ಲುಗುಡ್ಡದಲ್ಲಿ ಕಲ್ಲು ಹೂದಾನಿ ರೂಪಿಸಿರುವುದು ಕೆನಡಾ ದೇಶದಲ್ಲಿ. ಬೆಂಕಿಯ ಬಳಿ ಇಟ್ಟ ಬೆಣ್ಣೆ ಕರಗುವಂತೆ ನೀರಿನ ಅಲೆಯ ಸಂಪರ್ಕಕ್ಕೆ ಬಂದ ಕಲ್ಲುಗುಡ್ಡ ಇಲ್ಲಿ ಹೂದಾನಿ ರೂಪ ಪಡೆದಿದೆ. ಈ ಕಲ್ಲು ಹೂಕುಂಡದ ರಚನೆಗಳನ್ನು, ಕೆನಡಾ ದೇಶದ ಆಂಟಾರಿಯೋ ರಾಜ್ಯದ ಟೊಬರಮೋರಿ ಊರಿನ ಪಕ್ಕ ಇರುವ ಹ್ಯೊರಾನ್ ಮಹಾಸರೋವರದಲ್ಲಿ ಇರುವ ‘ಫ್ಲವರ್ ಪಾಟ್’ ದ್ವೀಪದಲ್ಲಿ ನೋಡಬಹುದು. ಅಂದಹಾಗೆ, ಹ್ಯೊರಾನ್ ಪ್ರಪಂಚದ ಮೂರನೇ ದೊಡ್ಡ ಸಿಹಿನೀರಿನ ಮಹಾಸರೋವರ.ಬೇಸಿಗೆ ಕಾಲದಲ್ಲಿ ಕೆನಡಾದ ಜನ ನೀರಿರುವ ಸ್ಥಳಗಳಿಗೆ ಮುಗಿಬೀಳುತ್ತಾರೆ. ಅವರು ಪ್ರವಾಸ ಪ್ರಿಯರು. ನಾನು ಕೆನಡಾದಲ್ಲಿ ಇದ್ದಾಗ ‘ಫ್ಲವರ್ ಪಾಟ್’ ದ್ವೀಪಕ್ಕೆ ಹೋಗಿ ಅಲ್ಲಿಯ ಸೌಂದರ್ಯ ಸವಿಯಲು, ಪರಿಸರ ಪರಿಚಯಿಸಿಕೊಳ್ಳಲು ಆತುರನಾಗಿದ್ದೆ. ನಾನು ಅಲ್ಲಿಗೆ ಹೋದುದು ಮೇ ತಿಂಗಳಲ್ಲಿ. ಟೊಬರಮೋರಿ ಪ್ರದೇಶ ಸಸ್ಯವಿಜ್ಞಾನಿಗಳಿಗೆ, ಛಾಯಾಚಿತ್ರಗಾರರಿಗೆ, ಕಾಲ್ನಡಿಗೆ ಪ್ರಿಯರಿಗೆ ಹಾಗೂ ಪರಿಸರಪ್ರೇಮಿಗಳಿಗೆ ನಂದನವನ.

ಈ ದ್ವೀಪ ಪರಿಶುದ್ಧ ಗಾಳಿ, ನೀರು ಮತ್ತು ಸುಂದರ ದೃಶ್ಯಗಳಿಗೆ ಪ್ರಸಿದ್ಧವಾಗಿದೆ. ಅಂದಹಾಗೆ, ಬೇಸಿಗೆಯಲ್ಲಿ ಮಾತ್ರ ಇಲ್ಲಿಗೆ ಹೋಗಲು ಸಾಧ್ಯ, ಚಳಿಗಾಲದಲ್ಲಿ ಕರುಳು ಕೊರೆಯುವಷ್ಟು ವಿಪರೀತ ಚಳಿ. ಹ್ಯೊರಾನ್ ಸರೋವರದ ನೀರಿನ ಅಲೆಗಳು ಪಕ್ಕದಲ್ಲಿರುವ ಸುಣ್ಣದ ಕಲ್ಲಿನಗುಡ್ಡಕ್ಕೆ ಮತ್ತೆ ಮತ್ತೆ ಅಪ್ಪಳಿಸಿವೆ.

ನೀರಿನ ಪ್ರಮಾಣ ಕಡಿಮೆಯಾದಾಗ ಕೆಳಗಿನ ಭಾಗ ಹೆಚ್ಚು ಕರಗಿ ಕರಗಿ ಕಲ್ಲು ಹೂದಾನಿ ರೂಪ ಪಡೆದುಕೊಂಡಿದೆ. ಒಂದು ಚಿಕ್ಕದು, ಇನ್ನೊಂದು ದೊಡ್ಡದು – ೬೦ ಅಡಿ ಎತ್ತರವಿದೆ. ಹೂದಾನಿ ರೂಪದ ದಿನ್ನೆಗಳಿಗೆ ೧೮೨೦ರಲ್ಲಿ ‘ಫ್ಲವರ್ ಪಾಟ್ಸ್’ ಎಂದು ಹೆಸರಿಸಲಾಯಿತು. 

                                

ಈ ದ್ವೀಪಕ್ಕೆ ಟೋಬರಮೋರಿಯಿಂದ ಬೋಟಿನಲ್ಲಿ ಪ್ರಯಾಣಿಸಬೇಕು. ಮಾರ್ಗ ಮಧ್ಯ ನೀರಿನಲ್ಲಿ ಮುಳುಗಿಹೋದ ಹಡಗುಗಳ ಅವಶೇಷಗಳನ್ನು ನೋಡಬಹುದು. ಇದರಿಂದ ನೀರಿನ ಪಾರದರ್ಶಕತೆ ಎಷ್ಟು ಎನ್ನುವುದು ತಿಳಿಯುತ್ತದೆ.

ಮಹಾಸರೋವರದಲ್ಲಿ ಚಿಕ್ಕ–ದೊಡ್ಡ ೨೫ ದ್ವೀಪಗಳಿವೆ, ಅವುಗಳ ಪೈಕಿ ಕೆಲವು ಸಿರಿವಂತರ ವಶದಲ್ಲಿವೆ. ಸುಮಾರು ೨೫ ಹಡಗುಗಳು ಸರೋವರದಲ್ಲಿ ಮುಳುಗಿವೆ. ಹಡಗುಗಳ ಓಡಾಟದ ಸುರಕ್ಷತೆಗೆ ಆರು ದೀಪಗೃಹಗಳನ್ನು (ಲೈಟ್-ಹೌಸ್) ನಿರ್ಮಿಸಲಾಗಿದೆ.ಹೂದಾನಿ ದ್ವೀಪದಲ್ಲಿ ಗುಹೆಗಳಿವೆ, ಹೂಬಳ್ಳಿಗಳು, ಜಲಸಸ್ಯಗಳು, ಕೆಂಪು ಅಳಿಲು, ಕೆಂಪು ಜಿಂಕೆ, ಹಾಗೂ ಕೆಂಪು ನರಿಗಳಿವೆ. ವಿವಿಧ ಬಗೆಯ ಪಕ್ಷಿಗಳಿವೆ, ಕಾಲ್ನಡಿಗೆಗೆಂದು ೪.೩ ಕಿ.ಮೀ. ಸುರಕ್ಷಿತ ಕಾಲುದಾರಿ ಇದೆ. ಕಾಲುದಾರಿಯಲ್ಲಿ ಹೋದರೆ ಕಾಡಿನ ಪ್ರಾಣಿಗಳ ಓಡಾಟ ನೋಡಬಹುದು.

ಸಾಮಾನ್ಯವಾಗಿ ಸರೋವರದ ದಂಡೆಗಳು ಉಸುಕಿನಿಂದ ಕೊಡಿರುತ್ತವೆ. ಆದರೆ ಹೂದಾನಿ ದ್ವೀಪದ ದಡ ಬಿಳಿ ಪಾಟಿಕಲ್ಲಿನ ತುಂಡುಗಳಿಂದ ತುಂಬಿದೆ.ಇಲ್ಲಿ ಊಟ, ತಿಂಡಿತಿನಿಸು, ವಸತಿ ವ್ಯವಸ್ಥೆ ಯಾವುದೂ ದೊರೆಯುವುದಿಲ್ಲ. ನಮ್ಮ ಊಟ-ತಿಂಡಿ ಕಟ್ಟಿಕೊಂಡು ಹೋಗಬೇಕಾಗುತ್ತದೆ. ಇಲ್ಲಿಂದ ಏನೂ ತೆಗೆದುಕೊಂಡು ಹೋಗುವ ಹಾಗಿಲ್ಲ– ನೆನಪು ಹಾಗೂ ಛಾಯಾಚಿತ್ರಗಳನ್ನು ಹೊರತುಪಡಿಸಿ.

–ಕೆ. ರಾಮಚಂದ್ರ, ಹೊಸಪೇಟೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry