ಅಲೆಮಾರಿ ಬುಡಕಟ್ಟುಗಳ ಬದುಕಿನ ಹಕ್ಕಿಗಾಗಿ...

7

ಅಲೆಮಾರಿ ಬುಡಕಟ್ಟುಗಳ ಬದುಕಿನ ಹಕ್ಕಿಗಾಗಿ...

Published:
Updated:

ಎಸೆದ ಕಲ್ಲಿಗೆ ತೂಕ ಇರುವುದಿಲ್ಲ ಎನ್ನುವಂತೆ ನಮ್ಮ ದೇಶದಲ್ಲಿ ಗುರುತಿಲ್ಲದ, ಅಸಂಘಟಿತರಾದ, ಓಟ್‌ಬ್ಯಾಂಕ್‌ಗಳೂ ಆಗದ ಸಂಸ್ಕೃತಿ, ಶಿಕ್ಷಣ, ಆರ್ಥಿಕ ಶಕ್ತಿ, ಅಧಿಕಾರ, ಜಾತಿ ಪತ್ರ, ರೇಷನ್ ಕಾರ್ಡ್ ಇಲ್ಲದ, ಹೊತ್ತಿನ ಊಟಕ್ಕಾಗಿ ಹೆತ್ತ ಮಕ್ಕಳನ್ನೇ ಮಾರಿಕೊಂಡು ಬದುಕುತ್ತಿರುವ ಅಸಂಖ್ಯ ಅಲೆಮಾರಿ ಬುಡಕಟ್ಟು ಜನರು ನಮ್ಮ ನಡುವೆ ಬದುಕುತ್ತಿದ್ದಾರೆ.



 ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದ ನಂತರವೂ ದೊಡ್ಡ ನಗರಗಳು ಮತ್ತು ಪಟ್ಟಣಗಳ ಆಸುಪಾಸಿನಲ್ಲಿಯೇ ಇವರು ಕಷ್ಟದಲ್ಲಿಯೇ ಬದುಕಿನ ನೊಗ ಎಳೆಯುತ್ತಿದ್ದಾರೆ. ಈ ಬುಡಕಟ್ಟು ಜನ ಸಮುದಾಯಗಳ ಭಾಷೆ, ಸಂಸ್ಕೃತಿ, ಆಚರಣೆ, ಕಲೆ, ನಂಬಿಕೆಗಳು, ಮೌಖಿಕ ಸಾಹಿತ್ಯ ದಿನೇ ದಿನೇ ನಾಶವಾಗುತ್ತಿವೆ. 



  ವಿಶ್ವಸಂಸ್ಥೆ 1948ರ ಡಿಸೆಂಬರ್ 10 ರಂದು `ಮಾನವ ಹಕ್ಕುಗಳ ಘೋಷಣೆ~ ಮಾಡಿತು. ಇದನ್ನು `ಸಮಗ್ರ ಮಾನವ ಜನಾಂಗದ ಮ್ಯಾಗ್ನಕಾರ್ಟ~ ಆಗಬೇಕೆಂದು ಅಂದಿನ ಅಧಿವೇಶನದ ಅಧ್ಯಕ್ಷ ಏಲಿನಾರ್ ರೋಸ್‌ವೆಲ್ಟ್ ಘೋಷಿಸಿದ್ದರು.

 

ಮಾನವ ಹಕ್ಕುಗಳ ಪ್ರಕಾರ ಒಬ್ಬ ವ್ಯಕ್ತಿ ತನ್ನ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಕನಿಷ್ಠ ಅಗತ್ಯಗಳನ್ನು ಪೂರೈಸಬೇಕು ಎಂಬುದೇ ಆಗಿದೆ. ಸಾಕ್ರೆಟಿಸ್, ಪ್ಲೇಟೊ, ಅರಿಸ್ಟಾಟಲ್, ಸಿಸೆರೋ ಮೊದಲಾದವರು ಹಕ್ಕುಗಳು ನಿಸರ್ಗದತ್ತ, ಹುಟ್ಟಿನಿಂದ ಬಂದದ್ದು ಎಂದು ಪ್ರತಿವಾದಿಸಿದ್ದರು.

 

ಮಾನವ ಹಕ್ಕುಗಳ ಪ್ರತಿಪಾದಕ `ರೋಸೊ~ ಅದನ್ನು  `ಸಹ ಸಮಾಜ ಹಿತ ತತ್ವಾಧಾರಿತ ಹಕ್ಕು~ ಎಂದೇ ಪ್ರತಿಪಾಲಿಸಿದ್ದಾನೆ.



 1774 ಮತ್ತು 1871ರ ನಡುವಿನ ಭಾರತದ ಇತಿಹಾಸ, 1857 ರ ಸಿಪಾಯಿ ದಂಗೆಯಂತಹ ರಾಜಕೀಯ ಕಾರಣಗಳಿಂದಾಗಿ 1793ರಲ್ಲಿ ಬ್ರಿಟಿಷರೊಂದಿಗೆ ಸಹಕರಿಸದ ಕೆಲ ಅಲೆಮಾರಿ ಬುಡಕಟ್ಟು ಸಮುದಾಯಗಳನ್ನು ಅಪರಾಧಿ ಪಟ್ಟಿಯಲ್ಲಿ ಸೇರಿಸಿ, 1871ರಲ್ಲಿ ಅದನ್ನು ಜಾರಿಗೊಳಿಸಲಾಯಿತು.

 

ಅಂದಿನಿಂದಲೂ ಈ ಸಮುದಾಯಗಳ ಮೇಲೆ ಬಲಾಢ್ಯರ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಲೇ ಇದೆ. ಇಂದು ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಅದನ್ನು ಮುಂದುವರಿಸಿದ್ದಾರೆ.



ಅರಣ್ಯವಾಸಿಗಳಾದ ಲಂಬಾಣಿಗಳು, ಜೇನು ಕುರುಬರು, ಕಾಡುಗೊಲ್ಲರು ಮುಂತಾದ ಸಮುದಾಯದವರು, ಕರಡಿ, ಹಾವು ಇತ್ಯಾದಿಗಳನ್ನು ಆಡಿಸುವ ಅನೇಕ ಸಮುದಾಯಗಳ ಜನರಿಗೆ ದೌರ್ಜನ್ಯ ಇಂದಿಗೂ ತಪ್ಪಿಲ್ಲ.



 ಮಹಾನಗರಗಳಿಗೆ, ಕಾಫಿ ತೋಟಗಳಿಗೆ ಕೆಲಸಕ್ಕೆ ಬರುವ ಅಲೆಮಾರಿ ಬುಡಕಟ್ಟು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತವೆ. ಆದರೆ ಈ ದೌರ್ಜನ್ಯದ ಪ್ರಕರಣಗಳು ಬೆಳಕಿಗೆ ಬರುವುದೇ ಇಲ್ಲ.



ಬಂದರೂ ತಪ್ಪಿತಸ್ತರಿಗೆ ಶಿಕ್ಷೆ ಆಗುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಅತ್ಯಾಚಾರಕ್ಕೆ ಒಳಗಾದವರನ್ನೇ ಕೊಂದು ಹಾಕಿದ ಉದಾಹರಣೆಗಳೂ ಇವೆ.



ದೇಶದಲ್ಲಿ ಸುಮಾರು 20 ಕೋಟಿಯಷ್ಟು ಜನಸಂಖ್ಯೆ ಇರುವ ಬುಡಕಟ್ಟು ಸಮುದಾಯಗಳು ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಅನೇಕ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರ ಈ ಕುರಿತು ವರದಿ ಸಲ್ಲಿಸುವಾಗ `ನಮ್ಮ ರಾಜ್ಯದಲ್ಲಿ ಅಲೆಮಾರಿ ಬುಡಕಟ್ಟುಗಳೇ ಇಲ್ಲ~ ಎಂದು ಬಿಂಬಿಸುತ್ತಿವೆ.



ಸರ್ಕಾರದ ಅಲೆಮಾರಿ ಬುಡಕಟ್ಟುಗಳ ಪಟ್ಟಿಯಲ್ಲಿ ಅನೇಕ ಸಮಸ್ಯೆಗಳಿವೆ. ಅವನ್ನು ಪರಿಷ್ಕರಿಸುವ ಕೆಲಸವೂ ಆಗಿಲ್ಲ.



ಬುಡ್ಗಜಂಗಮ, ಸುಡುಗಾಡು ಸಿದ್ದ, ದಕ್ಕಲಿಗರಿಗೆ ಅಸ್ಮಿತೆಯ (ಐಡೆಂಟಿಟಿ) ಸಮಸ್ಯೆ ಇದೆ. ಇವರಿಗೆ ಜಾತಿ ಪತ್ರಗಳನ್ನು ನೀಡುತ್ತಿಲ್ಲ. ಇವರ ಮಕ್ಕಳು  ಶಿಕ್ಷಣದಿಂದ ವಂಚಿತರಾಗಿದ್ದಾರೆ. ಮನೆ ಇಲ್ಲ, ಪಡಿತರ ಚೀಟಿ ಇಲ್ಲ. ವಂಜಾರರು ಬಂಜಾರರ ಲಾಭ ಪಡೆದರೆ. ಜಂಗಮರು, ಬುಡ್ಗ ಜಂಗಮರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ.



ಸರ್ಕಾರಗಳು ವಿಶ್ವವಿದ್ಯಾಲಯಗಳಲ್ಲಿ ಈ ಬುಡಕಟ್ಟುಗಳ ಅಧ್ಯಯನ ಪೀಠಗಳನ್ನು ಸ್ಥಾಪನೆ ಮಾಡಬೇಕು. ಅವುಗಳ ಅಭಿವೃದ್ಧಿಗಾಗಿ ನಿಗಮ, ಮಂಡಳಿ ಸ್ಥಾಪಿಸುವ ಅಗತ್ಯವಿದೆ. ದೇಸಿ ನೆಲೆಯಲ್ಲಿ ಅವರ ಅಭಿವೃದ್ಧಿ ಆಗಬೇಕಿದೆ.



ಬುಡಕಟ್ಟು ಜನರಿಗೆ ಸ್ವಂತಉದ್ಯೋಗ, ಅವರ ಮಕ್ಕಳಿಗೆ ವಿಶೇಷ ಶಾಲೆ ತೆರೆದು ಶಿಕ್ಷಣ ನೀಡಬೇಕು. ಮಾನವ ಹಕ್ಕುಗಳು ಅವರಿಗೆ ಸಿಕ್ಕಿವೆಯೇ ಎಂಬ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಬೇಕು.

 

ಅಲೆಮಾರಿ ಬುಡಕಟ್ಟು ಜನರ ಮಕ್ಕಳಿಗೆ ಆಂಧ್ರದಲ್ಲಿ ಮಕ್ಕಳ ವ್ಯಾಸಂಗಕ್ಕಾಗಿ ಸರ್ಕಾರ ವಿಶೇಷ ಪ್ರಮಾಣ ಪತ್ರ ನೀಡಿ ಅವರು ಇರುವ ಊರುಗಳಲ್ಲಿಯೇ ಶಾಲೆ ಪ್ರವೇಶಕ್ಕೆ ಅನುಮತಿ ನೀಡಿದೆ.



ಇಂತಹ ವ್ಯವಸ್ಥೆ ಕರ್ನಾಟಕದಲ್ಲೂ ಆಗಬೇಕು. ಜೀವಿಸುವ, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ, ಪೌಷ್ಠಿಕ ಆಹಾರ, ನೀರು ಮತ್ತಿತರ ಮೂಲ ಸೌಲಭ್ಯಗಳ ಜತೆಗೆ ಶೈಕ್ಷಣಿಕ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳನ್ನು ನೀಡಬೇಕು.



ರಾಜಕೀಯ, ಆರ್ಥಿಕ ಮತ್ತು ವ್ಯಕ್ತಿತ್ವದ ವಿಕಸನಕ್ಕೆ ಉತ್ತೇಜನ ನೀಡುವಂತಹ ಕಾರ್ಯಕ್ರಮಗಳನ್ನು ರೂಪಿಸಬೇಕು. ಬುಡಕಟ್ಟು ಜನರಲ್ಲಿ ಇರುವ  ಪ್ರದರ್ಶನ ಕಲೆಗಳು, ಕುಶಲ ಕಲೆಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಆರ್ಥಿಕ ನೆರವು ಒದಗಿಸಬೇಕು.



ರಾಜಕೀಯದಿಂದಲೇ ಬುಡಕಟ್ಟು ಜನರ ಉದ್ಧಾರ ಎಂಬುದು ಆಧುನಿಕ ಚಿಂತನೆ. ಆದರೆ ಕೆಲ ಬುಡಕಟ್ಟು ಜನರಿಗೆ ವಿಧಾನಸಭೆಯಲ್ಲಿ ಪ್ರಾತಿನಿಧ್ಯ ಸಿಕ್ಕಿದ್ದರೂ ಈ ವರ್ಗಗಳ ಜನರ ಅಭಿವೃದ್ಧಿ ಮರೀಚಿಕೆಯಾಗಿದೆ. ಈ ಸಮುದಾಯಗಳ ಸಂಘಟನೆಗೆ ಕೆಲವು ವ್ಯಕ್ತಿಗಳು ಪ್ರಯತ್ನಿಸುತ್ತಿದ್ದಾರೆ. ಅದೇ ಭರವಸೆಯ ಆಶಾಕಿರಣ.



 ಡಾ.ಎ.ಆರ್. ಗೋವಿಂದಸ್ವಾಮಿ

(ಪ್ರಧಾನ ಕಾರ್ಯದರ್ಶಿ, ಅಲೆಮಾರಿ

ಬುಡಕಟ್ಟು ಮಹಾಸಭಾ, ಬೆಂಗಳೂರು )

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry