ಬುಧವಾರ, ಮಾರ್ಚ್ 3, 2021
24 °C

ಅಲ್‌ಖೈದಾ ಹೊಸ ಮುಖ್ಯಸ್ಥನಾಗಿ ಜವಾಹಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಲ್‌ಖೈದಾ ಹೊಸ ಮುಖ್ಯಸ್ಥನಾಗಿ ಜವಾಹಿರಿ

ಲಂಡನ್ (ಐಎಎನ್‌ಎಸ್): ಅಲ್‌ಖೈದಾ ಸಂಘಟನೆಗೆ ಒಸಾಮ ಬಿನ್ ಲಾಡೆನ್‌ನ ಉತ್ತರಾಧಿಕಾರಿಯಾಗಿ ಅಮೆರಿಕ ದಾಳಿಯ ರೂವಾರಿ ಅಯ್‌ಮಾನ್- ಅಲ್ -ಜವಾಹಿರಿ ನೇಮಕವಾಗಿದ್ದಾನೆ.ಲಾಡೆನ್ ಹತ್ಯೆಯ ಬಳಿಕ ತೆರವಾಗಿದ್ದ ಅಲ್‌ಖೈದಾ ಸಂಘಟನೆಯ ಮುಖ್ಯಸ್ಥನ ಸ್ಥಾನಕ್ಕೆ ಜವಾಹಿರಿಯನ್ನು ನೇಮಿಸಲಾಗಿದೆ ಎಂದು ಸಂಘಟನೆಯ ಜನರಲ್ ಕಮಾಂಡರ್ ಹೇಳಿಕೆ ಬಿಡುಗಡೆ ಮಾಡಿರುವುದಾಗಿ ಬಿಬಿಸಿ ವರದಿ ಮಾಡಿದೆ.`ಈಜಿಪ್ಟ್‌ನ ಡಾ.ಅಯ್‌ಮಾನ್ ಅಲ್ ಜವಾಹಿರಿಗೆ ಸಂಘಟನೆಯ ಮುಖ್ಯಸ್ಥನ ಜವಾಬ್ದಾರಿಯನ್ನು ವಹಿಸಲಾಗಿದ್ದು, ದೇವರು ಆತನಿಗೆ ಮಾರ್ಗದರ್ಶನ ಮಾಡಲಿದ್ದಾನೆ~ ಎಂಬ ಹೇಳಿಕೆ ಸಂಘಟನೆಯ ಮಾಧ್ಯಮ ವಿಭಾಗವಾದ ಅಲ್ ಫಾಜಿರ್ ಕೇಂದ್ರದಿಂದ ಬಿಡುಗಡೆಯಾಗಿದೆ.`ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಅಲ್‌ಖೈದಾ ನಡೆಸುತ್ತಿರುವ ಪವಿತ್ರ ಯುದ್ಧವನ್ನು ಜವಾಹಿರಿ ನೇತೃತ್ವದಲ್ಲಿ ಮುಂದುವರೆಸಲಾಗುವುದು. ಇಸ್ಲಾಂ ನೆಲದಲ್ಲಿನ ತಳವೂರಿರುವ ಅತಿಕ್ರಮಿಗಳನ್ನು ಹೊರದೂಡುವವರೆಗೂ ಸಂಘಟನೆ ಹೋರಾಟ ನಡೆಸಲಿದೆ~ ಎಂದು ಇದರಲ್ಲಿ ಎಚ್ಚರಿಕೆ ನೀಡಿದೆ. ಈ ಹೇಳಿಕೆಯು ಸಂಘಟನೆಯ ಜನರಲ್ ಕಮಾಂಡರ್‌ನ ಹೆಸರಿನಲ್ಲಿ ಇಸ್ಲಾಂನ ವೆಬ್‌ಸೈಟ್ ಒಂದರಲ್ಲಿ ಸಹ ಪ್ರಸಾರಗೊಂಡಿದೆ.ಇತ್ತೀಚೆಗೆ ಇಂಟರ್‌ನೆಟ್‌ನಲ್ಲಿ ಸಂದೇಶ ಬಿತ್ತರಿಸಿದ್ದ ಜವಾಹಿರಿ, `ಲಾಡೆನ್ ಹೊರಟು ಹೋಗಿದ್ದಾನೆ. ದೇವರು ಆತ ಹುತಾತ್ಮನೆಂಬ ಕರುಣೆಹೊಂದಿದ್ದಾನೆ. ನಾವು ಆತನ ಮಾರ್ಗದಲ್ಲಿಯೇ ಜಿಹಾದ್ ಮುಂದುವರಿಸಿ ಮುಸ್ಲಿಮರ ಭೂಮಿಯಿಂದ ಅತಿಕ್ರಮಣಕಾರರನ್ನು ಹೊರದಬ್ಬಿ ಅನ್ಯಾಯ ಆಕ್ರಮಣಗಳಿಂದ ಅದನ್ನು ಮುಕ್ತಗೊಳಿಸಬೇಕು~ ಎಂದು ಹೇಳಿದ್ದನು.`ದಂಗೆಕೋರ ದೇಶವಾಗಿದ್ದ ಅಮೆರಿಕ ಇಂದು ವೈಯಕ್ತಿಕ ಅಥವಾ ಗುಂಪುಗಳ ಆಕ್ರಮಣ ಎದುರಿಸುತ್ತಿಲ್ಲ. ಆದರೆ ಅದು ಜಿಹಾದಿಗಳ ಪುನರುತ್ಥಾನದಿಂದಾಗಿ ನಿದ್ರೆಯಿಂದ ಎಚ್ಚೆತ್ತುಕೊಂಡಿದೆ~ ಎಂದು ಹೇಳಿದ್ದನು.`ಲಾಡೆನ್ ಹತ್ಯೆಯಲ್ಲಿ ಇಸ್ಲಾಮಾಬಾದ್‌ನ ಪಾತ್ರದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದ ಆತ ಪಾಕಿಸ್ತಾನವು ಅಮೆರಿಕವು ಹಣ ಕೊಟ್ಟು ಕೊಂಡುಕೊಂಡ ವಸಾಹತು ಆಗಿದೆ. ಹಾಗಾಗಿ ಪಾಕ್‌ನ ಸರ್ಕಾರ ಮತ್ತು ಸೇನೆ ಹೋರಾಟ ನಡೆಸಬೇಕು~ ಎಂದು ಕರೆ ನೀಡಿದ್ದನು.`ಲಾಡೆನ್ ಒತನ್ನ ಸಮಾಧಿಯಿಂದ ಆಚೆಗೂ ಅಮೆರಿಕವನ್ನು ಬೆದರಿಸುವುದನ್ನು ಮುಂದುವರಿಸುತ್ತಾನೆ~ ಎಂದು ಜವಾಹಿರಿ ಇತ್ತೀಚೆಗಷ್ಟೆ ಎಚ್ಚರಿಕೆ ನೀಡಿದ್ದನ್ನು ಬಿಬಿಸಿ ವರದಿ ಮಾಡಿದೆ.ಅಮೆರಿಕದ ಮೇಲಿನ 9/11ರ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜವಾಹಿರಿ ಪಾಕ್ ಬೇಹುಗಾರಿಕಾ ಪಡೆಗಳ ನೆರವಿನೊಂದಿಗೆ ಆಫ್ಘನ್-ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಅವಿತಿರಬಹುದು ಎಂದು ಭದ್ರತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಯಾರು ಈ ಜವಾಹಿರಿ

ಈಜಿಪ್ಟ್ ಮೂಲದವನಾದ 60 ವರ್ಷದ ಜವಾಹಿರಿ ಮೂಲತಃ ಶಸ್ತ್ರವೈದ್ಯನಾಗಿದ್ದು, ದೀರ್ಘಕಾಲದಿಂದ ಲಾಡೆನ್‌ನ ಬಂಟನಾಗಿ ಮತ್ತು ಅಲ್‌ಖೈದಾದ ಉಪಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿದ್ದನು. ಈತನ ಸುಳಿವು ನೀಡಿದವರಿಗೆ 25 ದಶಲಕ್ಷ ಡಾಲರ್ ಬಹುಮಾನವನ್ನು ಅಮೆರಿಕ ಘೋಷಿಸಿದೆ. ಅಮೆರಿಕ ಲಾಡೆನ್‌ಗಾಗಿ ಹುಡುಕಾಟ ನಡೆಸುತ್ತಿದ್ದರಿಂದ ಆತನ ಅನುಪಸ್ಥಿತಿಯಲ್ಲಿ ಈತನೇ ಸಂಘಟನೆಯನ್ನು ಮುನ್ನಡೆಸಿದ್ದ ಎನ್ನಲಾಗಿದೆ.1981ರಲ್ಲಿ ಈಜಿಪ್ಟ್ ಅಧ್ಯಕ್ಷ ಅನ್ವರ್ ಸಾದತ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿ ವಿಚಾರಣೆಗೆ ಒಳಗಾಗಿದ್ದ ಜವಾಹಿರಿ ಮೂರು ವರ್ಷಗಳ ಬಳಿಕ ಬಿಡುಗಡೆ ಹೊಂದಿದ್ದ. ಬಳಿಕ ಪಾಕ್‌ಗೆ ತೆರಳಿ ಅಲ್ಲಿಯೇ ನೆಲೆಯೂರಿ ಸೋವಿಯತ್ ಮುಜಾಹಿದ್ದೀಬ್ ವಿರೋಧಿ ಯುದ್ಧದಲ್ಲಿ ಪಾಲ್ಗೊಂಡಿದ್ದನು.9/11ರ ದಾಳಿಗೂ ಮುನ್ನವೇ ಅಮೆರಿಕಕ್ಕೆ ಬೇಕಾಗಿದ್ದ ಜವಾಹಿರಿ, 1998ರಲ್ಲಿ ತಾಂಜಾನಿಯಾ ಮತ್ತು ಕೀನ್ಯಾಗಳಲ್ಲಿ ಅಮೆರಿಕ ರಾಯಭಾರ ಕಚೇರಿಗಳಲ್ಲಿ ಬಾಂಬ್ ಇರಿಸಿ 224 ಜನರ ಸಾವಿಗೆ ಕಾರಣನಾಗಿದ್ದ. ಅಲ್ಲದೆ 2000ರಲ್ಲಿ ಯೆಮನ್‌ನಲ್ಲಿ ಬಾಂಬ್ ದಾಳಿ ನಡೆಸಿ ಅಮೆರಿಕದ 17 ನಾವಿಕರನ್ನು ಹತ್ಯೆಗೈದಿದ್ದ.1997ರಲ್ಲಿ ಈಜಿಪ್ಟ್‌ನಲ್ಲಿ 58 ಪ್ರವಾಸಿಗರ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ. 2005ರಲ್ಲಿ ಲಂಡನ್‌ನ ಸಾರಿಗೆ ವ್ಯವಸ್ಥೆಯಲ್ಲಿ ಬಾಂಬ್ ಸ್ಫೋಟಿಸಿದ್ದ ಘಟನೆಯ ಹೊಣೆಯನ್ನೂ ಈತ ಹೊತ್ತುಕೊಂಡಿದ್ದ.ಪೆಶಾವರದಲ್ಲಿ 1988ರಲ್ಲಿ ಸ್ಥಾಪನೆಗೊಂಡ ಅಲ್‌ಖೈದಾ ಇಂದು, ಪಾಕಿಸ್ತಾನ, ಆಫ್ಘಾನಿಸ್ತಾನ, ಸೌದಿ ಅರೇಬಿಯಾ, ಯೆಮನ್, ಇಂಡೋನೇಷ್ಯ ಮತ್ತು ಇರಾಕ್ ಸೇರಿದಂತೆ ಹಲವು ದೇಶಗಳಲ್ಲಿ ಮಿತ್ರ ಸಂಘಟನೆಗಳನ್ನು ಹೊಂದಿದೆ ಎಂದು ಬಿಬಿಸಿ ವರದಿ ತಿಳಿಸಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.