`ಅಲೆಮಾರಿಗಳಿಗೆ ವಸತಿ'

7

`ಅಲೆಮಾರಿಗಳಿಗೆ ವಸತಿ'

Published:
Updated:
`ಅಲೆಮಾರಿಗಳಿಗೆ ವಸತಿ'

ಬೆಳಗಾವಿ: `ಜಿಲ್ಲೆಯಲ್ಲಿ 15 ಸಾವಿರದವರೆಗೆ ಅಲೆಮಾರಿ/ ಅರೆ ಅಲೆಮಾರಿ ಜನಾಂಗವಿದೆ. ಈ ಜನಾಂಗದ ಅಭಿವೃದ್ಧಿಗೆ ಸರ್ಕಾರ ಯೋಜನೆಗಳನ್ನು ಹಾಕಿಕೊಂಡಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು' ಎಂದು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ತಿಳಿಸಿದರು.ಗುರುವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಅಲೆಮಾರಿ/ಅರೆ ಅಲೆಮಾರಿ ಜನಾಂಗದ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ಅಲೆಮಾರಿ ಜನಾಂಗದವರು ನಿವೇಶನ ಹೊಂದಿದಲ್ಲಿ ಅಂಥವರಿಗೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆಯಡಿ ಮನೆ ನಿರ್ಮಿಸಲು ಅನುದಾನ ನೀಡಲಾಗುವುದು. ನಿವೇಶನ ಹೊಂದದಿರುವ ಜನಾಂಗಕ್ಕೆ 2 ಎಕರೆ ಜಮೀನು ಖರೀದಿಸಿ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.ಈಗಾಗಲೇ ರಾಮದುರ್ಗ ತಾಲ್ಲೂಕಿನ ಗೊಡಚಿಯಲ್ಲಿ 3 ಎಕರೆ ಜಮೀನು, ಅಥಣಿಯಲ್ಲಿ 2 ಎಕರೆ ಜಮೀನು ಪಡೆಯಲಾಗಿದೆ. ಹುಕ್ಕೇರಿಯಲ್ಲಿ 2 ಎಕರೆ, ಗೋಕಾಕದಲ್ಲಿ 1.36 ಎಕರೆ, ಬೈಲಹೊಂಗಲದಲ್ಲಿ 2 ಎಕರೆ, ಚಿಕ್ಕೋಡಿ ತಾಲ್ಲೂಕಿನ 8 ಗ್ರಾಮಗಳಲ್ಲಿ ತಲಾ 2 ಎಕರೆ, ಸವದತ್ತಿಯಲ್ಲಿ 2 ಎಕರೆ ಜಮೀನು ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಸಭೆಗೆ ತಿಳಿಸಿದರು.ಗೊಡಚಿಯಲ್ಲಿ 51 ನಿವೇಶನದಾರರಿಗೆ ಮನೆ ನಿರ್ಮಿಸಲು ಮಂಜೂರಾತಿ ನೀಡಿದೆ. ಮನೆ ನಿರ್ಮಿಸುವ ಫಲಾನುಭವಿಗಳ ಆಯ್ಕೆಯನ್ನು ಪ್ರತಿ ಗ್ರಾಮ ಪಂಚಾಯತಿಗಳಿಂದ ಅನುಮೋದನೆಯೊಂದಿಗೆ ಜಿಲ್ಲಾ ಪಂಚಾಯಿತಿಗೆ ಕಳುಹಿಸಲು ಸೂಚಿಸಿದ ಅವರು, ಇನ್ನುಳಿದ ತಾಲ್ಲೂಕಿನಲ್ಲಿ ಜಮೀನು ಪಡೆಯಲು ಜನವರಿ 31ರೊಳಗೆ ವರದಿ ಒಪ್ಪಿಸಲು ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಪ್ರಕಾಶ ಹರಗಾಪುರ ಅವರಿಗೆ ಸೂಚಿಸಿದರು. ಅಲೇಮಾರಿ ಜನಾಂಗದವರು ಮೂಲ ಸೌಕರ್ಯ ಪಡೆದು ಸಾಮಾಜಿಕ, ಆರ್ಥಿಕ ಮತ್ತು ಶಿಕ್ಷಣ ಅಭಿವೃದ್ಧಿ ಹೊಂದಬೇಕು. ಅಲೆಮಾರಿ ಜನಾಂಗದ ಪ್ರೌಢಶಾಲಾ ಮಕ್ಕಳಿಗಾಗಿ ಪ್ರಸಕ್ತ ಸಾಲಿಗಾಗಿ ವಿಶೇಷ ಪ್ರೋತ್ಸಾಹಧನ 2.30 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸೇರಬಯಸುವ ಮಕ್ಕಳಿಂದ ಅರ್ಜಿ ಬಂದರೆ, ಅಂಥ ಮಕ್ಕಳಿಗೆ ಯಾವುದೇ ಪ್ರವೇಶ ಪರೀಕ್ಷೆ ಇಲ್ಲದೇ ಸೇರಿಸಿಕೊಳ್ಳಲಾಗುವುದು ಎಂದು  ತಿಳಿಸಿದರು.ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ ಸರ್ಕಾರದ ಮೂಲ ಸೌಕರ್ಯ ಹಾಗೂ ಶಿಕ್ಷಣ, ಆರೋಗ್ಯ, ಕೃಷಿ, ತೋಟಗಾರಿಕೆ, ಉದ್ಯೋಗ ಇತ್ಯಾದಿಗಳ ಬಗ್ಗೆ ಆಯಾ ಇಲಾಖೆಗಳಿಂದ ಸುತ್ತೋಲೆ ಹೊರಡಿಸಲು ಅಧಿ ಕಾರಿಗಳಿಗೆ ಅವರು ಸೂಚನೆ ನೀಡಿದರು.ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಒಕ್ಕೂಟದ ಅಧ್ಯಕ್ಷ ಶಿವಾನಂದ ಪಾಚಂಗಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿ.ಶಂಕರ, ಜಿಲ್ಲೆಯ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಅಲೆಮಾರಿ, ಅರೆ ಅಲೆಮಾರಿ ಜನಾಂಗದ ನಾಮ ನಿರ್ದೇಶಿತ ತಾಲ್ಲೂಕು ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry