ಸೋಮವಾರ, ಮೇ 17, 2021
27 °C

ಅಲ್ಲಿ ಜಲ ಪ್ರಳಯ-ಇಲ್ಲಿ ನಿಂಬೆ ಬೆಲೆ ಕುಸಿತ

ಪ್ರಜಾವಾಣಿ ವಾರ್ತೆ/ ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

ವಿಜಾಪುರ: ಉತ್ತರ ಭಾರತದಲ್ಲಿ ಉಂಟಾಗಿರುವ ಜಲ ಪ್ರಳಯದಿಂದಾಗಿ ನಿಂಬೆ ಹಣ್ಣಿನ ಬೆಲೆ ದಿಢೀರ್ ಕುಸಿತ ಕಂಡಿದ್ದು, ಜಿಲ್ಲೆಯ ನಿಂಬೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಜಾಪುರ ಜಿಲ್ಲೆಯಲ್ಲಿ ಬೆಳೆಯುವ ನಿಂಬೆ ಉತ್ತಮ ಗುಣಮಟ್ಟಕ್ಕೆ ಹೆಸರುವಾಸಿ. ದೆಹಲಿಯೂ ಸೇರಿದಂತೆ ಉತ್ತರ ಭಾರತಕ್ಕೆ ಹೆಚ್ಚಾಗಿ ಪೂರೈಕೆಯಾಗುತ್ತದೆ. ಕೊಲ್ಲಿ ರಾಷ್ಟ್ರಗಳಿಗೂ ರಫ್ತು ಮಾಡಲಾಗುತ್ತಿದೆ.1,000 ನಿಂಬೆ ಹಣ್ಣು ಇರುವ ಒಂದು ಚೀಲಕ್ಕೆ ಸ್ಥಳೀಯ ಮಾರುಕಟ್ಟೆಯಲ್ಲಿ 1,000 ರಿಂದ 1,500 ರೂಪಾಯಿ ದರ ಇತ್ತು. ಕೆಲ ದಿನಗಳಿಂದ ದರ ತೀವ್ರ ಕುಸಿದಿದ್ದು, ಸದ್ಯ 100 ರಿಂದ 500 ರೂಪಾಯಿ ವರೆಗೆ ಮಾತ್ರ ಇದೆ.`ಜಿಲ್ಲೆಯಲ್ಲಿ 6,307 ಹೆಕ್ಟೇರ್‌ನಲ್ಲಿ ನಿಂಬೆ ಬೆಳೆಯಲಾಗಿದೆ. ಪ್ರತಿ ಹೆಕ್ಟೇರ್‌ಗೆ 22ರಿಂದ 25 ಟನ್ ಇಳುವರಿ ಬರುತ್ತಿದ್ದು, ಒಟ್ಟಾರೆ 1.57 ಲಕ್ಷ ಟನ್ ನಿಂಬೆ ಬೆಳೆಯಲಾಗಿದೆ' ಎಂಬುದು ತೋಟಗಾರಿಕೆ ಇಲಾಖೆಯ ಮಾಹಿತಿ.`ವಿಜಾಪುರದಲ್ಲಿ 20ಕ್ಕೂ ಹೆಚ್ಚು ನಿಂಬೆ ವರ್ತಕರು ಇದ್ದೇವೆ. ಮಳೆ ಮತ್ತು ಚಳಿಗಾಲದ ಅವಧಿಯಲ್ಲಿ ನಿಂಬೆಗೆ ಬೇಡಿಕೆ ಕಡಿಮೆ. ಇಲ್ಲಿಯ ನಿಂಬೆ ಹೆಚ್ಚಾಗಿ ದೆಹಲಿಯೂ ಸೇರಿದಂತೆ ಉತ್ತರ ಭಾರತದ ರಾಜ್ಯಗಳಿಗೆ ಪೂರೈಕೆಯಾಗುತ್ತದೆ. ಅಲ್ಲಿ ಮಳೆಯಾಗುತ್ತಿರುವುದರಿಂದ ಖರೀದಿದಾರರು ಬಂದಿಲ್ಲ. ಹೀಗಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ನಿಂಬೆಗೆ ಬೇಡಿಕೆ ಕಡಿಮೆಯಾಗಿದೆ' ಎಂದು ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿಯ ನಿಂಬೆ ವರ್ತಕ ಇಬ್ರಾಹಿಂ ಇಸ್ಮಾಯಿಲ್ ಬಾಗವಾನ ಹೇಳಿದರು.`ನಮ್ಮ ತೋಟದಲ್ಲಿ 700 ನಿಂಬೆ ಗಿಡಗಳಿವೆ. ಸತತ ಬರಗಾಲದಿಂದ ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಿದ್ದು, ಬೇರೆಡೆಯಿಂದ ನೀರು ಹೊತ್ತುತಂದು ಹಾಕಿ ಗಿಡಗಳನ್ನು ಕಾಪಾಡಿದ್ದೇವೆ. ಆದರೆ, ಇತ್ತೀಚೆಗೆ ಸುರಿದ ಮಳೆಯಿಂದ ನಿಂಬೆ ಹಣ್ಣು ಗಿಡದಿಂದ ಉದುರಿ ಬಿದ್ದಿದ್ದು, ಶೀತಗಾಳಿಯಿಂದಾಗಿ ಬಣ್ಣ ಬದಲಾಗಿ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತಿವೆ' ಎನ್ನುತ್ತಾರೆ ಬಸವನ ಬಾಗೇವಾಡಿ ತಾಲ್ಲೂಕು ಸಂಕನಾಳ ಗ್ರಾಮದ ರೈತ ಚಂದ್ರಶೇಖರ ಲಮಾಣಿ.`ನಿಂಬೆ ಹಣ್ಣನ್ನು ಗಿಡದಿಂದ ಹರಿದ (ಕಿತ್ತ) ಮರುದಿನವೇ ಮಾರಾಟ ಮಾಡಬೇಕು. ಮಾರುಕಟ್ಟೆಗೆ ತಗೆದುಕೊಂಡು ಹೋದರೆ ವರ್ತಕರು ಕೇಳಿದಷ್ಟು ದರಕ್ಕೆ ಕೊಡಲೇಬೇಕು. ಏಕೆಂದರೆ ಅವುಗಳನ್ನು ದಾಸ್ತಾನು ಮಾಡಲು ಕೋಲ್ಡ್ ಸ್ಟೋರೇಜ್‌ಗಳಿಲ್ಲ. ಒಂದು ಚೀಲಕ್ಕೆ ಮಂಗಳವಾರ 600 ರೂಪಾಯಿ ದರ ಬಂದರೆ, ಬುಧವಾರ 500 ರೂಪಾಯಿಗೆ ಕುಸಿದಿದೆ. ಒಂದೇ ಬಾರಿಗೆ ಅರ್ಧಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದರ ಕುಸಿದಿದೆ' ಎಂದು ಇಂಡಿ ತಾಲ್ಲೂಕು ಹೊರ್ತಿ ಗ್ರಾಮದ ರೈತ ಭೀಮಣ್ಣ ಅಮಸಿದ್ದ ಲೋಣಿ ಗೋಳು ತೋಡಿಕೊಂಡರು.`ಧಾರಣೆ ಇಲ್ಲ ಎಂದು ನಿಂಬೆ ಕೀಳುವುದನ್ನೇ ಬಿಟ್ಟಿದ್ದೇವೆ. ಆದರೂ, ಕಾಯಿ ಉದುರಿ ಬೀಳುತ್ತಿವೆ. ದನಕ್ಕೆ ಹಾಕಿದರೂ ತಿನ್ನುತ್ತಿಲ್ಲ. ಈಗಿನ ದರಕ್ಕೆ ಮಾರಾಟ ಮಾಡಿದರೆ ಸಾಗಣೆ ಖರ್ಚು ಮತ್ತು ಕೂಲಿ ಹಣವೂ ಬರುವುದಿಲ್ಲ. ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಿ, ಬೆಲೆ ನಿಯಂತ್ರಿಸಬೇಕು ಇಲ್ಲವೆ ಬೆಂಬಲ ಬೆಲೆ ನೀಡಬೇಕು' ಎಂದು ಇಂಡಿ ತಾಲ್ಲೂಕು ತಡವಲಗಾ ಗ್ರಾಮದ ರೈತ ಅಣ್ಣಾರಾಯ ಪಂತೋಜಿ ಮನವಿ ಮಾಡಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.