ಅಳಿಗುಳಿಮಣೆಯಾಟ

7
ಕವನ ಸ್ಪರ್ಧೆ 2012-ಮೆಚ್ಚುಗೆ ಪಡೆದ ಕವಿತೆ

ಅಳಿಗುಳಿಮಣೆಯಾಟ

Published:
Updated:

ಬರಿದನ್ನೆ ಬರಿದು ಮಾಡುವ ಆಟವುಂಟೆ;

ಬರಿದಾಗಿಸಲು ಮೊದಲು ತುಂಬಬೇಕು

ಗುಳಿಗೊಂದಾರಾರು ಕಾಳು

ಅವ್ಯಕ್ತದಲ್ಲೊಂದು ಲೆಕ್ಕಾಚಾರ

ಇಷ್ಟ ದೇವರ ನೆನಕೆ

ನೆನೆಯದೆಯೆ ಎದುರಿನವ ಕೊಟ್ಟಿದ್ದೆಲ್ಲವ

ಎತ್ತಬೇಕು ಗುಳಿಯ ಕಾಳನ್ನು;

ಇದು ಆಟವೆಂಬುದ ಸದಾ ಜಪಿಸುತ್ತಿರಬೇಕು

ಋಜುವಿನಾಟದಲ್ಲಿ ಒಂದೊಂದು ಗುಳಿಗೊಂದೊಂದು ಬಿತ್ತ

ನನಗೂ ಎದುರಿನವಗೂ ಸಮಸಮ,

ಮೋಸವಿಲ್ಲ ಕಪಟಕ್ಕಿಲ್ಲಿ ತಾವಿಲ್ಲ

ಎಲ್ಲ ಬಟಾಬಯಲಂತೆ ಬಿತ್ತಬೇಕು ಬೆಳೆಯಬೇಕು

ಬಿತ್ತುವ ಕಡೆಕಾಳು ತುಂಬಿದ ಮನೆ ಸೇರಿದರೆ ಸೈ

ಆಟ ನಡೆಯುತ್ತಲೇ ಇರುತ್ತದೆ,ದಾಟು ಮಣೆಯ ಗುಳಿ ಒಂದಾದರೆ

ಗುಳಿಯು ಗುಳಿಯನ್ನೇ ಸವರಿ

ಮುಂದಿನ ಎರಡೂ ಗುಳಿಯ ಬೆಳೆಯೂ ನಿನ್ನದೆ,

ಕೈ ತುಂಬ ಫಲವುಣ್ಣಲು

ಖಾಲಿಯಿಂದ ಖಾಲಿಯನ್ನೆ ಬಿತ್ತಿ ಮತ್ತೆ

ಖಾಲಿ ಸವರಿ ಎತ್ತಬೇಕು,ದಾಟುವ ಗುಳಿ ಎರಡಾದರೆ

ಸವರಿ ಕೂರುವುದಷ್ಟೇ ಕೆಲಸ,

ಈಗ ಆಟದ ಸರದಿ ಎದುರಿನವನದ್ದು

ನಾನೂ ಅಷ್ಟೆ, ಅವನೂ ಅಷ್ಟೆ

ಗುಳಿ ಆಳವಾದಷ್ಟು ಬೀಳಬೇಕು ಅಳಬೇಕು;

ಲೋಕದಲ್ಲಿ ಪ್ರೀತಿಯಿನ್ನೂ ಬದುಕಿರುವಾಗ

ಅಳುವುದಕ್ಕಿನ್ನ ಅಳಿವುದೇ ಮಿಗಿಲು

ಅದಕ್ಕೇ

ಗುಳಿ ಅಳಿ

ಬೆಳೀ ಬೆಳಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry