ಮಂಗಳವಾರ, ಮೇ 17, 2022
27 °C

ಅಲ್ಪಸಂಖ್ಯಾತ ಮಠಗಳ ಮೇಲೆ ಕೆಂಗಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿಂದೂ ಮಠಗಳು ಹಾಗೂ ಅವುಗಳ ಅಧೀನದಲ್ಲಿ ಬರುವ ಧಾರ್ಮಿಕ ದತ್ತಿ ಸಂಸ್ಥೆಗಳನ್ನು ಕರ್ನಾಟಕ ಧಾರ್ಮಿಕ ದತ್ತಿ ಕಾಯ್ದೆ ವ್ಯಾಪ್ತಿಯಿಂದ ಹೊರಗಿಟ್ಟು, ಹೊಸದಾಗಿ ಜೈನ, ಬೌದ್ಧ ಮತ್ತು ಸಿಖ್ ಜನಾಂಗದವರ ಧಾರ್ಮಿಕ ಸಂಸ್ಥೆಗಳನ್ನು ಕಾಯ್ದೆ ವ್ಯಾಪ್ತಿಗೆ ತರುವ ವಿವಾದಾತ್ಮಕ ತೀರ್ಮಾನವನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆ ತೆಗೆದುಕೊಂಡಿದೆ.ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಿಯಂತ್ರಣ ಸಾಧಿಸಲು ಹೊರಟಿರುವ ಸರ್ಕಾರ ಇದೇ ಮೊದಲ ಬಾರಿಗೆ ಸಿಖ್, ಜೈನ ಮತ್ತು ಬೌದ್ಧರ ಧಾರ್ಮಿಕ ಸಂಸ್ಥೆಗಳನ್ನು ಕಾಯ್ದೆಯ ವ್ಯಾಪ್ತಿಗೆ ತಂದಿದೆ. ಇದು ಯಥಾವತ್ತಾಗಿ ಅನುಷ್ಠಾನಕ್ಕೆ ಬಂದರೆ ಹಣದ ವಹಿವಾಟಿನ ಬಗ್ಗೆ ಈ ಸಂಸ್ಥೆಗಳು ವಾರ್ಷಿಕವಾಗಿ ವಿವರಗಳನ್ನು ನೀಡಬೇಕಾಗುತ್ತದೆ. ಅವುಗಳ ಆಸ್ತಿ, ಹಣಕಾಸಿನ ಮೂಲ, ವಹಿವಾಟುಗಳ ಬಗ್ಗೆ ಸರ್ಕಾರ ಲೆಕ್ಕಪರಿಶೋಧನೆ ಮಾಡಿಸಲಿದೆ.ಕರ್ನಾಟಕ ಧಾರ್ಮಿಕ ದತ್ತಿ ಕಾಯ್ದೆ 2003ರ ಸೆಕ್ಷನ್ 1ಕ್ಕೆ ತಿದ್ದುಪಡಿ ಮಾಡಲಾಗುತ್ತಿದ್ದು, ಅದರ ಪ್ರಕಾರ ಸರ್ಕಾರಕ್ಕೆ ಮಠಗಳ ಮೇಲೆ ಯಾವುದೇ ರೀತಿಯ ನಿಯಂತ್ರಣ ಇರುವುದಿಲ್ಲ. ಅವುಗಳ ಹಣಕಾಸಿನ ಮೂಲ, ಆದಾಯ, ಆಸ್ತಿ ಮತ್ತಿತರ ವಹಿವಾಟುಗಳ ಬಗ್ಗೆ ವಾರ್ಷಿಕವಾಗಿ ಸರ್ಕಾರಕ್ಕೆ ವರದಿಯನ್ನು ನೀಡಬೇಕಾಗಿಲ್ಲ.

 

ಈ ರೀತಿಯ ದ್ವಂದ್ವ ನಿಲುವು ತೆಗೆದುಕೊಳ್ಳುವ ಮೂಲಕ ಬಹುಸಂಖ್ಯಾತ ಹಿಂದೂಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ಪ್ರತ್ಯೇಕವಾದ ನೀತಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.ಹೈಕೋರ್ಟ್ 2006ರ ಸೆಪ್ಟೆಂಬರ್ 9ರಂದು ನೀಡಿರುವ ಆದೇಶ ಮತ್ತು ರಾಜ್ಯಸಭಾ ಸದಸ್ಯ ಎಂ.ರಾಮಾಜೋಯಿಸ್ ನೇತೃತ್ವದ ಸಮಿತಿಯ ಮಾಡಿರುವ ಶಿಫಾರಸು ಪ್ರಕಾರ ಮಠಗಳನ್ನು ಕಾಯ್ದೆ ವ್ಯಾಪ್ತಿಗೆ ತರಬೇಕು. ಆದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರೋಧ ಮತ್ತು ರಾಜಕೀಯವಾಗಿ ಎದುರಾದ ಒತ್ತಡದಿಂದಾಗಿ ಮಠಗಳು ಮತ್ತು ಅವುಗಳ ಅಧೀನದಲ್ಲಿ ಬರುವ ಸಂಸ್ಥೆಗಳನ್ನು ಕಾಯ್ದೆಯಿಂದ ಹೊರಗಿಡುವ ಕರಡು ತಿದ್ದುಪಡಿ ಮಸೂದೆಗೆ ಒಪ್ಪಿಗೆ ನೀಡಲಾಗಿದೆ.‘ಕರ್ನಾಟಕ ಧಾರ್ಮಿಕ ದತ್ತಿ ಕಾಯ್ದೆ- 2003ರಲ್ಲಿ ಮಠಗಳನ್ನು ಹೊರಗಿಟ್ಟು ತಾರತಮ್ಯ ಮಾಡಲಾಗಿದೆ ಎಂದು ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋದಾಗ ಅಲ್ಲಿಯೂ ಮಠಗಳನ್ನು ಕಾಯ್ದೆಯ ವ್ಯಾಪ್ತಿಯಲ್ಲಿ ತನ್ನಿ’ ಎಂಬ ಸೂಚನೆ ನೀಡಲಾಗಿತ್ತು. ರಾಮಾಜೋಯಿಸ್ ಅವರು ಸಹ ಇದನ್ನೇ ಹೇಳಿದ್ದರು. ಆದರೆ ಇದೆಲ್ಲವನ್ನೂ ಮೀರಿ ಮಠಗಳಿಗೆ ಅನುಕೂಲವಾಗುವ ಹಾಗೆ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ.ವಿರೋಧ: ಅಲ್ಪಸಂಖ್ಯಾತರ ಧಾರ್ಮಿಕ ಸಂಸ್ಥೆಗಳನ್ನು ಕಾಯ್ದೆ ವ್ಯಾಪ್ತಿಗೆ ತರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಕರ್ನಾಟಕ ಜೈನ ಸಂಘ ಇದರ ವಿರುದ್ಧ ಕಾನೂನು ರೀತಿಯ ಹೋರಾಟ ನಡೆಸುವ ಎಚ್ಚರಿಕೆ ನೀಡಿದೆ.‘ಜೈನರು ಹಿಂದೂ ಧರ್ಮದ ವ್ಯಾಪ್ತಿಗೆ ಬರುವುದಿಲ್ಲ. ಸಂವಿಧಾನದಲ್ಲೂ ಇದನ್ನು ಸ್ಪಷ್ಟವಾಗಿ ಹೇಳಲಾಗಿದೆ. ಜನಗಣತಿಯಲ್ಲೂ ಜೈನರು ಎಂದು ಬರೆಸಲಾಗುತ್ತಿದೆ. ಹಿಂದೂ ಧಾರ್ಮಿಕ ದತ್ತಿ ಕಾಯ್ದೆ ಯಾವುದೇ ಕಾರಣಕ್ಕೂ ಅಲ್ಪಸಂಖ್ಯಾತರಿಗೆ ಅನ್ವಯವಾಗುವುದಿಲ್ಲ. ಇದು ಕಾನೂನುಬಾಹಿರವಾಗಿದ್ದು, ಎಲ್ಲ ರೀತಿಯ ಹೋರಾಟಕ್ಕೂ ಸಿದ್ಧ’ ಎಂದು ಕರ್ನಾಟಕ ಜೈನ ಸಂಘದ ಅಧ್ಯಕ್ಷ ಎಸ್.ಜಿತೇಂದ್ರಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.