ಮಂಗಳವಾರ, ನವೆಂಬರ್ 19, 2019
27 °C

ಅಲ್ಪಾಯು ಸರ್ಕಾರ ಅಧಿಕಾರಕ್ಕೆ: ಕೋಡಿಮಠ ಶ್ರೀ ಭವಿಷ್ಯ

Published:
Updated:

ಸುರತ್ಕಲ್: `ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆ ಅಖಾಡದಲ್ಲಿರುವ ಯಾವುದೇ ರಾಜಕೀಯ ಪಕ್ಷವೂ ಬಹುಮತ ಗಳಿಸದೆ, ಸ್ವ ಪ್ರತಿಷ್ಠೆಯ ಕಾರಣದಿಂದ ಮೈತ್ರಿ ಸರ್ಕಾರ ರಚನೆಯೂ ಸಾಧ್ಯವಾಗದೆ, ರಾಜಕೀಯ ಅಸ್ಥಿರತೆ ಉಂಟಾಗಿ ಹೊಸ ಜನಾದೇಶ ಪಡೆಯುವ ಸಾಧ್ಯತೆ ಹೆಚ್ಚಿದೆ' ಎಂದು ಕೋಡಿ ಮಠದ ಶಿವಾನಂದ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.`ಪ್ರತಿ ಚುನಾವಣೆಯ ಸಂದರ್ಭದಲ್ಲೂ ತಾಳೆಗರಿಯಲ್ಲಿ ಉಲ್ಲೇಖಿಸಿದ ಭವಿಷ್ಯವನ್ನು ನಾನು ಉಚ್ಚರಿಸಿದ್ದು ಅದೆಲ್ಲವೂ ನಿಜವೇ ಆಗಿದೆ. ಮುಂದಿನ ಚುನಾವಣೆ ವೇಳೆಗೆ ಬಿಜೆಪಿ ಮೂರು ಭಾಗವಾಗಿ ಒಡೆದು ಹೋಗಲಿದೆ ಎಂದು ಈ ಹಿಂದೆ ಸುರತ್ಕಲ್‌ನ ಪ್ರದೇಶದಲ್ಲಿ ಹೇಳಿದ ಮಾತು ಇಂದು ನಿಜವಾಗಿದೆ' ಎಂದು ಸ್ವಾಮೀಜಿ ನೆನಪಿಸಿದರು.ಸುರತ್ಕಲ್‌ನಲ್ಲಿ ಜೆ.ಡಿ. ವೀರಪ್ಪ ಅವರ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, `ಮುಂಬರುವ ಚುನಾವಣೆಯಲ್ಲಿ ಯಾರಿಗೂ ಬಹುಮತ ದಕ್ಕದು. ಆ ಬಳಿಕ ಅಧಿಕಾರದ ಗದ್ದುಗೆ ಏರಲು ಕಸರತ್ತು ಆರಂಭಗೊಳ್ಳಲಿದೆ. ಆದರೆ ಅಧಿಕಾರಕ್ಕಾಗಿ ಹೊಂದಾಣಿಕೆ ಮಾಡಿಕೊಳ್ಳಲು ಪಕ್ಷಗಳಿಗೆ ಸ್ವಪ್ರತಿಷ್ಠೆ ಎದುರಾಗುವುದರಿಂದ ಸಹಜವಾಗಿ ಮರು ಮತದಾನದ ಸಾಧ್ಯತೆಯೇ ಅಧಿಕ' ಎಂದರು.`ಪ್ರಸ್ತುತ ದಿನಗಳಲ್ಲಿ ಮೋಸ, ಆಮಿಷ, ರೋಷ, ಜಾತಿ ಲೆಕ್ಕಾಚಾರಕ್ಕೆ ಒಳಗಾಗಿ  ಮತದಾರ ಕೊಡುವ ಮತವನ್ನು ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮತದಾನದ ಮಹತ್ವ ಕಳೆದುಕೊಳ್ಳುತ್ತಿದೆ. ಸರ್ಕಾರದ ರಚನೆಯ ಮತ ಇಂದು ಅರ್ಹರಿಗೆ ಸಿಗದೆ ಸಮಾಜದಿಂದ ತಿರಸ್ಕರಿಲ್ಪಟ್ಟವರಿಗೇ ಸಿಗುತ್ತಿರುವುದು ಖೇದಕರ' ಎಂದರು.`2020ರವರೆಗೆ ರಾಜ್ಯದ ಭವಿಷ್ಯ ಕೆಳಮುಖವಾಗಿಯೇ ಇರಲಿದ್ದು ಹೊಸ ತಲೆಮಾರು ಆಡಳಿತಕ್ಕೆ ಬಂದ ಬಳಿಕ ಸ್ಥಿತಿ ಉತ್ತಮ ಗೊಂಡು ರಾಜ್ಯಕ್ಕೆ ಗೌರವ ಪ್ರಾಪ್ತಿ ಸಲ್ಲಲಿದೆ' ಎಂದು ನುಡಿದರು.`ಬಿಜೆಪಿಯೇ ಉಸಿರು ಎಂದು ಹೇಳಿ ಕೊನೆಗೆ ಅದರಿಂದ ಹೊರ ಬಂದು ಹೊಸ ಪ್ರಾದೇಶಿಕ ಪಕ್ಷ ಕಟ್ಟಿದ ಯಡಿಯೂರಪ್ಪ ರಾಜಕೀಯದಲ್ಲಿ ಯಶಸ್ವಿಯಾಗಲಿದ್ದಾರೆಯೇ?' ಎಂಬ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, `ಯಾವುದೇ ವ್ಯಕ್ತಿಯ ಕುರಿತು ಈವರೆಗೆ ವೈಯಕ್ತಿಕ ಭವಿಷ್ಯವನ್ನು ಬಹಿರಂಗವಾಗಿ ಹೇಳಿಲ್ಲ; ಹೇಳುವುದೂ ಇಲ್ಲ' ಎಂದರು.`ಈ ವರ್ಷ ರಾಜ್ಯದಲ್ಲಿ ಪ್ರಕೃತಿ ವಿಕೋಪ, ಬಾಂಬ್ ಸ್ಫೋಟ, ಅಪಘಾತಗಳಿಂದ ಸಾವು- ನೋವು  ಹೆಚ್ಚಲಿದ್ದು, ಅತಿವೃಷ್ಟಿ ಅನಾವೃಷ್ಟಿಯಿಂದ ಮಾನವ ಸಂಕಷ್ಟ ಎದುರಿಸಲಿದ್ದಾನೆ. ಜಾತಿ- ಜಾತಿಗಳ ನಡುವಿನ ಸಮಸ್ಯೆಯಿಂದ, ಜಾತಿ ಜಾತಿಗಳ ಅವಹೇಳನ ಮನುಕುಲದಲ್ಲಿ ಅಶಾಂತಿಗೆ ಕಾರಣವಾಗಲಿದೆ' ಎಂದು ಸ್ವಾಮೀಜಿ ತಿಳಿಸಿದರು.

ಪ್ರತಿಕ್ರಿಯಿಸಿ (+)