ಅಲ್‌ ಕೈದಾ ತಾಳಕ್ಕೆ ಮುಸ್ಲಿಮರು ಕುಣಿಯುವುದಿಲ್ಲ

ಶುಕ್ರವಾರ, ಮಾರ್ಚ್ 22, 2019
21 °C
ಸಿಎನ್‌ಎನ್‌ಗೆ ಪ್ರಧಾನಿ ಮೋದಿ ಸಂದರ್ಶನ

ಅಲ್‌ ಕೈದಾ ತಾಳಕ್ಕೆ ಮುಸ್ಲಿಮರು ಕುಣಿಯುವುದಿಲ್ಲ

Published:
Updated:

ನವದೆಹಲಿ (ಪಿಟಿಐ): ಭಾರತದ ಮುಸ್ಲಿಮರು ಭಯೋತ್ಪಾದನಾ ಸಂಘಟನೆ ಅಲ್‌ ಕೈದಾ ತಾಳಕ್ಕೆ ತಕ್ಕಂತೆ ಕುಣಿಯುವುದಿಲ್ಲ. ಅವರು ಭಾರತಕ್ಕಾಗಿಯೇ ಬದು­ಕು­ತ್ತಾರೆ ಮತ್ತು  ಭಾರತಕ್ಕಾ­ಗಿಯೇ ಸಾಯುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.‘ನಾನು ಅರ್ಥ ಮಾಡಿಕೊಂಡಂತೆ ಅವರು (ಅಲ್‌ ಕೈದಾ) ನಮ್ಮ ದೇಶದ ಮುಸ್ಲಿಮರಿಗೆ ಅನ್ಯಾಯ ಮಾಡುತ್ತಿದ್ದಾರೆ. ಭಾರತದ ಮುಸ್ಲಿಮರು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆ ಎಂದು ಯಾರಾ­ದರೂ ಭಾವಿಸಿದ್ದರೆ ಅದು ಅವರ ಭ್ರಮೆ’ ಎಂದು ಪ್ರಧಾನಿ ಹೇಳಿದ್ದಾರೆ.‘ಭಾರತದ ಮುಸ್ಲಿಮರು ಭಾರತಕ್ಕಾಗಿಯೇ ಬದುಕಿ, ಭಾರತಕ್ಕಾಗಿ ಸಾಯುತ್ತಾರೆ. ದೇಶಕ್ಕೆ ಯಾವತ್ತೂ ಅವರು ಕೆಟ್ಟದು  ಬಯಸುವುದಿಲ್ಲ’ ಎಂದು ಸಿಎನ್‌ಎನ್‌ ವಾಹಿನಿಗೆ ನೀಡಿದ ಸಂದರ್ಶನ­ದಲ್ಲಿ ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.ಭಾರತದಲ್ಲಿ ಅಲ್‌ ಕೈದಾ ಶಾಖೆ ಆರಂಭಿಸುವ ಮತ್ತು ಕಾಶ್ಮೀರ ಹಾಗೂ ಗುಜರಾತ್‌ ಮುಸ್ಲಿಮ­ರನ್ನು ‘ಶೋಷಣೆ’ಯಿಂದ ಬಿಡುಗಡೆಗೊಳಿ­ಸು­ತ್ತೇವೆ ಎಂದು ಅಲ್‌ ಕೈದಾ ಬಿಡುಗಡೆಗೊಳಿಸಿರುವ ವಿಡಿಯೊ ಬಗ್ಗೆ ಕೇಳಿದ ಪ್ರಶ್ನೆಗೆ ಮೋದಿ ಅವರು ಹೀಗೆ ಉತ್ತರಿಸಿದ್ದಾರೆ.ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಅಲ್‌ ಕೈದಾ ವ್ಯಾಪಕವಾಗಿದೆ. ಹಾಗಿದ್ದರೂ 17 ಕೋಟಿ ಮುಸ್ಲಿ­ಮರಿರುವ ಭಾರತದಲ್ಲಿ ಅಲ್‌ ಕೈದಾ ಸದಸ್ಯರು ಇಲ್ಲವೇ ಇಲ್ಲ ಅಥವಾ ಕೆಲವೇ ಕೆಲವರು ಮಾತ್ರ ಇದ್ದಾರೆ ಎಂದು ಹೇಳಬಹುದು. ಈ ಸಮುದಾಯ ಅಲ್‌ ಕೈದಾದಿಂದ ದೂರ ಉಳಿಯುವಂತೆ ಮಾಡಿದ ವಿದ್ಯಮಾನ ಯಾವುದು ಎಂಬ ಪ್ರಶ್ನೆಗೆ, ಈ ಬಗ್ಗೆ ಮನಶ್ಶಾಸ್ತ್ರೀಯ, ಧಾರ್ಮಿಕ ವಿಶ್ಲೇಷಣೆ ನಡೆಸುವ ಪರಿಣತಿ ತನಗೆ ಇಲ್ಲ ಎಂದು ಮೋದಿ ಉತ್ತರಿಸಿದ್ದಾರೆ.ಉಗ್ರವಾದ ಎನ್ನುವುದು ಒಂದು ದೇಶ ಅಥವಾ ಜನಾಂಗದ ವಿರುದ್ಧದ ಬಿಕ್ಕಟ್ಟು ಅಲ್ಲ. ಇದನ್ನು ನಾವು ಮಾನವೀಯತೆ ಮತ್ತು ಅಮಾನವೀಯತೆ ನಡುವಣ ಹೋರಾಟ ಎಂದೇ ಪರಿಗಣಿಸಬೇಕು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.ಹೃದಯದ ಮಾತೇ: ಕಾಂಗ್ರೆಸ್‌ ಪ್ರಶ್ನೆ

ಮುಸ್ಲಿಮರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಬಿಜೆಪಿ ಮತ್ತು ಅದರ ನಾಯಕರು ಒಪ್ಪುತ್ತಾರೆಯೇ ಎಂದು  ಕಾಂಗ್ರೆಸ್‌ ಪ್ರಶ್ನಿಸಿದೆ. ಅಮೆರಿಕಕ್ಕೆ ಭೇಟಿ ನೀಡುವುದಕ್ಕೆ ಮುಂಚೆ ಮೋದಿ ಈ ಹೇಳಿಕೆ ನೀಡಿದ್ದಾರೆ. ಹಾಗಾಗಿ ಹೇಳಿಕೆಯ ಸಂದರ್ಭದ ಬಗ್ಗೆಯೂ ಕಾಂಗ್ರೆಸ್‌ ಅನುಮಾನ ವ್ಯಕ್ತಪಡಿಸಿದೆ. ಮೋದಿ ಅವರು ಈ ಹೇಳಿಕೆಯನ್ನು ಪ್ರಾಮಾಣಿಕವಾಗಿ, ತಮ್ಮ ಹೃದಯದಿಂದ ಹೇಳಿದ್ದಾರೆಯೇ ಎಂಬು­ದನ್ನೂ ಕಾಂಗ್ರೆಸ್‌ ಪ್ರಶ್ನಿಸಿದೆ.

‘ಪ್ರಧಾನಿಯವರ ಹೇಳಿಕೆಯನ್ನು ಸ್ವಾಗತಿಸು­ತ್ತೇವೆ ಮತ್ತು ಅದಕ್ಕೆ ಅಭ್ಯಂತರ ಇರುವುದಕ್ಕೆ ಸಾಧ್ಯವೇ ಇಲ್ಲ. ಆದರೆ ಮೋದಿ ಅವರ ಪಕ್ಷ­ದಲ್ಲಿರುವ ಯೋಗಿ ಆದಿತ್ಯನಾಥ, ಗಿರಿರಾಜ್‌ ಸಿಂಗ್‌ ಮತ್ತು ಅಮಿತ್‌ ಷಾ ಸದಾ ಇದಕ್ಕೆ ವ್ಯತಿರಿಕ್ತ­ವಾದು­ದನ್ನು ಹೇಳುತ್ತಾರೆ. ಅವರಿಗೂ ಈ ಹೇಳಿಕೆ ಬಗ್ಗೆ ಸಮ್ಮತಿ ಇದೆಯೇ ಎಂದೂ ಕಾಂಗ್ರೆಸ್‌ ವಕ್ತಾರ ಸಲ್ಮಾನ್‌ ಖುರ್ಷಿದ್‌ ಪ್ರಶ್ನಿಸಿದ್ದಾರೆ.ಹೃದಯದ ಮಾತು: ಬಿಜೆಪಿ

ಪ್ರಧಾನಿ ಹೇಳಿಕೆಯನ್ನು ಬಿಜೆಪಿ ಬೆಂಬಲಿಸಿದೆ. ಬಿಜೆಪಿ ಮತ್ತು ಅವರು ಸದಾ ನಂಬಿಕೊಂಡು ಬಂದಿರುವ ವಿಚಾರವನ್ನು ಮೋದಿ ಹೇಳಿದ್ದಾರೆ. ಅದು ಅವರ ಹೃದಯದ ಮಾತು ಎಂದು ಬಿಜೆಪಿ ಹೇಳಿದೆ. ಇದು ಅತ್ಯಂತ ಮುಖ್ಯವಾದ ಸಂದೇಶವನ್ನು ನೀಡುತ್ತದೆ ಮತ್ತು ಆ ಸಂದೇಶ ದೇಶವನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ಬಿಜೆಪಿ ವಕ್ತಾರ ಶಾನವಾಜ್‌ ಹುಸೇನ್‌ ಹೇಳಿದ್ದಾರೆ.

‘ಇದು ಅತ್ಯಂತ ಸಕಾರಾತ್ಮಕವಾದ ಹೇಳಿಕೆ. ಹಿಂದೆಯೂ ಇದನ್ನು ಅವರು ಹೇಳಿದ್ದಾರೆ. ಭಾರತದ ಮುಸ್ಲಿಮರ ದೇಶಪ್ರೇಮವನ್ನು ಶ್ಲಾಘಿಸಿದಾಗ ಹಿಂದೆಯೂ ಅವರು ಹೀಗೆ ಮಾತನಾಡಿದ್ದರು’ ಎಂದು ಹುಸೇನ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry