ಶುಕ್ರವಾರ, ಮೇ 14, 2021
35 °C

ಅಲ್ಲಿ ಅನಾಥ; ಇಲ್ಲಿ ಹೀರೊ

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

`ಕೆರಿಬಿಯನ್ ನಾಡಿನ ಬೀದಿಗಳಲ್ಲಿ ತಿರುಗಾಡಿದರೆ ನನ್ನನ್ನು ಕೇಳುವವರೇ ಇಲ್ಲ. ಆದರೆ ಬೆಂಗಳೂರಿನ ಎಂ.ಜಿ.ರಸ್ತೆಗಿಳಿದರೆ ಕ್ರಿಕೆಟ್ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ವಿಂಡೀಸ್‌ನಲ್ಲಿ ನಾನೀಗ ಅನಾಥ~-ವಿಶ್ವ ಕ್ರಿಕೆಟ್‌ನ ಬೌಲರ್‌ಗಳ ಎದೆಯಲ್ಲಿ ಸದಾ ಭಯ ಹುಟ್ಟಿಸುವ ಕ್ರಿಸ್ ಗೇಲ್ ಬೇಸರದಿಂದ ಹೇಳಿದ ಮಾತಿದು. ವೆಸ್ಟ್‌ಇಂಡೀಸ್‌ನಲ್ಲಿ ತಮಗಾಗುತ್ತಿರುವ ಅನ್ಯಾಯದ ಬಗ್ಗೆ ಅವರು ವ್ಯಕ್ತಪಡಿಸಿದ ಆಕ್ರೋಶವಿದು.ಹೌದು, ಗೇಲ್ ಅವರನ್ನು ಇತ್ತೀಚಿನ ಟೂರ್ನಿಗಳಿಗೆ ವಿಂಡೀಸ್ ಕ್ರಿಕೆಟ್ ಮಂಡಳಿ ಪರಿಗಣಿಸುತ್ತಿಲ್ಲ. ವಿಶ್ವಕಪ್ ಬಳಿಕ ರಾಷ್ಟ್ರೀಯ ತಂಡದಲ್ಲಿ ಅವರಿಗೆ ಅವಕಾಶವೇ ಸಿಕ್ಕಿಲ್ಲ. ರಾಷ್ಟ್ರ ತಂಡದ ಹಿತಾಸಕ್ತಿಯನ್ನು ಬದಿಗೊತ್ತಿ ಕ್ಲಬ್ ಕ್ರಿಕೆಟ್‌ನತ್ತ  ಗಮನ ಹರಿಸುತ್ತಿದ್ದಾರೆ ಎಂಬ ಆರೋಪ ಅವರ ಮೇಲಿದೆ. ಹಾಗೇ, ಕ್ಲಬ್ ಕ್ರಿಕೆಟ್ ಟೂರ್ನಿಗಳಲ್ಲಿ ಮಿಂಚು ಹರಿಸುವ ಮೂಲಕ ಗೇಲ್ ಸುದ್ದಿಯಲ್ಲಿದ್ದಾರೆ.ಅದಕ್ಕೆ ಸಾಕ್ಷಿ ಏಪ್ರಿಲ್-ಮೇನಲ್ಲಿ ನಡೆದ ಐಪಿಎಲ್ ನಾಲ್ಕನೇ ಅವತರಣಿಕೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರತಿನಿಧಿಸುತ್ತಿರುವ ಅವರು ಕೇವಲ 12 ಪಂದ್ಯಗಳಿಂದ 608 ರನ್ ಗಳಿಸಿ ಆರೇಂಜ್ ಕ್ಯಾಪ್ ಪಡೆದಿದ್ದರು. ಅದರಲ್ಲಿ ಎರಡು ಶತಕಗಳಿದ್ದವು. ಜೊತೆಗೆ 44 ಸಿಕ್ಸರ್ ಸಿಡಿಸಿದ್ದರು. ರಾಯಲ್ ಚಾಲೆಂಜರ್ಸ್ ಫೈನಲ್ ತಲುಪಲು ಜಮೈಕಾದ ಈ ಎಡಗೈ ಬ್ಯಾಟ್ಸ್‌ಮನ್ ಕಾರಣ.ಆ ಟೂರ್ನಿಯ ಕೊಚ್ಚಿ ಟಸ್ಕರ್ಸ್ ಕೇರಳ ವಿರುದ್ಧದ ಪಂದ್ಯದಲ್ಲಿ ವೇಗಿ ಪರಮೇಶ್ವರನ್ ಹಾಕಿದ ಒಂದು ಓವರ್‌ನಲ್ಲಿ 37 ರನ್ ಸಿಡಿಸಿದ್ದರು. ಬೆಂಗಳೂರು ಕ್ರಿಕೆಟ್ ಪ್ರೇಮಿಗಳ ಮನಸ್ಸು ಗೆದ್ದಿದ್ದರು.ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಅವರೀಗ ಉದ್ಯಾನ ನಗರಿಯಲ್ಲಿದ್ದಾರೆ. ವಿಶ್ವ ಕ್ರಿಕೆಟ್‌ನ ಅಪಾಯಕಾರಿ ಬ್ಯಾಟ್ಸ್ ಮನ್ ಎನಿಸಿರುವ ಕ್ರಿಸ್ ಗೇಲ್ `ಪ್ರಜಾವಾಣಿ~ಗೆ ನೀಡಿದ ಸಂದರ್ಶನದಲ್ಲಿ ತಮಗೆ ವಿಂಡೀಸ್‌ನಲ್ಲಿ ಆಗುತ್ತಿರುವ ಅನ್ಯಾಯ, ಬೇರೆ ದೇಶಗಳಲ್ಲಿ ಸಿಗುತ್ತಿರುವ ಗೌರವದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.* ದೇಶ ಹಾಗೂ ಕ್ಲಬ್... ನಿಮ್ಮ ಆಯ್ಕೆ?

`ನಿಮ್ಮ ಸೇವೆ ಬೇಡ~ ಎಂದು ದೇಶವೇ ಹೇಳಿದಾಗ ನಾನೇನು ಮಾಡಲು ಸಾಧ್ಯ? ನನಗೂ ಕುಟುಂಬವಿದೆ, ನಾನೂ ಬದುಕಬೇಕು. ದೇಶಕ್ಕೆ ಮೊದಲು ಮಹತ್ವ ನೀಡುವ ವ್ಯಕ್ತಿ ನಾನು. ಆದರೆ ಆಟ ವೀಕ್ಷಿಸಿ ಚಪ್ಪಾಳೆ ತಟ್ಟಿದವರೇ ಈಗ ನನ್ನ ಬದ್ಧತೆಯನ್ನು ಪ್ರಶ್ನಿಸುತ್ತಿದ್ದಾರೆ. ಬೇರೆ ದೇಶಗಳ ಕ್ಲಬ್ ಟೂರ್ನಿಗಳಲ್ಲಿ ನನಗೆ ಬೇಡಿಕೆ ಇದೆ. ಆದರೆ ತವರೂರಿನಲ್ಲಿ ನಾನು ಅನಾಥನಾಗಿದ್ದೇನೆ. ಹಾಗಾಗಿ ಈಗ ಕ್ಲಬ್ ಪರ ಆಡುತ್ತಿದ್ದೇನೆ.* ತವರು ನಾಡಿನಲ್ಲಿ ಅನ್ಯಾಯವಾಗುತ್ತಿದೆ ಎಂದು ಹೇಳಿಕೆ ನೀಡಿದ್ದೀರಿ, ಕಾರಣ?

ವಿಂಡೀಸ್ ಕ್ರಿಕೆಟ್ ಮಂಡಳಿ ನನ್ನನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಬೇಸರವಿದೆ. ಕಷ್ಟದ ಸಂದರ್ಭದಲ್ಲಿ ನನಗೆ ಕಿಂಚಿತ್ ಸಹಾಯ ಮಾಡಿಲ್ಲ. ಗಾಯವಾಗಿದೆ ಎಂದು ನನ್ನನ್ನು ತಂಡದಿಂದ ಹೊರಗಿಟ್ಟಿದ್ದರು. ಆದರೆ ನಾನು ಫಿಟ್ ಆಗಿದ್ದೆ. ರಾಷ್ಟ್ರೀಯ ತಂಡಕ್ಕೆ ಆಡಲು ನನಗೆ ಅವಕಾಶ ನೀಡುತ್ತಿಲ್ಲ. ಅಲ್ಲಿ ಸರಿಯಾಗಿ ಗೌರವವೂ ಸಿಗುತ್ತಿಲ್ಲ. ಇದು ನನಗೆ ನೋವುಂಟು ಮಾಡಿದೆ. ಈ ಬೇಸರದ ನಡುವೆ ನನ್ನ ಜೀವನ ಸಾಗುತ್ತಿದೆ.* ನೀವು ದೇಶದ ತಂಡ ತೊರೆಯುತ್ತಿದ್ದೀರಿ ಎಂಬ ವದಂತಿಗಳು ಹಬ್ಬಿದ್ದವು. ಅದು ನಿಜವೇ?

ಖಂಡಿತ ನಾನು ಈ ರೀತಿ ಯೋಚನೆ ಮಾಡಿರಲಿಲ್ಲ. ಈಗ ನಿಧಾನವಾಗಿ ಸಮಸ್ಯೆಗಳು ಬಗೆಹರಿಯುತ್ತಿವೆ. ಮತ್ತೆ ದೇಶಕ್ಕಾಗಿ ಆಡುತ್ತೇನೆ ಎಂಬ ವಿಶ್ವಾಸ ನನಗಿದೆ. ಆದರೆ ಕ್ಲಬ್ ತಂಡಗಳಲ್ಲೂ ಆಡಲು ನಾನು ಬಯಸುತ್ತೇನೆ* ವಿವಾದಗಳು ನಿಮ್ಮ ಆಟದ ಮೇಲೆ ಪರಿಣಾಮ ಬೀರುತ್ತಿವೆಯೇ?

ಹೌದು, ವಿವಾದಗಳು ಬೇಸರ ಮೂಡಿಸುತ್ತವೆ. ಹಾಗೇ, ದೇಶಕ್ಕೆ ಆಡಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ವಿಷಯ ನನ್ನನ್ನು ಸದಾ ಕಾಡುತ್ತಿರುತ್ತದೆ. ಆದರೆ    ಕಣಕ್ಕಿಳಿದಾಗ ಅದನ್ನೆಲ್ಲಾ ಮರೆತುಬಿಡುತ್ತೇನೆ. ಆಟ ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದವರಿಗೆ ಮೋಸ ಆಗಬಾರದು. ನನ್ನನ್ನು ಖರೀದಿಸಿದ ತಂಡದ       ಯೋಜನೆಗಳಿಗೆ ನಾನು ಬದ್ಧನಾಗಿರಬೇಕು.* ತಂಡದಲ್ಲಿ ಸ್ಥಾನ ಸಿಗದಿದ್ದರೆ ಹೀಗೆ ಕ್ಲಬ್‌ನಲ್ಲಿ ಆಡಿಕೊಂಡು ಇರುತ್ತೀರಾ?

ಯಾವುದೇ ತಂಡ ನನಗೆ ಸುಮ್ಮನೇ ಅವಕಾಶ ನೀಡುವುದಿಲ್ಲ. ಅವರ ಅಗತ್ಯಗಳಿಗೆ ನಾನು ಸ್ಪಂದಿಸಬೇಕು. ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳಬೇಕು. ಹೀಗೆ ಅವಕಾಶ ಲಭಿಸಿದರೆ ಕ್ಲಬ್‌ಗಳ ಪರ ಆಡುತ್ತೇನೆ.* ಭಾರತದಲ್ಲಿ ಅಭಿಮಾನಿಗಳಿಂದ ನಿಮ್ಮ ಆಟಕ್ಕೆ ಯಾವ ರೀತಿ ಪ್ರತಿಕ್ರಿಯೆ ಸಿಗುತ್ತಿದೆ?

ನಾನು ತವರೂರು ಜಮೈಕಾದ ಬೀದಿಗಳಲ್ಲಿ ಸುಲಭವಾಗಿ ತಿರುಗಾಡಬಹುದು. ಆದರೆ ಬೆಂಗಳೂರಿನ ಎಂ.ಜಿ ರಸ್ತೆಗೆ ಇಳಿಯಲು ಕಷ್ಟವಾಗುತ್ತದೆ. ಕಳೆದ ಐಪಿಎಲ್ ವೇಳೆ ನನಗೆ ಈ ಅನುಭವಾಗಿದೆ. ಒಂದು ಅಂಗಡಿಗೆ ಭೇಟಿ ನೀಡಿದಾಗ  ಅಭಿಮಾನಿಗಳಿಂದ ತಪ್ಪಿಸಿಕೊಂಡು ಬರಲು ಹರಸಾಹಸ ಪಡಬೇಕಾಯಿತು. * ಚೆಂಡು ಕಂಡರೆ ನಿಮಗ್ಯಾಕೇ ಸಿಟ್ಟು?!

ನನ್ನ ಬ್ಯಾಟಿಂಗ್ ಶೈಲಿಯೇ ಹಾಗೆ. ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ನಾನು ತಂಡಕ್ಕೆ ಉತ್ತಮ ಆರಂಭ ನೀಡುವುದು ಅವಶ್ಯ. ಕ್ಷೇತ್ರ ರಕ್ಷಣೆ ನಿರ್ಬಂಧದ ನಿಯಮಗಳ ಪ್ರಯೋಜನ ಪಡೆಯಬೇಕು ಅಷ್ಟೇ.* ರಾಯಲ್ ಚಾಲೆಂಜರ್ಸ್ ತಂಡ ಹಾಗೂ ಬೆಂಗಳೂರಿನ ಬಗ್ಗೆ ಹೇಳಿ?

ಬೆಂಗಳೂರು ಈಗ ನನಗೆ ಎರಡನೇ ಮನೆ ಇದ್ದಂತೆ. ವೆಸ್ಟ್‌ಇಂಡೀಸ್‌ಗಿಂತ ಇಲ್ಲಿಯೇ ನನಗೆ ಹೆಚ್ಚು ಅಭಿಮಾನಿಗಳಿದ್ದಾರೆ ಎನಿಸುತ್ತಿದೆ. ಇಲ್ಲಿನ ಆತಿಥ್ಯ ಕೂಡ ಚೆನ್ನಾಗಿದೆ. ಹಾಗಾಗಿ ಈ ನಗರಿಯನ್ನು ನಾನು ತುಂಬಾ ಇಷ್ಟಪಡುತ್ತೇನೆ. ಸಂಕಷ್ಟದಲ್ಲಿದ್ದ ನನಗೆ ಆಶ್ರಯ ನೀಡಿದ್ದು ರಾಯಲ್ ಚಾಲೆಂಜರ್ಸ್.* ವಿಂಡೀಸ್ ತಂಡಕ್ಕೆ ಮತ್ತೆ ಆಡುವ ಆಸೆ ಇದೆಯೇ?

ಅದೇ ನನ್ನ ಮುಖ್ಯ ಗುರಿ. ಕ್ರಿಕೆಟ್ ಮಂಡಳಿಯೊಂದಿಗೆ ಸಮಸ್ಯೆ ಬಗೆಹರಿಸಿಕೊಳ್ಳಲು ನಾನೇ ಒಂದು ಹೆಜ್ಜೆ ಮುಂದಿಟ್ಟು ಪ್ರಯತ್ನ ನಡೆಸುತ್ತಿದ್ದೇನೆ. ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು.* ಚಾಂಪಿಯನ್ಸ್ ಲೀಗ್‌ನಲ್ಲೂ ನಿಮ್ಮ ಬ್ಯಾಟಿಂಗ್ ಅಬ್ಬರ ಮುಂದುವರಿಯಲಿದೆಯೇ?

ಅಬ್ಬರವೇನಿಲ್ಲ. ನನ್ನ ನೈಜ ಆಟ ಮುಂದುವರಿಸುತ್ತೇನೆ. ಅದು ತಂಡಕ್ಕೆ ನೆರವು ನೀಡಬೇಕು ಅಷ್ಟೆ. ನಾವು ಐಪಿಎಲ್ ಫೈನಲ್‌ನಲ್ಲಿ ಸೋಲು ಕಂಡಿದ್ದೆವು. ಆ ನಿರಾಸೆ ನನ್ನಲ್ಲಿ ಹಾಗೇ ಉಳಿದಿದೆ. ಈ ಬಾರಿ ಚಾಲೆಂಜರ್ಸ್ ಚಾಂಪಿಯನ್ ಆಗಬೇಕು. 

                        

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.