ಅಲ್ಪ ಕಾಲದಲ್ಲಿಒಲಿದ ಅದೃಷ್ಟ

7

ಅಲ್ಪ ಕಾಲದಲ್ಲಿಒಲಿದ ಅದೃಷ್ಟ

Published:
Updated:
ಅಲ್ಪ ಕಾಲದಲ್ಲಿಒಲಿದ ಅದೃಷ್ಟ

ಕೆಂಪು ಸೀರೆಯುಟ್ಟು ಬಿಂಕದಿಂದ ಹೆಜ್ಜೆಯಿಟ್ಟು ಬಂದು ಕುಳಿತ ಆ ಬೆಡಗಿ ರಿಚಾ ಗಂಗೋಪಾಧ್ಯಾಯ. ಗ್ಲಾಮರ್ ಡ್ರೆಸ್‌ಗಳಲ್ಲಿ ಹೆಚ್ಚು ಕಂಡಿದ್ದ ನಟಿಯ ಈ ರೂಪ ವಿಶೇಷ ಎನಿಸಿದ್ದು ಸಹಜ. ವಿದೇಶದಲ್ಲಿ ಬೆಳೆದು ಸ್ವದೇಶದಲ್ಲಿ ತಾರೆಯಾಗಿ ಹೊಳೆಯುತ್ತಿದ್ದಾಳೆ ಬೆಳದಿಂಗಳಿನಂಥ ಬಾಲೆ. ಮಾತಿನಲ್ಲಂತೂ ಅತಿ ವಿನಯ. ಯಶಸ್ಸಿನ ಕುದುರೆಯ ಬೆನ್ನೇರಿದ್ದರೂ ಪಾದ ಮಾತ್ರ ನೆಲದ ಮೇಲೆ ಗಟ್ಟಿ. ಅಹಮಿಕೆಯ ಸೋಂಕಿಲ್ಲದ ನಟಿಯಾಡಿದ ಒಂದಿಷ್ಟು ಮಾತುಗಳು ಇಲ್ಲಿ ನಿಮಗಾಗಿ...

`ಮಿಸ್ ಇಂಡಿಯಾ ಯುಎಸ್~ನಿಂದ ಭಾರತದ ಸಿನಿಮಾವರೆಗಿನ ಪಯಣ?

ಅಲ್ಪ ಕಾಲದಲ್ಲಿ ಅದೃಷ್ಟ ಎಂದೇ ಹೇಳಬೇಕು. 2007 ಡಿಸೆಂಬರ್‌ನಲ್ಲಿ `ಮಿಸ್ ಇಂಡಿಯಾ ಯುಎಸ್~ ಸ್ಪರ್ಧೆಯಲ್ಲಿ ಯಶಸ್ಸು ಸಿಕ್ಕಿತು. ಬಾಲಿವುಡ್‌ನಲ್ಲಿ ಅವಕಾಶ ಹುಡುಕಿಕೊಂಡು ಅಮೆರಿಕಾದನಾರ್ತ್‌ವಿಲ್ಲೆಯಿಂದ ಬಂದು ಹೊಸ ನೆಲೆಯಾಗಿಸಿಕೊಂಡಿದ್ದು ಮುಂಬೈ. ಆದರೆ ಅವಕಾಶದ ಬಾಗಿಲು ತೆರೆದಿದ್ದು ದಕ್ಷಿಣದ ಸಿನಿಮಾದಲ್ಲಿ. ಮೊದಲ ಚಿತ್ರ ತೆಲಗು `ಲೀಡರ್~. ನಂತರ  ಅದೇ ಭಾಷೆಯಲ್ಲಿ ಮತ್ತೆ ಮೂರು ಸಿನಿಮಾಗಳಲ್ಲಿ ಕಾಣಿಸಿಕೊಂಡೆ. ತಮಿಳಿನಲ್ಲೂ ಎರಡು ಚಿತ್ರಗಳು ಸಿಕ್ಕವು. ಬಂಗಾಳಿಯಲ್ಲಿ `ಬಿಕ್ರಮ್ ಸಿಂಘಾ~ ಮೇಲೆ ಈಗ ಭಾರಿ ನಿರೀಕ್ಷೆ ಇದೆ.

ಅಭಿನಯ ಕಲಿಕೆ?

ನಮ್ಮದು ಪಶ್ಚಿಮ ಬಂಗಾಳದ ಸಂಗೀತಗಾರರ ಕುಟುಂಬ. ಆದರೆ ನಾನು ಅಭಿನಯ ಕ್ಷೇತ್ರಕ್ಕೆ ಕಾಲಿಟ್ಟೆ. ಅನುಪಮ್ ಖೇರ್ ಅವರ `ಆ್ಯಕ್ಟರ್ ಪ್ರಿಪೇರ್ಸ್~ ಅಭಿನಯ ಶಾಲೆಯಲ್ಲಿ ಕ್ಯಾಮೆರಾ ಎದುರಿಸುವುದನ್ನು ಕಲಿತೆ. ಅಲ್ಲಿದ್ದಾಗಲೇ ಸ್ಟಾನ್‌ಸ್ಲಾಸ್ಕಿಯ `ಆ್ಯನ್ ಆ್ಯಕ್ಟರ್ ಪ್ರಿಪೇರ್ಸ್~ ಓದಿದ್ದು. ಅನುಭವದಿಂದಲೂ ಸಾಕಷ್ಟು ಕಲಿತೆ.  ತೆಲುಗು ಸಿನಿಮಾದಲ್ಲಿನ ವೃತ್ತಿಪರತೆ ಅನುಕರಣೀಯ. ಸ್ಪಾಟ್‌ಬಾಯ್‌ನಿಂದ ಹಿಡಿದು ನಿರ್ದೇಶಕನವರೆಗೆ ಅನೇಕ ವಿಷಯಗಳನ್ನು ಕಲಿತಿದ್ದೇನೆ. ನಾನು ಸಹಜವಾಗಿ ಎಲ್ಲರನ್ನೂ ಮಾತನಾಡಿಸುತ್ತೇನೆ. ಅದೂ ಒಂದು ರೀತಿಯಲ್ಲಿ ಕಲಿಕೆಯೇ ಹೌದು.

ನಿರ್ಮಾಪಕರು ಹಾಗೂ ನಿರ್ದೇಶಕರ ಬಗ್ಗೆ ಅಭಿಪ್ರಾಯ?

ಇಂಡಸ್ಟ್ರಿಯಲ್ಲಿ ಕೆಲಸ ಮಾಡಲು ಬರುವುದಕ್ಕೆ ಮುನ್ನ ನನ್ನಲ್ಲೂ ಭಯವಿತ್ತು. ಆದರೆ ನನಗೆ ಯಾವುದೇ ಕೆಟ್ಟ ಅನುಭವ ಆಗಿಲ್ಲ. ಒಮ್ಮೆ ಶೇಖರ್ ಕಮ್ಮುಲ ಅವರೊಂದಿಗೆ ಕೆಲಸ ಮಾಡಿದಾಗ ತಪ್ಪು ಕಲ್ಪನೆಗಳು ಒಡೆದುಹೋದವು. ಶೇಖರ್ ತುಂಬಾ ಸೃಜನಾತ್ಮಕವಾಗಿ ಯೋಚಿಸುವ ನಿರ್ದೇಶಕ. ಸಿನಿಮಾ ರಂಗ ಪ್ರವೇಶಕ್ಕೆ ಮುನ್ನವೇ ಅವರ `ಹ್ಯಾಪಿ ಡೇಸ್~ ತೆಲುಗು ಚಿತ್ರ ನೋಡಿದ್ದೆ. ವರ್ಷಗಳ ನಂತರ ಅವರ ಜೊತೆಗೆ ಕೆಲಸ ಮಾಡುವ ಅದೃಷ್ಟ ನನ್ನದಾಯಿತು.

ಅಪಾರ ಸಂತಸ ನೀಡಿದ ಕ್ಷಣ?

2010ರಲ್ಲಿ ಬಿಡುಗಡೆಯಾದ `ಲೀಡರ್~ ಚಿತ್ರೀಕರಣ ಆರಂಭವಾಗಿದ್ದು 2009ರ ಏಪ್ರಿಲ್‌ನಲ್ಲಿ. ಅದರ ಹಾಡುಗಳ ಸೀಡಿ ಬಿಡುಗಡೆ ಸಮಾರಂಭ ನಡೆದಿದ್ದು ಅದೇ ವರ್ಷ ನವೆಂಬರ್ 22ರಂದು. ಆ ದಿನವನ್ನು ಮರೆಯಲು ಸಾಧ್ಯವೇ ಇಲ್ಲ. ಅಂದು ಹೊಸ ನಾಯಕಿಯಾದ ನನ್ನನ್ನು ನೋಡಲು ಗ್ಲಾಮರ್ ಜಗತ್ತಿನ ಖ್ಯಾತನಾಮರು ಬಂದಿದ್ದರು. ಪ್ರತಿಯೊಬ್ಬರೂ ಮಾತನಾಡಿಸಿ ಶುಭಕೋರಿದರು. ಆನಂತರ ಅಂಥ ಅನೇಕ ಸಮಾರಂಭಗಳಲ್ಲಿ ಪಾಲ್ಗೊಂಡಿದ್ದೇನೆ. ಆದರೆ ಅದೇ ನನ್ನ ಬದುಕಿನ ಅತ್ಯಂತ ದೊಡ್ಡ ದಿನ. ಇನ್ನೊಂದು ಈ ಸಿನಿಮಾಕ್ಕೆ ನಾನು ಆಯ್ಕೆಯಾಗಿದ್ದು ಮಾರ್ಚ್ 20ರಂದು. ಅದು ನನ್ನ ಹುಟ್ಟುಹಬ್ಬದ ದಿನವೂ ಹೌದು.

ಸಿನಿಮಾ ಹಾಗೂ ಜಾಹೀರಾತುಗಳ ನಡುವೆ?

ಒಂದು ಕ್ಷೇತ್ರದಲ್ಲಿನ ಪ್ರಚಾರ ಇನ್ನೊಂದಕ್ಕೆ ಪೂರಕ. `ಡಾಬರ್ ವಾಟಿಕಾ ಆಲ್ಮಂಡ್~, `ಪೀಟರ್ ಇಂಗ್ಲೆಂಡ್~, `ಮಲಬಾರ್ ಗೋಲ್ಡ್~, `ಕಲಾನಿಕೇತನ್~...ಹೀಗೆ ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದೇನೆ. ನಾನು ಚಿನ್ನದ ಆಭರಣಗಳನ್ನು ಹಾಕಿಕೊಂಡಿರುವ ಬೃಹತ್ ಚಿತ್ರಗಳನ್ನು ಮಾಲ್‌ಗಳಲ್ಲಿ ನೋಡಿದಾಗ ಹೆಚ್ಚು ಸಂತಸವಾಗುತ್ತದೆ. ಅವು ಸಿನಿಮಾ ಪೋಸ್ಟರ್‌ಗಳಂತೆ ಮಾಯವಾಗುವುದಿಲ್ಲ.

ತೆಲುಗು, ತಮಿಳು, ಬಂಗಾಳಿ ಆಯಿತು. ಮುಂದೆ ಎಲ್ಲಿಗೆ?

ಆತುರವಿಲ್ಲ; ಯೋಚಿಸಿ ಹೆಜ್ಜೆ ಇಡುತ್ತೇನೆ. ಒಳ್ಳೆಯ ಸಿನಿಮಾಗಳು ನನ್ನ ಆಯ್ಕೆ. ಟಾಲಿವುಡ್‌ನಲ್ಲಿ ಇನ್ನೂ ಐದು ಆಫರ್‌ಗಳು ಬಂದಿವೆ. ದಕ್ಷಿಣದಲ್ಲಿ ಮಲೆಯಾಳಂ ಹಾಗೂ ಕನ್ನಡದ ಕೆಲವು ನಿರ್ಮಾಪಕರು ಕೂಡ ಕೇಳಿದ್ದಾರೆ. ಅವರಿನ್ನೂ ಕಥೆ ಹೇಳಿಲ್ಲ. ಕಥೆ ಕೇಳುವವರೆಗೆ ಯಾವುದೇ ಚಿತ್ರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ತೆಲುಗುನಲ್ಲಿ ನನಗೆ ಉನ್ನತ ಸ್ಥಾನ ಸಿಕ್ಕಿದೆ. ಮೊದಲ ಆದ್ಯತೆ ನೀಡುವುದು ಇಲ್ಲಿನ ಆಫರ್‌ಗಳಿಗೆ; ನಂತರ ಬೇರೆ ಕಡೆಗೆ.

ನಾಯಕನೇ ಮಿಂಚುವ ಸಿನಿಮಾಗಳ ಬಗ್ಗೆ ಬೇಸರ?

ಖಂಡಿತ ಇಲ್ಲ. ನಾನು ಇಲ್ಲಿಯವರೆಗೆ ಕೆಲಸ ಮಾಡಿದ ಚಿತ್ರಗಳಲ್ಲಿ ನಾಯಕಿಗೂ ಸಮನಾದ ಅವಕಾಶ. ನಾಯಕನಿಗೆ ಸ್ವಲ್ಪ ಆದ್ಯತೆ ಹೆಚ್ಚು ಇರುವುದು ಸಹಜ. ಹಾಗೆಂದ ಮಾತ್ರಕ್ಕೆ ನಾಯಕಿ ಮೂಲೆಗುಂಪೆಂದು ಹೇಳಲು ಆಗದು. 

ಉದ್ಯಾನನಗರಿ ಹೇಗೆ ಅನಿಸುತ್ತದೆ?

ಅನೇಕ ಬಾರಿ ಇಲ್ಲಿಗೆ ಬಂದಿದ್ದೇನೆ. ತಣ್ಣನೆಯ ಊರು. ಹಿತವಾದ ಸಂಜೆಯ ಅನುಭವ. ಇಲ್ಲಿರಲು ಸಂತೋಷವಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry