ಶುಕ್ರವಾರ, ನವೆಂಬರ್ 22, 2019
23 °C

ಅಲ್ಪಸಂಖ್ಯಾತರಿಗೆ ಶೈಕ್ಷಣಿಕ ಮೀಸಲು: ಎಸ್‌ಐಒಐ ಕರೆ

Published:
Updated:

ಬೆಂಗಳೂರು: `ರಾಜ್ಯ ಸರ್ಕಾರದ ಕರ್ನಾಟಕ ಜ್ಞಾನ ಆಯೋಗವು ನೀಡಿರುವ `ಉನ್ನತ ಶಿಕ್ಷಣ ಮುನ್ನೋಟ-2020'ರ ವರದಿಯಲ್ಲಿ ಮಾಡಿರುವ ಶಿಫಾರಸ್ಸುಗಳನ್ನು ಪರಿಗಣಿಸಿ, ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ ಕನಿಷ್ಠ ಒಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಭರವಸೆಯನ್ನು ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಬೇಕು' ಎಂದು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೇಷನ್ ಆಫ್ ಇಂಡಿಯಾದ (ಎಸ್‌ಐಒಐ) ಕರ್ನಾಟಕ ಶಾಖೆ ಆಗ್ರಹಿಸಿದೆ.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ತೌಸೀಫ್ ಅಹಮ್ಮದ್ ಮಡಿಕೇರಿ ಅವರು, ರಾಜ್ಯದಲ್ಲಿ ಯಾವುದೇ ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಅನುಮತಿ ನೀಡಬಾರದು. ಒಂದು ವೇಳೆ ನೀಡಿದರೆ ಅವುಗಳನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ದ 2002ರ ನಿಯಮಗಳ  ಅಡಿಯಲ್ಲಿ ನಿಯಂತ್ರಣದಲ್ಲಿ ಇಡಬೇಕು. ವಿದ್ಯಾರ್ಥಿಗಳ ವಯಸ್ಸನ್ನು ಪರಿಗಣಿಸದೆ, 10ನೇ ತರಗತಿ ವರೆಗೆ ಉಚಿತ ಶಿಕ್ಷಣ ನೀಡಬೇಕು ಎಂದು ಒತ್ತಾಯಿಸಿದರು. ಬೆಂಗಳೂರು, ಮಂಗಳೂರು, ಕರ್ನಾಟಕ, ಧಾರವಾಡ, ಗುಲ್ಬರ್ಗ ಹಾಗೂ ಮೈಸೂರು ವಿಶ್ವವಿದ್ಯಾಲಯಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ 10ರಷ್ಟು ಮೀಸಲಾತಿ ನೀಡಬೇಕು. 2012ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನೀಡಿರುವ ವರದಿ ಪ್ರಕಾರ ಶೈಕ್ಷಣಿಕವಾಗಿ ಹಿಂದುಳಿದಿರುವ 74 ಬ್ಲಾಕ್‌ಗಳ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಶಾಲಾ ಕಾಲೇಜುಗಳಲ್ಲಿ ಲಿಂಗ್ಡೊ ಸಮಿತಿ ವರದಿಯನ್ನು ಜಾರಿಗೊಳಿಸಬೇಕು.ಈ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಚುನಾವಣಾ ಪ್ರಣಾಳಿಕೆಯನ್ನು ತಯಾರಿಸಬೇಕು ಎಂದು ಒತ್ತಾಯಿಸಿದರು.ಈ ಸಂಬಂಧ ಈಗಾಗಲೇ ಎಲ್ಲಾ ಪಕ್ಷಗಳಿಗೂ ಮನವಿ ಸಲ್ಲಿಸಿದ್ದು, ಮನವಿ ಸ್ವೀಕರಿಸಿರುವ ಪಕ್ಷಗಳು ಅಧಿಕಾರಕ್ಕೆ ಬಂದರೆ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಭರವಸೆ ನೀಡಿವೆ. ಆದರೆ ಅಧಿಕಾರಕ್ಕೆ ಬಂದ ನಂತರ ಯಾವುದೇ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಕ್ರಿಯಿಸಿ (+)