ಅಲೆಮಾರಿಗಳ ಅಕ್ಷರ ಕ್ರಾಂತಿ

7

ಅಲೆಮಾರಿಗಳ ಅಕ್ಷರ ಕ್ರಾಂತಿ

Published:
Updated:
ಅಲೆಮಾರಿಗಳ ಅಕ್ಷರ ಕ್ರಾಂತಿ

ಅಪ್ಪ-ಅಮ್ಮನ ಜತೆ ಊರಿಂದ ಊರಿಗೆ ಅಲೆಯುವ ಕಾಲುಗಳು ಈಗ ಶಾಲೆಯ ಕಡೆ ಹೆಜ್ಜೆ ಹಾಕುತ್ತಿವೆ. ಬೆಳ್ಳಂ ಬೆಳಗ್ಗೆ ಎದ್ದು ಶುಚಿಯಾಗಿ, ಸಮವಸ್ತ್ರ ಧರಿಸಿ, ಪಠ್ಯ ಪುಸ್ತಕ ತುಂಬಿದ ಬ್ಯಾಗನ್ನು ಬೆನ್ನಿಗೇರಿಸಿ ಶಿಸ್ತಿನಿಂದ ಸಾಗುವ ಆ ಮಕ್ಕಳ ಬದುಕಿನಲ್ಲಿ ಬದಲಾವಣೆಯ ಬೆಳಕು ಮೂಡಿದೆ.

ಇದು ಅಲೆಮಾರಿ `ಬುಡಬುಡಿಕೆ' ಸಮುದಾಯದಲ್ಲಾದ ಅಕ್ಷರ ಕ್ರಾಂತಿ. ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ದೋಣನಕಟ್ಟೆ ಸಮೀಪದ ರಂಗಾಪುರ ಅಲೆಮಾರಿಗಳ ನಿಲ್ದಾಣ. ಅಲೆಮಾರಿತನಕ್ಕೆ ಇತಿಶ್ರೀ ಹೇಳಿದ ಮೂವತ್ತು ಬುಡಬುಡಿಕೆ ಕುಟುಂಬಗಳು ನೆಲೆ ನಿಂತಿವೆ.  

ಹೊತ್ತು ಮುಳುಗುವ ವೇಳೆಗೆ ಒಂದು ಹಳ್ಳಿ, ಬೈಗಾದರೆ ಮತ್ತೊಂದು ಹಳ್ಳಿಯಲ್ಲಿ ಬದುಕು ಅರಸುವ ಬುಡಬುಡಿಕೆ ಸಮುದಾಯದವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಅಪರೂಪ. ಮಕ್ಕಳನ್ನು ದುಡಿಮೆಗೆ ಹಚ್ಚುವ ಮೂಲಕ ಅವರನ್ನೂ ಅಲೆಮಾರಿ ಬದುಕಿನ ವಾಹಿನಿಗೆ ಸೇರಿಸುವರು. ಶಾಸ್ತ್ರ ಹೇಳುವ ತಮ್ಮ ಮೂಲ ವೃತ್ತಿಯನ್ನು ಕಲಿಸಿ ಬದುಕಿನ ಮಾರ್ಗ ತೋರಿಸುವರು. ಅಲೆಮಾರಿ ಬದುಕಿನಿಂದಾಗಿ ಈ ಸಮುದಾಯ ಅಕ್ಷರ ಜ್ಞಾನದಿಂದ ದೂರವೇ ಉಳಿದಿದೆ. ಆದರೆ ರಂಗಾಪುರದ ಬುಡಬುಡಿಕೆ ಸಮುದಾಯದವರು ಮಾತ್ರ ತುಸು ಭಿನ್ನ ಹಾದಿ ತುಳಿದಿದ್ದಾರೆ. ಅಲೆಮಾರಿತನಕ್ಕೆ ವಿರಾಮ ಹೇಳಿ ನೆಲೆ ನಿಂತಿದ್ದಾರೆ. ಅಕ್ಷರ ಜ್ಞಾನದ ಮಹತ್ವ ಅರಿತು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ.   

ಬೆಳಿಗ್ಗೆ ಬೆಳಕು ಹರಿದ ತುಸು ಹೊತ್ತಿನಲ್ಲಿಯೇ ಕಪ್ಪಿಡಿದ ಹೆಂಚಿನ ಮೇಲೆ ತನ್ನವ್ವ ರೊಟ್ಟಿ ಸುಡುವ ವೇಳೆಗೆ ಸೋಗೆ ಗರಿ ನಡುವಿನ ಬಚ್ಚಲಿನಲ್ಲಿ ಸ್ನಾನ ಮುಗಿಸುವ ಬುಡಬುಡಿಕೆ ಮಕ್ಕಳು, ಲಗು ಬಗೆಯಲ್ಲಿ ತಿಂಡಿ ತೀರ್ಥ ಮುಗಿಸುವರು. ಕನ್ನಡಿಗೆ ಮುಖ ತೋರಿ, ಕ್ರಾಪು ಬಾಚಿ, ಪುಸ್ತಕ ತುಂಬಿದ ಬ್ಯಾಗು ಹಿಡಿದು ಮನೆಯಿಂದ ಶಾಲೆಯತ್ತ ಕಾಲು ಕೀಳುವರು. ಇಲ್ಲಿನ ಮಕ್ಕಳು ನಿತ್ಯವೂ ಸುಮಾರು ಒಂದೂವರೆ ಮೈಲಿ ದೂರದ ದೋಣನಕಟ್ಟೆ ಪ್ರಾಥಮಿಕ ಶಾಲೆಗೆ ಸಮವಸ್ತ್ರದಲ್ಲಿ ಶಿಸ್ತಾಗಿ ಅಕ್ಷರ ಅರಸಿ ನಡೆಯುವಾಗ, ದಾರಿ ಹೋಕರಿಂದ ಶಹಬ್ಬಾಸ್! ಹೇಳಿಸಿಕೊಂಡ ಕ್ಷಣಗಳು ಅಪಾರ. 

ಹೆಚ್ಚುತ್ತಿದೆ ಮಕ್ಕಳ ಪ್ರಮಾಣ

ಮತ್ತೊಂದು ವಿಶೇಷವೆಂದರೆ ಈ ಶಾಲೆಗೆ ಪ್ರತಿ ವರ್ಷ ಈ ಮಕ್ಕಳು ಗಣನೀಯವಾಗಿ ದಾಖಲಾಗುತ್ತಿದ್ದಾರೆ. ಶಾಲಾ ಹಾಜರಾತಿಯಲ್ಲೂ ಮುಂದಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷ ದೋಣನಕಟ್ಟೆ ಶಾಲೆಯಲ್ಲಿ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ 65. ಇದರಲ್ಲಿ  ರಂಗಾಪುರದ ಮಕ್ಕಳ ಪಾಲು 20. ಈ ಸಂಖ್ಯೆ ಪ್ರತಿ ವರ್ಷ ಏರುಮುಖವಾಗಿಯೇ ಸಾಗುತ್ತಿದೆ. ಎಲ್ಲಾ ತರಗತಿಯಲ್ಲೂ ಈ ಮಕ್ಕಳ ಅಕ್ಷರ ಬೆಳಕು ಪ್ರಬಲವಾಗಿಯೇ ಪ್ರಕಾಶಿಸುತ್ತಿದೆ. ರಂಗಾಪುರದಿಂದ ಪ್ರತಿ ವರ್ಷ ಸರಾಸರಿ 20 ಮಕ್ಕಳಾದರೂ ಶಾಲೆಗೆ ದಾಖಲಾಗುತ್ತಿದ್ದಾರೆ. ಆಟ-ಪಾಠಗಳಲ್ಲಿ ಇತರ ಮಕ್ಕಳ ಜತೆ ಸಮಾನ ಸ್ಪರ್ಧೆ ಇದೆ.

ಪ್ರತಿಭಾ ಕಾರಂಜಿ ಸೇರಿದಂತೆ ಶಾಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ವರ್ಷ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಈ ಮಕ್ಕಳೂ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ್ದರು. ಆಗ ಇಡೀ ರಂಗಾಪುರದ ಜನರೆಲ್ಲ  ಕಾರ್ಯಕ್ರಮಕ್ಕೆ ಬಂದು ಆನಂದಿಸಿದ್ದರು ಎಂದು ಮಕ್ಕಳ ಸಾಧನೆಯನ್ನು ನೆನಪು ಮಾಡಿಕೊಳ್ಳುತ್ತಾರೆ ದೋಣನಕಟ್ಟೆ ಶಾಲೆಯ ಶಿಕ್ಷಕರು.

ಎರಡು ವರ್ಷ ಮೀರಿದ ಐದು ವರ್ಷದ ಒಳಗಿನ ಸುಮಾರು 20ಕ್ಕೂ ಹೆಚ್ಚಿನ ಮಕ್ಕಳು ರಂಗಾಪುರದಲ್ಲಿದ್ದಾರೆ. ಆದರೆ ಇವರ ಆರಂಭಿಕ ಪಠ್ಯ- ಪಠ್ಯೇತರ ಕಲಿಕೆಗೆ ಅಗತ್ಯವಾದ ಅಂಗನವಾಡಿ ಸೌಲಭ್ಯ ಮಾತ್ರ ಇಲ್ಲ. ಮಕ್ಕಳು ಕಲ್ಲು, ಮಣ್ಣಿನಲ್ಲಿ ಆಟವಾಡಿ ದಿನಕಳೆಯುತ್ತಾರೆ. ಮನೆಯಲ್ಲಿರುವ ಮುದುಕರಿಗೆ ಇವರ ಆರೈಕೆ ಹೊಣೆ. ದುಡಿಮೆ ಅರಸಿ ಹೋದವರು ಮರಳುವುದು ಸಂಜೆಯಾಗುವ ಕಾರಣ ದೋಣನಕಟ್ಟೆ ಅಂಗನವಾಡಿಗೆ ಮಕ್ಕಳನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಳಲು ಗ್ರಾಮಸ್ಥರದ್ದು.

`ನಮ್ಮ ಮಕ್ಕಳಿಗೂ ಒಂದು ಅಂಗನವಾಡಿ ಕೊಡಾಕೆ ಸಹಾಯ ಮಾಡಿ ಸಾಹೇಬ್ರೆ' ಎನ್ನುವ ಗ್ರಾಮದ ಹಿರಿಯ ರಾಮಯ್ಯ, ಗ್ರಾಮಕ್ಕೆ ಯಾರೇ ಅಪರಿಚಿತರು ಭೇಟಿ ನೀಡಿದರೂ ಈ ಕೋರಿಕೆ ಸಲ್ಲಿಸುವರು. ನಮ್ಮ ಹುಡುಗರು ಹೆಚ್ಚು ಅಂದರೆ 10ನೇ ಕ್ಲಾಸ್‌ವರಗೂ ಓದುತ್ತಾರೆ. ಆ ನಂತರ ದುಡಿಮೆಗೆ ಬೆಂಗಳೂರಿನ ದಾರಿ. ಹೆಚ್ಚು ಓದ್ಸೊ ಶಕ್ತಿ ನಮೆಗೆಲ್ಲಿದೆ' ಅಸಹಾಯಕತೆಯಿಂದ ಪ್ರಶ್ನಿಸುತ್ತಾರೆ ರಾಮಯ್ಯ.

ರಂಗಾಪುರದ ಬುಡಬುಡಿಕೆ ಮಕ್ಕಳ ಶಿಕ್ಷಣ ಯಾತ್ರೆ ಗ್ರಾಮೀಣ ಭಾಗದಲ್ಲಾಗುತ್ತಿರುವ ಬದಲಾವಣೆಗೆ ನಿದರ್ಶನ. ಅಕ್ಷರದ ಅರಿವಿನಿಂದ ನಗರಗಳತ್ತ ಉದ್ಯೋಗ ಅರಸಿ ತೆರಳುತ್ತಿದ್ದಾರೆ. ಅರೆಹೊಟ್ಟೆ ತುಂಬಿಸುವ ಮೂಲ ವೃತ್ತಿಗಳಿಂದ ತಮ್ಮ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುವುದನ್ನು ಮನಗಂಡಿದ್ದಾರೆ. ಆದರೆ ಈ ಬದಲಾವಣೆ ಉನ್ನತ ಶಿಕ್ಷಣದತ್ತ ಇವರನ್ನು ಕೊಂಡೊಯ್ಯದಿರುವುದು ವಿಪರ್ಯಾಸ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry