ಗುರುವಾರ , ನವೆಂಬರ್ 21, 2019
23 °C

ಅಲ್ಪಸಂಖ್ಯಾತರ ವಿರೋಧಿ ಪೊಲೀಸ್ ಅಧಿಕಾರಿ: ದೂರು

Published:
Updated:

ಮಂಗಳೂರು: `ಮಂಗಳೂರಿನ ಸಿಸಿಬಿ ಇನ್‌ಸ್ಪೆಕ್ಟರ್ ವೆಂಕಟೇಶ್ ಪ್ರಸನ್ನ ಅವರು 2004ರಿಂದಲೂ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರು ತಮ್ಮ ಕಾರ್ಯವೈಖರಿಯಿಂದ ಮುಸ್ಲಿಮರ ವಿರೋಧಿ ಎಂಬುದಾಗಿ ಬಿಂಬಿತರಾಗಿದ್ದಾರೆ. ಚುನಾವಣಾ ನಿಯಮಾವಳಿಯಂತೆ ಅವರನ್ನು ಬೇರೆ ಜಿಲ್ಲೆಗೆ ವರ್ಗಾಯಿಸಬೇಕು' ಎಂದು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ (ಪಿಯುಸಿಎಲ್) ಸಂಘಟನೆಯ ಜಿಲ್ಲಾ ಘಟಕ ಒತ್ತಾಯಿಸಿದೆ.ಈ ಸಂಬಂಧ ಸಂಘಟನೆಯ ಅಧ್ಯಕ್ಷ ಡೇವಿಡ್ ಡಿಸೋಜ ಅವರು ರಾಜ್ಯ ಚುನಾವಣಾ ಆಯುಕ್ತರಿಗೆ ಮನವಿಯೊಂದನ್ನು ಸಲ್ಲಿಸಿದ್ದು, ವೆಂಕಟೇಶ್ ಪ್ರಸನ್ನ ಅವರು ಹಲವಾರು ಎನ್‌ಕೌಂಟರ್‌ಗಳಲ್ಲಿ ಶಾಮೀಲಾಗಿದ್ದಾರೆ, ಮುಸ್ಲಿಮರ ವಿರುದ್ಧವೇ ಇಂತಹ ಹೆಚ್ಚಿನ ಎನ್‌ಕೌಂಟರ್‌ಗಳು ನಡೆದಿವೆ, ಎನ್‌ಕೌಂಟರ್‌ಗೆ ಬಲಿಯಾದವರಲ್ಲಿ ಮುಸ್ಲಿಂ ವಕೀಲರೊಬ್ಬರು ಸಹ ಸೇರಿದ್ದಾರೆ ಎಂದು ಹೇಳಿದ್ದಾರೆ.ನಿಷ್ಪಕ್ಷಪಾತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವುದಕ್ಕಾಗಿ ಜಿಲ್ಲೆಯಲ್ಲಿ ಬೇರುಬಿಟ್ಟಿರುವ ಇತರ ಹಲವು ಪೊಲೀಸ್ ಅಧಿಕಾರಿಗಳನ್ನು ಸಹ ವರ್ಗಾವಣೆ ಮಾಡಬೇಕು. ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ತಾವು ಅರ್ಜಿ ಸಲ್ಲಿಸಿದಾಗ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಇಂತಹ 14 ಪೊಲೀಸ್ ಅಧಿಕಾರಿಗಳು ಮೂರು ವರ್ಷಕ್ಕಿಂತ ಅಧಿಕ ಸಮಯದಿಂದ ಕರ್ತವ್ಯ ನಿರ್ವಹಿಸುತ್ತಿರುವುದು ಕಂಡುಬಂದಿದೆ. ಇವರೆಲ್ಲರನ್ನೂ ಬೇರೆಡೆ ವರ್ಗಾಯಿಸಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.ಆರ್‌ಟಿಐಯಲ್ಲಿ ಪಡೆದ ಮಾಹಿತಿಯಂತೆ ದ.ಕ.ಜಿಲ್ಲಾ ಪೊಲೀಸ್ ವರಿಷ್ಠರ ವ್ಯಾಪ್ತಿಯಲ್ಲಿ ಒಂದೆಡೆ 3 ವರ್ಷಕ್ಕಿಂತ ಹೆಚ್ಚು ಸಮಯ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ ಅಧಿಕಾರಿಗಳಿಲ್ಲ. ಪಶ್ಚಿಮ ವಲಯದ ಐಜಿಪಿ ಕಚೇರಿಯಲ್ಲಿ ಒಬ್ಬರು ಡಿವೈಎಸ್‌ಪಿ ಇದ್ದಾರೆ ಎಂಬುದು ಗೊತ್ತಾಗಿದೆ.

ಪ್ರತಿಕ್ರಿಯಿಸಿ (+)