ಅಳಿವಿನಂಚಿನಲ್ಲಿ ಜೇರೋತನ

ಬುಧವಾರ, ಜೂಲೈ 17, 2019
27 °C

ಅಳಿವಿನಂಚಿನಲ್ಲಿ ಜೇರೋತನ

Published:
Updated:

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಹೆಬ್ಬಾವುನ್ನು ಬಿಟ್ಟರೆ ಅತಿ ದೊಡ್ಡ ಹಾವೆಂದು ಪರಿಗಣಿಸಲ್ಪಟ್ಟಿರುವ ಜೇರೋತನಗಳಿಗೆ ಉಳಿಗಾಲ ಇಲ್ಲವಾಗಿದೆ. ಕಾರಣ ಇವುಗಳನ್ನು ಈಗ ನಾಟಿ ಔಷಧಿ ತಯಾರಿಕೆಗಾಗಿ ಕೊಲ್ಲಲಾಗುತ್ತಿದೆ.ಜೇರೋತನ, ತಾಲ್ಲೂಕಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ವಿಷ ರಹಿತ ಹಾವು. ಸುಮಾರು 10ರಿಂದ 12 ಅಡಿ ಉದ್ದದ ಈ ಹಾವು ಅತ್ಯಂತ ವೇಗವಾಗಿ ಚಲಿಸುತ್ತದೆ. ಇದನ್ನು ತಿನ್ನುವವರೂ ಇದ್ದಾರೆ.ಕೆಲವು ಕಾಯಿಲೆಗಳಿಗೆ ಜೇರೋತನ ಮಾಂಸ ಒಳ್ಳೆಯದು ಎಂಬ ನಂಬಿಕೆ  ಇದೆ. ಹಾಗಾಗಿ ಈ ಹಾವನ್ನು ಕೊಂದು ಚರ್ಮ ಸುಲಿದು ವಿಷದ ಭಾಗ ತೆಗೆದು ಉಳಿದ ಭಾಗವನ್ನು ತುಂಡು ಮಾಡಿ ಮಸಾಲೆ ಹಾಕಿ ಬೇಯಿಸಿ ತಿನ್ನುತ್ತಾರೆ.ಈ ಹಿಂದೆ ಹಾವುಗಳನ್ನು ಚರ್ಮಕ್ಕಾಗಿ ಮಾತ್ರ ಕೊಲ್ಲಲಾಗುತ್ತಿತ್ತು. ಆದರೆ ಈಗ ಆಹಾರಕ್ಕಾಗಿ ಕೊಲ್ಲುತ್ತಿದ್ದಾರೆ. ಇದರ ಕೊಬ್ಬನ್ನು ತೆಗೆದು ಔಷಧಿ ತಯಾರಿಸುತ್ತಾರೆ. ಉಡದ ಕೊಬ್ಬಿನೊಂದಿಗೆ ಜೇರೋತನದ ಕೊಬ್ಬು ಬೆರೆಸಿ ಕಾಯಿಸಿದ ಎಣ್ಣೆಯನ್ನು ಕೀಲುನೋವಿಗೆ ಹಚ್ಚಲು ಬಳಸಲಾಗುತ್ತಿದೆ. ಸಂತೆಗಳು ಹಾಗೂ ಪಟ್ಟಣಗಳ ರಸ್ತೆ ಬದಿಗಳಲ್ಲಿ ಆಗಾಗ ಇಂತಹ ಔಷಧಿ ಮಾರುವ ಅಂಗಡಿಗಳು ಕಾಣಿಸಿಕೊಳ್ಳುತ್ತವೆ.ಜೇರೋತನ ಕೃಷಿ ಸ್ನೇಹಿ ಉರುಗ. ಇದು ಗಾತ್ರದಲ್ಲಿ ದೊಡ್ಡದಾಗಿರುವುದರಿಂದ ಆಹಾರಕ್ಕಾಗಿ ಅತಿ ಹೆಚ್ಚು ಇಲಿ ತಿನ್ನುತ್ತದೆ. ಈ ಹಾವಿನ ಸಂತತಿ ಹೆಚ್ಚಿದಷ್ಟೂ ಇಲಿಗಳ ಸಂತತಿ ಕಡಿಮೆಯಾಗುತ್ತದೆ. ಆದರೆ ನಿರುಪದ್ರವಿ ಹಾವನ್ನು ನಿರ್ದಯೆಯಿಂದ ಕೊಲ್ಲಲಾಗುತ್ತಿದೆ. ಬಯಲಿನಲ್ಲಿ ಕಾಣಿಸಿಕೊಳ್ಳುವ ಈ ಹಾವನ್ನು ಕಚ್ಚೀತೆಂಬ ಭಯದಿಂದ ಜನ ಕೊಂದುಹಾಕುತ್ತಾರೆ ಎಂದು ನೋವು ವ್ಯಕ್ತ ಪಡಿಸುತ್ತಾರೆ ಪರಿಸರ ಪ್ರೇಮಿಗಳು.ಗ್ರಾಮೀಣ ಪ್ರದೇಶದಲ್ಲಿ  ವಿಷದ ಹಾಗೂ ವಿಷರಹಿತ ಹಾವುಗಳ ಬಗ್ಗೆ ತಿಳಿವಳಿಕೆ ಇಲ್ಲ. ಯಾವುದೇ ಹಾವು ಕಾಣಿಸಿತೆಂದರೆ ಅದರ ಕತೆ ಮುಗಿದಂತೆಯೇ ಸರಿ. ಹಸಿರು ಹಾವನ್ನೂ ಬಿಡರು. ಕನಿಷ್ಠ ಕೃಷಿ ಸ್ನೇಹಿ ಹಾವುಗಳನ್ನಾದರೂ ಉಳಿಸಿಕೊಳ್ಳದಿದ್ದರೆ ಪರಿಸರ ಸಮತೋಲನ ಕೆಡುತ್ತದೆ. ಅದರಿಂದ ಆಗುವ ನಷ್ಟ ಅಷ್ಟಿಷ್ಟಲ್ಲ. ಆದ್ದರಿಂದ ಹಾವುಗಳ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ.

 -ಆರ್.ಚೌಡರೆಡ್ಡಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry