ಗುರುವಾರ , ಅಕ್ಟೋಬರ್ 17, 2019
27 °C

ಅಲ್ಪಸಂಖ್ಯಾತರಿಗೆ ಮೀಸಲಾತಿ: ವಿಎಚ್‌ಪಿ ವಿರೋಧ

Published:
Updated:

ಬಾಗಲಕೋಟೆ: ಹಿಂದುಳಿದ ವರ್ಗದ ಮೀಸಲಾತಿ ಯನ್ನು ಕಡಿತಗೊಳಿಸಿ ಅಲ್ಪಸಂಖ್ಯಾತರಿಗೆ ಶೇ. 4.5 ರಷ್ಟು ಮೀಸಲಾತಿಯನ್ನು ನೀಡಲು ಉದ್ದೇಶಿಸಿರುವ ಕೇಂದ್ರ ಯುಪಿಎ ಸರ್ಕಾರದ ನಿರ್ಧಾರವನ್ನು ವಿರೋಧಿಸುವುದಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಉತ್ತರ-ದಕ್ಷಿಣ ಪ್ರಾಂತ್ಯ ಸಂಘಟನಾ ಸಂಚಾಲಕ  ಸೂರ್ಯನಾರಾಯಣ ಹೇಳಿದರು.ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸಾಮಾಜಿಕ ಸಾಮರಸ್ಯ ಕೆಡಿಸುವ ಹಾಗೂ ಪ್ರತ್ಯೇಕತೆಗೆ ಕುಮ್ಮಕ್ಕು ನೀಡುವ ಸಾಧ್ಯತೆ ಇರುವುದರಿಂದ ನ್ಯಾಯಮೂರ್ತಿ ರಂಗನಾಥ ಮಿಶ್ರಾ ಮತ್ತು ಸಾಚಾರ್ ಆಯೋಗದ ವರದಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.ದೇಶದ ಸಂವಿಧಾನದಲ್ಲಿ ಮತೀಯ ಮೀಸಲಾತಿಗೆ ಅವಕಾಶವೇ ಇಲ್ಲದ ಕಾರಣ ಮತ ಆಧಾರಿತ ಮೀಸಲಾತಿ ಕೇಳುವವರ ಮೇಲೆ ದೇಶದ್ರೋಹದ ಮೊಕದ್ದಮೆ ಹೂಡಬೇಕು ಎಂದರು.ಮತೀಯ ಮೀಸಲಾತಿಯು ದೇಶದ ಏಕತೆ, ಅಖಂಡತೆಗೆ ಮಾರಕವಾಗಿದೆ, ದೇಶದ ಮುಸಲ್ಮಾನರು, ಕ್ರೈಸ್ತರಲ್ಲಿ ಪ್ರತ್ಯೇಕತಾವಾದವನ್ನು ಜಾಗೃತಗೊಳಿಸುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.ಮುಸಲ್ಮಾನರಿಗೆ ಈಗಾಗಲೇ ಒಬಿಸಿ ಖೋಟಾದಲ್ಲಿ ರಕ್ಷಣೆ ಸಿಗುತ್ತಲೇ ಇದೆ, ಅಲ್ಪಸಂಖ್ಯಾತರು ನಡೆಸುವ ಸಂಸ್ಥೆಗಳಲ್ಲಿ ಸರ್ಕಾರಿ ಅನುದಾನ ಇದ್ದಾಗಲೂ ಸಹ ಹಿಂದುಳಿದ ವರ್ಗದ ಯುವಕರಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ಆರೋಪಿಸಿದರು.ಅಲ್ಪಸಂಖ್ಯಾತರ ಸಲುವಾಗಿ ಈಗಾಗಲೇ ಸಾಕಷ್ಟು ಆಯೋಗಗಳು ರಚನೆಯಾಗಿವೆ, ಆದರೂ ಸಹ ಮತ್ತಷ್ಟು ಆಯೋಗ, ಮತ್ತಷ್ಟು ಮೀಸಲಾತಿ ನೀಡುವುದು ಕೇವಲ ಮತ ಬ್ಯಾಂಕ್ ರಾಜಕಾರಣ ವಾಗಿದೆ ಎಂದು ಅವರು ದೂರಿದರು.ಹಿಂದುಳಿದ ವರ್ಗದ ಮೀಸಲಾತಿಯಲ್ಲಿ ಮುಸಲ್ಮಾನರಿಗೆ ಹಂಚಿಕೊಡುವುದರಿಂದ ಹಿಂದೂ ಸಮಾಜ ಭಯಂಕರ ಪರಿಸ್ಥಿತಿ ಎದುರಿಸಬೇಕಾದೀತು ಎಂದ ಅವರು, ಧರ್ಮ ಆಧಾರಿತ ಮುಸ್ಲಿಂರಿಂದ ಹಿಂದುಳಿದ ಸಮಾಜದ ಮೇಲೆ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಹಾನಿ ಉಂಟಾಗಲಿದೆ ಎಂದರು. ಆಂಧ್ರ ಪ್ರದೇಶ, ಕೇರಳ ಮತ್ತು ತಮಿಳುನಾಡಿನಲ್ಲಿ ಈಗಾಗಲೇ ನೀಡಲಾಗಿರುವ ಮೀಸಲಾತಿಯನ್ನು ರದ್ದುಗೊಳಿಸಬೇಕು ಎಂದು ಅವರು ಆಗ್ರಹಿಸಿದರು.ಹಿಂದುಳಿದ ವರ್ಗದ ಮೀಸಲಾತಿಯನ್ನು ಕಡಿತ ಗೊಳಿಸಿ ಅಲ್ಪಸಂಖ್ಯಾತರಿಗೆ ಶೇ. 4.5 ರಷ್ಟು ಮೀಸ ಲಾತಿಯನ್ನು ನೀಡುವುದರ ವಿರುದ್ಧ ವಿಎಚ್‌ಪಿ ಮತ್ತು ಬಜರಂಗದಳ ದೇಶಾದ್ಯಂತೆ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.ಮರಣ ಶಾಸನ: ದೇಶದಲ್ಲಿ ನಡೆಯುತ್ತಿರುವ ಮತೀಯ ಹಿಂಸಾಚಾರಗಳನ್ನು ತಡೆಯುವ ಹೆಸರಿಯಲ್ಲಿ ಕೇಂದ್ರ ಯುಪಿಎ ಸರ್ಕಾರ ಹೊರತರಲು ಉದ್ದೇಶಿಸಿರುವ ಮತೀಯ ಹಿಂಸಾಚಾರ ತಡೆ ವಿಧೇಯಕ-2011 ಹಿಂದೂಗಳ ಪಾಲಿಗೆ ಮರಣ ಶಾಸನವಾಗಲಿದೆ ಎಂದು ಅವರು ಹೇಳಿದರು.ಈ ಕಾಯ್ದೆ ಜಾರಿಗೆ ಬಂದರೆ ಭಾರತೀಯ ಸಮಾಜವು ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರು ಎಂದು ಇಬ್ಬಾಗವಾಗುತ್ತದೆ, ಅಲ್ಪಸಂಖ್ಯಾತರಲ್ಲಿ ಆಕ್ರಮಣ ಪ್ರವೃತ್ತಿ, ದ್ವೇಷ ಹೆಚ್ಚಿ ದಂಗೆಗಳನ್ನು ನಡೆಸಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.ನ್ಯಾಯಾಲಯಗಳಲ್ಲಿ ಪಕ್ಷಪಾತದ ಧೋರಣೆ ಆರಂಭವಾಗುತ್ತದೆ, ಹಿಂದೂಗಳು ಭಾರತದಲ್ಲಿ ಬದುಕುವುದೇ ದುರ್ಬರವಾದೀತು ಎಂದ ಅವರು, ದೇಶದ್ರೋಹಿಗಳಿಗೆ, ಹಿಂದೂ ದ್ರೋಹಿಗಳಿಗೆ ಭಾರತ ಮತ್ತು ಹಿಂದೂ ಸಮಾಜ, ಸಂಘಟನೆಗಳನ್ನು ಸಮಾಪ್ತಗೊಳಿಸಲು ಮುಕ್ತ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ವಿಶ್ವಹಿಂದೂ ಪರಿಷತ್‌ನ ಸಂಗಪ್ಪ ಕುಪ್ಪಸ್ಥ, ಬಸವರಾಜ ಕೆಂಚಣ್ಣವರ, ಪುಂಡಲೀಕ ದಳವಾಯಿ, ಶಿವು ಮೆಲ್ನಾಡ, ಜಯರಾಮ ಶೆಟ್ಟಿ ಇದ್ದರು.

Post Comments (+)