ಶುಕ್ರವಾರ, ಜೂನ್ 18, 2021
20 °C

ಅಳಿವಿನ ಅಂಚಲ್ಲಿ ಟೋಪಿ

ಸುಧಾ ಜಯಪ್ರಕಾಶ ತಲವಾಟ Updated:

ಅಕ್ಷರ ಗಾತ್ರ : | |

ತಲೆಯ ಮೇರೆ ಭಾರ ಹೊರಲು ಅಡಿಕೆ ಮರದ ಹಾಳೆಯಿಂದ ಮಾಡುವ ಟೋಪಿಗೆ ಹಿಂದೊಮ್ಮೆ ಎಲ್ಲಿಲ್ಲದ ಬೇಡಿಕೆ. ಭಾರಿ ಗಟ್ಟಿಯಾಗಿಯೂ, ಸುಲಭದಲ್ಲಿ ದೊರಕಬಹುದಾದ ಈ ಟೋಪಿ ಸಿಗುವುದೇ ಈಗ ಅಪರೂಪ.  ಮೂಲತಃ ಕರಾವಳಿ ಭಾಗದ ಕೂಲಿ ಕೆಲಸಗಾರರು, ಶ್ರಮಜೀವಿಗಳು, ಮೀನುಗಾರರು ತಮಗೆ ಬೇಕಾದಾಗ ತಾವೇ ತಯಾರಿಸಿಕೊಂಡು ಬಳಸುತ್ತಿದ್ದ ಅಡಿಕೆ ಹಾಳೆಯ ಟೋಪಿ ಮಲೆನಾಡು ಪ್ರದೇಶಗಳಿಗೂ ಕಾಲಿಟ್ಟು ಬಹಳ ದಶಕಗಳ ಕಾಲ ಬಳಕೆಯಾಗಿ ಈಗ ನೇಪಥ್ಯಕ್ಕೆ ಸರಿಯುತ್ತಲಿದೆ. ಈ ಟೋಪಿಗೆ ಮಂಡಾಳೆ, ಮುಟ್ಟಾಳೆ, ಪಾಲೆ ಎಂದೂ ಕರೆಯುತ್ತಾರೆ. ಈಗ ಏನಿದ್ದರೂ ಅಂಗಡಿಗಳಲ್ಲಿ ದೊರಕುವ ವಿವಿಧ ನಮೂನೆಯ ಬಣ್ಣಬಣ್ಣದ ಚರ್ಮದ, ಪ್ಲಾಸ್ಟಿಕ್‌ ಟೋಪಿಗಳದ್ದೇ ಕಾರುಬಾರು. ಆದ್ದರಿಂದ ಅಡಿಕೆ ಹಾಳೆಯ ಟೋಪಿ ನಂಬಿಕೊಂಡು ಜೀವನ ಮಾಡುವವರ ಸ್ಥಿತಿಯೂ ಭಾರ...!ಇದರ ನಡುವೆಯೂ, ಅಡಿಕೆ ಮರದ ಟೋಪಿಯನ್ನು ಜೀವಂತವಾಗಿರಿಸಿದ್ದಾರೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೆಗ್ಗೋಡಿನ ಗಿರಿಜಾ. ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೋಟಾ ಗ್ರಾಮದ ಗಿರಿಜಾ ಅವರು ಹೆಗ್ಗೋಡಿನಲ್ಲಿ ಕೂಲಿಗಾಗಿ ಅರಸಿ ಬಂದು ಈಗ ಟೋಪಿಯ ತಯಾರಿಕೆಯಲ್ಲಿ ತೊಡಗಿದ್ದಾರೆ. ಬರಿಯ ಟೋಪಿ ಮಾಡಿದರೆ ಅದನ್ನು ಕೊಳ್ಳುವವರಿಗೆ ಸಂತೋಷ ಸಿಗದು ಎಂಬ ಕಾರಣಕ್ಕೆ ಮಾರುಕಟ್ಟೆಯಲ್ಲಿ ಸಿಗುವ ಟೋಪಿಗಿಂತ ಒಂದು ಕೈ ಮೇಲೆನ್ನುವಂತೆ ವಿನ್ಯಾಸ ಮಾಡುವಲ್ಲಿ ತೊಡಗಿಕೊಂಡಿದ್ದಾರೆ.

ಟೋಪಿ ಮಾಡುವುದು ಹೀಗೆಗಿರಿಜಾ ಅವರು, ಅಡಿಕೆ ಮರಗಳಿಂದ ಬೀಳುವ ಹಾಳೆಗಳನ್ನು ಸಂಗ್ರಹಿಸಿ ತಂದು ಬಿಸಿನೀರಿನಲ್ಲಿ ಸ್ವಲ್ಪಹೊತ್ತು ನೆನೆಸುತ್ತಾರೆ.  ನಂತರ ಎರಡು ಹಾಳೆಗಳನ್ನು ಜೋಡಿಸಿ, ಕತ್ತಿಯಿಂದ ಕೊರೆದು ತಲೆಯ ಅಳತೆಗೆ ತಕ್ಕಂತೆ ವೃತ್ತಾಕಾರವಾಗಿ ಕತ್ತರಿಸಿ ಎರಡೂ ಕಡೆಯ ಅಂಚನ್ನು ಬೆರಳುಗಳಲ್ಲಿ ಬಿಗಿಯಾಗಿ ಹಿಡಿದು ಹಾಳೆಯ ತುದಿಗಳನ್ನು ಸಣ್ಣಗೆ ನಿರಿಗೆ ಮಾಡಿ ಉದ್ದವಾದ ಸೂಜಿ ಮತ್ತು ಗಟ್ಟಿಯಾದ ಪ್ಲಾಸ್ಟಿಕ್ ದಾರದ ಸಹಾಯದಿಂದ ಹೊಲಿಯುತ್ತಾರೆ. ಟೋಪಿಯು ಅಂದವಾಗಿ ಕಾಣಲು ಸೂಜಿಗೆ ಉಲ್ಲನ್ ದಾರ ಪೋಣಿಸಿ ಟೋಪಿಯ ಸುತ್ತಲೂ ಕೆಳ ಅಂಚಿನಲ್ಲಿ ಹೂವು, ಬಳ್ಳಿ ತ್ರಿಕೋನಗಳ ಚಿತ್ರಗಳನ್ನು ಬರೆಯುತ್ತಾರೆ.  ಟೋಪಿ ಧರಿಸಿದಾಗ ಹಣೆಯ ಮೇಲೆ ಮತ್ತು ತಲೆಯ ಹಿಂಭಾಗದಲ್ಲಿ ಪುಟ್ಟ ಸೂರ್ಯನ ಆಕಾರದ ವಿನ್ಯಾಸ ಕಂಡು ಬರುತ್ತದೆ.ಈ ಟೋಪಿಗಳ ಒಳ ಮೈ ಮತ್ತು ಹೊರ ಮೈಗೆ ಎಣ್ಣೆ ಸವರಿ, ಒಂದು ವಾರದ ನಂತರ ಕೆಲಸ ಕಾರ್ಯಗಳಲ್ಲಿ ಬಳಸಿದರೆ, ಒಂದೆರೆಡು ವರ್ಷ ಬಾಳಿಕೆ ಬರುತ್ತದೆ. ಎಷ್ಟೇ ಭಾರ ಹೊತ್ತರೂ ಒಡೆಯದ ಈ ಟೋಪಿಗಳು ತಲೆಗೆ ಅಪಾಯವನ್ನುಂಟು ಮಾಡದೆ ಹಿತಕರವಾಗಿರುತ್ತದೆ.  ರಕ್ಷಣೆಯನ್ನೂ ಕೊಡುತ್ತದೆ.ಪ್ರತಿನಿತ್ಯ ಬೇರೆಯವರ ಮನೆಗಳಿಗೆ ಕೃಷಿ ಕೆಲಸಗಳಿಗೆ ಹೋಗುವ ಗಿರಿಜಾ ಅವರು ಬಿಡುವಿನ ಸಮಯದಲ್ಲಿ ಒಂದು ದಿನಕ್ಕೆ ೨-೩ ಹಾಳೆ ಟೋಪಿಗಳನ್ನು ಮಾಡುತ್ತಾರೆ. ಹೆಗ್ಗೋಡಿನ ಅಂಗಡಿಗಳಿಗೆ ಟೋಪಿಯೊಂದಕ್ಕೆ ೨೦ - ೨೫ ರೂಪಾಯಿಗಳಂತೆ ಮಾರುತ್ತಾರೆ.  ನೀನಾಸಂ ರಂಗ ಶಿಕ್ಷಣ ಕೇಂದ್ರದ ಶಿಬಿರಾರ್ಥಿಗಳು ಈ ಟೋಪಿಗಳನ್ನು ಖರೀದಿಸಿ ಖುಷಿಯಿಂದ ಧರಿಸಿಕೊಂಡು ಓಡಾಡುತ್ತಾರೆ. ಕಸದಿಂದ ರಸ ಎಂದೆನಿಸಿ ದೇಸೀ ಕರಕುಶಲ ಕಲೆಗಳ ಸಾಲಿನಲ್ಲಿ ನಿಂತಿದ್ದ ಇಂತಹ ಹಲವು ವಸ್ತುಗಳನ್ನು ಮುಂದೊಂದು ದಿನ ಹಳೆಯ ವಸ್ತುಗಳ ಸಂಗ್ರಹಾಲಯಗಳಲ್ಲಿ ನೋಡುವ ದಿನಗಳು ಬಂದರೂ ಅಚ್ಚರಿಯೇನಿಲ್ಲ. ಆದರೆ ಹೀಗಾಗಬಾರದು ಎನ್ನುವ ಗಿರೀಜಾ ಅವರು, ಇದರ ತಯಾರಿಕೆಯಲ್ಲಿ ನಿರತರಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.