ಅಲೆಮಾರಿ ಮನಸಿನ ಬಹುಮುಖ ಪ್ರತಿಭೆ

7

ಅಲೆಮಾರಿ ಮನಸಿನ ಬಹುಮುಖ ಪ್ರತಿಭೆ

Published:
Updated:
ಅಲೆಮಾರಿ ಮನಸಿನ ಬಹುಮುಖ ಪ್ರತಿಭೆ

ಮುಂಬೈ (ಪಿಟಿಐ): ಅಸ್ಸಾಂನ  ಸಾಂಸ್ಕೃತಿಕ ರಾಯಭಾರಿಯಂತಿದ್ದ ಹಜಾರಿಕಾ `ಬ್ರಹ್ಮಪುತ್ರ ನದಿಯ ಕವಿ~ ಎಂದು ಪ್ರಸಿದ್ಧರಾಗಿದ್ದರು. ಸೃಜನಶೀಲತೆ ಮತ್ತು ಪ್ರತಿಭೆಯ ಸಂಗಮವಾಗಿದ್ದ ಅವರು ತಮ್ಮನ್ನು ಎಂದಿಗೂ ಒಂದೇ ಕ್ಷೇತ್ರಕ್ಕೆ ಸೀಮಿತಗೊಳಿಸಿಕೊಳ್ಳಲಿಲ್ಲ. ಜನರು ಅವರನ್ನು ಸಂಗೀತಗಾರ, ಗಾಯಕ ಎಂದು ಗುರುತಿಸಿದ್ದರೂ, ಅವರಲ್ಲೊಬ್ಬ ಪತ್ರಕರ್ತನಿದ್ದ, ನಟನಿದ್ದ, ಕವಿಯಿದ್ದ, ಲೇಖಕನಿದ್ದ, ಲಾವಣಿ ಹಾಡುಗಾರನಿದ್ದ. ಮಕ್ಕಳಿಗಾಗಿ ರಸವತ್ತಾದ ಕಥೆ  ಪ್ರವಾಸ ಲೇಖನ ಬರೆದಿದ್ದರು. ಹಲವಾರು ಒಳ್ಳೆಯ ಚಿತ್ರಗಳನ್ನು ನಿರ್ಮಿಸಿದ್ದರು. ಸಾವಿರಕ್ಕೂ ಹೆಚ್ಚು ಕವನ ರಚಿಸಿದ್ದರು. ಸಂಬಂಧವೇ ಇರದ ರಾಜಕೀಯ ಕ್ಷೇತ್ರಕ್ಕೂ ಕಾಲಿರಿಸಿ ಶಾಸಕರಾಗಿದ್ದರು. ಇವೆಲ್ಲಕ್ಕೂ ಹೆಚ್ಚಾಗಿ ಹುಚ್ಚು ಅಲೆಮಾರಿ ಮನಸ್ಸಿತ್ತು. ಒಂದೇ ಕಡೆ ನಿಂತವರಲ್ಲ, ಒಂದಕ್ಕೆ ಜೋತು ಬಿದ್ದವರಲ್ಲ. ಹೀಗಾಗಿಯೇ ಅವರು ತಮ್ಮನ್ನು `ಜಜಬೋರ್~ (ಅಲೆಮಾರಿ) ಎಂದು ಕರೆದುಕೊಳ್ಳಲು ಇಷ್ಟಪಡುತ್ತಿದ್ದರು.1926ರಲ್ಲಿ ಗುವಹಾಟಿಯಲ್ಲಿ ಜನಿಸಿದ್ದ ಹಜಾರಿಕಾ ದೇಶದ ಜನರಿಗೆ ಅಪರಿಚಿತವಾಗಿ ಉಳಿದಿದ್ದ ಅಸ್ಸಾಂನ ಶ್ರೀಮಂತ ಜನಪದ ಸಾಹಿತ್ಯವನ್ನು ಲಾವಣಿಗಳ ಮೂಲಕ ದೇಶದ ಮನೆ, ಮನಗಳಿಗೆ ತಲುಪಿಸಿದ್ದರು.ಶೈಕ್ಷಣಿಕವಾಗಿಯೂ ಪ್ರತಿಭಾವಂತರಾಗಿದ್ದರು. ಬನಾರಸ್ ಹಿಂದು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ, ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದರು.ಸಿನಿಮಾ ಮಾಧ್ಯಮದ ಮೂಲಕ ಶೈಕ್ಷಣಿಕ ಅಭಿವೃದ್ಧಿಯ ಕುರಿತು ಷಿಕಾಗೊ ವಿಶ್ವವಿದ್ಯಾಲಯದ ಫೆಲೋಶಿಪ್ ಪಡೆದಿದ್ದರು.ಆ ಕಾಲದಲ್ಲಿ ಅಮೆರಿಕದ ಯುವ ಜನತೆಗೆ ಹುಚ್ಚು ಹಿಡಿಸಿದ್ದ ಪ್ರಸಿದ್ಧ ಗಾಯಕ ಪಾಲ್ ರಾಬ್‌ಸನ್ ಅವರ `ಓಲ್ಡ್ ಮ್ಯಾನ್ ರಿವರ್~ ಗೀತೆಯನ್ನು ಹಜಾರಿಕಾ `ಓ ಗಂಗಾ ಬೆಹತಿ ಹೋ...~ ಮೂಲಕ ಹಿಂದಿಗೆ ತಂದರು. ಎಡಪಂಥೀಯ ವಿಚಾರಧಾರೆಯ ಕಾರ್ಯಕರ್ತರಿಗೆ ಈ ಹಾಡು ರಾಷ್ಟ್ರಗೀತೆಯಾಗಿ ಹೋಗಿತ್ತು.ಸಲೀಲ್ ಚೌಧರಿ, ಬಲರಾಜ್ ಸಾಹ್ನಿ ಅವರಂಥ ದಿಗ್ಗಜರು ಮತ್ತು ಎಡಪಂಥೀಯ ಬುದ್ಧಿಜೀವಿಗಳ ಜೊತೆ `ಇಪ್ಟಾ~ (ಇಂಡಿಯನ್ ಪೀಪಲ್ಸ್ ಥಿಯೇಟರ್ ಮೂವ್‌ಮೆಂಟ್)ದಲ್ಲಿ ಕೆಲಸ ಮಾಡಲು ಅವರು ಮುಂಬೈಗೆ ಬಂದು ನೆಲೆಸಿದ್ದರು.   ಬಹು ದಿನಗಳ ಒಡನಾಡಿ ಕಲ್ಪನಾ ಲಜ್ಮಿ ನಿರ್ಮಾಣದ `ರುಡಾಲಿ~ ಹಿಂದಿ ಚಿತ್ರದಲ್ಲಿ ಅಸ್ಸಾಮಿ ಸಂಗೀತದ ಕಂಪುಳ್ಳ `ದಿಲ್‌ಹೂಂ..ಹೂಂ...ಕರೇ~ ಹಾಡು ಲಕ್ಷಾಂತರ ಸಂಗೀತ ಪ್ರಿಯರ ಮನ ತಟ್ಟಿತು. ಅವರು ತಮ್ಮ 12ನೇ ವಯಸ್ಸಿನಲ್ಲಿಯೇ  ಅಸ್ಸಾಮಿ ಚಲನಚಿತ್ರವೊಂದಕ್ಕೆ ಹಾಡಿದ್ದರು. ದಾದಾಸಾಹೇಬ್ ಫಾಲ್ಕೆ, ಪದ್ಮಶ್ರೀ, ರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರಪತಿ ಪದಕ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಇವರನ್ನು ಅರಿಸಿ ಬಂದ ಪ್ರಶಸ್ತಿ, ಗೌರವಗಳಿಗೆ ಲೆಕ್ಕವಿಲ್ಲ.ಬುಡಕಟ್ಟು ಪ್ರಭಾವ:  `ಬುಡಕಟ್ಟು ಜನರ ಹಾಡು, ಜನಪದ ಲಾವಣಿ ಕೇಳುತ್ತಲೇ ನಾನು ಬೆಳೆದೆ. ನನ್ನ ಮೇಲೆ ಅವುಗಳು ಬೀರಿದ ಪ್ರಭಾವವೇ ನಾನಿಂದು ಸಂಗೀತಗಾರನಾಗಲು ಕಾರಣ~ ಎಂದು ಕೆಲ ವರ್ಷಗಳ ಹಿಂದೆ  ಸಂದರ್ಶನದಲ್ಲಿ  ಹೇಳಿದ್ದರು.`ತಾಯಿಯೇ ಸಂಗೀತದ ಮೊದಲ ಗುರು. ಅವಳಿಂದ ಹಾಡುವ ಕಲೆ ರಕ್ತಗತವಾಗಿ ಬಂದಿತ್ತು. ಅವಳ ಸುಶ್ರಾವ್ಯ ಜೋಗುಳಗಳ ಪೈಕಿ ಒಂದನ್ನು `ರುಡಾಲಿ~ ಹಿಂದಿ ಚಿತ್ರದಲ್ಲಿ ಅಳವಡಿಸಿದ್ದೇನೆ~ ಎಂದು ಸ್ಮರಿಸಿ ಕಣ್ಣೀರಾಗಿದ್ದರು.ಮಾತೃ ಭಾಷೆ ಅಸ್ಸಾಮಿ ಜೊತೆ ಬಂಗಾಳಿ ಮತ್ತು ಹಿಂದಿ ಚಿತ್ರಗಳಿಗೂ ಅವರು ಸಂಗೀತ ನೀಡಿದ್ದರು. ಕಲ್ಪನಾ ಲಜ್ಮಿ ಅವರ `ಏಕ್ ಪಲ್~, `ಧರ್ಮಿಯಾನ್~, `ದಾಮನ್~ ಮತ್ತು `ಕ್ಯೊಂ~, ಸಾಯಿ ಪರಾಂಜಪೆ ಅವರ `ಪಪಿಹಾ~ `ಸಾಜ್~ `ಮಿಲ್ ಗಯೀ ಮಂಜಿಲ್ ಮುಝೆ~ ಹಾಗೂ ಎಂ.ಎಫ್. ಹುಸೇನ್ ಅವರ `ಗಜಗಾಮಿನಿ~ ಯಂತಹ ದೃಶ್ಯ ಕಾವ್ಯಗಳಿಗೆ ಭೂಪೇನ್ ಅವರ ಮಾಂತ್ರಿಕ ಸಂಗೀತದ ಸ್ಪರ್ಶವಿತ್ತು. ಹೀಗಾಗಿ ಈ ಚಿತ್ರಗಳ ಸಂಗೀತ ಇಂದಿಗೂ ಆಪ್ತ ಎನಿಸುತ್ತವೆ.ಹುಸೇನ್ ಅವರಂತಹ ಖ್ಯಾತ ಕಲಾವಿದರೂ ಹಜಾರಿಕಾ ಸಂಗೀತಕ್ಕೆ ಮರುಳಾಗಿದ್ದರು. `ನೀವು  ಹಾಡುಗಳ ಮೂಲಕ ಚಿತ್ರ ಬರೆಯುತ್ತೀರಿ. ಆದರೆ, ನಾನು ಕುಂಚದಿಂದ ಚಿತ್ರ ಮಾತ್ರ ಬಿಡಿಸಬಲ್ಲೆ, ಹಾಡು ಹಾಡಲಾರೆ. `ಗಜಗಾಮಿನಿ~ ಚಿತ್ರಕ್ಕೆ ನಿಮ್ಮ ಹೊರತಾಗಿ ಬೇರಾರೂ ಸೂಕ್ತರಲ್ಲ ಎಂದು ತೀರ್ಮಾಸಿದ್ದೆ~ ಎಂದು ಹುಸೇನ್ ಹೇಳಿದ್ದರು.ಕಳೆದ ವರ್ಷ `ಅವರ್ ನಾರ್ತ್ ಈಸ್ಟ್, ಅವರ್ ಸ್ಟಾರ್~ ವಿಡಿಯೊ ಅಲ್ಬಂನಲ್ಲಿ ಕಾಣಿಸಿಕೊಂಡಿದ್ದರು. ಇದೇ ವರ್ಷ ತಯಾರಾದ `ಗಾಂಧಿ ಟು ಹಿಟ್ಲರ್~ ಚಿತ್ರದಲ್ಲಿ `ವೈಷ್ಣವ ಜನತೋ~ ಭಜನೆಯೇ ಅವರ ಕಂಠದಲ್ಲಿ ಮೂಡಿಬಂದ ಕೊನೆಯ ಹಾಡು.  

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry